9 ವರ್ಷದ ಐಟಿ ಕೆಲಸ ಬಿಟ್ಟು, 2 ಲ್ಯಾಪ್‌ಟಾಪ್‌ನಿಂದ ಶುರುವಾದ ಪಯಣ: ಇಂದು 1.5 ಕೋಟಿ ರೂ. ಸಾಫ್ಟ್‌ವೇರ್ ಕಂಪನಿ ಕಟ್ಟಿದ ರೈತನ ಮಗ
ಒಂದು ಸಣ್ಣ ಐಡಿಯಾ ಮತ್ತು ಎನ್ನನ್ನಾದರೂ ಸಾಧಿಸಲೇಬೇಕು ಎನ್ನುವ ದೃಢ ಸಂಕಲ್ಪವಿದ್ದರೆ ಹಳ್ಳಿಯ ಯುವಕರು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಹುದು ಎಂಬುದಕ್ಕೆ ತಮಿಳುನಾಡಿನ ಈಶ್ವರನ್ ಆರುಮುಗಂ ಅವರೇ ಒಂದೊಳ್ಳೆ ಉದಾಹರಣೆ.
ಹೌದು, ಚೆನ್ನೈನ ಪ್ರತಿಷ್ಠಿತ ಐಟಿ ಸಂಸ್ಥೆಯೊಂದರಲ್ಲಿ 9 ವರ್ಷಗಳ ಕಾಲ ಕೆಲಸ ಮಾಡಿದ್ದ ಇವರು, ಆರಾಮದಾಯಕ ವೃತ್ತಿಬದುಕನ್ನ ತೊರೆದು ತಮ್ಮದೇ ಆದ ಸಾಫ್ಟ್‌ವೇರ್ ಕಂಪನಿಯನ್ನ ಹುಟ್ಟುಹಾಕಿದ್ದಾರೆ. ಕೇವಲ 2 ಲ್ಯಾಪ್‌ಟಾಪ್‌ಗಳೊಂದಿಗೆ ಶುರುವಾದ ಇವರ 'ಯಾ ಕ್ರಿಯೇಷನ್ಸ್' ಎಂಬ ಸಂಸ್ಥೆ, ಇಂದು 26 ಉದ್ಯೋಗಿಗಳನ್ನ ಹೊಂದಿದ್ದು 1.5 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳನ್ನ ನಿರ್ವಹಿಸುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ.

ಹಳ್ಳಿಯ ರೈತನ ಮಗನೊಬ್ಬ ಟೆಕ್ ಲೋಕದಲ್ಲಿ ಬೆಳೆದು ನಿಂತು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.
ಈಶ್ವರನ್ ಆರುಮುಗಂ ಅವರ ಆರಂಭಿಕ ವೃತ್ತಿಜೀವನ
ಈಶ್ವರನ್ ಆರುಮುಗಂ ಅವರು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಪಲ್ಲಿಪಟ್ಟಿ ಎಂಬ ಸಣ್ಣ ಹಳ್ಳಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರು. ತಂದೆ ಕೃಷಿಕರಾಗಿದ್ದು, ಜೊತೆಗೆ ಒಂದು ಸಣ್ಣ ಕಿರಾಣಿ ಅಂಗಡಿಯನ್ನೂ ನಡೆಸುತ್ತಿದ್ದರು. ಆದರೆ, ವಿಜ್ಞಾನದಲ್ಲಿ ಪದವಿ ಹಾಗೂ ಎಂಸಿಎ ಮುಗಿಸಿದ್ದ ಈಶ್ವರನ್ ಅವರ ಕನಸುಗಳೇ ಬೇರೆಯಾಗಿದ್ದವು.
2011ರಲ್ಲಿ ಚೆನ್ನೈನ ಸ್ಟಾರ್ಟ್‌ಅಪ್ ಕಂಪನಿಯೊಂದರಲ್ಲಿ ಜೂನಿಯರ್ ಸಾಫ್ಟ್‌ವೇರ್ ಡೆವಲಪರ್ ಆಗಿ ವೃತ್ತಿಜೀವನ ಆರಂಭಿಸಿದ ಅವರ ಮೊದಲ ತಿಂಗಳ ಸಂಬಳ ಕೇವಲ 3,500 ರೂಪಾಯಿಯಾಗಿತ್ತು. ಅಲ್ಲಿಯೇ 9 ವರ್ಷಗಳ ಕಾಲ ಶ್ರಮಿಸಿದ ಅವರು ಟೆಕ್ನಿಕಲ್ ಲೀಡ್ ಹುದ್ದೆಗೇರಿದ್ದರು. ಆ ಅವಧಿಯಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ ಹಾಗೂ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನ ಸಂಪೂರ್ಣ ಅನುಭವವನ್ನ ಅವರು ಪಡೆದುಕೊಂಡಿದ್ದರು.
2 ಲ್ಯಾಪ್‌ಟಾಪ್‌ನೊಂದಿಗೆ 'ಯಾ ಕ್ರಿಯೇಷನ್ಸ್' ಆರಂಭ
ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಚೆನ್ನೈ ಬಿಟ್ಟು ತವರಿಗೆ ಮರಳಬೇಕಾದ ಅನಿವಾರ್ಯತೆ ಈಶ್ವರನ್ ಅವರಿಗೆ ಎದುರಾಯಿತು. ಇದೇ ಸಮಯದಲ್ಲಿ ತಮ್ಮ ಸಹೋದರರೊಂದಿಗೆ ಚರ್ಚಿಸಿ, ಸ್ವಂತ ಉದ್ಯಮ ಕಟ್ಟುವ ಕನಸು ಕಂಡರು. ತಮ್ಮ ಸಹೋದರನಿಂದ 1 ಲಕ್ಷ ರೂಪಾಯಿ ಸಾಲ ಪಡೆದು ಮತ್ತೆ ಚೆನ್ನೈಗೆ ತೆರಳಿ, ತಿಂಗಳಿಗೆ 10,000 ರೂಪಾಯಿ ಬಾಡಿಗೆಗೆ 'ಕೋ-ವರ್ಕಿಂಗ್ ಸ್ಪೇಸ್' ಪಡೆದರು.
ಕೇವಲ 2 ಲ್ಯಾಪ್‌ಟಾಪ್‌ಗಳನ್ನ ಖರೀದಿಸಿ 'ಯಾ ಕ್ರಿಯೇಷನ್ಸ್' ಎಂಬ ಹೆಸರಿನಲ್ಲಿ ಉದ್ಯಮ ಆರಂಭಿಸಿದರು. ತಿಂಗಳಿಗೆ 30,000 ರೂಪಾಯಿ ವೇತನ ನೀಡಿ ಓರ್ವ ಮಹಿಳಾ ಉದ್ಯೋಗಿಯನ್ನೂ ನೇಮಿಸಿಕೊಂಡರು.
ಕರೊನಾ ಸಂಕಷ್ಟ, 5 ಲಕ್ಷ ರೂ. ಸಾಲ
ಆರಂಭದಲ್ಲಿಯೇ ಕರೊನಾ ಹೆಮ್ಮಾರಿ ಅಪ್ಪಳಿಸಿದ್ದರಿಂದ ಉದ್ಯಮಕ್ಕೆ ಭಾರಿ ಪೆಟ್ಟು ಬಿತ್ತು. ಕೆಲಸವಿಲ್ಲದೆ 2020ರ ಫೆಬ್ರವರಿಯಲ್ಲಿ ಮತ್ತೆ ಊರಿಗೆ (ರಾಸಿಪುರಂ) ಮರಳಿದ ಅವರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಬಾಡಿಗೆ, ಸಂಬಳ ಹಾಗೂ ಇತರ ನಿರ್ವಹಣಾ ವೆಚ್ಚಗಳಿಂದಾಗಿ ಬರೋಬ್ಬರಿ 5 ಲಕ್ಷ ರೂಪಾಯಿ ಸಾಲದ ಸುಳಿಗೆ ಸಿಲುಕಿದರು. ಕುಟುಂಬದ ದೈನಂದಿನ ನಿರ್ವಹಣೆಗೂ ಕಷ್ಟವಾಗುವ ಸ್ಥಿತಿ ತಲುಪಿದರು.
