ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ
ಹಾಸನ, ಮಾರ್ಚ್ 19: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಸಹೋದರಿ ಜವರಮ್ಮ (88) ಅವರು ಇಂದು (ಮಾರ್ಚ್ 19) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸಹೋದರಿ ಜವರಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಸವನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಅವರು, ಸರಳ ಜೀವನಕ್ಕೆ ಹೆಸರಾಗಿದ್ದರು. ತಮ್ಮ ನೆಚ್ಚಿನ ತಂಗಿಯ ಅಗಲಿಕೆಯಿಂದ ದೇವೇಗೌಡರು ಕಂಬನಿ ಮಿಡಿದಿದ್ದಾರೆ.

ಸಹೋದರಿ ಮೇಲೆ ಅಪಾರ ಪ್ರೀತಿ ಹೊಂದಿದ್ದ ದೊಡ್ಡಗೌಡರು
ರಾಜಕೀಯವಾಗಿ ಎಷ್ಟೇ ಅತ್ಯುನ್ನತ ಸ್ಥಾನಕ್ಕೇರಿದರೂ ದೇವೇಗೌಡರು ತಮ್ಮ ಹಳ್ಳಿಯ ಸೊಗಡು ಮತ್ತು ಕುಟುಂಬದ ಬಾಂಧವ್ಯವನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ. ಅದರಲ್ಲೂ ಸಹೋದರಿ ಜವರಮ್ಮ ಅವರ ಮೇಲೆ ಅವರು ವಿಶೇಷವಾದ ಪ್ರೀತಿ ಹೊಂದಿದ್ದರು. ತಂಗಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ದೇವೇಗೌಡರು ಮತ್ತು ಅವರ ಕುಟುಂಬ ಸದಸ್ಯರು ಕಂಬನಿ ಮಿಡಿದಿದ್ದಾರೆ.
ಅತ್ಯಂತ ಸಾಧಾರಣ ಜೀವನ ನಡೆಸುತ್ತಿದ್ದ ಜವರಮ್ಮ ಅವರು, ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಏಳುಬೀಳುಗಳ ಸಂದರ್ಭದಲ್ಲಿ ಕುಟುಂಬಕ್ಕೆ ದೊಡ್ಡ ನೈತಿಕ ಬೆಂಬಲವಾಗಿ ನಿಂತಿದ್ದರು. ಕೇವಲ ಒಬ್ಬ ಸಹೋದರಿಯಾಗಿ ಮಾತ್ರವಲ್ಲದೆ, ಇಡೀ ಕುಟುಂಬಕ್ಕೆ ಮಾರ್ಗದರ್ಶಕಿಯಾಗಿದ್ದರು. ಜವರಮ್ಮ ಅವರ ಅಗಲಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಅವರ ಕುಟುಂಬದ ಎಲ್ಲಾ ಸದಸ್ಯರು ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications