ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ: ಟೋಲ್ ಹೆಸರಿನಲ್ಲಿ ಸಿಬ್ಬಂದಿಯಿಂದ ಅಕ್ರಮ ಹಣ ವಸೂಲಿ; ಸ್ಥಳೀಯರ ಆಕ್ರೋಶ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಅಕ್ಟೋಬರ್ 19: ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75ರ ಟೋಲ್‌ಗಳಲ್ಲಿ ಸ್ಥಳೀಯರಿಗಿರುವ ವಿನಾಯಿತಿಯನ್ನೂ ಲೆಕ್ಕಿಸದೆ ಅಕ್ರಮ ಹಣ ವಸೂಲಿ ಮಾಡಿ ಸುಲಿಗೆ ಮಾಡಲಾಗುತ್ತಿದೆ ಅನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಎಂಟು ಕಿಲೋಮೀಟರ್ ವ್ಯಾಪ್ತಿಯ ಸ್ಥಳೀಯರಿಗೆ ಟೋಲ್ ಫೀ ವಿನಾಯಿತಿ ಇದ್ದರೂ ನಿಯಮವನ್ನೂ ಗಾಳಿಗೆ ತೂರಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಸ್ಥಳೀಯರಿಗೆ ಕೋಪ ತರಿಸಿದೆ. ಸಣ್ಣ ಪುಟ್ಟ ಖರೀದಿಗೆ ಹೋಗಿಬರಲೂ ನೂರಾರು ರೂ. ಟೋಲ್ ಕಟ್ಟಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಸ್ಥಳೀಯ ಜನರು ಕ್ರಮಕ್ಕಾಗಿ ಹಾಸನ ಜಿಲ್ಲಾಡಳಿತಕ್ಕೆ ಮೊರೆ ಹೋಗಿದ್ದಾರೆ.

 ವಸೂಲಿ ಕೇಂದ್ರಗಳಾಗಿ ಬದಲಾದ ಟೋಲ್‌ಗೇಟ್

ವಸೂಲಿ ಕೇಂದ್ರಗಳಾಗಿ ಬದಲಾದ ಟೋಲ್‌ಗೇಟ್

ಹಾಸನದ ಮೂಲಕ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಟೋಲ್‌ಗೇಟ್‌ಗಳಲ್ಲಿ ಈಗ ಅಕ್ಷರಶಃ ವಸೂಲಿ ಕೇಂದ್ರಗಳಾಗಿ ಬದಲಾಗಿವೆ. ಅದೂ ಟೋಲ್ ವ್ಯಾಪ್ತಿಗೆ ಬರುವ 8 ಕಿಲೋಮೀಟರ್ ಪ್ರದೇಶದ ಗ್ರಾಮಗಳ ಜನರಿಗೆ ಟೋಲ್ ಶುಲ್ಕ ವಿನಾಯಿತಿ ಇದೆ ಎಂಬ ನಿಯಮವನ್ನು ಗಾಳಿಗೆ ತೂರಿ ಹಳ್ಳಿಗರಿಂದ ಅಕ್ರಮವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಪ್ರಶ್ನೆ ಮಾಡಿದರೆ ಟೋಲ್ ಸಿಬ್ಬಂದಿ ಗೂಂಡಾಗಿರಿ ಪ್ರದರ್ಶನ ಮಾಡುತ್ತಾರೆ ಎಂದು ಜನರು ಅಸಮಾಧಾನ ಹೊರ ಹಾಕಿದ್ದಾರೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮ ಸಮೀಪ ಇರುವ ದೇವಿಹಳ್ಳಿಯ ಮುಖ್ಯ ಟೋಲ್‌ನಲ್ಲಿ ಸುತ್ತಮುತ್ತ ಬರುವ ಎಚ್. ಆಲದಹಳ್ಳಿ, ಕೆ. ಆಲದಹಳ್ಳಿ, ಸಾರಾಪುರ, ಬ್ಯಾಡರಹಳ್ಳಿ ಹೀಗೆ ಕೇವಲ ಮೂರ್ನಾಲ್ಕು ಕಿಲೋಮೀಟರ್ ಅಂತರದಲ್ಲಿ ಹತ್ತಾರು ಹಳ್ಳಿಗಳಿವೆ.

 100 ರೂ. ಪೆಟ್ರೋಲ್ ಹಾಕಿಸಲು 180 ರೂ. ಟೋಲ್

100 ರೂ. ಪೆಟ್ರೋಲ್ ಹಾಕಿಸಲು 180 ರೂ. ಟೋಲ್

ಸಣ್ಣ ಪುಟ್ಟ ದಿನಸಿ ಖರೀದಿಗೂ ಜನರು ಶಾಂತಿಗ್ರಾಮಕ್ಕೆ ಹೋಗಿ ಬರಬೇಕು. ಪೆಟ್ರೋಲ್ ಹಾಕಿಸಲು ಟೋಲ್‌ಗೇಟ್ ದಾಟಿಯೇ ಹೋಗಬೇಕು. ಆದರೆ ಸ್ಥಳೀಯ ಐಡಿ ಕಾರ್ಡ್ ಜೊತೆಗೆ ವಾಹನದ ರಿಜಿಸ್ಟರ್ ಸರ್ಟಿಫಿಕೇಟ್ ಕೂಡ ಅವರದೇ ಹೆಸರಿನಲ್ಲಿರಬೇಕು ಅನ್ನುವ ಇಲ್ಲದ ನಿಮಯ ಮಾಡಿರುವ ಟೋಲ್ ಮ್ಯಾನೇಜರ್ ಅಕ್ರಮ ಸುಲಿಗೆ ಮಾಡುತ್ತಿದ್ದಾರೆ.

