ಸಿಐಡಿ ಮತ್ತು ನ್ಯಾಯಾಂಗ ತನಿಖೆಯ ನಡುವಿನ ವ್ಯತ್ಯಾಸವೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜುಲೈ 14 : ಮಂಗಳೂರು ಡಿವೈಎಸ್‌ಪಿ ಎಂಕೆ ಗಣಪತಿ ಆತ್ಮಹತ್ಯೆಯ ಪ್ರಕರಣ ಕರ್ನಾಟಕ ಕಾಂಗ್ರೆಸ್ ಸರಕಾರದ ಉರುಳಿಗೆ ಸಿಲುಕಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಾಗಲೆ ವಹಿಸಲಾಗಿರುವ ಸಿಐಡಿ ತನಿಖೆಯ ಬದಲಿಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿ ಕೈತೊಳೆದುಕೊಳ್ಳಲು ಯತ್ನಿಸಿದ್ದಾರೆ.

ಮಾಜಿ ಗೃಹ ಸಚಿವ ಮತ್ತು ಹಾಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ, ಸರ್ವಜ್ಞನಗರದ ಶಾಸಕ ಕೆಜೆ ಜಾರ್ಜ್ ಅವರ ಹೆಸರು ಈ ಪ್ರಕರಣದಲ್ಲಿ ನೇರವಾಗಿ ಕೇಳಿಬಂದಿದೆ. ಜಾರ್ಜ್ ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಿಯೇ ಗಣಪತಿ ನೇಣಿಗೆ ಶರಣಾಗಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಒತ್ತಡಕ್ಕೆ ಮಣಿದು ಸಿಐಡಿ ಬದಲು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ಇಷ್ಟಕ್ಕೂ, ಸಿಐಡಿ ತನಿಖೆಯ ಬದಲು ನ್ಯಾಯಾಂಗ ತನಿಖೆಗೆ ಈ ಪ್ರಕರಣವನ್ನು ಒಪ್ಪಿಸಿದರೆ ಏನಾದರೂ ಲಾಭವಾಗುತ್ತಾ? ಸಂತ್ರಸ್ತರಿಗೆ ಶೀಘ್ರಗತಿಯಲ್ಲಿ ನ್ಯಾಯ ಸಿಗುತ್ತಾ? ಅಲ್ಲದೆ, ಸಿಐಡಿ ತನಿಖೆ ಮತ್ತು ನ್ಯಾಯಾಂಗ ತನಿಖೆಯ ನಡುವಿನ ವ್ಯತ್ಯಾಸವಾದರೂ ಏನು? ವ್ಯತ್ಯಾಸ ಏನಿದ್ದರೆ ಏನು, ಫಲಿತಾಂಶ ಮಾತ್ರ ಎಲ್ಲರಿಗೂ ತಿಳಿದ ವಿಚಾರ. [ಎಂ.ಕೆ.ಗಣಪತಿ ಆತ್ಮಹತ್ಯೆ, ನ್ಯಾಯಾಂಗ ತನಿಖೆ]

Difference between CID and Judicial inquiry? Oneindia Explainer

ಸರಕಾರದ ಅಧೀನದಲ್ಲಿ ಸಿಐಡಿ : ಸಿಐಡಿ ಅಂದ್ರೆ ಕ್ರೈಂ ಇನ್ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್ ನೇರವಾಗಿ ರಾಜ್ಯ ಸರಕಾರದ ಅಧೀನದಲ್ಲಿ ಬರುತ್ತದೆ. ಸರಕಾರದ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತದೆ ಎಂಬುದು ಸಂಶಯಾಸ್ಪದ ಎಂಬುದು ವಿರೋಧ ಪಕ್ಷಗಳ ವಾದ. ಹೀಗಾಗಿ ಸಿಐಡಿ ತನಿಖೆ ಬೇಡ ಸಿಬಿಐ ತನಿಖೆ ನಡೆಯಲಿ ಎಂಬುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಒಕ್ಕೊರಲ ಕೂಗು.

ಕಣ್ಣೊರೆಸುವ ತಂತ್ರ : ನ್ಯಾಯಾಂಗ ತನಿಖೆಯಲ್ಲಿ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸ್ವತಂತ್ರವಾಗಿ ತನಿಖೆ ನಡೆಯುತ್ತದೆ. ಆದರೆ, ಇದೂ ಕೂಡ ಕಣ್ಣೀರೊರೆಸುವ ತಂತ್ರ ಎಂಬುದು ಮತ್ತೊಂದು ವಾದ. ಏಕೆಂದರೆ, ಇಲ್ಲಿಯವರೆಗೆ ನ್ಯಾಯಾಂಗ ತನಿಖೆಯಿಂದ ಸಂಪೂರ್ಣವಾಗಿ ನ್ಯಾಯ ಸಿಕ್ಕಿದ್ದು ತುಂಬಾ ಕಡಿಮೆಯೆಂದೇ ಹೇಳಬಹುದು.

