ದೆಹಲಿ ವಾಯು ಮಾಲಿನ್ಯ; 1-5 ತರಗತಿಗಳು ನ. 10ರ ತನಕ ಬಂದ್
ನವದೆಹಲಿ, ನವೆಂಬರ್ 05: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯದ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ಶನಿವಾರವೂ ದಟ್ಟವಾದ ಮತ್ತು ಕಪ್ಪು ಹೊಗೆ ರಾಜಧಾನಿಯ ವಾತಾವರಣವನ್ನು ಆವರಿಸಿತ್ತು.
ದೆಹಲಿಯ ಸರ್ಕಾರ ವಾಯು ಮಾಲಿನ್ಯದ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಂಡಿದೆ. ಭಾನುವಾರ ಶಾಲೆಗಳನ್ನು ತೆರೆಯುವ ಕುರಿತು ಸರ್ಕಾರ ಹೊಸ ಆದೇಶ ಹೊರಡಿಸಿದೆ. ನವೆಂಬರ್ 10ರ ತನಕ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಇರುತ್ತದೆ ಎಂದು ಹೇಳಿದೆ.

ವಾಯು ಮಾಲಿನ್ಯದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ. 6 ರಿಂದ 12ನೇ ತರಗತಿ ತನಕ ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ. ಆದರೆ ಅವರಿಗೆ ಆನ್‌ಲೈನ್ ಕ್ಲಾಸ್ ನಡೆಸುವ ಆಯ್ಕೆಯನ್ನು ಸಹ ದೆಹಲಿ ಸರ್ಕಾರ ನೀಡಿದೆ.
ಈ ಮೊದಲು ದೆಹಲಿ ಸರ್ಕಾರ ನವೆಂಬರ್ 5 ರ ತನಕ 1-5ನೇ ತರಗತಿ ಶಾಲೆಗಳು ಮುಚ್ಚಿರಲಿವೆ ಎಂದು ಹೇಳಿತ್ತು. ಆದರೆ ವಾಯು ಮಾಲಿನ್ಯ ಪರಿಸ್ಥಿತಿ ಸುಧಾರಣೆ ಕಾಣದ ಕಾರಣ ನವೆಂಬರ್ 10ರ ತನಕ 1-5ನೇ ತರಗತಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಕಳೆದ ಆರು ದಿನಗಳಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಉಂಟಾಗಿದೆ. ಭಾನುವಾರ ಮುಂಜಾನೆಯೂ ಸಹ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 460 ದಾಖಲಾಗಿದೆ. ಬಳಿಕ ರಾಜ್ಯದ ಶಿಕ್ಷಣ ಸಚಿವ ಅತಿಶಿ ಶಾಲೆಗಳನ್ನು ನವೆಂಬರ್ 10ರ ತನಕ ಮುಚ್ಚುವ ಕುರಿತು ಟ್ವೀಟ್ ಮಾಡಿದ್ದಾರೆ.
ಅತಿಯಾದ ಮಾಲಿನ್ಯ; ಪಿಎಂ 2.5ನ ಸರಾಸರಿ ಮಟ್ಟ ಒಂದು ಘನ ಮೀಟರ್‌ಗೆ 5 ಮೈಕ್ರೊ ಗ್ರಾಮ್‌ಗಳಷ್ಟು ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಆದರೆ ದೆಹಲಿಯಲ್ಲಿ ಪಿಎಂ 2.5 ಪ್ರಮಾಣ ಸರಾಸರಿ ಮಿತಿಗಿಂತ 80-100 ಪಟ್ಟು ಹೆಚ್ಚಾಗಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ಅಕ್ಟೋಬರ್ 27 ರಿಂದ ನವೆಂಬರ 3ರ ತನಕ ವಾಯು ಗುಣಮಟ್ಟ ಸುಧಾರಿಸಿತ್ತು. ಆದರೆ ಶುಕ್ರವಾರ ವಾಯು ಗುಣಮಟ್ಟ ಸೂಚ್ಯಂಕವು ಮತ್ತೆ 486ಕ್ಕೆ ತಲುಪಿ ಗಂಭೀರವಾಗಿತ್ತು. ಶನಿವಾರ 413 ಅಂಶಗಳಿಗೆ ಇಳಿಕೆಯಾಗಿತ್ತು.
ದೆಹಲಿಯಲ್ಲಿನ ವಾಯು ಮಾಲಿನ್ಯದ ಪರಿಣಾಮ ಮಕ್ಕಳು ಮತ್ತು ವಯೋ ವೃದ್ಧರಲ್ಲಿ ಉಸಿರಾಟ ಮತ್ತು ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 1 ರಿಂದ 15ರ ತನಕ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಾಲಿನ್ಯ ಪ್ರಮಾಣವು ಹೆಚ್ಚಿರಲಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಹೇಳಿದೆ.
ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ಪಿ. ಕೆ. ಮಿಶ್ರಾ ಪ್ರಧಾನಮಂತ್ರಿಗಳ ಕಛೇರಿಯಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯದ ಕುರಿತು ಉನ್ನತ ಮಟ್ಟದ ಕಾರ್ಯಪಡೆ ಸಭೆಯನ್ನು ನಡೆಸಿದ್ದಾರೆ. ಪ್ರತಿಕೂಲ ಗಾಳಿಯ ಗುಣಮಟ್ಟದ ಸಮಸ್ಯೆಯನ್ನು ಎದುರಿಸಲು ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು.
ವಾಯು ಮಾಲಿನ್ಯದ ವಿವಿಧ ಮೂಲಗಳ ಪ್ರಭಾವವನ್ನು ಕಡಿಮೆ ಮಾಡಲು ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಗಿತ್ತು. ನಿರ್ಮಾಣ ಚಟುವಟಿಕೆ, ಧೂಳು, ಘನತ್ಯಾಜ್ಯ, ಕೃಷಿ ಹುಲ್ಲು ಸುಡುವಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿತ್ತು.
ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಭತ್ತದ ಕಡ್ಡಿ ಸುಡುವುದನ್ನು ಕಡಿಮೆ ಮಾಡುವ ಪ್ರಯತ್ನದ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಅಗತ್ಯ ಮೇಲ್ವಿಚಾರಣೆ ಮಾಡಲು ಸೂಚನೆ ನೀಡಲಾಗಿತ್ತು. ಭತ್ತದ ಕಡ್ಡಿಗಳನ್ನು ಸ್ಥಳದಲ್ಲೇ ನಿರ್ವಹಣೆ ಮತ್ತು ಜೈವಿಕ ವಿಘಟಕಗಳ ಬಳಕೆಗೆ ಸಲಹೆ ನೀಡಲಾಗಿತ್ತು.












Click it and Unblock the Notifications