ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಆಹಾರ ದರ ಏರಿಸಲು ಚಿಂತನೆ
ಬೆಂಗಳೂರು: ಗೃಹಬಳಕೆ ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (ಎಲ್‌ಪಿಜಿ) ದರಗಳು ದಿಢೀರ್ ಏರಿಕೆಯಾಗಿರುವುದು ಈಗ ಹೋಟೆಲ್ ಉದ್ಯಮದ ಮೇಲೂ ಬರೆ ಎಳೆದಿದೆ. ಪಶ್ಚಿಮ ಏಷ್ಯಾದ ಯುದ್ಧದ ಕಾರ್ಮೋಡ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದ್ದು, ಇದೀಗ ಕಾಫಿ, ಟೀ ಸೇರಿದಂತೆ ಹೋಟೆಲ್ ಆಹಾರದ ಬೆಲೆಗಳು ಕೂಡ ಏರಿಕೆಯಾಗುವ ಭೀತಿ ಎದುರಾಗಿದೆ.
ವಾಣಿಜ್ಯ ಗ್ಯಾಸ್ ದರ ಮಾರ್ಚ್ 1ರಂದು ₹30 ಏರಿಕೆಯಾಗಿತ್ತು. ಮತ್ತೆ ಮಾರ್ಚ್ 7 ರಂದು ₹115 ಏರಿಕೆಯಾಗಿದೆ. ಈಗ ಪ್ರತಿ ಸಿಲಿಂಡರ್ ಮೇಲೆ ಸಬ್ಸಿಡಿ ಕಡಿತ ಸೇರಿದಂತೆ ಒಟ್ಟು ₹295ರಷ್ಟು ಹೊರೆ ಹೆಚ್ಚಾಗಿದೆ. ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬೆಂಗಳೂರು ಹೋಟೆಲ್‌ಗಳ ಸಂಘ ಈಗ ಹೋಟೆಲ್ ಆಹಾರ ದರಗಳ ಏರಿಸುವ ಚಿಂತನೆಯಲ್ಲಿದೆ.

ಹೋಟೆಲ್‌ಗಳ ಸಂಘ ಹೇಳಿದ್ದೇನು?
ಸದ್ಯಕ್ಕೆ ದರ ಹೆಚ್ಚಳ ಮಾಡದಿದ್ದರೂ, ಮುಂದಿನ 15 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಬೆಲೆ ಏರಿಕೆ ಅನಿವಾರ್ಯ ಎಂಬ ಸುಳಿವು ಹೋಟೆಲ್ ಮಾಲೀಕರು ನೀಡಿದ್ದಾರೆ. ಈ ಬಗ್ಗೆ ಹೋಟೆಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದು, ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಕೇವಲ ಗ್ಯಾಸ್ ಮಾತ್ರವಲ್ಲದೆ, ಹೋಟೆಲ್ ಉದ್ಯಮಕ್ಕೆ ಪೂರಕವಾದ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಎಣ್ಣೆ ದರ ₹5 ರಿಂದ ₹10ರಷ್ಟು ಹೆಚ್ಚಳವಾಗಿದೆ. ಪ್ರತಿ ಯೂನಿಟ್‌ಗೆ ₹1 ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಕೆಜಿ ಕಸಕ್ಕೆ ₹12 ನೀಡುವಂತೆ ಜಿಬಿಎ (GBA) ಕೂಡ ಆದೇಶಿಸಿದೆ. ಇದೆಲ್ಲವೂ ಹೋಟೆಲ್ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಲೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವುದು ಅನಿವಾರ್ಯ ಎಂದು ಕೆಲವು ಹೋಟೆಲ್ ಮಾಲೀಕರು ಅಭಿಪ್ರಾಯಪಟ್ಟಿದ್ದರೆ, ದರ ಹೆಚ್ಚಳ ಮಾಡಿದರೆ ಗ್ರಾಹಕರು ಹೋಟೆಲ್‌ಗಳಿಂದ ದೂರ ಸರಿಯಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಮಧ್ಯಮ ವರ್ಗದ ಜನರ ಹೊರಗಿನ ಊಟದ ವೆಚ್ಚದ ಮೇಲೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಜನರಿಗೆ ಬೆಲೆ ಏರಿಕೆಯ ಬಿಸಿ ಒಂದರ ಮೇಲೊಂದರಂತೆ ತಟ್ಟುತ್ತಿದೆ. ಈಗಾಗಲೇ ಅಡುಗೆ ಅನಿಲ (ಎಲ್‌ಪಿಜಿ) ಮತ್ತು ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿರುವ ಬೆಂಗಳೂರಿಗರಿಗೆ, ಈಗ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆಯ ಭೀತಿಯೂ ಎದುರಾಗಿದೆ.
ಹೋಟೆಲ್ ಆಹಾರ ತಿನ್ನುವವರಿಗೆ ಶಾಕ್
ಬೆಂಗಳೂರಿನಲ್ಲಿ ಬ್ಯಾಚುಲರ್‌ಗಳು, ಐಟಿ ಉದ್ಯೋಗಿಗಳು ಮತ್ತು ದಿನಗೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರು ದಿನನಿತ್ಯದ ಊಟಕ್ಕೆ ಹೋಟೆಲ್‌ಗಳನ್ನೇ ಅವಲಂಬಿಸಿದ್ದಾರೆ. ಈಗ ಕಾಫಿ, ಟೀ ಮತ್ತು ತಿಂಡಿಗಳ ಬೆಲೆ ಏರಿಕೆಯಾದರೆ ಇವರ ಮಾಸಿಕ ಖರ್ಚಿನ ಮೇಲೆ ನೇರ ಪ್ರಭಾವ ಬೀರಲಿದೆ. ಕೇವಲ ಹೋಟೆಲ್ ಮಾತ್ರವಲ್ಲದೆ, ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆ ಮತ್ತು ಅಡುಗೆ ಎಣ್ಣೆಯ ದರ ಲೀಟರ್‌ಗೆ ₹5 ರಿಂದ ₹10ರಷ್ಟು ಹೆಚ್ಚಾಗಿರುವುದು ಗೃಹಿಣಿಯರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಗ್ಯಾಸ್ ದರ ಏರಿಕೆಯಿಂದ ಸಾರಿಗೆ ಮತ್ತು ಆಹಾರ ತಯಾರಿಕಾ ವೆಚ್ಚ ಹೆಚ್ಚಾಗುವುದರಿಂದ, ಇದು ಹಂತ ಹಂತವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಲಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಮಾರ್ಚ್ ತಿಂಗಳಿನಲ್ಲೇ ಸುಮಾರು ₹295ರಷ್ಟು ಏರಿಕೆಯಾಗಿದೆ. ಸರ್ಕಾರಕ್ಕೆ ಬೆಲೆ ಇಳಿಸುವಂತೆ ಪತ್ರ ಬರೆಯಲಾಗಿದ್ದು, ಮುಂದಿನ 15 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಬೆಲೆ ಏರಿಕೆ ಅನಿವಾರ್ಯ ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ತಿಳಿಸಿದೆ. ಈಗಾಗಲೇ ರಸ್ತೆಯ ಗುಂಡಿಗಳು ಮತ್ತು ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿರುವ ಬೆಂಗಳೂರಿಗರಿಗೆ, ಈ ಆರ್ಥಿಕ ಹೊರೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.












Click it and Unblock the Notifications