• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣೆ ಅಖಾಡಕ್ಕೆ ಸಿದ್ಧವಾದ ಗದಗ ಜಿಲ್ಲೆ: ಒಂದು ಪಕ್ಷಿನೋಟ

By ನಮ್ಮ ಪ್ರತಿನಿಧಿ
|

ಮುದ್ರಣಾಲಯಗಳ ಜಿಲ್ಲೆ ಎಂದೇ ಪ್ರಸಿದ್ಧಿ ಪಡೆದ ಗದಗದಲ್ಲಿ 2013 ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಕ್ಷೇತ್ರವನ್ನೂ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ ಜಿಲ್ಲೆಯ ಮತದಾರ ಯಾರಿಗೆ ಒಲಿಯಲಿದ್ದಾನೆ ಎಂಬ ಕುತೂಹಲ ಇದ್ದೇ ಇದೆ. ಗದಗದಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಗದುಗಿನ ಗದ್ದುಗೆಗೆ ಯಾರಾಗಲಿದ್ದಾರೆ ವಾರಸುದಾರ?

ಕುಮಾರವ್ಯಾಸನ ತವರು ನೆಲವಾದ ಗದಗ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅಪಾರ. ಗದುಗಿನ ನಾರಣಪ್ಪ ಎಂಬುದು ಕುಮಾರವ್ಯಾಸನ ಮೂಲ ಹೆಸರಾಗಿತ್ತು. ಗಾನಯೋಗಿ ಪಂಚಾಕ್ಷರಿ ಗವಾಯಿ ಅವರೂ ಗದಗದವರು.

ಗದಗದಲ್ಲಿ ಗೆದ್ದವರು, ಸೋತವರು: ಚಿತ್ರಸಹಿತ ಮಾಹಿತಿ

ಗದಗದಲ್ಲಿ ಎಲ್ಲೇ ಕಲ್ಲು ಹೊಡೆದರೂ ಅದು ಪ್ರಿಂಟಿಂಗ್ ಪ್ರೆಸ್ ಅಥವಾ ಕೈಮಗ್ಗದ ಕಾರ್ಖಾನೆಗೆ ಹೋಗಿ ಬೀಳುತ್ತದೆ ಎಂಬಷ್ಟರ ಮಟ್ಟಿಗೆ ಈ ಜಿಲ್ಲೆಯಲ್ಲಿ ಮುದ್ರಣಾಲಯ ಮತ್ತು ಕೈಮಗ್ಗದ ಕಾರ್ಖಾನೆಗಳಿದ್ದವಂತೆ!

ಗದಗ ಕ್ಷೇತ್ರ

ಗದಗ ಕ್ಷೇತ್ರ

ಹೆಚ್ ಕೆ ಪಾಟೀಲ್-ಕಾಂಗ್ರೆಸ್ -70475 ಮತಗಳು(ಹಾಲಿ ಶಾಸಕರು)
ಅನಿಲ್ ಮೆಣಸಿನಕಾಯಿ-ಬಿಎಸ್ ಆರ್-36748
ಗೆಲುವಿನ ಅಂತರ-33727

ಗದಗ (ಸಾಮಾನ್ಯ) ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿ ಎಂದೇ ಹೆಸರಾಗಿರೋ ಹೆಚ್ ಕೆ ಪಾಟೀಲ್ 2013 ರ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡಿ ಸಮೀಪದ ಅಭ್ಯರ್ಥಿ ಬಿಎಸ್ ಆರ್ ಕಾಂಗ್ರೆಸ್‌ನ ಅನಿಲ್ ಮೆಣಸಿನಕಾಯಿ ಅವರನ್ನು ಸೋಲಿಸಿದ್ದರು. ಕಳೆದ 4 ವರ್ಷಗಳ ಕಾಲ ಕೈಕಟ್ಟಿ ಕುಳಿತಿದ್ದ ಸಚಿವ ಹೆಚ್ ಕೆ ಪಾಟೀಲ್ ಕಳೆದ 6 ತಿಂಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದು, ಗದಗ ಬೆಟಗೇರಿ ಅವಳಿ ನಗರದ ಜನರಲ್ಲಿ ಅಸಮಾಧಾನ ಮೂಡಿಸಿದೆ. ಈಗ ಚುನಾವಣೆ ಸಮಯವಾಗಿರೋದ್ರಿಂದ ಕೆಲಸಗಳಿಗೆ ವೇಗ ನೀಡುತ್ತಿದ್ದಾರೆ. ಈ ವೇಗವನ್ನು ಗೆದ್ದ ನಂತರದಿಂದಲೇ ಏಕೆ ನೀಡಲಿಲ್ಲ ಎಂದು ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೆ ಗದಗ ಬೆಟಗೇರಿ ಅವಳಿ ನಗರದ ಜನರು ಕಳೆದ ಹಲವು ದಶಕಗಳಿಂದ ಅನುಭವಿಸುತ್ತಿರುವ ಕುಡಿಯೋ ನೀರಿನ ಸಮಸ್ಯೆಯನ್ನು ನೀಗಿಸೋವಲ್ಲಿ ವಿಫಲರಾಗಿದ್ದಾರೆ. ಹಿಂಬಾಲಕರಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಕೂಡಾ ಇತರೇ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಮೂಡಿಸಿದೆ.

ಕಾಂಗ್ರೆಸ್‌ನ ಹಾಲಿ ಶಾಸಕ ಹೆಚ್ ಕೆ ಪಾಟೀಲ್ ಪ್ರಮುಖ ಓಟ್‌ಬ್ಯಾಂಕ್ ಆದ ಮುಸ್ಲಿಂ ಜನಾಂಗಕ್ಕೆ ನೀಡಬೇಕಿದ್ದ ಪ್ರಾಶಸ್ತ್ಯ ನೀಡದೇ ಕೇವಲ ಸಣ್ಣಪುಟ್ಟ ಅಧಿಕಾರ ನೀಡಿದ್ದು ಸ್ಥಳೀಯ ಮುಸ್ಲಿಂ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ನಡೆಯುತ್ತಿರೋ ಕಾಮಗಾರಿಗಳಲ್ಲಿ ಸಣ್ಣಪುಟ್ಟ ಕಾಮಗಾರಿಗಳನ್ನು ಸ್ಥಳೀಯರಿಗೆ ನೀಡಿ, ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳನ್ನು ತಮ್ಮದೇ ಸಮುದಾಯದ ಗುತ್ತಿಗೆದಾರರಿಗೆ ನೀಡುತ್ತಿರುವುದೂ ಕೂಡಾ ಇತರೇ ಸಮುದಾಯದ ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿದೆ. ಅಹಿಂದ ಓಟುಗಳು ಚದುರಿದರೆ ಹೆಚ್ ಕೆ ಪಾಟೀಲರ ಗೆಲುವು ಕಷ್ಟ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಟಿಕೇಟ್ ಆಕಾಂಕ್ಷಿಗಳ್ಯಾರು?

ಟಿಕೇಟ್ ಆಕಾಂಕ್ಷಿಗಳ್ಯಾರು?

ಕಾಂಗ್ರೆಸ್-ಹೆಚ್ ಕೆ ಪಾಟೀಲ್, ಡಿ ಆರ್ ಪಾಟೀಲ್
ಬಿಜೆಪಿ-ಅನಿಲ್ ಮೆಣಸಿನಕಾಯಿ, ಮೋಹನ್ ಮಾಳಶೆಟ್ಟಿ, ಶ್ರೀಶೈಲಪ್ಪ ಬಿದರೂರು
ಜೆಡಿಎಸ್-ಎಂ ಆರ್ ಸೋಂಪುರ್

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪರವಾಗಿ ಮೇಲ್ನೋಟಕ್ಕೆ ಅಲೆ ಎದ್ದು ಕಾಣುತ್ತಿದ್ದರೂ ಸಹ ಚುನಾವಣಾ ಸಂದರ್ಭದಲ್ಲಿ, ಫಲಿತಾಂಶದ ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆಯಲ್ಲಿರೋ ಹೆಚ್ ಕೆ ಪಾಟೀಲ್ ಅಥವಾ ಡಿ ಆರ್ ಪಾಟೀಲ್ ಅವರ ವಿರುದ್ಧ ಫಲಿತಾಂಶ ಬಂದರೂ ಅಚ್ಚರಿ ಪಡುವಹಾಗಿಲ್ಲ. ಬಿಜೆಪಿಯಲ್ಲಿ ಟಿಕೇಟ್ ಆಕಾಂಕ್ಷಿಗಳು ಹೆಚ್ಚಿದ್ದು, ಕಳೆದ ಬಾರಿ ಹೆಚ್ ಕೆ ಪಾಟೀಲರಿಗೆ ಟಕ್ಕರ್ ಕೊಟ್ಟಿದ್ದ ಬಿಎಸ್ ಆರ್‌ನ ಅನಿಲ್ ಮೆಣಸಿನಕಾಯಿಗೆ ಟಿಕೆಟ್ ಖಾತ್ರಿಯಾದ್ರೆ, ಕಾಂಗ್ರೆಸ್‌ಗೆ ಸಮಬಲದ ಹೋರಾಟ ನಡೆಯುವ ನಿರೀಕ್ಷೆಯಿದೆ. ಜೆಡಿಎಸ್ ನಿಂದ ನಿವೃತ್ತ ತೋಟಗಾರಿಕಾ ಇಲಾಖೆ ಅಧಿಕಾರಿ ಎಂ ಆರ್ ಸೋಂಪುರ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಒಂದು ವೇಳೆ ಇವರಿಗೆ ಟಿಕೆಟ್ ನೀಡಿದ್ರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಶಿರಹಟ್ಟಿ(ಪರಿಶಿಷ್ಠ ಜಾತಿ ಮೀಸಲು)

ಶಿರಹಟ್ಟಿ(ಪರಿಶಿಷ್ಠ ಜಾತಿ ಮೀಸಲು)

ರಾಮಕೃಷ್ಣ ದೊಡ್ಡಮನಿ-ಕಾಂಗ್ರೆಸ್-44738(ಹಾಲಿ ಶಾಸಕರು)
ರಾಮಣ್ಣ ಲಮಾಣಿ-ಎರಡನೇ ಸ್ಥಾನ-ಬಿಜೆಪಿ-44423
ಗೆಲುವಿನ ಅಂತರ-315

2013 ರಲ್ಲಿ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ರಾಮಕೃಷ್ಣ ದೊಡ್ಡಮನಿ ಆಯ್ಕೆಯಾದರು. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಮಣ್ಣ ಲಮಾಣಿ ಅವರನ್ನು ಅತಿ ಕಡಿಮೆ ಅಂತರದಲ್ಲಿ ಸೋಲಿಸಿದ್ದ, ರಾಮಕೃಷ್ಣ ದೊಡ್ಡಮನಿ ಕೆಲವೇ ದಿನಗಳಲ್ಲಿ ಕ್ಷೇತ್ರದ ತುಂಬಾ ಹೆಸರು ಕೆಡಿಸಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಮತ್ತು ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿದ್ದಾರೆನ್ನೋ ಆರೋಪಗಳು ಮತದಾರನಿಂದಲೇ ಕೇಳಿಬರುತ್ತಿದೆ. ಮುಖ್ಯಮಂತ್ರಿಗಳ ಜಲಸಂಪನ್ಮೂಲ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿದ್ರೂ ಸಹ ಕ್ಷೇತ್ರದ ಅಭಿವೃದ್ಧಿಗೆ ಪ್ರಯೋಜನವಾಗಿಲ್ಲ ಎನ್ನೋ ಮಾತು ಕ್ಷೇತ್ರದ ಜನರಲ್ಲಿ ಕೇಳಿಬರುತ್ತಿದೆ.

ಟಿಕೇಟ್ ಮೇಲೆ ಯಾರ್ಯಾರ ಕಣ್ಣು?

ಟಿಕೇಟ್ ಮೇಲೆ ಯಾರ್ಯಾರ ಕಣ್ಣು?

ಕಾಂಗ್ರೆಸ್-ರಾಮಕೃಷ್ಣ ದೊಡ್ಡಮನಿ, ಸುಜಾತ ದೊಡ್ಡಮನಿ.
ಬಿಜೆಪಿ-ಭೀಮಸಿಂಗ್ ರಾಥೋಡ್, ರಾಮಣ್ಣ ಲಮಾಣಿ, ಜಯಶ್ರೀ ಹಳ್ಳೆಪ್ಪನವರ್
ಜೆಡಿಎಸ್-ಇನ್ನೂ ನಿರ್ಧಾರವಾಗಿಲ್ಲ.

ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾದ ರಾಮಕೃಷ್ಣ ದೊಡ್ಡಮನಿ ಅವರ, ಈ ಬಾರಿಯ ಸ್ಫರ್ಧೆಯ ಬಗ್ಗೆ ಪಕ್ಷದಲ್ಲಿನ ಒಳಜಗಳ ಮತ್ತು ಬೆಳೆಯುತ್ತಿರೋ ಆಕಾಂಕ್ಷಿಗಳ ಪಟ್ಟಿ ಗೊಂದಕ್ಕೀಡುಮಾಡಿದೆ. ಅಲ್ಲದೆ ಅವರ ಅಳಿಯ ಮತ್ತು ಮಗ ಶಿರಹಟ್ಟಿ ತಾಲೂಕಿನಲ್ಲಿ ನಡೆಯುತ್ತಿರೋ ಅಕ್ರಮ ಮರಳುದಂಧೆಯಲ್ಲಿ ನೇರವಾಗಿ ಭಾಗಿಯಾಗಿದ್ದು ಜನರ ಕೆಂಗಣ್ಣಿಗೆ ಮತ್ತು ದೊಡ್ಡಮನಿಯವರ ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ ಅನ್ನೋದು ಕ್ಷೇತ್ರದ ಜನರ ಅಭಿಪ್ರಾಯ. ಕೆಲ ಕಾಮಗಾರಿಗಳನ್ನು ತಮಗೆ ಬೇಕಾದ ಗುತ್ತಿಗೆದಾರರಿಗೆ ನೀಡಲಾಗಿದ್ದು, ಅರ್ಹತೆಯಿದ್ರೂ ಇತರೇ ಗುತ್ತಿಗೆದಾರರಿಗೆ ನೀಡಿಲ್ಲ ಎನ್ನೋ ಅಸಮಾಧಾನವಿದೆ. ಮೂಲತಃ ಮುಂಡರಗಿಯವರಾದ ರಾಮಕೃಷ್ಣ ದೊಡ್ಡಮನಿಯವರನ್ನು ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಭಾಗದ ಜನ, ನಮ್ಮವರು ಅಂತ ಭಾವಿಸದೇ ಇರುವ ಸ್ಥಿತಿಯನ್ನು ತಂದುಕೊಂಡಿದ್ದಾರೆ. ಲಂಬಾಣಿ ಸಮುದಾಯ ಮತ್ತು ಮೇಲ್ವರ್ಗದ ಜಾತಿಗಳ ಬೆಂಬಲದ ಕೊರತೆ ಈ ಬಾರಿ ಎದ್ದುಕಾಣುತ್ತಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಯಾರಿಗೆ ಲಾಭ? ಯಾರಿಗೆ ನಷ್ಟ?

ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಡಮನಿ ಅವರ ಅಧಿಕಾರ ದುರ್ಬಳಕೆ, ಅಭಿವೃದ್ಧಿ ಕಾಮಗಾರಿಯಲ್ಲಿ ತೋರಿರೋ ತಾರತಮ್ಯ, ಕುಟುಂಬಸ್ಥರ ಅಂಧಾದರ್ಬಾರ್ ಈ ಬಾರಿ ಅವರ ಗೆಲುವನ್ನು ತಡೆಹಿಡಿತೋ ಸಾಧ್ಯತೆಯಿದೆ. ಅಲ್ಲದೆ ಕ್ಷೇತ್ರದ ತುಂಬ ಚೆಕ್ ಡ್ಯಾಂಗಳ ಅಭಿವೃದ್ಧಿ ಮಾಡಿದ್ದು ಬಿಟ್ರೆ ರಸ್ತೆ ಅಭಿವೃದ್ಧಿಯಲ್ಲಿ ಸಾಧನೆ ಮಾಡದಿರುವುದು ಸಹ ಇವರ ಹಿನ್ನೆಡೆಗೆ ಕಾರಣವಾಗಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮತಗಳು ಬಿಎಸ್ ಆರ್, ಕೆಜೆಪಿ ಮತ್ತು ಬಿಜೆಪಿ ಪಕ್ಷಗಳ ನಡುವೆ ಹಂಚಿಹೋಗಿತ್ತು, ಆದ್ರೆ ಈ ಬಾರಿ ಎಲ್ಲ ಮತಗಳು ಸಹ ಬಿಜೆಪಿ ಪಕ್ಷಕ್ಕೆ ಮರಳಿರುವುದು ಈ ಬಾರಿಯ ಕಾಂಗ್ರೆಸ್ ಗೆಲುವನ್ನು ತಡೆಹಿಡಿಯೋ ಸಾಧ್ಯತೆಯಿದೆ. ಅಲ್ಲದೆ ಜಿಪಂನ ಮಾಜಿ ಅಧ್ಯಕ್ಷೆ ಸುಜಾತ ದೊಡ್ಡಮನಿ ಸಹ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿರೋದು ರಾಮಕೃಷ್ಣ ದೊಡ್ಡಮನಿಯವರಿಗೆ ತೊಡಕಾಗಬಹುದು.

ಇನ್ನು ಬಿಜೆಪಿಯು ಕಳೆದ ಚುನಾವಣೆಯಲ್ಲಿ ಬಿಎಸ್ ಆರ್, ಕೆಜೆಪಿ ಮತ್ತು ಬಿಜೆಪಿಯಾಗಿ ಹರಿದುಹಂಚಿಹೋಗಿತ್ತು. ಈ ಪರಿಸ್ಥಿತಿಯ ನಡುವೆಯೂ ಸಹ ಬಿಜೆಪಿ ರಾಮಣ್ಣ ಲಮಾಣಿ ಕೇವಲ 315 ಕಡಿಮೆ ಮತಗಳ ಅಂತರದಿಂದ ಸೋತಿದ್ರು. ಈ ಬಾರಿ ಬಿಜೆಪಿ ಒಂದೇ ಪ್ರಬಲ ಪಕ್ಷವಾಗಿದ್ದು, ಮತ್ತು ಬಿಜೆಪಿಯ ರಾಮಣ್ಣ ಲಮಾಣಿ ಹಾಗೂ ಭೀಮಸಿಂಗ್ ರಾಥೋಡ್ ಇಬ್ಬರೂ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರೋ ಲಂಬಾಣಿ ಸಮುದಾಯದವರಾಗಿರೋದು ಮತ್ತು ಕಳೆದ ಬಾರಿಯ ಬಿಎಸ್ ಆರ್ ಕಾಂಗ್ರೆಸ್‌ನ ಜಯಶ್ರೀ ಹಳ್ಳೆಪ್ಪನವರ್ ಸಹ ಈ ಬಾರಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿರೋದು ಬಿಜೆಪಿ ಪರವಾಗಿ ಗೆಲುವನ್ನು ತಂದುಕೊಡೋ ಸಾಧ್ಯತೆಯಿದೆ.

ಒಂದು ವೇಳೆ ಬಿಜೆಪಿಯ ರಾಮಣ್ಣ ಲಮಾಣಿವರಿಗೆ ಟಿಕೆಟ್ ಕೈತಪ್ಪಿದ್ರೆ, ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸೋ ಸಾಧ್ಯತೆಗಳು ದಟ್ಟವಾಗಿವೆ. ಹಾಗೇನಾದ್ರೂ ಆದ್ರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಗೆಲವಿನಲ್ಲಿ ಹಿನ್ನೆಡೆಯಾಗೋ ಸಾಧ್ಯತೆಯಿದೆ.

ರೋಣ ಕ್ಷೇತ್ರ

ರೋಣ ಕ್ಷೇತ್ರ

ಜಿ ಎಸ್ ಪಾಟೀಲ್-ಕಾಂಗ್ರೆಸ್-74593(ಹಾಲಿ ಶಾಸಕರು)
ಕಳಕಪ್ಪ ಬಂಡಿ-ಬಿಜೆಪಿ-56366
ಗೆಲುವಿನ ಅಂತರ-18227

2013 ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿದ್ದ ಬಿಜೆಪಿಯ ಕಳಕಪ್ಪ ಬಂಡಿ ಅವರನ್ನು ಕಾಂಗ್ರೆಸ್‌ನ ಜಿ ಎಸ್ ಪಾಟೀಲ್ 18 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಪ್ರಸ್ತುತ ನವೀಕರಿಸಬಹುದಾದ ಇಂಧನ ಮೂಲಗಳ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಿ ಎಸ್ ಪಾಟೀಲ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ಅವರ ಕೈಹಿಡಿಯೋ ಸಾಧ್ಯತೆಯಿದೆ. ಪ್ರಮುಖವಾಗಿ ರೈತರ ಹೊಲಗಳಿಗೆ ಹೆಚ್ಚಾಗಿ ಸಂಪರ್ಕ ರಸ್ತೆಗಳ ನಿರ್ಮಾಣ, ಕೃಷಿ ಹೊಂಡಗಳ ದಾಖಲೆ ನಿರ್ಮಾಣವಾಗಿರೋದು ರೈತರ ಮತ್ತು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಇದು ಈ ಬಾರಿ ಜಿ ಎಸ್ ಪಾಟೀಲ್ ಅವರನ್ನು ಗೆಲುವಿನ ಹೊಸ್ತಿಲಿಗೆ ಕರೆದುಕೊಂಡು ಹೋಗುತ್ತದೆನ್ನೋದು ಕ್ಷೇತ್ರದ ಜನರಲ್ಲಿನ ಅಭಿಪ್ರಾಯ. ಕೆರೆಗಳಿಗೆ ನೀರು ತುಂಬಿಸಿದ್ದು, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಕುಡಿಯೋ ನೀರು ಘಟಕಗಳ ಸ್ಥಾಪನೆಯ ಜೊತೆ ವಿರೋಧ ಪಕ್ಷವಾದ ಬಿಜೆಪಿಯ ಅನಿಶ್ಚಿತತೆ ಮತ್ತು ಯಾವುದೇ ವಿರೋಧ ವ್ಯಕ್ತಪಡಿಸದೇ ಸುಮ್ಮನಿರೋದು ಸಹ ಜಿ ಎಸ್ ಪಾಟೀಲರಿಗೆ ವರದಾನವಾಗಲಿದೆ.

ಟಿಕೇಟ್ ಯಾರಿಗೆ?

ಟಿಕೇಟ್ ಯಾರಿಗೆ?

ಕಾಂಗ್ರೆಸ್-ಜಿ ಎಸ್ ಪಾಟೀಲ್.
ಬಿಜೆಪಿ-ಕಳಕಪ್ಪ ಬಂಡಿ
ಜೆಡಿಎಸ್-ಇನ್ನೂ ನಿರ್ಧಾರವಾಗಿಲ್ಲ.

ಕಾಂಗ್ರೆಸ್ ಶಾಸಕ ಜಿ ಎಸ್ ಪಾಟೀಲರ ಈ ಅವಧಿಯಲ್ಲಿ ವಿಶೇಷವಾಗಿ ರೈತರ ಹೊಲಗಳಿಗೆ ರಸ್ತೆಗಳಾಗಿರುವುದು. ಕೆರೆಗಳಿಗೆ ನೀರು ತುಂಬಿಸಿದ್ದು, ಸಿಸಿ ರಸ್ತೆಗಳ ಅಭಿವೃದ್ಧಿ, ಕ್ಷೇತ್ರವ್ಯಾಪ್ತಿಯಲ್ಲಿರೋ ಪಟ್ಟಣ ಪ್ರದೇಶಗಳ ಅಭಿವೃದ್ಧಿ. ರೋಣ ಪಟ್ಟಣದ ಜನರ ಬಹುದಿನಗಳ ಬೇಡಿಕೆಯಾದ 27x7 ಕುಡಿಯೋ ನೀರಿನ ಕಾಮಗಾರಿಗೆ ಚಾಲನೆ ಮತ್ತು ವೇಗ. ಬಿಜೆಪಿಯ ಕಳಕಪ್ಪ ಬಂಡಿ ಮತ್ತು ಅವರ ತಮ್ಮ ಸಿದ್ದಪ್ಪ ಬಂಡಿ ಅವರ ಒರಟು ಮತ್ತು ದರ್ಪದ ವ್ಯಕ್ತಿತ್ವ, ವಿನಾಕಾರಣ ಅಸಮರ್ಥರ ಮೇಲೆ ಹಲ್ಲೆ ಮಾಡಿರೋ ಘಟನೆಗಳು ಕಾಂಗ್ರೆಸ್ ಪಕ್ಷ ಮತ್ತು ಜಿ ಎಸ್ ಪಾಟೀಲರಿಗೆ ವರದಾನವಾಗಲಿದೆ. ಅಲ್ಲದೆ ಈ ಬಾರಿ ವಿರೋಧ ಪಕ್ಷವಾಗಿ ಬಿಜೆಪಿ ಕಾಂಗ್ರೆಸ್‌ನ ಯಾವುದೇ ಬಗೆಯ ನ್ಯೂನತೆಗಳನ್ನು ಹುಡುಕಿ ಮುಂದೆ ನಿಂತು ಹೋರಾಟ ಮಾಡಿಲ್ಲದಿರುವುದೂ ಸಹ ಜಿ ಎಸ್ ಪಾಟೀಲರನ್ನು ಗೆಲುವಿನ ಹೊಸ್ತಿಲಿಗೆ ಕರೆದೊಯ್ಯುವುದರಲ್ಲಿ ಅನುಮಾನವಿಲ್ಲ.

ಬಿಜೆಪಿ 2013ರ ಚುನಾವಣೆ ನಂತರ ಸಂಪೂರ್ಣವಾಗಿ ಕ್ಷೇತ್ರದ ಜನರನ್ನು ತಲುಪಿಲ್ಲ. ಚುನಾವಣೆ ಸಮೀಪಿಸುತ್ತಿದ್ದರೂ ಸಹ ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಬಾರಿ ಬಿಜೆಪಿ, ರೋಣ ಕ್ಷೇತ್ರದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳೋ ಸಾಧ್ಯತೆಗಳೇ ದಟ್ಟವಾಗಿವೆ. ಜೆಡಿಎಸ್ ಪಕ್ಷಕ್ಕೆ ಯಾರೇ ಅಭ್ಯರ್ಥಿಯಾದ್ರೂ ಸಹ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನೋ ವಾತಾವರಣ ರೋಣ ವಿಧಾನಸಭಾ ಕ್ಷೇತ್ರದಲ್ಲಿದೆ.

ನರಗುಂದ

ನರಗುಂದ

ಬಿ ಆರ್ ಯಾವಗಲ್-ಕಾಂಗ್ರೆಸ್-59620-ಹಾಲಿ ಶಾಸಕರು
ಸಿ ಸಿ ಪಾಟೀಲ್-ಬಿಜೆಪಿ-51035
ಗೆಲುವಿನ ಅಂತರ-8585

ಕಳೆದ ಚುನಾವಣೆಯಲ್ಲಿ ಹಿರಿಯ ಮತ್ತು ಸಂಭಾವಿತ ರಾಜಕಾರಣಿ ಎಂದು ಹೆಸರು ಪಡೆದಿರೋ ಮತ್ತು ಸಚಿವರಾಗಿ ಅನುಭವವನ್ನೂ ಹೊಂದಿರೋ ಬಿ ಆರ್ ಯಾವಗಲ್ ಬಿಜೆಪಿಯ ಸಿ ಸಿ ಪಾಟೀಲ್ ಅವರನ್ನು 8585 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

ನರಗುಂದ ಮತಕ್ಷೇತ್ರ ಎಂದ ಕೂಡಲೇ ಕಳೆದ 3 ವರ್ಷಗಳಿಂದ ನರಗುಂದ ಪಟ್ಟಣದಲ್ಲಿ ನಡೆಯುತ್ತಿರೋ ಮಹದಾಯಿ ಹೋರಾಟ ನೆನಪಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಾಂಗ್ರೆಸ್‌ನ ಬಿ ಆರ್ ಯಾವಗಲ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎನ್ನೋ ಅರೋಪಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ನರಗುಂದ ಪಟ್ಟಣ ಪ್ರದೇಶದಲ್ಲಿ ಯಾವಗಲ್ ಅವರಿಗೆ ಹಿಡಿತವಿದ್ರೂ ಸಹ ಗ್ರಾಮೀಣ ಪ್ರದೇಶದ ಮತದಾರ ಇವರನ್ನು ಅಥವಾ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸೋ ಸಾಧ್ಯತೆಯಿದೆ. ಈ ಭಾಗದ ರೈತರ ಹಲವಾರು ವರ್ಷಗಳ ಬೇಡಿಕೆಯಾದ ಮಲಪ್ರಭಾ ಕಾಲುವೆಗಳ ಆಧುನೀಕರಣಕ್ಕೆ 1200 ಕೋಟಿ ರೂಪಾಯಿಗಳ ಅನುದಾನವನ್ನು ತಂದು ಕಾಮಗಾರಿಗೆ ಚಾಲನೆ ನೀಡಿದ್ದು, ರೈತರಿಗೆ ವರದಾನವಾಗಿದೆ. ಅಲ್ಲದೆ ಕ್ಷೇತ್ರಾದ್ಯಂತ ದಾಖಲೆ ಪ್ರಮಾಣದಲ್ಲಿ ಕೃಷಿಹೊಂಡಗಳ ನಿರ್ಮಾಣ ಮಾಡಿದ್ದೂ ಸಹ ರೈತರ ಗಮನ ಸೆಳೆದಿದೆ.

ಆಕಾಂಕ್ಷಿಗಳು ಯಾರು

ಆಕಾಂಕ್ಷಿಗಳು ಯಾರು

ಕಾಂಗ್ರೆಸ್-ಬಿ ಆರ್ ಯಾವಗಲ್, ದಶರಥ ಗಾಣಿಗೇರ್
ಬಿಜೆಪಿ-ಸಿ ಸಿ ಪಾಟೀಲ್.
ಜೆಡಿಎಸ್-ಇನ್ನೂ ನಿರ್ಧಾರವಾಗಿಲ್ಲ.

ಈ ಬಾರಿ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆಯೋ ಸಾಧ್ಯತೆಯಿದೆ. ಎರಡೂ ಪಕ್ಷಗಳಿಗೂ ಸಹ ಪ್ರಮುಖವಾಗಿ ಮಹದಾಯಿ ಹೋರಾಟದ ನೇರ ಪರಿಣಾಮ ಬೀರಲಿದೆ. ಮಹದಾಯಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡೆಯನ್ನು ನರಗುಂದ ಕ್ಷೇತ್ರದ ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಬಿ ಆರ್ ಯಾವಗಲ್ ಅವರ ಬಗ್ಗೆ ಜನ್ರಿಗೆ ಒಳ್ಳೆಯ ಅಭಿಪ್ರಾಯವಿದ್ರೂ ಸಹ ಅವರ ಮಕ್ಕಳು ಮತ್ತು ಸಂಬಂಧಿಕರು ಅಧಿಕಾರ ದುರುಪಯೋಗ ಪಡಿಸಿಕೊಂಡಿರೋ ಹಲವಾರು ಉದಾಹರಣೆಗಳು ಇವರ ಗೆಲುವಿಗೆ ತಡೆಯೊಡ್ಡಬಹುದು. ಇನ್ನು ಬಿಜೆಪಿಯ ಸಿ ಸಿ ಪಾಟೀಲ್ ಅವರ ಗೆಲವೂ ಸಹ ಕ್ಷೇತ್ರದಲ್ಲಿ ಸುಲಭವಾಗಿಲ್ಲ. ಮಹದಾಯಿ ಸಮಸ್ಯೆಯ ನೇರ ಪರಿಣಾಮ ಇವರ ಮೇಲೆಯೇ ಬೀಳಲಿದೆ. ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವ ಸಾಧ್ಯತೆಯಿದ್ರೂ ಸಹ ಅದನ್ನು ಮಾಡಿಸುವಲ್ಲಿ ಸಿ ಸಿ ಪಾಟೀಲ್ ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರೂ ಸಹ ವಿವಾದ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎನ್ನೋದೇ ಪ್ರಮುಖ ಕಾರಣವಾಗಿದೆ. ಹೀಗಾಗಿ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಆ ಗೆಲುವು ಕೂದಲೆಳೆ ಅಂತರದ ಗೆಲುವಾಗಿತ್ತದೆ ಎನ್ನೋದರಲ್ಲಿ ಅನುಮಾನವಿಲ್ಲ. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಯಾರೂ ಎನ್ನೋದೂ ಸಹ ಇವರ ಗೆಲುವು ಸೋಲಿನ ಮೇಲೆ ಪರಿಣಾಮ ಬೀರಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು karnataka assembly elections 2018 ಸುದ್ದಿಗಳುView All

English summary
Karnataka assembly elections 2018: There are 4 assembly constituencies in Gadag district. Congress has won all 4 seats in 2013 assembly elections. Here is deatiled political history and importance of Gadag district constituency profiles.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more