ಪ್ರಕರಣದ ಮೂಲಕ್ಕೆ ಕೈಹಾಕುವ ಸಿಐಡಿ ತನಿಖೆಯಲ್ಲಿ ಸಾಕ್ಷ್ಯಗಳನ್ನು ಕಲೆಹಾಕುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇದರಲ್ಲಿ ಘಟನೆಯ ಒಳಹೊರಗನ್ನು ಬಗೆದು ನೋಡಲಾಗುತ್ತದೆ, ಸಂಬಂಧಿಸಿದವರನ್ನು ಕರೆದು ವಿಚಾರಣೆ ನಡೆಸುವ ಅಧಿಕಾರ ತನಿಖಾ ತಂಡಕ್ಕಿರುತ್ತದೆ. [ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ: ಗಣಪತಿ ಪತ್ನಿ ಪಾವನಾ]

ಆದರೆ, ನ್ಯಾಯಾಂಗ ತನಿಖೆಯಲ್ಲಿ ತನಿಖೆಯ ವಿಸ್ತಾರ ದೊಡ್ಡದಿರುತ್ತದೆ. ಕ್ರಿಮಿನಲ್ ಪ್ರಕರಣದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರನ್ನು ಕರೆದು ವಿಚಾರಿಸುವ ಅಧಿಕಾರವಿರುತ್ತದೆ. ಮುಂದೆ ಅದೇಬಗೆಯ ತಪ್ಪುಗಳಾಗದಂತೆ ಸರಕಾರಕ್ಕೆ ಶಿಫಾಸರು ಮಾಡುವ ಅಧಿಕಾರವೂ ನ್ಯಾಯಂಗ ತನಿಖಾಧಿಕಾರಿಗೆ ಇರುತ್ತದೆ. ಈ ಅಧಿಕಾರ ಸಿಐಡಿಗೆ ಇರುವುದಿಲ್ಲ.

ಶಿಫಾರಸುಗಳಿಂದೇನು ಪ್ರಯೋಜನ : ವಸ್ತುಸ್ಥಿತಿ ಬೇರೆಯೇ ಇದೆ. ನ್ಯಾಯಾಂಗ ತನಿಖೆಯಿಂದ ಹೊರಬಂದ ಶಿಫಾರಸುಗಳನ್ನು ಸರಕಾರ ಮಾನ್ಯ ಮಾಡಬೇಕೆಂದೇನೂ ಇಲ್ಲ, ಮಾನ್ಯ ಮಾಡಿದ್ದೂ ಕಡಿಮೆ. ಇಂಥ ಹಲವಾರು ಪ್ರಕರಣಗಳಲ್ಲಿ ನ್ಯಾಯಾಂಗ ತನಿಖೆ ನಡೆದು, ಸಲ್ಲಿಸಲಾಗಿರುವ ವರದಿಗಳ ಕಡತಗಳು ವಿಧಾನಸೌಧದಲ್ಲಿ ಧೂಳು ತಿನ್ನುತ್ತ ಬಿದ್ದಿವೆ. [ಅವತ್ತು ತೊಡೆ ತಟ್ಟಿದವರು ಇವತ್ತು ಮಾಡುತ್ತಿರುವುದೇನು?]

ಆದರೆ, ಸಿಐಡಿ ತನಿಖೆ ನಡೆದರೆ, ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವ ಅವಕಾಶವಿರುತ್ತದೆ. ಒಮ್ಮೆ ಚಾರ್ಜ್‌ಶೀಟ್ ಸಲ್ಲಿಸಿದರೆ ಸರಕಾರ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ, ಕಾನೂನು ತನ್ನ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ. ಸಿಐಡಿ ತನಿಖೆಯಲ್ಲೇ ಆಗಲಿ ನ್ಯಾಯಾಂಗ ತನಿಖೆಯಲ್ಲೇ ಆಗಲಿ, ಆರೋಪಿ ಮಂತ್ರಿಯೇ ಆಗಿದ್ದರೂ ಕರೆಸಿ ವಿಚಾರಿಸುವ ಅಧಿಕಾರವಿರುತ್ತದೆ.

ನ್ಯಾಯಾಂಗ ತನಿಖೆಗೆ ಸರಕಾರ ಶಿಫಾರಸು ಮಾಡುವುದೇಕೆಂದರೆ, ತನಿಖೆಯನ್ನು ಸರಕಾರದ ಅಧೀನದಿಂದ ಹೊರತುಪಡಿಸಿ ಸ್ವತಂತ್ರವಾಗಿ ನಡೆಸಲಾಗುತ್ತದೆ ಎಂದು ತೋರಿಸುವುದಕ್ಕೆ. ಆದರೆ, ನ್ಯಾಯಾಂಗ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರನ್ನು, ಕೈತುಂಬ ಸಂಬಳ ಮತ್ತು ಭದ್ರತೆ ಕೊಟ್ಟು ತಂದು ಕೂಡಿಸುವವರು ಯಾರು? ಅದೇ ಸರಕಾರ! [ಡಿಸಿಗೆ ರಕ್ಷಣೆ ಕೊಡಲಾಗದ ನೀವೂ ಒಬ್ಬ ಸಿಎಂ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oneindia Explainer : What is the difference between CID inquiry and Judicial inquiry? A CID probe focuses largely on the collection of evidence. The judicial probe has more scope and can make recommendations which would help fix the problems in the future.
Please Wait while comments are loading...