ವಾಯುಮಾಲಿನ್ಯ ನಿಯಂತ್ರಿಸಲು ದೆಹಲಿ ಲಾಕ್‌ಡೌನ್ ಕುರಿತು ಸುಪ್ರೀಂಕೋರ್ಟ್‌ಗೆ ವರದಿ
ನವದೆಹಲಿ, ನವೆಂಬರ್ 15: "ರಾಷ್ಟ್ರ ರಾಜಧಾನಿ ಗಾಳಿಯ ಗುಣಮಟ್ಟದಲ್ಲಿ ಭಾನುವಾರ ಸ್ವಲ್ಪ ಸುಧಾರಣೆ ಕಂಡು ಬಂದಿದ್ದರೂ ಸಹ ಸೂಚ್ಯಂಕ ಮಾಪನದಲ್ಲಿ "ಅತ್ಯಂತ ಕಳಪೆ" ಮಟ್ಟದಲ್ಲಿಯೇ ಮುಂದುವರಿದಿದೆ. ಈ ಕಾರಣ ಮಾಲಿನ್ಯವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ಗೆ ಸೋಮವಾರ ಲಾಕ್‌ಡೌನ್ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು," ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒದಗಿಸಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾನುವಾರ 4 ಗಂಟೆಗೆ ಹೊತ್ತಿಗೆ 36 ಮೇಲ್ವಿಚಾರಣಾ ಕೇಂದ್ರಗಳಿಂದ ಪಡೆದ ಮಾಹಿತಿ ಆಧಾರದಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 330 ಆಗಿದೆ.
ದೆಹಲಿ ವಾಯುಮಾಲಿನ್ಯ ಅಧಿಕ: ನವೆಂಬರ್ 14 ರಿಂದ 17 ರವರೆಗೆ ಶಾಲೆ, ಸರ್ಕಾರಿ ಕಚೇರಿ ಬಂದ್
ಶನಿವಾರ ಇದೇ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಮಾಣ 437 ಆಗಿದ್ದು, ಶುಕ್ರವಾರ 471ರ ಗಡಿ ತಲುಪಿದ್ದು, ಹೊಸ ದಾಖಲೆಯಾಗಿತ್ತು. ಮಾಲಿನ್ಯಕಾರಕಗಳನ್ನು ಚದುರಿಸುವ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಗಾಳಿ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ. ನೆರೆಯ ಗಾಜಿಯಾಬಾದ್ 331, ಗುರ್ಗಾಂವ್ 287, ನೋಯ್ಡಾ 321, ಫರಿದಾಬಾದ್ 298, ಗ್ರೇಟರ್ ನೋಯ್ಡಾದಲ್ಲಿ 310 ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ.

ವಾಯು ಗುಣಮಟ್ಟ ಅಳೆಯುವ ಮಾನದಂಡ
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಹಂತಕ್ಕೆ ತಲುಪಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಹಾಗಿದ್ದರೆ ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ. ದೆಹಲಿಯಲ್ಲಿ ಪ್ರಸ್ತುತ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟದಿಂದ ಅತಿ ಕಳಪೆ ಮಟ್ಟಕ್ಕೆ ತಲುಪಿದೆ.

ದೆಹಲಿ ವಿಮಾನ ನಿಲ್ದಾಣಗಳಲ್ಲಿ ಗೋಚರತೆ ಮಟ್ಟ
ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1,500 ರಿಂದ 2,200 ಮೀಟರ್ ಮತ್ತು ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ 1,000 ರಿಂದ 1,500 ಮೀಟರ್ ವರೆಗೆ ಗೋಚರತೆಯ ಮಟ್ಟವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಲಾಕ್‌ಡೌನ್ ಕುರಿತು ಸುಪ್ರೀಂಕೋರ್ಟ್‌ಗೆ ವರದಿ
ನವದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ಅತಿ ಕಳಪೆ ಮಟ್ಟದಲ್ಲಿದ್ದು, ಗಾಳಿ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿತ್ತು. ಈ ಹಿನ್ನೆಲೆ ದೆಹಲಿಯಲ್ಲಿ ಲಾಕ್‌ಡೌನ್ ಕುರಿತು ಸೋಮವಾರ ವರದಿ ಸಲ್ಲಿಸಲಾಗುವುದು ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಸೂಚನೆಯಲ್ಲಿ ಏನಿತ್ತು?
ವಾಯು ಗುಣಮಟ್ಟವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಬಗ್ಗೆ ಸೋಮವಾರದೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾ. ಎನ್ ವಿ ರಮಣ ನೇತೃತ್ವದ ಪೀಠ ಸೂಚಿಸಿತ್ತು. "ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ನೀವು ಹೇಗೆ ಯೋಜಿಸುತ್ತೀರಿ ಎಂದು ನಮಗೆ ತಿಳಿಸಿ? ಎರಡು ದಿನಗಳ ಲಾಕ್‌ಡೌನ್? AQI (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಯೋಜನೆ ಏನು?," ಎಂದು ಕೋರ್ಟ್ ಪ್ರಶ್ನಿಸಿತ್ತು. ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಹೊಗೆ ಆವರಿಸಿ ಒಂದು ವಾರವೇ ಕಳೆದಿದೆ. ಕೇಂದ್ರ ಸರ್ಕಾರ ವಾಯು ಗುಣಮಟ್ಟ ಸೂಚ್ಯಂಕವನ್ನು ನಿಯಂತ್ರಿಸುವುದಕ್ಕೆ ದೀರ್ಘಾವಧಿ ಕ್ರಮಗಳಿಗೂ ಮೊದಲು ತುರ್ತು ಕ್ರಮ ಕೈಗೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಸೂಚನೆ ನೀಡಿತ್ತು.

ರೈತರನ್ನು ದೂಷಿಸಿದ್ದಕ್ಕೆ ಸುಪ್ರೀಂಕೋರ್ಟ್ ಕೆಂಡಾಮಂಡಲ
"ದೆಹಲಿಯಲ್ಲಿ ರೈತರಿಂದಲೇ ವಾಯು ಮಾಲಿನ್ಯ ಆಗುತ್ತಿದೆ ಎಂದು ಏಕೆ ಬಿಂಬಿಸಲು ಹೊರಟಿದ್ದೀರಿ. ಇದು ವಾಯಮಾಲಿನ್ಯದ ಒಂದು ಶೇಕಡಾವಾರು ಪ್ರಮಾಣವಷ್ಟೇ ಆಗಿದೆ. ಉಳಿದವರ ಬಗ್ಗೆ ಏನು ಹೇಳುತ್ತೀರಿ. ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸುವುದಕ್ಕೆ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ. ನಿಮ್ಮ ಯೋಜನೆ ಏನು ಎಂಬುದನ್ನು ನೀವು ಮೊದಲು ನಮಗೆ ತಿಳಿಸಿರಿ, ಇದು ಕೇವಲ 2 ರಿಂದ 3 ದಿನಗಳ ಹಿಂದಿನ ಕಥೆಯಲ್ಲ," ಎಂದು ನ್ಯಾಯಮೂರ್ತಿಗಳು ಹೇಳಿದ್ದರು. "ಎಲ್ಲದಕ್ಕೂ ರೈತರ ಮೇಲೆ ಬೊಟ್ಟು ಮಾಡಿ ತೋರಿಸುವುದು ಪ್ರತಿಯೊಬ್ಬರಿಗೂ ಫ್ಯಾಶನ್ ಆಗುತ್ತಿದೆ. ನೀವು ಪಟಾಕಿಯನ್ನು ನಿಷೇಧಿಸಿದ್ದೀರಿ, ಆದರೆ ಕಳೆದ 5-6 ದಿನಗಳಿಂದ ಏನಾಗುತ್ತಿದೆ" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಶ್ನಿಸಿದ್ದರು.

ನಿರ್ಮಾಣ ಕಾಮಗಾರಿ ಬಂದ್, ಶಾಲೆಗಳಿಗೆ ರಜೆ
ನವದೆಹಲಿ ಹಾಗೂ ನೆರೆಹೊರೆ ರಾಜ್ಯಗಳಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಶಿಸ್ತುಕ್ರಮಗಳನ್ನು ಜಾರಿಗೊಳಿಸಲಾಗಿದೆ. ನವೆಂಬರ್ 17ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಯಾವುದೇ ರೀತಿ ನಿರ್ಮಾಣ ಕಾಮಗಾರಿ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧಿಸಲಾಗಿದೆ. ಜೊತೆಗೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ(ವರ್ಕ್ ಫ್ರಮ್ ಹೋಮ್) ಸೂಚಿಸಲಾಗಿದೆ. ನವದೆಹಲಿ ಜೊತೆ ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ.