ಬರಾವಲೋಕನ: ನಿರ್ಲಕ್ಷ್ಯದಿಂದ ಹಾಳಾದವು ಚಿತ್ರದುರ್ಗದ ಕೆರೆ, ಕಲ್ಯಾಣಿಗಳು

Posted By:
Subscribe to Oneindia Kannada

ಚಿತ್ರದುರ್ಗ, ಮಾರ್ಚ್ 18: ನಮ್ಮ ರಾಜ್ಯದ ಹಳೇ ಮೈಸೂರಿಗೆ ಸೇರಿದ ಬಯಲು ಸೀಮೆಯ ಜಿಲ್ಲೆಗಳಲ್ಲಿ ಚಿತ್ರದುರ್ಗ ಪ್ರಮುಖವಾದದ್ದು. ತನ್ನದೇ ಆದ ಚಾರಿತ್ರ್ಯ, ಸಂಸ್ಕೃತಿಗಳಿಂದ ಐತಿಹಾಸಿಕ ನಗರವೆಂದು ಕರೆಯಲ್ಪಡುವ ಈ ಜಿಲ್ಲೆ ಶರಣರ ನೆಲೆವೀಡು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.

ಚಿತ್ರದುರ್ಗವೆಂದರೆ ಸಾಮಾನ್ಯವಾಗಿ ನೆನಪಾಗುವುದು ಕಲ್ಲಿನ ಕೋಟೆ ಹಾಗೂ ಒನಕೆ ಓಬವ್ವ. ಇಲ್ಲಿನ ಪುಟ್ಟ ಮಲೆನಾಡು ಎಂದೇ ಖ್ಯಾತವಾಗಿರುವ ಜೋಗಿ ಮಟ್ಟಿ ಗಿರಿಧಾಮ. ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿರುವ ಈ ಜಿಲ್ಲೆಯು ಬರದ ಕೆನ್ನಾಲಿಗೆ ತುತ್ತಾಗಿದ್ದು, ರೈತರು ಕಣ್ಣೀರಿಡುವಂತಾಗಿದೆ.

Water issues and Drought report of Chitradurga

ಜಿಲ್ಲಾ ಕೇಂದ್ರದಲ್ಲೇ ನೀರಿಗಾಗಿ ಹಾಹಾಕಾರ: ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯಗಳು, ಅಗಾಧವಾಗಿ ಬೆಳೆದಿರುವ ಜನಸಂಖ್ಯೆ ಮುಂತಾದ ಕಾರಣಗಳಿಂದಾಗಿ 'ಮಳೆ ಆಧಾರಿತ ಕೃಷಿ ಮತ್ತು ಕೃಷಿ ಆಧಾರಿತ ಜನರ ಬದುಕು' ಇವೆರಡೂ ದುಸ್ತರವಾಗಿವೆ.

ಕಣ್ಣಿನಿಂದ ಜಾರುವ ಒಂದು ಹನಿ ಕೆನ್ನೆಯ ಮೇಲೆ ಹರಿದುಬರುವಷ್ಟರಲ್ಲಿ ಬತ್ತಿ ಹೋಗುವಷ್ಟು ಉಷ್ಣಾಂಶ ಹೆಚ್ಚಾಗಿದೆ. ಇದರ ನಡುವೆಯೇ ಮಳೆ ಕೈ ಕೊಟ್ಟಿದ್ದು ಸುಮಾರು ನಾಲ್ಕು ವರ್ಷಗಳಿಂದ ನಿರಂತರ ಬರದಲ್ಲಿ ಬೇಯುತ್ತಿರುವ ಚಿತ್ರದುರ್ಗ ನಗರದ ನಿವಾಸಿಗಳಿಗೆ ವಾರಕ್ಕೊಂದು ಬಾರಿ ಮಾತ್ರ ನೀರು ಸರಬರಾಜು ಆಗುತ್ತಿದೆ ಎಂದರೆ ಇಲ್ಲಿನ ನೀರಿನ ಬವಣೆಯನ್ನು ಯಾರಾದರೂ ಊಹಿಸಬಹುದು.

