ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವದ ದಿನದಂದೂ ಕನ್ನಡ ಮೂಲೆ ಗುಂಪಾಯಿತೇ!

By ಬಾಲರಾಜ್ ತಂತ್ರಿ
|
Google Oneindia Kannada News

ಕರ್ನಾಟಕದಲ್ಲಿ ಕನ್ನಡ ಸುರಕ್ಷಿತವಾಗಿದೆಯೇ ಅನ್ನುವುದಕ್ಕಿಂತ ರಾಜ್ಯೋತ್ಸದ ಸಂದರ್ಭದಲ್ಲಾದರೂ ಕನ್ನಡಕ್ಕೆ ಮನ್ನಣೆ ಸಿಗುತ್ತಿದೆಯೇ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳ ಬೇಕಾಗಿ ಬಂದಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ.

ಒನ್ ಇಂಡಿಯಾ ಜೊತೆ ಸಂದರ್ಶನದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ್ರು ಒಂದು ಮಾತನ್ನು ಹೇಳಿದ್ದರು. ಎಲ್ಲಾ ಹೋರಾಟಕ್ಕಿಂತ ಮಿಗಿಲಾಗಿ ಆಗ ಬೇಕಾಗಿರುವುದು ಕನ್ನಡಿಗರು ತಮ್ಮ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳ ಬೇಕಾಗಿರುವುದು ಎಂದು. (ಕರವೇ ನಾರಾಯಣ ಗೌಡ್ರ ಸಂದರ್ಶನ)

ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಅಲ್ಲಿನ ಜನರಿಗಿರುವ ಅಭಿಮಾನ ನಮ್ಮಲ್ಲಿ ಇಲ್ಲ ಎನ್ನುವ ಖೇದದ ಮಾತನ್ನು ಮೊನ್ನೆ ಸಿಎಂ ಸಿದ್ದರಾಮಯ್ಯ ರಾಜ್ಯೋತ್ಸವದ ಸಂದರ್ಭದಲ್ಲಿ ಹೇಳಿದ್ದರು. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ರೀತಿ ಅಸಾಹಯಕತೆ ವ್ಯಕ್ತ ಪಡಿಸಿರುವುದು ಎಷ್ಟು ಸರಿ ತಪ್ಪು ಎನ್ನುವುದು ಇಲ್ಲಿ ಅಪ್ರಸ್ತುತ.

ನಮ್ಮ ಸಂಸ್ಥೆಯ ತಮಿಳು ಚಿತ್ರದ ವಿಮರ್ಶೆ ಬರೆಯುವ ಸಹದ್ಯೋಗಿ ಆರಂಭಂ ಚಿತ್ರ ವೀಕ್ಷಿಸಲು ಹೋಗಿದ್ದರು. ಜಯನಗರದ ಐನಾಕ್ಸ್ ಮಲ್ಟಿ ಪ್ಲೆಕ್ಸನಲ್ಲಿ ಚಿತ್ರ ವೀಕ್ಷಿಸಿದ ಅವರಿಗೆ ಅಲ್ಲಿ ಕಂಡಿದ್ದು ತಮಿಳರಿಗಿಂತ ಕನ್ನಡಿಗರೇ ಜಾಸ್ತಿ ಎನ್ನುವ ವಿಷಯ.

ಕನ್ನಡ ಮಾಧ್ಯಮಕ್ಕೆಂದು ಪರವಾನಿಗೆ ಪಡೆದು ಆಂಗ್ಲ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳು ಬೆಂಗಳೂರಿನಲ್ಲಿ ಬೇಕಾದಷ್ಟಿವೆ. ನೆಪಕ್ಕಾದರೂ ರಾಜ್ಯೋತ್ಸವ ಆಚರಿಸುತ್ತಿದ್ದ ಇಂತಹ ಶಾಲೆಗಳು ಈ ವರ್ಷ ರಾಜ್ಯೋತ್ಸವ ಆಚರಣೆಯನ್ನೇ ಕೈಬಿಟ್ಟು ನಾಲ್ಕು ದಿನ ರಜೆ ಘೋಷಿಸಿರುವುದು ಉದ್ದಟತನದ ಪರಮಾವಧಿ ಅಲ್ಲವೇ?

ಇಷ್ಟೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ದರ್ಬಾರುಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎನ್ನುವುದನ್ನು ನಂಬುವಷ್ಟು ದಡ್ಡರು ಯಾರಿದ್ದಾರೆ ಇಲ್ಲಿ? ಎಲ್ಲಾ ಆದ ಮೇಲೆ ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಮುಂದಿನ ರಾಜ್ಯೋತ್ಸವದ ತನಕ ಸುಮ್ಮನಿರುವ ಅಧಿಕಾರಿಗಳಿಗೇನು ಕಮ್ಮಿಯಿಲ್ಲ.

