ವಾರಕ್ಕೆ 5 ದಿನ ಟೆಕ್ಕಿ ಕೆಲಸ, ವೀಕೆಂಡ್‌ನಲ್ಲಿ ಮಟನ್ ವ್ಯಾಪಾರ; ₹5 ಕೋಟಿ ಆಫರ್ ತಿರಸ್ಕರಿಸಿದ ಯುವ ಉದ್ಯಮಿಗಳು!

ವಾರದ ಐದು ದಿನ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ, ಉಳಿದ ಎರಡು ದಿನ ಮಟನ್ ಮಾರಾಟ. ಹೀಗೆ ವಾರಾಂತ್ಯದಲ್ಲಿ ಆರಂಭಿಸಿದ ಸಣ್ಣ ಫುಡ್ ಕಾರ್ಟ್‌ ಈಗ ಭರ್ಜರಿ ಜನಪ್ರಿಯತೆ ಗಳಿಸಿದೆ. ಕೇವಲ ₹35 ಸಾವಿರ ಬಂಡವಾಳದಲ್ಲಿ ಆರಂಭವಾದ ಈ ಉದ್ಯಮ ಮೊದಲ ತಿಂಗಳಲ್ಲೇ ₹6 ಲಕ್ಷ ವಹಿವಾಟು ನಡೆಸಿದ್ದು, ₹5 ಕೋಟಿ ಮೌಲ್ಯದ ಆಫರ್‌ನ್ನೂ ತಿರಸ್ಕರಿಸಿದೆ.

ಹೌದು, ನೊಯ್ಡಾದಲ್ಲಿ 'ಲಹಮ್' (Laham) ಎಂಬ ಹೆಸರಿನ ಫುಡ್ ಕಾರ್ಟ್‌ ಆರಂಭಿಸಿರುವ ಇಬ್ಬರು ಪ್ರಾಡಕ್ಟ್ ಮ್ಯಾನೇಜರ್‌ಗಳ ಯಶೋಗಾಥೆಯಿದು. ರಿಷಭ್ ಕುಮಾರ್ ಮತ್ತು ಶಶಿಕಾಂತ್ ಸಿಂಗ್ ಎಂಬ ಇಬ್ಬರು ಯುವಕರು ತಮ್ಮ ಕಾರ್ಪೊರೇಟ್ ಉದ್ಯೋಗದ ಜೊತೆಗೆ ಈ ಉದ್ಯಮವನ್ನು ನಡೆಸುತ್ತಿದ್ದಾರೆ.

Success Story Techies Earn 6 Lakh in the First Month Selling Mutton on Weekends Reject 5 Crore Offer

ಒಂದೇ ಖಾದ್ಯ, ಭರ್ಜರಿ ಬೇಡಿಕೆ!

ನೊಯ್ಡಾದ ಬೀದಿಗಳಲ್ಲಿ ಲಿಟ್ಟಿ ಚೋಖಾದಿಂದ ಹಿಡಿದು ಸುಶಿವರೆಗೆ ವಿವಿಧ ಬಗೆಯ ಆಹಾರಗಳು ದೊರೆಯುತ್ತವೆ. ಆದರೆ ಲಹಮ್ ಫುಡ್ ಕಾರ್ಟ್‌ನಲ್ಲಿ ಒಂದೇ ಒಂದು ಖಾದ್ಯ ಲಭ್ಯವಿದೆ. ಅದುವೇ ಮಲಬಾರ್ ಕಾಯಿನ್ ಪರೋಟದೊಂದಿಗೆ ನೀಡುವ 'ನಮ್ಕೀನ್ ಗೋಶ್ತ್' ಎಂಬ ಮಟನ್ ಖಾದ್ಯ. ಇದು ಕಡಿಮೆ ಮಸಾಲೆಗಳನ್ನು ಬಳಸಿ ತಯಾರಿಸುವ ಪೇಶಾವರ ಮತ್ತು ಖೈಬರ್ ಪಖ್ತುಂಖ್ವಾ ಪ್ರದೇಶದ ಜನಪ್ರಿಯ ಮಾಂಸಾಹಾರಿ ಖಾದ್ಯವಾದ 'ಲಹಮ್ ಚರ್ಸಿ'ಯಿಂದ ಪ್ರೇರಿತವಾಗಿದೆ.