ಕೆರೆ, ಕಟ್ಟೆಗಳಿಂದ ನಳನಳಿಸುತ್ತಿದ್ದ ನಗರ: ಚಿತ್ರದುರ್ಗ ಜಿಲ್ಲೆಗೆ ನದಿಗಳ ಆಸರೆಯಿಲ್ಲ. ಇದನ್ನರಿತ ಅಲ್ಲಿನ ಪಾಳೆಗಾರರು ಶತಶತಮಾನಗಳ ಹಿಂದೆಯೇ ನಗರದ ಹಲವಾರು ಕಡೆ ನೀರಿನ ಮೂಲಗಳನ್ನು ಗುರುತಿಸಿ ಅಲ್ಲೆಲ್ಲಾ ಕಲ್ಯಾಣಿಗಳನ್ನು ಕಟ್ಟಿಸಿದ್ದರು. ಈ ಕಲ್ಯಾಣಿಗಳು ಆಗಿನ ಪಾಳೇಗಾರರ ಕಾಲದಿಂದ ಹಿಡಿದು, ಬ್ರಿಟಿಷರ ಕಾಲವನ್ನು ದಾಟಿ, ಸ್ವಾತಂತ್ರೋತ್ತರ ವರ್ಷಗಳನ್ನೂ ಸವೆಸಿ ತೀರಾ ಇತ್ತೀಚಿನವರೆಗೂ ಅಂದರೆ ಸುಮಾರು 80ರ ದಶಕದ ಅಂತ್ಯದವರೆಗೂ ನಗರದ ನಿವಾಸಿಗಳಿಗೆ ನೀರುಣಿಸಿದ್ದವು.

ಈ ಕಲ್ಯಾಣಿಗಳು ಮಾತ್ರವಲ್ಲದೆ, ಚಿತ್ರದುರ್ಗದ ಅಲ್ಲಲ್ಲಿ ನೈಸರ್ಗಿಕವಾಗಿ ಸೃಷ್ಟಿಯಾಗಿದ್ದ ನೀರಿನ ಸೆಲೆಗಳೂ ಇದ್ದವು. ಇವುಗಳಲ್ಲಿ ಅನೇಕವು ಕಾಲಾನಂತರ ಬತ್ತಿ ಹೋಗಿದ್ದರೂ, ಚೆನ್ನಾಗಿ ಮಳೆಯಾದಾಗ ಈಗಲೂ ಆ ಕಟ್ಟೆಗಳಲ್ಲಿ ನೀರು ನಿಲ್ಲುತ್ತವೆ. ಆದರೆ, ಅವುಗಳನ್ನು ಅಭಿವೃದ್ಧಿಪಡಿಸುವ ಗೋಜಿಗೆ ಮಾತ್ರ ಇಲ್ಲಿನ ಸ್ಥಳೀಯ ಸರ್ಕಾರ ಪ್ರಯತ್ನಪಟ್ಟಿಲ್ಲ.

Water issues and Drought report of Chitradurga

ಅದರಲಿ. ಚಿತ್ರದುರ್ಗದಲ್ಲಿ ನೈಸರ್ಗಿಕವಾಗಿ ಸೃಷ್ಟಿಯಾಗಿದ್ದ ಪ್ರಮುಖವಾದ ನೀರಿನ ಸೆಲೆಗಳ ಜತೆಗೇ, ತಿಮ್ಮಣ್ಣ ನಾಯ್ಕನ ಕೆರೆ, ಕೋಟೆ ಬಳಿಯ ಸಿಹಿನೀರಿನ ಹೊಂಡ, ಸಂತೆ ಹೊಂಡ, ಕೆಂಚ ಮಲ್ಲಪ್ಪನ ಬಾವಿ, ಗೌಡರ ಲಿಂಗಣ್ಣನ ಬಾವಿ, ಚನ್ನಕೇಶವನ ಬಾವಿ ಅಥವಾ ರಾಯರ ಬಾವಿ ಮುಂತಾದ ಕಲ್ಯಾಣಿಗಳನ್ನು ಹೋಲುವ ಬಾವಿಗಳು ಜನರಿಗೆ ನೀರಿನ ಆಸರೆಯಾಗಿದ್ದವು.

ಇವುಗಳಲ್ಲಿ, ಸಿಹಿ ನೀರು ಹೊಂಡದಿಂದ ಬುರುಜನ ಹಟ್ಟಿ, ನೆಹರೂ ನಗರ, ಸಂತೆ ಹೊಂಡ, ತಿಮ್ಮಣ್ಣ ನಾಯ್ಕನ ಕೆರೆಯಿಂದ (ಆಡು ಮಲ್ಲೇಶ್ವರ) ಕಾಮನ ಬಾವಿ ಬಡಾವಣೆ, ಕರುವಿನ ಕಟ್ಟೆ, ದೊಡ್ಡ ಪೇಟೆ, ಚಿಕ್ಕಪೇಟೆ, ಹೊರಪೇಟೆ, ಆಜಾದ್ ನಗರ ಹಾಗೂ ಸುತ್ತಲಿನ ಪ್ರಾಂತ್ಯಗಳಿಗೆ ನೀರು ಸರಬರಾಜು ಆಗುತ್ತಿತ್ತು.

ಆದರೆ, ಕಳೆದೆರಡು ದಶಕಗಳಿಂದ ಈ ಕೆರೆಗಳಲ್ಲಿ, ಕಲ್ಯಾಣಿಗಳಲ್ಲಿ ಹೂಳೆತ್ತದೆ, ಸ್ವಚ್ಛತೆ ಕಾಪಾಡದೇ, ಸರಿಯಾದ ನಿರ್ವಹಣೆ ತೋರದೇ, ಜಲ ಮೂಲಗಳನ್ನು ಕಾಪಾಡದೇ ಇದ್ದಿದ್ದರಿಂದಾಗಿ ಈ ನೀರಿನ ಮೂಲಗಳಲ್ಲಿ ಇಂದು ನೀರು ಮಾಯವಾಗಿದೆ.

ಹಳೆಯ ನೀರಿನ ಸೆಲೆ ಸಿಹಿ ನೀರಿನ ಹೊಂಡ ಬರಿದಾಗಿದೆ. ಸಂತೆ ನೀರಿನ ಹೊಂಡವನ್ನು ಬಳಕೆ ಮಾಡುತ್ತಿಲ್ಲ. ತಿಮ್ಮಣ್ಣನ ನಾಯ್ಕನ ಕೆರೆಯೂ ಬತ್ತಿ ಹೋಗಿದೆ, ಅಲ್ಲಿನ ಪಂಪ್ ಹೌಸ್ ಗೆ ಅಳವಡಿಸಲಾಗಿದ್ದ ಪೈಪ್ ಲೈನ್ ಒಡೆದು ಹೋಗಿ ಅಳಿದುಳಿದ ಪೈಪುಗಳು ಕಳ್ಳಕಾಕರ ಪಾಲಾಗಿವೆ. ಕೆಂಚ ಮಲ್ಲಪ್ಪನ ಬಾವಿಯ ನೀರಂತೂ ನೋಡಲಾಗುವುದಿಲ್ಲ. ಅಷ್ಟು ಕಲುಷಿತವಾಗಿದೆ.

ಹತ್ತು ವರ್ಷಗಳ ಹಿಂದೆ ಅಮರ್ ನಾರಾಯಣ್ ಜಿಲ್ಲಾಧಿಕಾರಿಯಾಗಿದ್ದ ವೇಳೆ, ಅವರು ವರ್ಗಾವಣೆಗೊಂಡ ನಂತರ ಮತ್ಯಾರೂ ಇಲ್ಲಿ ಅಂಥಾ ಯೋಜನೆಗಳನ್ನು ಹಮ್ಮಿಕೊಳ್ಳಲಿಲ್ಲ.

ನೀರಿನ ಮೂಲಗಳೀಗ ಎರಡೇ ಎರಡು: ಈಗ ಚಿತ್ರದುರ್ಗ ನಗರದಲ್ಲಿ ಈಗ ಸದ್ಯಕ್ಕೆ ಅಂಥಾ ಹೇಳಿಕೊಳ್ಳುವಂಥ ನೀರಿನ ಮೂಲಗಳು ಇಲ್ಲ. ಹಾಗಾಗಿ, ಹಿರಿಯೂರಿನ ವಾಣಿ ವಿಲಾಸ ಸಾಗರ ಹಾಗೂ ಶಾಂತಿ ಸಾಗರಗಳೆರಡೇ ಚಿತ್ರದುರ್ಗಕ್ಕೆ ಜಲಪೂರೈಕೆ ಮೂಲಗಳಾಗಿವೆ. ಚಿತ್ರದುರ್ಗದ ಪೂರ್ವ ಭಾಗಕ್ಕೆ ವಾಣಿ ವಿಲಾಸದ ನೀರು ಸಿಗುತ್ತಿದ್ದರೆ, ಪಶ್ಚಿಮದ ಭಾಗಕ್ಕೆ ಶಾಂತಿ ಸಾಗರವೇ ಮೂಲವಾಗಿದೆ.

ಇದರ ಪರಿಣಾಮವಾಗಿ, ಮಳೆ ಕೈ ಕೊಟ್ಟಿರುವುದು, ಅಗಾಧವಾಗಿ ಬೆಳೆದ ನಗರದಿಂದಾಗಿ ಸಿಕ್ಕ ಸಿಕ್ಕಲ್ಲಿ ಬೋರು ಕೊರೆದು ಅಂತರ್ಜಲ ಬತ್ತುವಂತೆ ಮಾಡಿರುವುದರಿಂದ ಭೂಮಿ ತಾಪಮಾನವೂ ಅಗಾಧವಾಗಿ ಹೆಚ್ಚಾಗಿ ಅದು ಹಸಿರು ಮನೆ ಪರಿಣಾಮ ಉಂಟಾಗಿ ಮೋಡಗಳು ಮಳೆ ಸುರಿಸದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರಕ್ಕೊಂದು, ಎರಡು ಬಾರಿ ನೀರು: ವಾರಕ್ಕೆರಡು ಬಾರಿ ಮಾತ್ರ ನೀರು. ಹಳೆ ಚಿತ್ರದುರ್ಗದಲ್ಲಿ ಮಾತ್ರ ಪರವಾಗಿಲ್ಲ ಎನ್ನುವಂತಿದೆ. ಎಕ್ಸೆ ಟೆನ್ಶನ್ ಏರಿಯಾಗಳಿಗೆ ಟೆನ್ಶನ್ ಹೆಚ್ಚು ಇದೆ. ವಾರದಲ್ಲಿ ಒಂದೆರಡು ಬಾರಿಯಾದರೂ ನೀರು ಬರುತ್ತದೆ. ಆದರೆ, ಐಯುಡಿಪಿ ಏರಿಯಾ, ಟೀಚರ್ಸ್ ಕಾಲೋನಿ ಮುಂತಾದ ಪ್ರಾಂತ್ಯಗಳಲ್ಲಿ ನೀರಿನ ವ್ಯವಸ್ಥೆ ಏರುಪೇರಾಗಿದೆ.

ಆದರೂ ಜಿಲ್ಲಾಡಳಿತವು ನಾಗರೀಕರಿಗೆ ನೀರಿಗಾಗಿ ಕೆಲವಾರು ಅನುಕೂಲತೆಗಳನ್ನೂ ಮಾಡಿಕೊಟ್ಟಿದೆ. ಅಂದಾಜು ಏಳರಿಂದ ಎಂಟು ಲಕ್ಷ ಜನಸಂಖ್ಯೆ ಇರುವ ಈ ನಗರದಲ್ಲಿ ನೀರಿನ ಅಭಾವವಿರುವ ಪ್ರಾಂತ್ಯಗಳಿಗೆ ವಾಟರ್ ಟ್ಯಾಂಕರ್ ಗಳಿಂದ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಲ್ಲಿ ಸ್ಥಾಪಿಸಲಾಗಿರುವ ಡಾಕ್ ವಾಟರ್ ಪಾಯಿಂಟ್ ಎಂಟು ರುಪಾಯಿಗೆ 20 ಲೀಟರ್ ಗಳ ಒಂದು ಕ್ಯಾನ್ ನೀರು ಸಿಗುತ್ತದೆ. ಆದರೂ ನಿತ್ಯ ಬಳಕೆಗೆ ಬೇಕಾದ ನೀರು ಸಿಗುತ್ತಲೇ ಇಲ್ಲ.

(ಮಾಹಿತಿ: ನಾಗಭೂಷಣ್, ಚಿತ್ರದುರ್ಗ)

(ನಿಮ್ಮೂರಿನಲ್ಲಿರುವ ಬರದ ಛಾಯೆಯ ದಾರುಣ ಚಿತ್ರಣವನ್ನು ಹಂಚಿಕೊಳ್ಳಬೇಕೆಂದಿದ್ದಲ್ಲಿ ನಮಗೆ ಬರೆದು ಕಳಿಸಿ. ನಾವು ಅದನ್ನು ಪ್ರಕಟಿಸುತ್ತೇವೆ. ಕನ್ನಡ ನುಡಿ ಅಥವಾ ಯೂನಿ ಕೋಡ್ ನಲ್ಲಿ ಟೈಪಿಸಲಾದ ಪ್ರತಿಗಳನ್ನು ಇ ಮೇಲ್ ಮಾಡಬಹುದು. ನಮ್ಮ ಇ- ಮೇಲ್ ವಿಳಾಸkannada@oneindia.co.in)

(ಈ ಲೇಖನದ ಮುಂದಿನ ಭಾಗಗಳಲ್ಲಿ ನಿರೀಕ್ಷಿಸಿ: ಚಿತ್ರದುರ್ಗದಲ್ಲಿ ಮಳೆಯ ಪ್ರಮಾಣ, ಬೆಳೆ ಪ್ರಮಾಣ, ರೈತರ ಸ್ಥಿತಿಗತಿ, ತಾಲೂಕು ಕೇಂದ್ರಗಳಲ್ಲಿ ನೀರು, ಬೆಳೆ ಸಮಸ್ಯೆ ಮುಂತಾದವುಗಳ ಬಗ್ಗೆ ಮಾಹಿತಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This year's summer has started its bad impacts on Chitradurga, thus making the city an owen and stealing the water from only two water resources of the city. Even though Chitradurga had various water resources in past, but due to the negligence of local government they have been dried up
Please Wait while comments are loading...