Get Updates
Get notified of breaking news, exclusive insights, and must-see stories!

'ಸರಕಾರ ಕನ್ನಡ ಶಾಲೆ ಮುಚ್ಚುವುದಿಲ್ಲ, ಇದು ನಿಶ್ಚಿತ'

ಬೆಂಗಳೂರು, ನ. 1 : "ಕನ್ನಡ ಶಾಲೆಗಳ ಗುಣಮಟ್ಟದ ಸುಧಾರಣೆಗೆ ಸರ್ಕಾರ ಹೆಚ್ಚಿನ ಗಮನ ನೀಡಲು ನಿರ್ಧರಿಸಿದೆ. ಎಲ್ಲಿಯವರೆಗೆ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಉತ್ತಮವಾಗುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದಲ್ಲಿ ಕನ್ನಡ ಆಕರ್ಷಕವೆನಿಸುವುದಿಲ್ಲ. ಸಂಖ್ಯಾಬಲದ ಕೊರತೆ ಇರಲಿ, ಮತ್ತೊಂದಿರಲಿ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ, ಇದು ನಿಶ್ಚಿತ. ಸರ್ಕಾರಿ ಶಾಲೆಗಳನ್ನು ಸುಧಾರಣೆಗೊಳಿಸಿ ಕನ್ನಡ ಶಾಲೆಗೆ ಮಕ್ಕಳು ಬರುವಂತಹ ವಾತಾವರಣವನ್ನು ನಮ್ಮ ಸರ್ಕಾರ ಕಲ್ಪಿಸುತ್ತದೆ."

58ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನವೆಂಬರ್ 1ರಂದು ಕಂಠೀರವ ಕ್ರೀಡಾಂಗಣದಲ್ಲಿ 'ಮಕ್ಕಳ ಮೇಳ'ದಲ್ಲಿ ಭಾಗವಹಿಸಿ, ಕನ್ನಡ ಧ್ವಜವನ್ನು ಹಾರಿಸಿದ ನಂತರ ಸಭಿಕರನ್ನು ಉದ್ದೇಶಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿದ ಮಾತುಗಳಿವು. ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವೃಂದಕ್ಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು. ಅವರ ಮಾತಿನ ಲಹರಿ ಕೆಳಗಿನಂತಿದೆ.

Govt will not close Kannada schools : Siddaramaiah

ಶಿಕ್ಷಣದ ಮಾಧ್ಯಮ ಇಂದು ಬಹು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟ. ಯಾವ ಭಾಷೆಯ ಹೇರಿಕೆಯೂ ಸರಿ ಅಲ್ಲ. ಯಾವುದೇ ಭಾಷೆಯ ಕಲಿಕೆಯನ್ನು ತಡೆಯಬಾರದು. ಒಂದು ಹಂತದಿಂದ ಮುಂದಕ್ಕೆ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಗಳನ್ನು ಆಯ್ದುಕೊಂಡು ಅಭ್ಯಾಸ ಮಾಡುವ ಅವಕಾಶಗಳಿರಬೇಕು. ಆ ಹಂತದವರೆಗೆ ಮಾತೃಭಾಷೆಯ ಕಡ್ಡಾಯ ಶಿಕ್ಷಣ ಕೊಡುವುದು ಒಳ್ಳೆಯದು.

ಕನ್ನಡ ನಾಡಿನ ಸಮಸ್ತ ಜನತೆಯ ಶುಭ ಹಾರೈಕೆಯೊಡನೆ ನಮ್ಮ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಮಸ್ತ ಕನ್ನಡ ಜನತೆಯ ಶ್ರೇಯೋಭಿವೃದ್ಧಿಗಾಗಿ ನಾಡು, ನುಡಿ, ಕಲೆ, ಸಂಸ್ಕೃತಿ, ಕೃಷಿ, ಕೈಗಾರಿಕೆ, ವಾಣಿಜ್ಯ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ದುರ್ಬಲರ ಹಿತರಕ್ಷಣೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ನಮ್ಮ ಸರ್ಕಾರ ಕಂಕಣಬದ್ಧವಾಗಿದೆ ಎಂದು ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಹೆಮ್ಮೆಯಿಂದ ಘೋಷಿಸುತ್ತೇನೆ.

