ದೆಹಲಿಯಲ್ಲಿ 5ನೇ ದಿನವೂ ಅತೀ ಕಳಪೆ ವಾಯು ಗುಣಮಟ್ಟ ದಾಖಲು: ಹೆಚ್ಚಾಯ್ತು ಭೀತಿ
ಬೆಂಗಳೂರು, ನವೆಂಬರ್ 06: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಗುಣಮಟ್ಟವು ದಿನದಿಂದ ದಿನಕ್ಕೇ ತೀರಾ ಕಳಪಾ ಹಂತಕ್ಕೆ ತಲುಪಿದೆ. ಇದರಿಂದ ಜನರು ಅನಾರೋಗ್ಯ ಭೀತಿಯಲ್ಲಿ ಓಡಾಡುತ್ತಿದ್ದಾರೆ. ಈ ಸಂಬಂಧ ಸರ್ಕಾರ ತುರ್ತು ಸಭೆ ಕರೆದಿದೆ. ಗಾಳಿಯ ಗುಣಮಟ್ಟ ಹಾಳಾಗದಂತೆ ತಡೆಯಲು ಸರ್ವ ಪ್ರಯತ್ನಕ್ಕೆ ಮುಂದಾಗಿದೆ.
ಸೋಮವಾರ ಬೆಳಗ್ಗೆ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಬರೋಬ್ಬರಿ 488 ದಾಖಲಾಗಿದೆ. ಈ ಮೂಲಕ ಅತ್ಯಂತ ಕಳಪೆ ವಾತಾವರಣದ ಸ್ಥಿತಿ ದೆಹಲಿ ಹೊಂದಿದೆ. ಕೇವಲ ಒಂದು ದಿನದ ಹಿಂದಷ್ಟೇ 410 AQI ಇದ್ದ ವಾಯು ಗುಣಮಟ್ಟ ಮತ್ತಷ್ಟು ಕಲುಷಿತಗೊಂಡಿದೆ. ಇದು ಶ್ವಾಸಕೋಶ ಸಂಬಂಧ ಕಾಯಿಲೆಗಳಿಗೆ, ಉಸಿರಾಟ ಸಮಸ್ಯೆ, ಇನ್ನಿತರ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB)ಪ್ರಕಾರ ದೆಹಲಿಯಲ್ಲಿ ಐದನೇ ದಿನವೂ ಸತತವಾಗಿ ಉಸಿರಾಟಕ್ಕೆ ಯೋಗ್ಯವಲ್ಲದ ಆರೋಗ್ಯ ಅಪಾಯ ತಂದೊಡ್ಡವ ಗಾಳಿ ದಾಖಲಾಗಿದೆ. ಗಾಳಿಯ ಗುಣಮಟ್ಟವು 488 ಇದು ತೀವ್ರ ಅಪಾಯಕಾರಿ ಸಂಗತಿ ಎಂದು ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ನೀಡಿದ ಮಾಹಿತಿ ನೀಡಿದೆ.
ವಿವಿಧ ಕ್ರಮಗಳ ಜಾರಿಗೆ ಸರ್ಕಾರ ನಿರ್ಧಾರ
ಹದಗೆಡುತ್ತಿರುವ ವಾಯು ಮಾಲಿನ್ಯ ಹತೋಟಿಗೆ ತರಲು ಕೆಲವು ಕ್ರಮ ಜರುಗಿಸಲಾಗಿದೆ. ಈ ಬೆನ್ನಲ್ಲೇ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಸೋಮವಾರ ಸಂಬಂಧಿತ ಇಲಾಖೆಗಳ ಸಭೆ ಕರೆದಿದ್ದಾರೆ ಎಂದು ಅವರ ಕಚೇರಿ ಮೂಲಗಳು ಮಾಹಿತಿ ನೀಡಿವೆ.

ಗಾಳಿಯ ಗುಣಮಟ್ಟ ಸುಧಾರಣೆಗಾಗಿ ಭಾನುವಾರ ವಾಯು ಗುಣಮಟ್ಟದ ನಿರ್ವಹಣಾ ಆಯೋಗವು (CAQM) ದೆಹಲಿಯಲ್ಲಿ (ಎನ್‌ಸಿಆರ್) ಸಂಪೂರ್ಣವಾಗಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ IV ಜಾರಿಗೆ ತಂದಿದೆ. ಈ ಯೋಜನೆ ಮೊದಲ ಹಂತ ಮತ್ತು ಮೂರನೇ ಹಂತದ ಅಡಿಯಲ್ಲಿ ಇರಿಸಲಾದ ನಿರ್ಬಂಧಗಳನ್ನು ಮುಂದುವರೆಸಲು ಆಯೋಗ ತೀರ್ಮಾನಿಸಿದೆ.
ಸದ್ಯ ದೆಹಲಿಯಲ್ಲಿ ಅಗತ್ಯ ಸರಕು ಸೇವೆ ನೀಡುವ ಲಾರಿ ಮತ್ತು ಎಲ್ಎನ್‌ಜಿ/ಸಿಎನ್‌ಜಿ/ಎಲೆಕ್ಟ್ರಿಕ್ ಟ್ರಕ್ ಹೊರತುಪಡಿಸಿ ಉಳಿದೆಲ್ಲ ಟ್ರಕ್‌ಗಳ ಪ್ರವೇಶ ನಿಷೇಧಿಸಲಾಗಿದೆ. ದೆಹಲಿ-ನೋಂದಾಯಿತ ಡೀಸೆಲ್-ಚಾಲಿತ ಮಧ್ಯಮ ಸರಕುಗಳ ವಾಹನಗಳು (MGV ಗಳು) ಮತ್ತು ಭಾರೀ ಸರಕುಗಳ ವಾಹನಗಳು (HGVs) ಹೊರತುಪಡಿಸಿ ಉಳಿದೆಲ್ಲ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದೆ.
ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ IV ಅಡಿಯಲ್ಲಿ ದೆಹಲಿ ರಾಜ್ಯ ಸರ್ಕಾರ ಮತ್ತು ಜಿಎನ್‌ಸಿಟಿಡಿಯು ಫಿಸಿಕಲ್ ತರಗತಿ ರದ್ದು ಮಾಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ತಿಳಿಸಬಹುದಾಗಿದೆ.
ಶ್ವಾಸಕೋಶದ ಕ್ಯಾನ್ಸರ್
ಆರೋಗ್ಯವಂತ ವ್ಯಕ್ತಿ ಉಸಿರಾಡಲು ವಾತಾವರಣದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 50 ಕ್ಕಿಂತ ಕಡಿಮೆ ಇರಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ದೆಹಲಿಯಲ್ಲಿ ನಿರ್ದಿಷ್ಟ ಮಿತಿಗಿಂತ ಸುಮಾರು ಆರೇಳು ಪಟ್ಟು (AQI 400) ಗಾಳಿ ಗುಣಮಟ್ಟ ಹದಗೆಟ್ಟಿದೆ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮತ್ತಷ್ಟು ಅಪಾಯ ತರಲಿದೆ. ಇಂತಹ ಗಾಳಿಯನ್ನು ಉಸಿರಾಡುವುದರಿಂದ ಮನುಷ್ಯ ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗಬಹುದು.
ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಹುಲ್ಲು ಸುಡುವ ಪ್ರಕರಣ ಹೆಚ್ಚಾಗಿದ್ದರಿಂದ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಲು ಕಾರಣ ಎನ್ನಲಾಗುತ್ತದೆ. ಇದೇ ರೀತಿಯ ಪರಿಸ್ಥಿತಿಯು ಪಂಜಾಬ್‌ನ ಬಟಿಂಡಾದಲ್ಲಿ ಸಹ ಕಂಡು ಬಂದಿದೆ. ಈ ಪ್ರದೇಶದಲ್ಲಿ AQI 215 ದಾಖಲಾಗಿದೆ.
ರೈತರು ಹುಲ್ಲು/ಕಸ/ ಸುಡುವುದು, ಹೊಲಗಳಿಗೆ ಬೆಂಕಿ ಹಾಕುವುದು ಮಾಡದಂತೆ, ಮಾಲಿನ್ಯ ನಿಯಂತ್ರಿಸಲು ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ಗಾಳಿಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ದೆಹಲಿ ನಿವಾಸಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications