Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು
Anil Kumble: ಕೆಲವೇ ದಿನಗಳಲ್ಲಿ ಐಪಿಎಲ್ 2026 ಹಬ್ಬ ಆರಂಭ ಆಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಭಾರತೀಯ ಕ್ರಿಕಟ್ ದಂತಕತೆ, ಕನ್ನಡಿಗ ಅನಿಲ್ ಕುಂಬ್ಳೆ ಅವರು ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಸಂಬಂಧ ಎಂತಹದ್ದು ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ಮಾಜಿ ನಾಯಕ ಹಾಗೂ ದಂತಕಥೆ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು, ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ನಡುವಿನ ಅವಿನಾಭಾವ ಸಂಬಂಧವನ್ನು ಒತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಹೊಸ ಮಾದರಿಯ ಹೊಡೆತಗಳನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ಕುಂಬ್ಳೆ ಭವಿಷ್ಯ ನುಡಿದಿದ್ದಾರೆ.

ವಿರಾಟ್ ಉಪಸ್ಥಿತಿಯೇ ತಂಡದ ಜೀವಾಳ
"ಆರ್‌ಸಿಬಿ ತಂಡದ ಅಸ್ಮಿತೆ ಇಂದಿಗೂ ವಿರಾಟ್ ಕೊಹ್ಲಿ ಅವರ ಸುತ್ತಲೇ ನಿರ್ಮಾಣವಾಗಿದೆ. ಕಳೆದ 10-12 ವರ್ಷಗಳ ಆರ್‌ಸಿಬಿ ಇತಿಹಾಸವನ್ನು ನೀವು ಗಮನಿಸಿದರೆ, ಅದು ಯಾವಾಗಲೂ ವಿರಾಟ್ ಕೊಹ್ಲಿ ಅವರಂತಹ ವ್ಯಕ್ತಿತ್ವದ ಸುತ್ತಲೇ ಸಾಗಿದೆ ಎಂಬುದು ತಿಳಿಯುತ್ತದೆ. 2013ರಲ್ಲಿ ಅವರು ತಂಡದ ನಾಯಕತ್ವ ವಹಿಸಿಕೊಂಡ ನಂತರ, ಈ ಫ್ರಾಂಚೈಸಿಯಲ್ಲಿ ಅವರ ಉಪಸ್ಥಿತಿಯೇ ತಂಡದ ಜೀವಾಳವಾಗಿದೆ," ಎಂದು ಕುಂಬ್ಳೆ ಅವರು ತಿಳಿಸಿದ್ದಾರೆ.
ಭಾರತ ತಂಡದ 55 ವರ್ಷದ ಮಾಜಿ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ಅವರು ಮತ್ತೊಂದು ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿದಾಗ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತ ಮತ್ತು ಗೌರವವನ್ನು ನೋಡಿ ತಮಗೆ ಆಶ್ಚರ್ಯವಾಗಿತ್ತು ಎಂದು ಕುಂಬ್ಳೆ ಸ್ಮರಿಸಿದ್ದಾರೆ.
'ಬೆಂಗಳೂರಿನಲ್ಲಿ ಎಬಿಡಿಗೆ ಅಪಾರ ಗೌರವ'
"ಖಂಡಿತವಾಗಿಯೂ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಿಗೂ ವಿರಾಟ್ ಕೊಹ್ಲಿ ಅವರಷ್ಟೇ ಬೆಂಬಲ ಮತ್ತು ಪ್ರೀತಿ ಸಿಕ್ಕಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿಡಿ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡಲು ಮೈದಾನಕ್ಕಿಳಿದಾಗ ನನಗೆ ಆಶ್ಚರ್ಯವಾಯಿತು. ಅವರು ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸುತ್ತಿದ್ದರೂ ಸಹ, ಅವರಿಗೆ ಸಿಕ್ಕ ಸ್ವಾಗತ ಮತ್ತು ಗೌರವ ಅದ್ಭುತವಾಗಿತ್ತು. ಇದು ಬೆಂಗಳೂರಿನ ಜನತೆಗೆ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಮೇಲೆ ಎಂತಹ ಅಪಾರ ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ," ಎಂದು ಕುಂಬ್ಳೆ ಹೇಳಿದ್ದಾರೆ.
"ನಾವು ಎಂ.ಎಸ್. ಧೋನಿ ಮತ್ತು ಸಿಎಸ್‌ಕೆ ಬಗ್ಗೆ ಹೇಗೆ ಮಾತನಾಡುತ್ತೇವೆಯೋ, ಹಾಗೆಯೇ ವಿರಾಟ್ ಮತ್ತು ಆರ್‌ಸಿಬಿ ಕೂಡ ಯಾವಾಗಲೂ ಸಮಾನಾರ್ಥಕವಾಗಿ ಉಳಿಯುತ್ತಾರೆ. ಇದು ಎಂದಿಗೂ ಬದಲಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಈ ಪರಂಪರೆ ಶಾಶ್ವತವಾಗಿ ಹಾಗೆಯೇ ಇರುತ್ತದೆ," ಎಂದು ಅನಿಲ್ ಕುಂಬ್ಳೆ ಅವರು ಹೇಳಿದ್ದಾರೆ.
ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಸ್ಪಿನ್ನರ್‌ಗಳಾದ ಕೃನಾಲ್ ಪಾಂಡ್ಯ ಮತ್ತು ಸುಯೇಶ್ ಶರ್ಮಾ ಅವರ ಪಾತ್ರವನ್ನು ಕುಂಬ್ಳೆ ಮುಕ್ತವಾಗಿ ಶ್ಲಾಘಿಸಿದ್ದಾರೆ. ಇದರೊಂದಿಗೆ, ತಂಡದ ಗೆಲುವಿಗೆ ವೇಗದ ಬೌಲರ್‌ಗಳು ನೀಡಿದ ಕೊಡುಗೆಯನ್ನೂ ಅವರು ಉಲ್ಲೇಖಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳಾದ ಕೃನಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಅವರ ತಂಡಕ್ಕೆ ಅದ್ಭುತ ಕೊಡುಗೆ ನೀಡಿದರು.
ಅವರು ಬೌಲಿಂಗ್‌ನಲ್ಲಿ ತೋರಿದ ಸ್ಥಿರ ಪ್ರದರ್ಶನವು ಆರ್‌ಸಿಬಿ ಫೈನಲ್ ತಲುಪಲು ಮತ್ತು ಅಂತಿಮವಾಗಿ ಪ್ರಶಸ್ತಿ ಗೆಲ್ಲಲು ಬಹಳ ನೆರವಾಯಿತು. ಇನ್ನು ವೇಗದ ಬೌಲರ್‌ಗಳ ವಿಷಯಕ್ಕೆ ಬಂದರೆ, ಭುವನೇಶ್ವರ್ ಕುಮಾರ್ ಆಗಲಿ ಅಥವಾ ಜೋಶ್ ಹ್ಯಾಜಲ್‌ವುಡ್ ಆಗಲಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಾಮರ್ಥ್ಯ ಅವರಿಗೆ ಮೊದಲಿನಿಂದಲೂ ಇತ್ತು ಎಂಬುದು ನಮಗೆ ತಿಳಿದಿತ್ತು ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಡೆಯನ್ನ ಶ್ಲಾಘಿಸಿದ ಕುಂಬ್ಳೆ
"ಮಹಾನ್ ಆಟಗಾರರು ಯಾವಾಗಲೂ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಬಯಸುತ್ತಾರೆ, ಅವರು ಎಂದಿಗೂ ತೃಪ್ತರಾಗುವುದಿಲ್ಲ. ಪ್ರತಿ ಸೀಸನ್‌ನಲ್ಲೂ ನೀವು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಯಸುತ್ತೀರಿ. ಇದು ಕೇವಲ ತಂಡಕ್ಕಾಗಿ ಮಾತ್ರವಲ್ಲ, ನಿಮ್ಮ ಸ್ವಂತ ಬೆಳವಣಿಗೆಗಾಗಿ ಮತ್ತು ನಿಮ್ಮನ್ನು ನೀವೇ ಸವಾಲಿಗೆ ಒಡ್ಡಿಕೊಳ್ಳಲು ಮಾಡುವ ಪ್ರಯತ್ನವಾಗಿರುತ್ತದೆ," ಎಂದು ವಿರಾಟ್ ಕೊಹ್ಲಿ ಬಗ್ಗೆ ಹೊಗಳಿದ್ದಾರೆ.
"ಈ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣ ವಿಭಿನ್ನ ಆಲೋಚನೆಯೊಂದಿಗೆ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ. ಬಹುಶಃ ಅವರು 'ಸ್ಕೂಪ್ ಶಾಟ್' ಅಥವಾ 'ರಿವರ್ಸ್ ಸ್ಕೂಪ್' ನಂತಹ ಹೊಡೆತಗಳನ್ನು ಹೊಡೆಯಲು ಪ್ರಯತ್ನಿಸಬಹುದು. ಕಳೆದ ಹಲವು ವರ್ಷಗಳಿಂದ ಎಬಿ ಡಿವಿಲಿಯರ್ಸ್ ಇಂತಹ ಹೊಡೆತಗಳನ್ನು ಸತತವಾಗಿ ಆಡುವುದನ್ನು ನಾವು ನೋಡಿದ್ದೇವೆ. ಈಗ ವಿರಾಟ್ ಕೂಡ ತಮ್ಮ ಬ್ಯಾಟಿಂಗ್ ಶೈಲಿಗೆ ಇವುಗಳನ್ನು ಸೇರಿಸಿಕೊಳ್ಳಬಹುದು. ಅವರಂತಹ ಶ್ರೇಷ್ಠ ಆಟಗಾರರು ನಿರಂತರವಾಗಿ ತಮ್ಮನ್ನು ತಾವು ಸವಾಲಿಗೆ ಒಡ್ಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ," ಎಂದು ಕುಂಬ್ಳೆ ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಅನಿಲ್ ಕುಂಬ್ಳೆ ಅವರು ವಿರಾಟ್ ಕೊಹ್ಲಿ ಅವರ ಶ್ರಮ, ಆಟದ ಶೈಲಿ ಹಾಗೂ ಕರ್ನಾಟಕದ ಅಭಿಮಾನಿಗಳು ಅವರ ಮೇಲೆ ಇಟ್ಟಿರುವ ಪ್ರೀತಿ ಎಂತಹದ್ದು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಕೊಹ್ಲಿ ಬ್ಯಾಟಿಂಗ್ ಶೈಲಿಯ ಮಾತನಾಡಿದ್ದು, ಈ ಮೂಲಕ ಎದುರಾಗಳಿ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದಂತಿದೆ.












Click it and Unblock the Notifications