ಎಷ್ಟೇ ವಿದ್ಯಾರ್ಥಿಗಳ ಕೊರತೆ ಇದ್ದರೂ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ (ಕನ್ನಡದ ಜೊತೆ ಆಂಗ್ಲ ಭಾಷೆಯ ಬೋಧನೆ ಸೇರಿ) ಎನ್ನುವ ಸಿದ್ದರಾಮಯ್ಯನವರ ಹೇಳಿಕೆ ಸ್ವಾಗತಾರ್ಹ. ಆದರೆ ಅದು ಕಾರ್ಯರೂಪಕ್ಕೆ ಬರಬೇಕಷ್ಟೇ. (ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ:ಸಿದ್ದರಾಮಯ್ಯ)

ಕರವೇ ಬಣದ ಜೊತೆ ಕೈಕೈ ಮಿಲಾಯಿಸಲು ಬಂದರು. ಮುಂದೆ ಓದಿ..

ಕರವೇ ಪ್ರವೀಣ್ ಶೆಟ್ಟಿ ಬಣ

ಕರವೇ ಪ್ರವೀಣ್ ಶೆಟ್ಟಿ ಬಣ

ನಗರದ ಕೆಲವು ಭಾಗಗಳಲ್ಲಿ ರಾಜ್ಯೋತ್ಸವದ ದಿನದಂದು ತಮಿಳು ಚಿತ್ರ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳಿಗೆ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ದಾಳಿ ನಡೆಸಿ ಚಿತ್ರ ಪ್ರದರ್ಶನ ನಿಲ್ಲಿಸಿದರು. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಗಮನಿಸ ಬೇಕಾದ ವಿಷಯವೇನಂದರೆ ಅಲ್ಲಿ ಚಿತ್ರ ವೀಕ್ಷಿಸಲು ಬಂದಿದ್ದವರು ಪ್ರದರ್ಶನ ತಡೆ ಹಿಡಿದ ಕರವೇ ಶೆಟ್ಟಿ ಬಣದ ಕಾರ್ಯಕರ್ತರ ಜೊತೆ ಕೈಕೈ ಮಿಲಾಯಿಸಲು ಬಂದಿದ್ದು. ಪೋಲೀಸರು ಮಧ್ಯ ಪ್ರವೇಶಿಸಿ ಚಿತ್ರ ನೋಡುತ್ತಿದ್ದವರನ್ನು ಸಮಾಧಾನ ಪಡಿಸ ಬೇಕಾಗಿ ಬಂದಿದ್ದು.

ಸಂಭಾಜಿ ಪಾಟೀಲ್

ಸಂಭಾಜಿ ಪಾಟೀಲ್

ಅತ್ತ ಬೆಳಗಾವಿಯಲ್ಲಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ನೇತೃತ್ವದಲ್ಲಿ ರಾಜ್ಯೋತ್ಸವದ ದಿನವನ್ನು ಕೆಲವು ಮರಾಠಿಗರು ಕರಾಳ ದಿನಾಚರಣೆ ಎಂದು ಆಚರಿಸುತ್ತಾರೆ. ಕನ್ನಡದ ವಿರುದ್ದ ಧಿಕ್ಕಾರ ಘೋಷಣೆ ಕೂಗುತ್ತಾರೆ, ಮೆರವಣಿಗೆಯೊಂದಿಗೆ ಮರಾಠಿಗರು ಹೆಚ್ಚಿರುವ ಪ್ರದೇಶದಲ್ಲಿ ತಿರುಗಾಡುತ್ತಾರೆ. ಇದನ್ನು ನೋಡಿಯೂ ಜಿಲ್ಲಾಡಳಿತ ಸುಮ್ಮನಿರುತ್ತೆ.

ಕನ್ನಡ ಚಿತ್ರಗಳು

ಕನ್ನಡ ಚಿತ್ರಗಳು

ಈ ಹಿಂದೆ ರಾಜ್ಯೋತ್ಸವದ ನವೆಂಬರ್ ತಿಂಗಳಲ್ಲಿ ಕನ್ನಡ ಚಿತ್ರಗಳು ಪ್ರಸಾರ ಮಾಡುವುದು ಕಡ್ಡಾಯ ಎನ್ನುವ ಕಾನೂನು ಚಾಲ್ತಿಯಲ್ಲಿತ್ತು. ಬೆಂಗಳೂರು ಮತ್ತು ಗಡಿ ಭಾಗದ ಹೆಚ್ಚಿನ ಚಿತ್ರಮಂದಿರಗಳು ಈ ಕಾನೂನನ್ನು ಪಾಲಿಸುತ್ತಿದ್ದವು. ತದನಂತರ ಇದು ರಾಜ್ಯೋತ್ಸವದ ವಾರದಲ್ಲಿ ಕನ್ನಡ ಚಿತ್ರ ಪ್ರದರ್ಶನ ಎನ್ನುವ ಸ್ವಯಂಘೋಷಿತ ಕಾನೂನನ್ನು ಕನ್ನಡ ಚಿತ್ರ ಪ್ರದರ್ಶಿಸದ ಚಿತ್ರಮಂದಿರಗಳು ಪಾಲಿಸಿ ಕೊಂಡು ಬಂದವು.

ರಾಜ್ಯೋತ್ಸವದ ದಿನದಂದೂ ಕನ್ನಡ ಚಿತ್ರವಿಲ್ಲ

ರಾಜ್ಯೋತ್ಸವದ ದಿನದಂದೂ ಕನ್ನಡ ಚಿತ್ರವಿಲ್ಲ

ಆದರೆ ಈಗ ಪರಿಸ್ಥಿತಿ ಎಲ್ಲಿಗೆ ಬಂದಿದೆ? ರಾಜ್ಯೋತ್ಸದ ದಿನದಂದೂ ಕನ್ನಡ ಚಿತ್ರ ಪ್ರದರ್ಶಿಸದ ಚಿತ್ರಮಂದಿರಗಳು ಬೆಂಗಳೂರಿನಲ್ಲಿ ಬೇಕಾದಷ್ಟಿವೆ. ಇಂಥಹ ಚಿತ್ರಮಂದಿರಗಳು ಕನ್ನಡ ಚಿತ್ರ ಪ್ರದರ್ಶಿಸದೇ ಇರುವುದಕ್ಕೆ ಕಾರಣಯಾರು? ಇವರನ್ನು ರಕ್ಷಿಸುತ್ತಿರುವವರು ಯಾರು? ಯಾರನ್ನು ಇದಕ್ಕೆ ದೂಷಿಸೋಣ? ನಮ್ಮ ಸರಕಾರವನ್ನೇ, ಕನ್ನಡಿಗರನ್ನೇ, ಚಿತ್ರಮಂದಿರದ ಮಾಲೀಕರನ್ನೇ ಅಥವಾ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೇ?

ವಾಣಿಜ್ಯ ಮಂಡಳಿ

ವಾಣಿಜ್ಯ ಮಂಡಳಿ

ರಾಜ್ಯಕ್ಕೆ ಪರಭಾಷಾ ಚಿತ್ರಗಳ ಡಿಸ್ತ್ರಿಬ್ಯೂಷನ್ ಹಕ್ಕುನ್ನು ಪಡೆಯುವರಲ್ಲಿ ಚಲನಚಿತ್ರ ಮಂಡಳಿಯ ಸದಸ್ಯರೂ ಅಥವಾ ಹತ್ತಿರದವರೂ ಇರುವ ಉದಾಹರಣೆ ಒಂದೇ ಎರಡೇ? ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂಗೆ, ಇವರ ಸ್ವಾರ್ಥಕ್ಕಾಗಿ ನಮ್ಮ ನೆಲದಲ್ಲೇ ರಾಜ್ಯೋತ್ಸವದ ದಿನದಂದು ಪರಭಾಷಾ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಇವರೇ ಯಾಕೆ ರಕ್ಷಕರಾಗಿರಬಾರದು?

ಆರಂಭಂ ಮತ್ತು ಕ್ರಿಷ್

ಆರಂಭಂ ಮತ್ತು ಕ್ರಿಷ್

ಈ ಬಾರಿಯ ರಾಜ್ಯೋತ್ಸವದ ದಿನದಂದು ಕನ್ನಡ ಚಿತ್ರ ಪ್ರದರ್ಶಿಸದ ಚಿತ್ರಮಂದಿರಗಳನ್ನು ಪಟ್ಟಿ ಮಾಡಲು ಹೊರಟರೆ ಅದು ಬೆಳೆಯುತ್ತಲೇ ಸಾಗುತ್ತದೆ. ರಾಜ್ಯೋತ್ಸವದ ದಿನದಂದು ಮತ್ತು ಮುನ್ನಾದಿನ ತಮಿಳು ಆರಂಭಂ ಮತ್ತು ಹಿಂದಿ ಕ್ರಿಶ್ 3 ಬಿಡುಗಡೆಗೊಂಡವು. ಈ ಎರಡು ಚಿತ್ರಗಳಿಗೆ ಮೀಸಲಾಗಿದ್ದ ಚಿತ್ರಮಂದಿರಗಳು ಸುಮಾರು 95. ಈ ಎಲ್ಲಾ ಚಿತ್ರಮಂದಿರಗಳು ರಾಜ್ಯೋತ್ಸವದ ದಿನದಂದು ಕನ್ನಡ ಚಿತ್ರ ಪ್ರದರ್ಶಿಸಲಿಲ್ಲ. ಇದು ಬರೀ ಎರಡು ಚಿತ್ರಗಳ ಉದಾಹರಣೆ ಅಷ್ಟೇ. ಕರ್ನಾಟಕದಲ್ಲಿ ಕನ್ನಡಿಗರು ಮತ್ತು ರಾಜ್ಯೋತ್ಸವದಂದೂ ಕನ್ನಡ ಮುಂದಿನ ದಿನಗಳಲ್ಲಿ ಪರಭಾಷಾ ಸ್ಥಾನ ಪಡೆದರೆ ಆಶ್ಚರ್ಯ ಪಡಬೇಕಾಗಿಲ್ಲ. ಜೈಭುವನೇಶ್ವರಿ.

English summary
Kannada again neglected on Karnataka Rajyotsava Day (Nov 1). English medium schools not celebrated Rajyotsava function and many theaters in Bangalore not screened atleast one Kannada show on Rajyotsava day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X