ಆರ್‌ಸಿಬಿ ಟ್ರೋಫಿ ಗೆಲ್ಲುವ ಬಗ್ಗೆ ಭವಿಷ್ಯ ನುಡಿದ 'ಮಿಸ್ಟರ್ 360' ಎಬಿ ಡಿವಿಲಿಯರ್ಸ್: ಡ್ರೆಸ್ಸಿಂಗ್ ರೂಮ್ ಸೀಕ್ರೆಟ್ ರಿವೀಲ್
AB de Villiers: ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ 19ನೇ ಸೀಸನ್ ಐಪಿಎಲ್ ಹಬ್ಬವು ಮಾರ್ಚ್ 28ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಈ ಬಾರಿಯೂ ಟ್ರೋಫಿ ಗೆಲ್ಲುವ ತಂಡಗಳ ಸಾಲಿನಲ್ಲಿರುವ ಆರ್‌ಸಿಬಿ ಬಗ್ಗೆ ಎಬಿ ಡಿವಿಲಿಯರ್ಸ್ ಅಚ್ಚರಿ ಭವಿಷ್ಯ ನುಡಿದು ಕುತೂಹಲ ಹುಟ್ಟುಹಾಕಿದ್ದಾರೆ.
ಆರ್‌ಸಿಬಿ ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯಲ್ಲಿ ಈ ಕನಸನ್ನ ನನಸು ಮಾಡಿಕೊಳ್ಳುವ ಮೂಲಕ ಟ್ರೋಪಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಇದಕ್ಕೆ ಕಾರಣವೇ ಆರಂಭದಿಂದಲೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು. ಈ ಬಾರಿಯೂ ಆರ್‌ಸಿಬಿ ಬಲಿಷ್ಠ ತಂಡ ಹೊಂದಿದ್ದು, ಟ್ರೋಫಿ ಗೆಲ್ಲುವ ತಂಡಗಳ ರೇಸ್‌ನಲ್ಲಿದೆ.

ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿಯುವ ಬಗ್ಗೆ ಭವಿಷ್ಯ
ಇನ್ನೂ ಜಿಯೋ ಹಾಟ್‌ಸ್ಟಾರ್ ಶೋನಲ್ಲಿ ಮಾತನಾಡಿದ ಮಿಸ್ಟರ್ 360 ಎ.ಬಿ.ಡಿ, ಆರ್‌ಸಿಬಿ ತಂಡದ ಆತ್ಮವಿಶ್ವಾಸದ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ರಿವೀಲ್ ಮಾಡಿದ್ದಾರೆ. "17 ವರ್ಷಗಳ ಕಾಯುವಿಕೆಯ ನಂತರ ಕಳೆದ ಬಾರಿ ಪ್ರಶಸ್ತಿ ಗೆದ್ದಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ವಿರಾಟ್ ಕೊಹ್ಲಿ ಈಗ ಒಬ್ಬರೇ ತಂಡದ ಹೊರೆಯನ್ನು ಹೊರುತ್ತಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿದೆ. ತಂಡದ ಪ್ರತಿ ಆಟಗಾರನಲ್ಲೂ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಹಸಿವು ಎದ್ದುಕಾಣುತ್ತಿದೆ" ಎಂದು ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ.
ಕೊಹ್ಲಿ ಪರಿಶ್ರಮದ ಬಗ್ಗೆ ಎಬಿಡಿ ಮೆಚ್ಚುಗೆ
ವಿರಾಟ್ ಕೊಹ್ಲಿ ಅವರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, "ಕೊಹ್ಲಿ ಅವರಂತಹ ಕಠಿಣ ಪರಿಶ್ರಮಿ ಆಟಗಾರನನ್ನು ನಾನು ಕಂಡಿಲ್ಲ. ಅವರು ಎಷ್ಟೇ ದಿನ ಬಿಡುವು ಪಡೆದರೂ, ಮೈದಾನಕ್ಕೆ ಇಳಿಯುವಾಗ ಪೂರ್ಣ ಸಿದ್ಧತೆಯೊಂದಿಗೇ ಬರುತ್ತಾರೆ ಎಂಬ ಭರವಸೆ ನನಗಿದೆ" ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಡ್ರೆಸ್ಸಿಂಗ್ ರೂಮ್‌ನ ಸೀಕ್ರೆಟ್ ಬಿಚ್ಚಿಟ್ಟ ಎಬಿಡಿ
ವಿರಾಟ್ ಕೊಹ್ಲಿ ಅವರು ಈ ಹಿಂದೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೇಳುತ್ತಿದ್ದ ಮಾತುಗಳನ್ನು ಎಬಿಡಿ ನೆನಪಿಸಿಕೊಂಡಿದ್ದಾರೆ. "ನಾವು ಒಮ್ಮೆ ಚಾಂಪಿಯನ್ ಪಟ್ಟಕ್ಕೇರಿದರೆ ಸಾಕು, ನಂತರ ಸತತವಾಗಿ ಎರಡು-ಮೂರು ಟ್ರೋಫಿಗಳನ್ನು ಗೆಲ್ಲುವ ಸಾಮರ್ಥ್ಯ ನಮಗಿದೆ ಎಂದು ವಿರಾಟ್ ಯಾವಾಗಲೂ ಹೇಳುತ್ತಿದ್ದರು. ಅವರ ಆ ಮಾತಿನ ಮೇಲೆ ನನಗೆ ನಂಬಿಕೆಯಿದೆ. ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ," ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ರಜತ್ ಪಾಟಿದಾರ್ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ. ಹರಾಜಿನಲ್ಲಿ ತಂಡದ ಬಲ ಹೆಚ್ಚಿಸಿರುವುದು ಮತ್ತು ಪ್ರಮುಖ ಆಟಗಾರರನ್ನು ಉಳಿಸಿಕೊಂಡಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಆರ್‌ಸಿಬಿ ಈ ಬಾರಿ ಬೆಂಗಳೂರಿನಲ್ಲಿ 5 ಪಂದ್ಯಗಳನ್ನು ಆಡಿದರೆ, ರಾಯ್‌ಪುರದಲ್ಲಿ 2 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಎಆರ್‌ಎಚ್ ವಿರುದ್ಧ ಸೆಣಸಲಿದೆ.
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ (ನಾಯಕ), ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ವೆಂಕಟೇಶ್ ಅಯ್ಯರ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ ಚೌಹಾಣ್, ರಸಿಖ್ ದಾರ್, ಸುಯೇಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜೇಕಬ್ ಡಫಿ, ಯಶ್ ದಯಾಳ್.












Click it and Unblock the Notifications