ಇದರಿಂದ 40 ರೂ.ನ ಒಂದು ಕೆಜಿ ಸಕ್ಕರೆ ಖರೀದಿಗೆ 180 ರೂ. ಟೋಲ್ ಕಟ್ಟಿ ಹೋಗಿ ಬರಬೇಕು. 100 ರೂ. ಪೆಟ್ರೋಲ್ ಹಾಕಿಸಲು 180 ರೂ. ಟೋಲ್ ಕಟ್ಟಬೇಕು. ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ ಎಂದು ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದ ನೂರಾರು ಜನರು ಕ್ರಮಕ್ಕೆ ಆಗ್ರಹಿಸಿದ್ದಾರೆ.

 ಜಿಲ್ಲಾಧಿಕಾರಿಗೆ ದೂರು ನೀಡಿದ ಸ್ಥಳೀಯರು

ಜಿಲ್ಲಾಧಿಕಾರಿಗೆ ದೂರು ನೀಡಿದ ಸ್ಥಳೀಯರು

ಕಳೆದ ಆರು ವರ್ಷಗಳಿಂದಲೂ ಇಲ್ಲಿ ಟೋಲ್ ಇದೆ. ಹಿಂದೆ ಇದ್ದ ಟೋಲ್ ಮುಖ್ಯಸ್ಥರು ಸ್ಥಳೀಯರು ಆಧಾರ್ ಕಾರ್ಡ್ ಕೊಟ್ಟರೆ ಸಾಕು ಅವರಿಗೆ ಟೋಲ್ ಶುಲ್ಕ ವಿನಾಯಿತಿ ಕೊಡುತ್ತಿದ್ದರು. ಈಗ ಆಡಳಿತ ಸಿಬ್ಬಂದಿಗಳು ಯಾರ ಮಾತನ್ನೂ ಕೇಳುತ್ತಿಲ್ಲ ಎಂದು ಹಾಸನ ಡಿ‌ಸಿಗೆ ಮನವಿ ಮಾಡಿದ್ದಾರೆ‌.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಸ್ಥಳೀಯರಿಗೆ ವಿನಾಯಿತಿ ಕೊಡಬೇಕಾಗುತ್ತದೆ. ಸ್ಥಳೀಯರು ತಮಗಾಗುತ್ತಿರುವ ಸಮಸ್ಯೆ ಬಗ್ಗೆ ಮನವಿ ಮಾಡಿದ್ದಾರೆ. ಕೂಡಲೆ ಹೆದ್ದಾರಿ ಅಧಿಕಾರಿಗಳು ಹಾಗು ಟೋಲ್ ಉಸ್ತುವಾರಿಗಳನ್ನು ಕರೆದು ಮಾತನಾಡುತ್ತೇನೆ. ಸ್ಥಳೀಯ ರೈತರಿಗೆ ಆಗುತ್ತಿರುವ ಅನಾನುಕೂಲ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನೆರವಾದ ರೈತರು

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನೆರವಾದ ರೈತರು

ಒಟ್ಟಿನಲ್ಲಿ ಉತ್ತಮ ಗುಣಮಟ್ಟದ ರಸ್ತೆ ಬೇಕು ಎಂದು ತಮ್ಮದೇ ಜಮೀನು ಕೊಟ್ಟು ಉತ್ತಮ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನೆರವಾದ ರೈತರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರವೇ ಸ್ಥಳೀಯರಿಗೆ ಟೋಲ್ ಶುಲ್ಕ ವಿನಾಯಿತಿ ನೀಡಿದೆ. ಆದರೆ ಇರುವ ನಿಯಮವನ್ನೇ ಉಲ್ಟಾ ಮಾಡುತ್ತಿರುವ ಟೋಲ್ ಅಧಿಕಾರಿಗಳ ದುರಾಸೆಯಿಂದ ಜನರು ದುಪ್ಪಟ್ಟು ಶುಲ್ಕ ತೆರಬೇಕಾಗಿ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವುದು ಜನರ ಆಗ್ರಹವಾಗಿದೆ.

Recommended Video

ತನ್ನ ಸ್ಥಾನವನ್ನು KL ರಾಹುಲ್ ಗೆ ದಾನ ಮಾಡಿದ ವಿರಾಟ್ | Oneindia Kannada

English summary
Illegal money asking from locals by the Devihalli toll gate in the National Highway-75 which connects Bengaluru and Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X