ಮೂಡಿಗೆರೆಯಲ್ಲಿ ಕಿಡಿಗೇಡಿಗಳಿಂದ ಬೆಂಕಿ: ಕಾಫಿ ತೋಟ ಭಸ್ಮ
ಚಿಕ್ಕಮಗಳೂರು, ಫೆಬ್ರವರಿ 13: ಕಿಡಿಗೇಡಿಗಳಿಂದ ಬೆಂಕಿ ಬಿದ್ದ ಪರಿಣಾಮ ಸುಮಾರು ಐದು ಎಕರೆ ಕಾಫಿ ತೋಟ ಸಂಪೂರ್ಣ ಭಸ್ಮವಾಗಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಮಾಳಿಗ ನಾಡಿನ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟವು ಮಾಳಿಗ ನಾಡಿನ ಗ್ರಾಮದ ಕಾರ್ತಿಕ್ ಎಂಬುವವರಿಗೆ ಸೇರಿದ್ದು, ಕಾಫಿ ಗಿಡಗಳನ್ನು ಮಕ್ಕಳಂತೆ ಸಾಕಿದ್ದರು. ಈಗ ಅವೆಲ್ಲ ಬೆಂಕಿಗೆ ಸುಟ್ಟು ಕರಕಲು ಆಗಿವೆ.
ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆದರೆ ಅವರು ಬರುವಷ್ಟರಲ್ಲಿ ಕಾಫಿ ತೋಟ ಭಸ್ಮವಾಗಿದೆ. ಕಳೆದ ಅಗಸ್ಟ್ ನಲ್ಲಿ ನೆರೆಯಿಂದ ಹಾನಿಯಾಗಿತ್ತು, ಈಗ ಬೆಂಕಿಗೆ ಆಹುತಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತೋಟದ ಮಾಲೀಕ ಕಾರ್ತಿಕ್ ಅಳಲು ತೋಡಿಕೊಂಡಿದ್ದಾರೆ.