ಪಿಕೆ ಯೋಜನೆ ಚಾಲ್ತಿಗೆ ಬಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಿತಿ?
ಬೆಂಗಳೂರು, ಏ. 22: ಚುನಾವಣಾ ರಣತಂತ್ರಗಳ ಪ್ರವೀಣರೆನಿಸಿರುವ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್‌ಗೆ ಹೊಸ ಕಾಯಕಲ್ಪ ಕೊಡಲು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದು ನಿಖರವಾಗಿ ಹೇಳಲು ಕಷ್ಟಸಾಧ್ಯ. ಪಿಕೆ ಕೊಟ್ಟ ಸಲಹೆಗಳು ಜಾರಿಗೆ ಬಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿದ್ದೀತು ಎಂಬುದು ಕುತೂಹಲ ಮೂಡಿಸುತ್ತದೆ. ರಾಜ್ಯದಲ್ಲಿ ವಿವಿಧ ಸಮಸ್ಯೆಗಳಿಂದ ನಲುಗುತ್ತಿರುವ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಜನರು ಕಿತ್ತೊಗೆದು ಕಾಂಗ್ರೆಸ್‌ಗೆ ಏಕಮೇವ ಬಹುಮತ ಕಲ್ಪಿಸುತ್ತಾರಾ?
ಪ್ರಶಾಂತ್ ಕಿಶೋರ್ ಹಲವು ಗಮನಾರ್ಹವಾದ ಸಲಹೆಗಳನ್ನ ನೀಡಿದ್ದಾರೆ. ಈ ಸಲಹೆಗಳನ್ನ ಸ್ವೀಕರಿಸಬೇಕೋ ಬೇಡವೋ, ಪಿಕೆ ಅವರನ್ನ ನೇರವಾಗಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕೋ ಬೇಡವೋ, ಕಾಂಗ್ರೆಸ್‌ಗೆ ಸೇರಿಸಿಕೊಂಡರೂ ಅವರಿಗೆ ಯಾವ ಪಾತ್ರ ನೀಡಬೇಕು ಎಂಬಿತ್ಯಾದಿ ಗೊಂದಲಗಳು ಬಗೆಹರಿದಿಲ್ಲ. ರಾಷ್ಟ್ರಾದ್ಯಂತ ಕಾಂಗ್ರೆಸ್‌ನಲ್ಲಿ ಪ್ರಶಾಂತ್ ಕಿಶೋರ್ ಅವರನ್ನ ಸ್ವೀಕರಿಸುವ ವಿಚಾರದಲ್ಲಿ ಒಮ್ಮತ ಇಲ್ಲ. ಕೆಲವರು ಪಿಕೆ ಆಗಮನದಿಂದ ಇರಿಸುಮುರುಸಾಗುವವರಿದ್ದಾರೆ. ಕರ್ನಾಟಕದಲ್ಲೂ ಯಾವ ನಾಯಕರೂ ಪ್ರಶಾಂತ್ ಕಿಶೋರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿಲ್ಲ.

ಯಾರೂ ವಿರೋಧಿಸಿಲ್ಲ:
ರಾಜ್ಯದ ಯಾವೊಬ್ಬ ಕಾಂಗ್ರೆಸ್ ನಾಯಕರೂ ಗಾಂಧಿ ಕುಟುಂಬದ ವಿರುದ್ಧ ಅಸಮಾಧಾನದ ಹೇಳಿಕೆ ನೀಡಿಲ್ಲ. ಬಹುತೇಕ ಎಸ್ ಎಂ ಕೃಷ್ಣ ಅವರೊಬ್ಬರೇ ಗಾಂಧಿ ಕುಟುಂಬದ ವಿರುದ್ಧ ಧ್ವನಿ ಎತ್ತಿ ಹೊರಹೋದವರು. ಹಿಂದೆಲ್ಲಾ ಕುಟುಂಬ ರಾಜಕಾರಣವನ್ನು ಟೀಕಿಸುತ್ತಾ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದ ಬಳಿಕ ಗಾಂಧಿ ಕುಟುಂಬಕ್ಕೆ ನಿಷ್ಠೆ ತೋರುತ್ತಲೇ ಬಂದಿದ್ದಾರೆ. ಕೆಲವೇ ಕೆಲ ನಾಯಕರು ಮಾತ್ರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ನಿಷ್ಠೆ ಹಂಚಿಕೊಂಡಿದ್ದಾರೆ.
ಇನ್ನು, ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ಪ್ರಶಾಂತ್ ಕಿಶೋರ್ ಅವರ ಸಲಹೆ. ರಾಜ್ಯದ ಕಾಂಗ್ರೆಸ್ಸಿಗರು ಈ ಸಲಹೆಯನ್ನ ತಿರಸ್ಕರಿಸುವ ಸಾಧ್ಯತೆ ಕಡಿಮೆ. ಆದರೆ, ಗಾಂಧಿ ಕುಟುಂಬದ ಪ್ರಭಾವ ಮತ್ತು ಆ ಕುಟುಂಬದೊಂದಿಗೆ ಇರುವ ನಿಷ್ಠೆ ಇವು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಫೆವಿಕಾಲ್‌ನಂತೆ ಹಿಡಿದಿಟ್ಟಿದೆ ಎನ್ನಲಡ್ಡಿ ಇಲ್ಲ. ಒಳಗೊಳಗೆ ವಿವಿಧ ಗುಂಪುಗಳಾಗಿ ಹಂಚಿಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬ ಮತ್ತು ಪಕ್ಷ ನಿಷ್ಠೆಯೇ ಒಗ್ಗಟ್ಟಿನ ಸೂತ್ರಗಳಾಗಿವೆ. ಹೀಗಾಗಿ, ಹೊಸ ಎಐಸಿಸಿ ಅಧ್ಯಕ್ಷರು ಗಾಂಧಿಯೇತರ ವ್ಯಕ್ತಿಯಾದಲ್ಲಿ ಅದನ್ನ ಮನಃಪೂರ್ವಕವಾಗಿ ರಾಜ್ಯ ಕಾಂಗ್ರೆಸ್ಸಿಗರು ಸ್ವೀಕರಿಸಿಬಲ್ಲರಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಕಾಲ:
ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಬಹುತೇಕ ಆಡಳಿತಾರೂಢ ಪಕ್ಷಗಳು ಚುನಾವಣೆಗಳಲ್ಲಿ ಸೋಲನುಭವಿಸುತ್ತಿರುವ ಟ್ರೆಂಡ್ ಇದೆ. ಈಗ ರಾಜ್ಯದ ಬಿಜೆಪಿ ಸರಕಾರದ ವರ್ಚಸ್ಸು ಕುಂದಿದಂತಿದೆ. ಭ್ರಷ್ಟಾಚಾರ ವಿಚಾರ ಬಿಜೆಪಿಗೆ ಹಿನ್ನಡೆ ತರುವ ಸೂಚನೆ ಕಾಣುತ್ತಿದೆ. ಮುಂದಿನ ವರ್ಷವೇ ಚುನಾವಣೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಲು ಇದು ಸಕಾಲವಾಗಿದೆ. ಇದರ ಲಾಭವನ್ನು ಪಡೆಯಲು ಕಾಂಗ್ರೆಸ್ ಎಷ್ಟು ಪ್ರಯತ್ನ ಹಾಕುತ್ತದೆ ಎಂಬುದರ ಮೇಲೆ ಅದರ ಭವಿಷ್ಯ ನಿಂತಿದೆ. ಚುನಾವಣಾ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಿಗೆ ರಾಜ್ಯದಲ್ಲಿ ಕಾರ್ಯತಂತ್ರ ರೂಪಿಸಲು ಬೇಕಾದ ದೊಡ್ಡ ಹೂರಣವೇ ಇದೆ. ಹೀಗಾಗಿ, ಕರ್ನಾಟಕದ ಕಾಂಗ್ರೆಸ್‌ಗೆ ಪಿಕೆ ಲಾಭಕಾರಿ ಎನಿಸುವುದರಲ್ಲಿ ಸಂಶಯ ಇಲ್ಲ.

ಪಿಕೆ ತಂತ್ರಗಾರಿಕೆಯಂದ ಲಾಭ:
40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನ ಇಟ್ಟುಕೊಂಡು ರಾಜ್ಯ ಸರಕಾರ ವಿರುದ್ಧ ಕೇಳಿಬಂದಿರುವ ವ್ಯಾಪಕ ಭ್ರಷ್ಟಾಚಾರ ಆರೋಪವು ಕಾಂಗ್ರೆಸ್ ಪಾಲಿಗೆ ಚುನಾವಣೆಯ ಅಸ್ತ್ರವಾಗಲಿದೆ. ಹಾಗೆಯೇ, ಮೇಕೆದಾಟು ಯೋಜನೆ ಇತ್ಯಾದಿ ಆಂದೋಲನಗಳನ್ನು ಕೈ ನಾಯಕರು ರೂಪಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಕಾಂಗ್ರೆಸ್‌ಗೆ ಅನುಕೂಲ ಒದಗಿಸಬಹುದು.

ಪಿಕೆ ಪರ ನಿಂತ ಮೊಯಿಲಿ:
ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಈಗಾಗಲೇ ಪ್ರಶಾಂತ್ ಕಿಶೋರ್ ಪರ ಬ್ಯಾಟ್ ಬೀಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕಕ್ಕೆ ಪ್ರಶಾಂತ್ ಕಿಶೋರ್ ಅವರನ್ನ ತಂತ್ರಗಾರಿಕೆ ರೂಪಿಸಲು ನೇಮಿಸಿ ಎಂದು ಮೊನ್ನೆ ವೀರಪ್ಪ ಮೊಯಿಲಿ ಹೇಳಿದ್ದರು.
"ಪ್ರಶಾಂತ್ ಕಿಶೋರ್ ಅವರ ರಾಜಕೀಯ ತಂತ್ರಗಳು ನನ್ನ ಗಮನ ಸೆಳೆದಿವೆ. ಅವರನ್ನು ಇತ್ತೀಚೆಗೆ ನಾನು ಮೂರು ಬಾರಿ ಭೇಟಿಯಾಗಿದ್ದೇವೆ. ಅವರ ಕಾರ್ಯತಂತ್ರಗಳು ನನಗೆ ಸಮಾಧಾನ ತಂದಿವೆ... ಅವರು ಸಲಹೆಗಾರನಾಗಿ ಹೊರಗೆ ಇರುವುದಕ್ಕಿಂತ ಪಕ್ಷಕ್ಕೆ ಸೇರ್ಪಡೆಯಾದರೆ ಒಳ್ಳೆಯದು" ಎಂದು ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications