Get Updates
Get notified of breaking news, exclusive insights, and must-see stories!

Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?

ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವರುಣನ ಅಬ್ಬರ ತುಸು ಹೆಚ್ಚಾಗಿದ್ದರೆ, ಉತ್ತರ ಒಳನಾಡಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಳೆ ವರದಿಯಾಗಿದೆ. ರಾಜ್ಯದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ತಂಪಾಗಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದು, ಈ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಜನ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಈ ವಾರವಿಡೀ ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ.

ಆಲಿಕಲ್ಲು ಮಳೆಗೆ ಜನ ಸಂತಸ

ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದ್ದು, ವಿವಿಧೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ರಾಮನಗರ ಜಿಲ್ಲೆಯ ಬಿಡದಿ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ಧಾರವಾಡದ ಕಲಘಟಗಿ, ಚಿಕ್ಕಬಳ್ಳಾಪುರ, ವಿಜಯಪುರದ ಮುದ್ದೇಬಿಹಾಳ, ಹಾಸನ ಹಾಗೂ ಕಲಬುರಗಿಯ ಆಳಂದ ಸೇರಿದಂತೆ ಹಲವು ಭಾಗಗಳಲ್ಲಿ ಆಲಿಕಲ್ಲುಗಳ ಸುರಿಮಳೆಯಾಗಿದೆ. ರಸ್ತೆಗಳು, ಮನೆಗಳ ಮೇಲ್ಛಾವಣಿ ಹಾಗೂ ತೋಟಗಳು ಸಂಪೂರ್ಣವಾಗಿ ಬಿಳಿ ಆಲಿಕಲ್ಲುಗಳಿಂದ ಆವೃತವಾಗಿದ್ದು, ಕರ್ನಾಟಕದ ಈ ಭಾಗಗಳು ನೋಡಲು 'ಮಿನಿ ಕಾಶ್ಮೀರ'ದಂತೆ ಭಾಸವಾಗುತ್ತಿವೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ತಂಪೆರೆದಿದ್ದರೂ, ಆಲಿಕಲ್ಲುಗಳ ಅಬ್ಬರಕ್ಕೆ ಸಾರ್ವಜನಿಕರು ಅಚ್ಚರಿಗೊಂಡಿದ್ದಾರೆ.

Karnataka Rain Alert

ಈ ಅಪರೂಪದ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜನರು ಆಲಿಕಲ್ಲುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಿರುವ ಮತ್ತು ರಸ್ತೆಗಳಲ್ಲಿ ಮಂಜಿನಂತೆ ಹರಡಿರುವ ಆಲಿಕಲ್ಲುಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ರಾಜ್ಯದ ಮಳೆ ಪ್ರಮಾಣವನ್ನು ಗಮನಿಸಿದರೆ, ಹಾಸನ ಮತ್ತು ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಗರಿಷ್ಠ ತಲಾ 5 ಸೆಂ.ಮೀ ಮಳೆಯಾಗಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 4 ಸೆಂ.ಮೀ ಹಾಗೂ ಧರ್ಮಸ್ಥಳದಲ್ಲಿ 3 ಸೆಂ.ಮೀ ಮಳೆ ದಾಖಲಾಗಿದೆ. ಅದೇ ರೀತಿ ದಾವಣಗೆರೆ ನಗರದಲ್ಲಿ 3 ಸೆಂ.ಮೀ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.

ಉಳಿದಂತೆ ದಾವಣಗೆರೆಯ ಚನ್ನಗಿರಿ, ತುಮಕೂರಿನ ಕುಣಿಗಲ್, ಚಿತ್ರದುರ್ಗದ ಬಿ.ದುರ್ಗ ಹಾಗೂ ಬೆಂಗಳೂರು ನಗರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಚಿತ್ರದುರ್ಗ ನಗರ, ನಾಯಕನಹಟ್ಟಿ, ಕೊಡಗಿನ ಪೊನ್ನಂಪೇಟೆ ಹಾಗೂ ಬೀದರ್ ಜಿಲ್ಲೆಯ ಮಂತಾಲದಲ್ಲಿ ತಲಾ 1 ಸೆಂ.ಮೀ ಮಳೆಯಾದ ವರದಿಯಾಗಿದೆ. ಒಟ್ಟಾರೆಯಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆಯ ಪ್ರಭಾವ ಹೆಚ್ಚಾಗಿ ಕಂಡುಬಂದಿದೆ.

ಎಲ್ಲೆಲ್ಲೆ ಮಳೆ ಮುನ್ಸೂಚನೆ?

ಮಾರ್ಚ್‌ 23ರವರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದ್ದು, ಕೆಲವು ಕಡೆಗಳಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಇದರೊಂದಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ.

ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಉತ್ತರ ಕರ್ನಾಟಕದ ಭಾಗಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹಾಗೆಯೇ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿಯೂ ಸಹ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ಇರಲಿದೆ. ವಿಜಯಪುರ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆ ಇರುವುದಿಲ್ಲ. ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ರಾಜ್ಯದಾದ್ಯಂತ ಮಿಶ್ರ ಹವಾಮಾನವಿದ್ದು, ಕೆಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರವಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹಾಗೆಯೇ ಇರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+