Delhi AQI: ಹದಗೆಟ್ಟ ವಾಯು ಗುಣಮಟ್ಟ ನಿಯಂತ್ರಣಕ್ಕೆ ಸರ್ಕಾರ ಹೊಸ ಪ್ಲಾನ್
ನವದೆಹಲಿ, ನವೆಂಬರ್ 09: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ವಾರದಿಂದ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ತೀರಾ ಕಳಪೆ ಗಾಳಿ ಬೀಸುತ್ತಿದ್ದು, ಇದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಿವಾರಣೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ರಾಜ್ಯ ಸರ್ಕಾರ ಹೊಸ ಪ್ಲಾನ್ ಮಾಡಿದೆ.
ದೆಹಲಿಯಾದ್ಯಂತ ಈ ಕಳಪೆ ಗಾಳಿಯು ಅನಾರೋಗ್ಯ ಭೀತಿ ಸೃಷ್ಟಿಸಿದೆ. ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಅವರಿಗೆಲ್ಲ ಅನುಕೂಲಕರ ವಾತಾವರಣ ಸೃಷ್ಟಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ದೆಹಲಿಯಲ್ಲಿ ಕೃತಕ ಮಳೆ ಸುರಿಸುವ ಮೂಲಕ ಕಳಪೆ ವಾಯುಗುಣಟ್ಟದ ದಾಖಲಾತಿಗೆ ಕಡಿವಾಣ ಹಾಕಲು ಸಜ್ಜಾಗಿದೆ.

ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಇದೇ ನವೆಂಬರ್ 20-21 ರಂದು ಕೃತಕ ಮಳೆ ಸುರಿಸಲು ಚಿಂತನೆ ನಡೆಸಿದೆ. ದೆಹಲಿ ಅಕ್ಕಪಕ್ಕದ ರಾಜ್ಯಗಳ ಹೊಲಗಳಲ್ಲಿ ತ್ಯಾಜ್ಯ ಸುಡುವುದು, ವಾಹನಗಳ ಹೊಗೆ ಸೂಸುವಿಕೆಯ ಕಾರಣಗಳಿಂದ ನವದೆಹಲಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕ (AQI) ಕಳೆದ ಒಂದು ವಾರದಲ್ಲಿ ದಿನೇ ದಿನೆ ಕುಸಿತ ಕಂಡಿದೆ.
ಐಐಟಿ ತಂಡದ ಜತೆ ಸಚಿವರ ಸಭೆ
ಹದಗೆಟ್ಟಿರುವ ದೆಹಲಿ ವಾಯುಗುಣಮಟ್ಟ ಸುಧಾರಣೆಗಾಗಿ ಪರಿಸರ ಸಚಿವ ಗೋಪಾಲ್ ರೈ ಮತ್ತು ಹಣಕಾಸು ಸಚಿವ ಅತಿಶಿ ಅವರು ಐಐಟಿ ಕಾನ್ಪುರದ ತಂಡದೊಂದಿಗೆ ಸಭೆ ನಡೆಸಿದ್ದಾರೆ. ಉತ್ತಮ ಗಾಳಿಯ ದಾಖಲಾತಿ ಇಲ್ಲದ ಈ ಸಂದರ್ಭದಲ್ಲಿ ಕೃತಕ ಮಳೆ ಯೋಜನೆ ಸಹಾಯಕ್ಕೆ ಬರಬಹುದು ಎಂದು ನಾಯಕರು ಅಂದಾಜಿಸಿದ್ದಾರೆ.
ಈ ಸಂಬಂಧ ದೆಹಲಿ ಸರ್ಕಾರ ಐಐಟಿ ಅಧಿಕಾರಿಗಳಲ್ಲಿ ವಿವರವಾದ ಯೋಜನೆ ಕೇಳಿದೆ. ಸಲ್ಲಿಕೆ ಆಗುವ ಈ ಯೋಜನೆಯನ್ನು ನಾಳೆ ನವೆಂಬರ್ 10ರಂದು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸರ್ಕಾರವೇ ಸಲ್ಲಿಸಲಿದೆ. ಈಗಾಗಲೇ ದೆಹಲಿಯ ವಿಷಕಾರಿ ಗಾಳಿ ದಿನಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೋರಿ ಸಲ್ಲಿಸಲಾದ ಕೆಲವು ಅರ್ಜಿಗಳನ್ನು ಕೋರ್ಟ್ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ.

ನ್ಯಾಯಾಲಯ ಅನುಮತಿಸಿದರೆ ದೆಹಲಿ ಸರ್ಕಾರ ಕೃತಕ ಮಳೆ ಸುರಿಸುವ ಯೋಜನೆ ಜಾರಿಗೆ ತರಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಆದಷ್ಟು ಶೀಘ್ರವೇ ಸಿಗಲಿದೆ ಎನ್ನಲಾಗಿದೆ.
ಕೃತಕ ಮಳೆಗೆ ಶೇ.40 ಮೋಡ ಕವಿದಿರಬೇಕು
ಉದ್ದೇಶಿತ ಈ ಕೃತಕ ಮಳೆ ಸೃಷ್ಟಿಗೆ ಆಗಸದಲ್ಲಿ ಕನಿಷ್ಠ ಶೇಕಡಾ 40ರಷ್ಟು ಮೋಡ ಕವಿದ ವಾತಾವರಣ ಕಂಡು ಬರಬೇಕಿದೆ. ಈ ಬಗ್ಗೆ ಐಐಟಿ ತಂಡ ತಿಳಿಸಿದೆ. ನವೆಂಬರ್ 20-21 ರಂದು ಮೋಡ ಕವಿಯುವ ನಿರೀಕ್ಷೆ ಇದ್ದು, ಅಂದು ಈ ಕೃತಕ ಮಳೆ ಸುರಿಸುವ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಪರಿಸರ ಸಚಿವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಈ ಯೋಜನೆಯ ಪ್ರಸ್ತಾಪಿಸಲಾಗುತ್ತದೆ. ಬಳಿಕ ನ್ಯಾಯಾಲಯವು ಪರಿಶೀಲಿಸಿ ಅನುಮತಿಸಿದರೆ ಕೇಂದ್ರ ಸರ್ಕಾರದ ಸಹಾಯದಲ್ಲಿ ಕೃತಕ ಮಳೆ ಸುರಿಸಲು ತಯಾರಿ ಮಾಡಲಿದ್ದೇವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
'ಜನರ ಆರೋಗ್ಯ ಕೊಲೆ': ಕೋರ್ಟ್ ಕಳವಳ
ದೆಹಲಿಯಲ್ಲಿನ ವಾಯು ಮಾಲಿನ್ಯ ಗಮನಿಸಿದ್ದ ಸುಪ್ರೀಂ ಕೋರ್ಟ್ "ಜನರ ಆರೋಗ್ಯದ ಕೊಲೆ" ನಡುವೆ ರಾಜಕೀಯ ಯುದ್ಧವನ್ನು ಆಡಲು ಅನುಮತಿಸುವುದಿಲ್ಲ ಎಂದು ಎಚ್ಚರಿಸಿತ್ತು. ಜೊತೆಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಿಗೆ ಜಮೀನುಗಳಲ್ಲಿ ತ್ಯಾಜ್ಯ ಸುಡುವುದನ್ನು ತಕ್ಷಣವೇ ನಿಲ್ಲಿಸುವಂತೆ ತಿಳಿಸಿತ್ತು.
ಇದಕ್ಕೆ ದೆಹಲಿ ರಾಜ್ಯ ಸರ್ಕಾರವೂ ಜವಾಬ್ದಾರಿ ಆಗಿದೆ. ಇಲ್ಲಿ ನಿತ್ಯ ಓಡಾಡುವ ಬಸ್‌ಗಳು ಸುಸ್ಥಿತಿಯಲ್ಲಿ ಇಲ್ಲ. ಇಂತಹ ವಾಹನಗಳಿಂದಲೂ ಪರಿಸರ ಕಲುಷಿತಗೊಳ್ಳುತ್ತಿದ್ದು, ಸರ್ಕಾರ ತಮ್ಮ ಸಮಸ್ಯೆಗಳತ್ತವೂ ಗಮನ ಹರಿಸುವಂತೆ ಕೋರ್ಟ್ ನಿರ್ದೇಶಿಸಿತ್ತು.












Click it and Unblock the Notifications