ಆದರೂ ಛಲ ಬಿಡದ ಈ ಈಶ್ವರನ್ ಆರುಮುಗಂ, ಉದ್ಯಮ ಮುಚ್ಚುವ ಬದಲು ವೆಬ್‌ಸೈಟ್ ಡೆವಲಪ್‌ಮೆಂಟ್, ಮೊಬೈಲ್ ಆ್ಯಪ್ ಸೇರಿದಂತೆ ಸಿಕ್ಕ ಸಣ್ಣಪುಟ್ಟ ಪ್ರಾಜೆಕ್ಟ್‌ಗಳನ್ನೆಲ್ಲಾ ಒಪ್ಪಿಕೊಂಡು, ಕಷ್ಟಪಟ್ಟು ಗ್ರಾಹಕರ ವಿಶ್ವಾಸವನ್ನ ಮರಳಿ ಗಳಿಸಿದರು.
3 ಲಕ್ಷದಿಂದ 1.5 ಕೋಟಿ ರೂ. ವಹಿವಾಟುನತ್ತ ಅದ್ಭುತ ಬೆಳವಣಿಗೆ
ತಮ್ಮ ಊರಾದ ರಾಸಿಪುರಂನಿಂದಲೇ ಕಾರ್ಯಾಚರಣೆ ನಡೆಸುತ್ತಿರುವ ಈ ಸಂಸ್ಥೆ, ಮೊದಲ ವರ್ಷ 3 ಲಕ್ಷ ರೂಪಾಯಿ, ನಂತರ 7 ಲಕ್ಷ, 10 ಲಕ್ಷ, 30 ಲಕ್ಷ ಹೀಗೆ ಹಂತ ಹಂತವಾಗಿ ಆದಾಯ ಹೆಚ್ಚಿಸಿಕೊಂಡಿತು. ಕೃತಕ ಬುದ್ಧಿಮತ್ತೆ (AI) ಆಧಾರಿತ ಉತ್ಪನ್ನಗಳು ಹಾಗೂ ಮೊಬೈಲ್ ಆ್ಯಪ್‌ಗಳ ಮೂಲಕ 2025ರ ವೇಳೆಗೆ ಕಂಪನಿಯು 1.5 ಕೋಟಿ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದೆ.
ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಕತಾರ್ ಹಾಗೂ ಜರ್ಮನಿ ಸೇರಿದಂತೆ 7 ದೇಶಗಳ ಕ್ಲೈಂಟ್‌ಗಳನ್ನು ಹೊಂದಿದೆ. ಇಷ್ಟೇ ಅಲ್ಲದೆ, ತಿರುಪ್ಪೂರು ಮಹಾನಗರ ಪಾಲಿಕೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಮೀಕ್ಷೆ ಹಾಗೂ ಸೇಲಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕ್ಯೂಆರ್ ಕೋಡ್ ಆಧಾರಿತ ಸಂದರ್ಶಕರ ಪಾಸ್ ವ್ಯವಸ್ಥೆಯಂತಹ ಮಹತ್ವದ ಸರ್ಕಾರಿ ಪ್ರಾಜೆಕ್ಟ್‌ಗಳನ್ನು ಸಹ ಇವರ ಕಂಪನಿ ಯಶಸ್ವಿಯಾಗಿ ನಿರ್ವಹಿಸಿದೆ.




Click it and Unblock the Notifications
