ಇರಾನ್ ಸಂಘರ್ಷ ಪರಿಣಾಮ ತೈಲ ಸಂಸ್ಕರಣಾ ಘಟಕಗಳೇ ಉಡೀಸ್, ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯ ಭೀತಿ... Iran Conflict
ಮಧ್ಯಪ್ರಾಚ್ಯ ಪರಿಸ್ಥಿತಿ ಈಗ ಹೇಗೆ ಆಗಿದೆ ಎಂದರೆ, ಒಂದು ಕಡೆ ಯುದ್ಧ ನಿಲ್ಲದೇ ಇದ್ದರೆ ಸರ್ವನಾಶ ಗ್ಯಾರಂಟಿ. ಇನ್ನೊಂದು ಕಡೆ ಯುದ್ಧ ನಿಲ್ಲಿಸಬೇಕು ಎಂದರೆ ನೂರಾರು ಅಡ್ಡಿ ಆತಂಕದ ಜೊತೆಯಲ್ಲೇ ಅಮೆರಿಕ ಅಧ್ಯಕ್ಷರ ಪ್ರತಿಷ್ಠೆಯ ಪ್ರಶ್ನೆ ಎದುರಾಗಿದೆ. ಹೀಗಾಗಿ ಇರಾನ್ ಮತ್ತು ಅಮೆರಿಕ ನಡುವಿನ ಈ ಯುದ್ಧ ಬಿಸಿ ತುಪ್ಪವಾಗಿ ಪರಿಣಮಿಸಿದೆ ಗಲ್ಫ್ ದೇಶಗಳಿಗೆ. ಹೀಗಿದ್ದಾಗ ಇಸ್ರೇಲ್ ಸೇನೆಯಿಂದ ಇರಾನ್ ದೇಶದ ತೈಲ ನಿಕ್ಷೇಪಗಳು ಹಾಗೂ ತೈಲ ಸಂಸ್ಕರಣಾ ಘಟಕಗಳ ಮೇಲೆ ದಾಳಿ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಆ ನಂತರ ಮತ್ತೆ ರೊಚ್ಚಿಗೆದ್ದ ಇರಾನ್ ಸೇನೆ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನ ಅಕ್ಕಪಕ್ಕದ ದೇಶಗಳ ತೈಲ ಘಟಕಗಳ ಮೇಲೆ ದಾಳಿ ಮಾಡ್ತಿದೆ.
ಯುದ್ಧದ ಕುಲುಮೆಯಲ್ಲಿ ಬೆಂದು ಹೋಗುತ್ತಿವೆ ತೈಲ ಶ್ರೀಮಂತಿಕೆ ಹೊಂದಿರುವ ಅರಬ್ ದೇಶಗಳು. ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಇಸ್ರೇಲ್ ಪಾಲಿಗೆ ಈಗ ಉಳಿದಿರುವ ಏಕೈಕ ಶತ್ರು ದೇಶ ಇರಾನ್, ಇದೇ ಕಾರಣಕ್ಕೆ ಪದೇ ಪದೇ ಇಸ್ರೇಲ್ ಮತ್ತು ಇರಾನ್ ನಡುವೆ ತಿಕ್ಕಾಟ ನಡೆಯುತ್ತಲೇ ಬಂದಿದೆ. ಈ ತಿಕ್ಕಾಟ 2025 ಜೂನ್ ತಿಂಗಳಲ್ಲಿ ಜೋರಾಗಿ, ದೊಡ್ಡ ಮಟ್ಟಿಗೆ ಯುದ್ಧ ಕೂಡ ನಡೆದಿತ್ತು. ನಂತರ ಯುದ್ಧ ಸೈಲೆಂಟ್ ಆಗಿ, ಶಾಂತಿ ಮಾತುಕತೆ ಮೂಲಕ ಎಲ್ಲಾ ತಣ್ಣಗಾಗಿತ್ತು. ಮತ್ತೊಮ್ಮೆ ಯುದ್ಧವು ನಡೆಯಲ್ಲ ಬಿಡು ಎಂಬ ನಿರೀಕ್ಷೆ ಕೂಡ ಅರಬ್ ದೇಶಗಳಲ್ಲಿ ಮೂಡಿತ್ತು.

ಆದರೆ ಕಳೆದ ತಿಂಗಳು ಎಂದರೆ ಫೆಬ್ರವರಿ 28ಕ್ಕೆ ಮತ್ತೆ ಇರಾನ್ ವಿರುದ್ಧ ಮುಗಿಬಿದ್ದ ಇಸ್ರೇಲ್, ದೊಡ್ಡ ಮಟ್ಟದಲ್ಲಿ ದಾಳಿಯ ನಡೆಸಿತ್ತು. ಆ ನಂತರ ಇಸ್ರೇಲ್ ಮತ್ತು ಅಮೆರಿಕ ಒಟ್ಟಾಗಿ ಇರಾನ್ ಮೇಲೆ ಯುದ್ಧ ಘೋಷಿಸಿ, ಈ ಯುದ್ಧದಲ್ಲಿ ಈಗಾಗಲೇ ಇರಾನ್ ಸುಪ್ರೀಂ ಲೀಡರ್ ಆಗಿದ್ದ ಖಮೇನಿ ಸೇರಿ ಇರಾನ್ ದೇಶದ ದೊಡ್ಡ ದೊಡ್ಡ ನಾಯಕರೇ ಜೀವ ಬಿಟ್ಟಿದ್ದಾರೆ. ಇಷ್ಟಾದರೂ ಈ ಯುದ್ಧ ನಿಲ್ಲದೆ, ತೈಲ ನಿಕ್ಷೇಪಗಳ ಮೇಲೆ ದಾಳಿ ನಡೆಯುವ ಹಂತಕ್ಕೆ ಬಂದು ನಿಂತಿದೆ. ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳ ಎಚ್ಚರಿಕೆ ನಡುವೆ ಕೂಡ ಮತ್ತೆ ತೈಲ ನಿಕ್ಷೇಪಗಳ ಮೇಲೆ ದಾಳಿ ಮುಂದುವರಿಸಿದೆ ಇರಾನ್ ಸೇನೆ. ಈ ಬೆಳವಣಿಗೆ ಅಮೆರಿಕ ಮತ್ತು ಇಸ್ರೇಲ್ ನಾಯಕರನ್ನು ಇನ್ನಷ್ಟು ಕೆರಳುವಂತೆ ಮಾಡುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕಚ್ಚಾತೈಲ ಬೆಲೆ ಬರೋಬ್ಬರಿ 111 ಡಾಲರ್ ಪ್ರತಿ ಬ್ಯಾರಲ್‌ಗೆ ತಲುಪಿಬಿಟ್ಟಿದೆ.












Click it and Unblock the Notifications