ಗ್ರಾಹಕರಿಗೆ ಮೂರು ವಿಧದ ಪ್ಲೇಟ್‌ಗಳಲ್ಲಿ ಈ ಖಾದ್ಯ ದೊರೆಯುತ್ತದೆ.

- ಹಾಫ್ ಪ್ಲೇಟ್‌: ಎರಡು ಪರೋಟ, ₹159
- ಫುಲ್ ಪ್ಲೇಟ್‌: ನಾಲ್ಕು ಪರೋಟ, ₹279
- ಲಾರ್ಜ್ ಪ್ಲೇಟ್‌: ಆರು ಪರೋಟ, ₹399

ಮಟನ್ ಖಾದ್ಯ ಮುಗಿದ ಬಳಿಕವೂ ಗ್ರಾಹಕರು ಬರುತ್ತಿರುವುದು ಈ ಫುಡ್ ಕಾರ್ಟ್‌ನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕೆಲವೊಮ್ಮೆ ಗ್ರಾಹಕರು ಆಹಾರ ಸಿಗದೆ ಬರಿಗೈಯಲ್ಲಿ ವಾಪಸ್ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ.

ವಾರಕ್ಕೆ ಐದು ದಿನ ಉದ್ಯೋಗ, ಎರಡು ದಿನ ಉದ್ಯಮ

ರಿಷಭ್ ಕುಮಾರ್ ಮತ್ತು ಶಶಿಕಾಂತ್ ಸಿಂಗ್ ಬೆಂಗಳೂರಿನಲ್ಲಿ ಸಹೋದ್ಯೋಗಿಗಳಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ನೊಯ್ಡಾಗೆ ಸ್ಥಳಾಂತರಗೊಂಡರು. ಇಬ್ಬರೂ ಪ್ರಾಡಕ್ಟ್ ಮ್ಯಾನೇಜರ್‌ಗಳಾಗಿದ್ದು, ಉದ್ಯಮದ ಕೆಲಸಗಳನ್ನು ವ್ಯವಸ್ಥಿತವಾಗಿ ಹಂಚಿಕೊಂಡಿದ್ದಾರೆ. ರಿಷಭ್ ಅಡುಗೆ, ಉತ್ಪನ್ನದ ಗುಣಮಟ್ಟ, ಮಾರ್ಕೆಟಿಂಗ್ ಮತ್ತು ಕಂಟೆಂಟ್ ನಿರ್ವಹಿಸುತ್ತಾರೆ. ಶಶಿಕಾಂತ್ ಹಣಕಾಸು, ಕಾರ್ಯಾಚರಣೆ ಮತ್ತು ಕಚ್ಚಾ ವಸ್ತುಗಳ ಖರೀದಿಯನ್ನು ನೋಡಿಕೊಳ್ಳುತ್ತಾರೆ.

ವಾರದ ದಿನಗಳಲ್ಲಿ ಇಬ್ಬರೂ ತಮ್ಮ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಶುಕ್ರವಾರ ಉದ್ಯಮದ ಯೋಜನೆ, ಕಚ್ಚಾ ವಸ್ತುಗಳ ಖರೀದಿ ಮತ್ತು ಮಾರಾಟಗಾರರೊಂದಿಗೆ ಮಾತುಕತೆ ನಡೆಸುತ್ತಾರೆ. ಶನಿವಾರ ಮತ್ತು ಭಾನುವಾರ ಫುಡ್ ಕಾರ್ಟ್‌ನಲ್ಲಿ ಗ್ರಾಹಕರಿಗೆ ಆಹಾರ ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ರಿಷಭ್ ಹೇಳುವ ಪ್ರಕಾರ, ವಾರಾಂತ್ಯದಲ್ಲಿ ರಾತ್ರಿ 11 ಅಥವಾ 11.30ರವರೆಗೆ ಕೆಲಸ ನಡೆಯುತ್ತದೆ. ನಂತರ ಅಡುಗೆ ಸಾಮಗ್ರಿಗಳನ್ನು ಕ್ಲೌಡ್ ಕಿಚನ್‌ಗೆ ಸಾಗಿಸಿ, ಮರುದಿನದ ಸಿದ್ಧತೆಗಾಗಿ ಬೆಳಗ್ಗೆ 7 ಅಥವಾ 8 ಗಂಟೆಗೆ ಮತ್ತೆ ಕೆಲಸ ಆರಂಭಿಸಬೇಕಾಗುತ್ತದೆ.

₹35 ಸಾವಿರ ಬಂಡವಾಳದಿಂದ ಆರಂಭ

ಲಹಮ್ ಉದ್ಯಮವನ್ನು ಆರಂಭಿಸಲು ಇಬ್ಬರೂ ಸೇರಿ ₹35 ಸಾವಿರ ಹೂಡಿಕೆ ಮಾಡಿದ್ದರು. ಈ ಹಣವನ್ನು ಫುಡ್ ಕಾರ್ಟ್, ಲೈಟಿಂಗ್, ಅಡುಗೆ ಸಾಮಗ್ರಿ ಮತ್ತು ಅಗತ್ಯ ಉಪಕರಣಗಳ ಖರೀದಿಗೆ ಬಳಸಿದರು. ಮೊದಲು ಶಶಿಕಾಂತ್ ಅವರ ಬಾಡಿಗೆ ಮನೆಯಲ್ಲಿ ಅಡುಗೆ ಆರಂಭಿಸಿದ್ದರು. ಆದರೆ ಮನೆಯ ಮಾಲೀಕರು ವಾಣಿಜ್ಯ ಉದ್ದೇಶಕ್ಕಾಗಿ ಅಡುಗೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕ್ಲೌಡ್ ಕಿಚನ್‌ಗೆ ಸ್ಥಳಾಂತರಗೊಂಡರು.

ನೊಯ್ಡಾಗೆ ಬಂದ ಬಳಿಕವೇ ಉದ್ಯಮ ಆರಂಭಿಸುವ ಯೋಜನೆ ರೂಪಿಸಿದ್ದರು. ಆದರೆ ಉತ್ತರ ಭಾರತದಲ್ಲಿ ಅನೇಕರು ಮಾಂಸಾಹಾರ ಸೇವಿಸದ ಶ್ರಾವಣ ಮಾಸ ಬಂದ ಹಿನ್ನೆಲೆಯಲ್ಲಿ ಆ ತಿಂಗಳನ್ನು ಯೋಜನೆ ಮತ್ತು ಸಿದ್ಧತೆಗೆ ಬಳಸಿಕೊಂಡರು. ಫುಡ್ ಕಾರ್ಟ್ ವಿನ್ಯಾಸ, ಬ್ರ್ಯಾಂಡ್ ಲೋಗೋ, ಮಾರ್ಕೆಟಿಂಗ್ ಮತ್ತು ಖಾದ್ಯದ ರುಚಿಯನ್ನು ಅಂತಿಮಗೊಳಿಸಿದ ಬಳಿಕ ಸೆಪ್ಟೆಂಬರ್ 5ರಂದು ಲಹಮ್ ಆರಂಭವಾಯಿತು.

ಮೊದಲ ತಿಂಗಳಲ್ಲೇ ₹6 ಲಕ್ಷ ವಹಿವಾಟು

ಲಹಮ್ ಆರಂಭವಾದ ಮೊದಲ ತಿಂಗಳಲ್ಲೇ ₹6 ಲಕ್ಷ ಆದಾಯ ಗಳಿಸಿದೆ ಎಂದು ರಿಷಭ್ ತಿಳಿಸಿದ್ದಾರೆ. ಇದು ಒಟ್ಟು ವಹಿವಾಟಿನ ಮೊತ್ತವಾಗಿದ್ದು, ಲಾಭದ ಮೊತ್ತವಲ್ಲ. ಉದ್ಯಮವು ನಿವ್ವಳ ಲಾಭದಲ್ಲಿದ್ದರೂ, ಹೆಚ್ಚಿನ ಹಣವನ್ನು ಮತ್ತೆ ಉದ್ಯಮದ ಬೆಳವಣಿಗೆಗೆ ಹೂಡಿಕೆ ಮಾಡಲಾಗುತ್ತಿದೆ.