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಈ ನೆಲದಲ್ಲಿ ಪ್ರಾಚೀನ ಮಾನವರ ವಸತಿಗಳು ಇದ್ದವು ಎಂಬುದಕ್ಕೆ ಅನೇಕ ಕುರುಹುಗಳು ದೊರೆತಿವೆ. ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಮೊಹೆಂಜೋದಾರೊ ಕಾಲದ ನಾಗರೀಕತೆ ಬೆಳೆದು ನಿಂತಿತ್ತು ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಚಾರ, ಪ್ರಾಚೀನ ಕಾವ್ಯ ಪುರಾಣಗಳಲ್ಲಿ ಕನ್ನಡ ನಾಡಿನ ಬೆಟ್ಟ-ಗುಡ್ಡಗಳ, ನದಿ-ಸರೋವರಗಳ, ಪಟ್ಟಣಗಳ ಉಲ್ಲೇಖಗಳಿವೆ.

ಬೇರೆ ರಾಜ್ಯದಿಂದ ಇಲ್ಲಿಗೆ ಬಂದವರೂ ಕನ್ನಡ ಕಲಿಯಬೇಕು. ರಾಜ್ಯದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಬದುಕುವ ಜನ ಅಲ್ಲಿನ ಭಾಷೆಯನ್ನು ಬಳಸುವುದು ಅನಿವಾರ್ಯ. ಇಂಗ್ಲಿಷ್ ಭಾಷೆ ಪ್ರಪಂಚಕ್ಕೆ ಇರುವ ಕಿಟಕಿ ಎಂಬುದರಲ್ಲಿ ಸಂದೇಹ ಇಲ್ಲ. ಹಾಗೆಂದು ಅದನ್ನು ತಲೆಯ ಮೇಲೆ ಹೇರಿಕೊಳ್ಳಲಾಗುವುದಿಲ್ಲ. ಇಂಗ್ಲಿಷ್ ಇಂದು ಕೇವಲ ಒಂದು ಭಾಷೆಯಾಗದೆ ಪ್ರತಿಷ್ಠೆಯ ಸಂಕೇತವಾಗಿದೆ. ಕಾನ್ವೆಂಟ್‌ಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಗಿಣಿಪಾಠದ ಮಾದರಿಯಲ್ಲಿ ಶಿಕ್ಷಣವನ್ನು ಕಲಿಯುವ ಮಕ್ಕಳಲ್ಲಿ ಒಂದು ಕೃತಕ ವ್ಯಕ್ತಿತ್ವವನ್ನು ಮೂಡಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂಗ್ಲಿಷ್ ನಮಗೆ ಬೇಕು ನಿಜ. ಆದರೆ ಎಷ್ಟು ಬೇಕು? ಹೇಗೆ ಬೇಕು? ಎಂಬುದನ್ನು ನಾವೇ ತೀರ್ಮಾನಿಸಬೇಕಾಗುತ್ತದೆ. ಇಂಗ್ಲಿಷನ್ನು ಕೇವಲ ಭಾಷೆಯನ್ನಾಗಿ ಕಲಿಸುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಮೊದಲನೇ ತರಗತಿಯಿಂದಲೇ ಇಂಗ್ಲಿಷ್ ಭಾಷಾ ಕಲಿಕೆ ಪ್ರಾರಂಭವಾಗಬೇಕು ಎನ್ನುವುದು ಸರ್ಕಾರದ ಉದ್ದೇಶ ಕೂಡಾ ಆಗಿದೆ. ಇಂಗ್ಲಿಷ್‌ನ್ನು ಭಾಷೆಯಾಗಿ ಕಲಿಸಿ, ವಿಷಯಗಳನ್ನು ನಮ್ಮ ಭಾಷೆಗಳಲ್ಲಿಯೇ ಕಲಿಸಬೇಕು. ಭಾಷೆಯನ್ನು ಕಲಿಸುವುದು, ಭಾಷೆಯ ಮೂಲಕ ಕಲಿಸುವುದು ಬೇರೆ ಬೇರೆ. ಈ ವ್ಯತ್ಯಾಸ ನಮಗೆ ಗೊತ್ತಿರಬೇಕು.

ಕರ್ನಾಟಕ ಎಂಬ ಶಬ್ದದಲ್ಲಿ ಅದೆಂತಹ ಮಾಂತ್ರಿಕ ಶಕ್ತಿ ಅಡಗಿದೆಯೋ? ಬಣ್ಣಿಸಲು ಸಾಧ್ಯವಿಲ್ಲ. ಕರ್ನಾಟಕ ಪದವನ್ನು ಚಿರಕಾಲ ಉಳಿಸೋಣ ಎಂದು ಸಾರಿದ ಕನ್ನಡದ ಕುಲ ಪುರೋಹಿತರು ಎಂದೇ ಬಣ್ಣಿಸಲಾಗುವ ಆಲೂರು ವೆಂಕಟರಾಯರ ನುಡಿಗಳನ್ನು ಸ್ಮರಿಸಿ, ಕನ್ನಡ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ದುಡಿಯೋಣ, ಕನ್ನಡಮ್ಮನ ಸೇವೆ ಮಾಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+