ವೀರಪ್ಪ ಮೊಯ್ಲಿ ಟ್ವೀಟ್ ಬಗ್ಗೆ ಮಹದೇವಪ್ಪ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ಮಾರ್ಚ್ 16: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ವಾರಗಳಲ್ಲಿ ನಡೆಯಲಿದೆ. ನಿರೀಕ್ಷೆಯಂತೆ ರಾಜ್ಯದಲ್ಲಿ ಟಿಕೇಟ್ ರಾಜಕೀಯವೂ ಆರಂಭವಾಗಿದೆ. ಟಿಕೇಟ್ ಗಾಗಿ ಕಾಂಗ್ರೆಸ್ ನಲ್ಲಿ ಹಣದ ರಾಜಕೀಯ ನಡೆಯುತ್ತಿದೆ ಎಂಬ ವಿವಾದಾತ್ಮಕ ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅಲ್ಲದೆ, ಈ ಟ್ವೀಟ್ ನಲ್ಲಿ ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪನವರನ್ನೂ ಪರೋಕ್ಷವಾಗಿ ಇರಿದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ, 'ವೀರಪ್ಪ ಮೋಯ್ಲಿ ಅವರು ಹಿರಿಯ ರಾಜಕಾರಣಿ. ಅವರ ಬಗ್ಗೆ ನನಗೆ ತುಂಬ ಗೌರವವಿದೆ. ಅವರ ಟ್ವೀಟ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಅವರೇ ಹೇಳಿದ್ದಾರೆ. ಈ ಕುರಿತು ಇದಕ್ಕೂ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಾನು ಸಿದ್ಧವಿಲ್ಲ' ಎಂದು ಅವರು ಹೇಳಿದ್ದಾರೆ.
'ಮೋಯ್ಲಿ ಅವರ ಖಾತೆಯಿಂದ ಪೋಸ್ಟ್ ಆಗಿದ್ದ ಟ್ವೀಟ್ ಕುರಿತಂತೆ ನನಗೆ ಮೋಯ್ಲಿ ಅವರ ಮೇಲೆ ಯಾವುದೇ ಅಸಮಾಧಾನವಿಲ್ಲ. ನಾನು ಸಂತೋಷವಾಗಿಯೇ ಇದ್ದೇನೆ' ಎಂದು ಇದಕ್ಕೂ ಮುನ್ನ ಪತ್ರಕರ್ತರ ಬಳಿ ಎಚ್ ಸಿ ಮಹದೇವಪ್ಪ ಹೇಳಿದರು.

ರಾಜ್ಯದಲ್ಲಿ ಲೋಕೋಪಯೋಗಿ ಸಚಿವ(ಎಚ್ ಸಿ ಮಹದೇವಪ್ಪ)ರು ಮತ್ತು ರಸ್ತೆ ಗುತ್ತಿಗೆದಾರರ ನಡುವೆ ಹೊಂದಾಣಿಕೆ ನಡೆಯುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ನೇರವಾಗಿ ಆರೋಪಿಸಿದ್ದ ಮೊಯ್ಲಿ, ಈ ಕುರಿತು ಗಮನ ಹರಿಸುವಂತೆ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರು.
'ಆದರೆ ನಂತರ, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ' ಎಂದು ವೀರಪ್ಪ ಮೊಯ್ಲಿ ನುಣುಚಿಕೊಂಡಿದ್ದರು.












Click it and Unblock the Notifications