ಆರಂಭದಲ್ಲಿ ದಿನಕ್ಕೆ 25 ಪ್ಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಈ ಫುಡ್ ಕಾರ್ಟ್‌, ಈಗ ದಿನಕ್ಕೆ 25 ಕೆ.ಜಿ. ಮಟನ್ ಬಳಸಿ ಆಹಾರ ತಯಾರಿಸುವ ಹಂತಕ್ಕೆ ಬೆಳೆದಿದೆ. ಆರಂಭದಲ್ಲಿ ಕೇವಲ 2.5 ಕೆ.ಜಿ. ಮಟನ್‌ನಿಂದ ಉದ್ಯಮ ಆರಂಭಿಸಲಾಗಿತ್ತು. ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯೂ ಇದೆ. ಖಾದ್ಯದ ರುಚಿಯಲ್ಲಿ ಯಾವುದೇ ಬದಲಾವಣೆ ಆಗದಂತೆ ಪ್ರತಿಯೊಂದು ಪದಾರ್ಥದ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದು ರಿಷಭ್ ಹೇಳಿದ್ದಾರೆ.

ಸಹೋದರಿ ಸೇರಿದಂತೆ ಸ್ನೇಹಿತರ ತಂಡ

ಲಹಮ್ ಉದ್ಯಮದಲ್ಲಿ ರಿಷಭ್ ಮತ್ತು ಶಶಿಕಾಂತ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರಿಷಭ್ ಅವರ ಸಹೋದರಿ ಪ್ರಿಯಾಂಕಾ ಅಡುಗೆ ತಯಾರಿಯಲ್ಲಿ ನೆರವಾಗುತ್ತಿದ್ದಾರೆ. ಬಾಲ್ಯದ ಸ್ನೇಹಿತ ಅರ್ಪಿತ್ ಸಿಂಗ್ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಕಾಲೇಜಿನ ಸ್ನೇಹಿತ ರಚಿತ್ ಬಿಲ್ಲಿಂಗ್ ಕೆಲಸ ನಿರ್ವಹಿಸುತ್ತಿದ್ದಾರೆ. ಇತರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಆಹಾರ ತಯಾರಿ ಹಾಗೂ ಪ್ಯಾಕಿಂಗ್‌ನಲ್ಲಿ ನೆರವಾಗುತ್ತಿದ್ದಾರೆ.

ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಇಬ್ಬರೂ ಯೋಜಿಸಿದ್ದಾರೆ. ಉದ್ಯಮವನ್ನು ವಿಸ್ತರಿಸುವುದರ ಜೊತೆಗೆ ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೂ ಆದ್ಯತೆ ನೀಡುತ್ತಿದ್ದಾರೆ.

₹5 ಕೋಟಿ ಮೌಲ್ಯದ ಆಫರ್ ತಿರಸ್ಕಾರ

ಲಹಮ್ ಜನಪ್ರಿಯತೆ ಗಳಿಸುತ್ತಿದ್ದಂತೆ ಹೂಡಿಕೆದಾರರಿಂದಲೂ ಆಫರ್‌ಗಳು ಬಂದಿವೆ. ಒಬ್ಬ ವ್ಯಕ್ತಿ ಉದ್ಯಮಕ್ಕೆ ₹5 ಕೋಟಿ ಮೌಲ್ಯ ನಿಗದಿಪಡಿಸಿ, ₹1 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿಸಿದ್ದರು. ಆದರೆ ರಿಷಭ್ ಮತ್ತು ಶಶಿಕಾಂತ್ ಈ ಆಫರ್‌ನ್ನು ತಿರಸ್ಕರಿಸಿದ್ದಾರೆ. ಉದ್ಯಮವನ್ನು ಸ್ವಂತ ಬಂಡವಾಳದಿಂದಲೇ ಬೆಳೆಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.

"ಮೊದಲು ಲಹಮ್‌ಗೆ ಬಲವಾದ ಅಡಿಪಾಯ ನಿರ್ಮಿಸಬೇಕು. ಕೆಲಸದಲ್ಲಿ ನಿರಂತರತೆ ಮತ್ತು ಸರಿಯಾದ ಕಾರ್ಯವಿಧಾನಗಳನ್ನು ರೂಪಿಸಬೇಕು. ಈ ಉದ್ಯಮದಲ್ಲಿ ಪರಿಣತಿ ಗಳಿಸಿದ ಬಳಿಕ ಮುಂದಿನ ಹಂತದ ಬಗ್ಗೆ ಯೋಚಿಸುತ್ತೇವೆ" ಎಂದು ರಿಷಭ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+