ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್, ಭಾರತ ಮತ್ತು ಬಡವರು; ಬೆಚ್ಚಿಬೀಳಿಸಿದೆ ವಿಶ್ವಬ್ಯಾಂಕ್ ವರದಿ; ಬಡತನ ನಿರ್ಮೂಲನೆಗೆ ಮೂರು ಸಲಹೆ

|
Google Oneindia Kannada News

ನವದೆಹಲಿ, ಅ. 11: ಎರಡೂವರೆ ವರ್ಷಗಳ ಹಿಂದೆ ಕಾಟ ಕೊಟ್ಟ ಕೋವಿಡ್-19 ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಜರ್ಝರಿತಗೊಳಿಸಿದ್ದು, ಮತ್ತು ಈಗಲೂ ಅದರ ಪರಿಣಾಮವಾಗಿ ಆರ್ಥಿಕ ಮುಗ್ಗಟ್ಟು ಮುಂದುವರಿಯುತ್ತಿರುವುದು ಎಲ್ಲರಿಗೂ ಗೊತ್ತಾಗಿದೆ. ಕೋವಿಡ್ ಆಘಾತದಿಂದ ಅತಿಹೆಚ್ಚು ಕುಸಿತ ಕಂಡ ದೊಡ್ಡ ಆರ್ಥಿಕತೆಗಳಲ್ಲಿ ಭಾರತವೂ ಒಂದು. ಆದರೆ, ಈ ವರ್ಷ ಭಾರತದ ಆರ್ಥಿಕತೆ ಚೇತರಿಸಿಕೊಂಡಿರುವುದು ಹೌದು.

ಆದರೆ, ಭಾರತದಲ್ಲಿ ಆರ್ಥಿಕ ಅಸಮಾನತೆ ಮಾತ್ರ ನಿಚ್ಚಳವಾಗಿ ಕಾಣುವಷ್ಟು ಅಂತರ ಹೆಚ್ಚಿಸಿಕೊಳ್ಳುತ್ತಿದೆ. ಭಾರತದ ಆರ್ಥಿಕತೆ ಬೆಳೆದಂತೆ ಸಿರಿವಂತರ ಸಂಪತ್ತು ಹೆಚ್ಚುತ್ತಿರುವುದು ಒಂದೆಡೆಯಾದರೆ, ಬಡವರ ಅಳಿದುಳಿದ ಸಂಪತ್ತು ಕರಗುತ್ತಿದೆ ಎಂಬುದು ಕೆಲ ಅಂಕಿ ಅಂಶಗಳು ಹೇಳುತ್ತವೆ.

ಇದೇ ವೇಳೆ, ವಿಶ್ವಬ್ಯಾಂಕ್‌ನ ಅಧ್ಯಯನ ವರದಿಯೊಂದು ಭಾರತದ ಬಡತನದ ಬಗ್ಗೆ ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದೆ. ಕೋವಿಡ್‌ನಿಂದ ಜಾಗತಿಕವಾಗಿ ಸೃಷ್ಟಿಯಾದ ಬಡವರಲ್ಲಿ ಭಾರತೀಯರೇ ಶೇ. 80ರಷ್ಟು ಇದ್ದಾರೆ ಎಂದು ಈ ವರದಿ ಹೇಳಿದೆ.

2020ರಲ್ಲಿ ಕೋವಿಡ್ ಪರಿಸ್ಥಿತಿಯಿಂದ ಜಾಗತಿಕವಾಗಿ ಹೊಸದಾಗಿ 7 ಕೋಟಿ ಜನರು ಬಡತನಕ್ಕೆ ಸಿಲುಕಿದರು. ಭಾರತದಲ್ಲಿ 5.6 ಕೋಟಿ ಈ ಸಂದರ್ಭದಲ್ಲಿ ಆರ್ಥಿಕ ನಷ್ಟಕ್ಕೊಳಗಾಗಿ ಬಡವರಾದರು ಎನ್ನಲಾಗಿದೆ.

2019ರಲ್ಲಿ ಜಾಗತಿಕವಾಗಿ ವಿಪರೀತ ಬಡತನದ ಮಟ್ಟ ಶೇ. 8.4 ಇದ್ದರೆ, ಇದು 2020ರಲ್ಲಿ ಶೇ. 9.3ಕ್ಕೆ ಏರಿತು. ಇನ್ನು, 2020ರಲ್ಲಿ ಹೊಸದಾಗಿ ಬಡತನದ ಗುಂಪಿಗೆ ಸೇರಿದ 7 ಕೋಟಿ ಜನರು ಸೇರಿದಂತೆ ವಿಶ್ವಾದ್ಯಂತ ಬಡವರ ಸಂಖ್ಯೆ 70 ಕೋಟಿಗೂ ಹೆಚ್ಚಿತ್ತು ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

"ಬಡತನ ಮತ್ತು ಹಂಚಿತ ಸಮೃದ್ಧಿ 2022: ಸರಿಪಡಿಸುವಿಕೆ" (Poverty and Shared Prosperity 2022: Correcting the Course) ಎಂಬ ಹೆಸರಿನಲ್ಲಿ ವಿಶ್ವಬ್ಯಾಂಕ್ ಅಧ್ಯಯನ ವರದಿ ಬಿಡುಗಡೆಯಾಗಿದೆ. ಇದರಲ್ಲಿ ವ್ಯಕ್ತವಾದ ಕೆಲ ಸಂಗತಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಂಕಿ ಅಂಶ ಗೊಂದಲ?

ಅಂಕಿ ಅಂಶ ಗೊಂದಲ?

ಕೋವಿಡ್-19 ವೇಳೆ ಭಾರತದಂತೆ ವಿಶ್ವಾದ್ಯಂತ ಬಹುತೇಕ ದೇಶಗಳು ಆರ್ಥಿಕವಾಗಿ ಕುಸಿತ ಕಂಡಿದ್ದವು. ಆದರೂ ಭಾರತದಲ್ಲಿ ಮಾತ್ರ ಅತಿಹೆಚ್ಚು ಜನರು ಬಡತನಕ್ಕೆ ಸಿಲುಕಿದರು ಎಂಬುದನ್ನು ನಂಬುವುದು ಕಷ್ಟ. ವರ್ಲ್ಡ್ ಬ್ಯಾಂಕ್ ಯಾವ ಆಧಾರದಲ್ಲಿ ಈ ಮಾಹಿತಿ ತಿಳಿಸಿದೆ, ಎಲ್ಲಿಂದ ಅಂಕಿ ಅಂಶ ಪಡೆದಿದೆ ಎಂದು ಅನುಮಾನ ಬರಬಹುದು.

ಭಾರತದಲ್ಲಿ ಬಡತನದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಅಧಿಕೃತ ಮಾಹಿತಿ ಇಲ್ಲ. ಕೇಂದ್ರ ಸರಕಾರ 2011ರಿಂದಲೂ ಈ ಬಗ್ಗೆ ಮಾಹಿತಿ ಪ್ರಕಟಿಸುವುದನ್ನು ನಿಲ್ಲಿಸಿದೆ. ಭಾರತದಲ್ಲಿ ಬಡತನದ ಬಗ್ಗೆ ಅಧಿಕೃತ ಅಂಕಿ ಅಂಶ ಸಿಗುವುದು 2011ರಲ್ಲೇ ಕೊನೆ.

ಈ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ ಬೇರೆ ಮೂಲಗಳಿಂದ ದತ್ತಾಂಶವನ್ನು ಪಡೆದಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ (ಸಿಎಂಐಇ) ಸಂಸ್ಥೆಯ ಗೃಹ ಸಮೀಕ್ಷೆಯ (ಸಿಪಿಎಚ್‌ಎಸ್) ವರದಿಯ ಅಂಶಗಳನ್ನು ಉಪಯೋಗಿಸಿಕೊಂಡಿದೆ. ಭಾರತ ಸರಕಾರದಿಂದ ಅಧಿಕೃತ ಅಂಕಿ ಅಂಶ ಸಿಕ್ಕಿಲ್ಲವಾದ್ದರಿಂದ ಸಿಪಿಎಚ್‌ಎಸ್ ದತ್ತಾಂಶವನ್ನು ಅನಿವಾರ್ಯವಾಗಿ ಉಪಯೋಗಿಸಿಕೊಂಡಿದ್ದೇವೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಕುತೂಹಲ ಎಂದರೆ 2022 ಏಪ್ರಿಲ್ ತಿಂಗಳಲ್ಲಿ ಐಎಂಎಫ್‌ನಿಂದ ಭಾರತದ ಬಡತನದ ಬಗ್ಗೆ ಒಂದು ವರದಿ ಪ್ರಕಟವಾಗಿತ್ತು. ಅದರಲ್ಲಿ ಹೆಚ್ಚುವರಿ 2.3 ಕೋಟಿ ಜನರು 2020ರಲ್ಲಿ ಬಡತನಕ್ಕೆ ಸಿಲುಕಿದರು ಎಂದಿದೆ. ಅದರೆ, ಸಿಎಂಐಇನ ಸಿಪಿಎಚ್‌ಎಸ್ ಸಮೀಕ್ಷೆಯಲ್ಲಿ ಇದು 5.6 ಕೋಟಿ ಎಂದಿದೆ. ಐಎಂಎಫ್‌ನ ಅಂಕಿ ಅಂಶದ ಬದಲು ವರ್ಲ್ಡ್ ಬ್ಯಾಂಕ್ ತನ್ನ ವರದಿಯಲ್ಲಿ ಸಿಎಚ್‌ಪಿಎಸ್‌ನ ದತ್ತಾಂಶವನ್ನು ಬಳಕೆ ಮಾಡಿಕೊಂಡಿರುವುದು ಕುತೂಹಲ.

ವಿಶ್ವಬ್ಯಾಂಕ್ ಸ್ಪಷ್ಟನೆ

ವಿಶ್ವಬ್ಯಾಂಕ್ ಸ್ಪಷ್ಟನೆ

ಐಎಂಎಫ್‌ನ ದತ್ತಾಂಶವನ್ನು ವಿಶ್ವಬ್ಯಾಂಕ್ ಗಣನೆಗೆ ತೆಗೆದುಕೊಂಡೇ ಇಲ್ಲ ಎನ್ನುವಂತಿಲ್ಲ. 2020ರಲ್ಲಿ ಭಾರತದಲ್ಲಿ ಹೆಚ್ಚಾದ ಬಡವರ ಸಂಖ್ಯೆ 2.3 ಕೋಟಿಯಿಂದ 5.6 ಕೋಟಿ ಇರಬಹುದು ಎನ್ನುವ ಮೂಲಕ ಐಎಂಎಫ್‌ನ ಏಪ್ರಿಲ್ ತಿಂಗಳ ವರದಿಯ ಅಂಶಗಳನ್ನೂ ಅದು ಪರಿಗಣನೆಗೆ ತೆಗೆದುಕೊಂಡಿರುವುದು ವೇದ್ಯವಾಗಿದೆ.

"ಅಕೌಂಟ್ಸ್-ಆಧಾರಿತವಾಗಿ ಮಾಡಿದ ಅಂದಾಜಿನಲ್ಲಿ 2.3 ಕೋಟಿಯಷ್ಟು ಬಡವರು ಹೆಚ್ಚಾಗಿದ್ದಾರೆ. ಆದರೆ, ಸಿಎಂಐಇ ದತ್ತಾಂಶದ ಪ್ರಕಾರ ಬಡವರ ಸಂಖ್ಯೆ 5.6 ಕೋಟಿಯಷ್ಟು ಹೆಚ್ಚಾಗಿದೆ" ಎಂದು ವರ್ಲ್ಡ್ ಬ್ಯಾಂಕ್ ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಇಳಿಮುಖದಲ್ಲಿತ್ತು ಬಡತನ
ಆದರೆ, 2011ರಿಂದ 2020ರವರೆಗೂ ಭಾರತದಲ್ಲಿ ಬಡತನ ಇಳಿಮುಖ ಸ್ಥಿತಿಯಲ್ಲಿತ್ತು ಎಂಬುದನ್ನು ವರ್ಲ್ಡ್ ಬ್ಯಾಂಕ್ ಒಪ್ಪಿದೆ. ಬಡತನ ನಿರ್ಮೂಲನೆಗೆ ಸರಕಾರ ರೂಪಿಸಿರುವ ವಿವಿಧ ಯೋಜನೆಗಳ ಫಲವಾಗಿ ಬಡತನದ ಪ್ರಮಾಣ ಕಡಿಮೆಯಾಗಿತ್ತೆನ್ನಲಾಗಿದೆ. ಆದರೆ, ಕೋವಿಡ್ ಪ್ಯಾಂಡೆಮಿಕ್‌ನಿಂದ ಇದು ಮತ್ತೆ ಏರಿದೆ.

ಭಾರತದಲ್ಲಿಯಂತೆ ಜಾಗತಿಕವಾಗಿಯೂ 2020ರವರೆಗೂ ಬಡತನದ ಮಟ್ಟ ಕೆಳಗೇ ಇತ್ತು. ಆದರೆ, ಕೋವಿಡ್ ಬಂದ ಬಳಿಕ ಹೊಡೆತ ಬಿದ್ದಿದೆ. 2020ರಲ್ಲಿ ವಿಪರೀತ ಬಡಸ್ಥಿತಿಯಲ್ಲಿರುವವರ ಸಂಖ್ಯೆಯಲ್ಲಿ 7 ಕೋಟಿಯಷ್ಟು ಹೆಚ್ಚಾಗಿದೆ. 2019ರಲ್ಲಿ ಅತಿ ಬಡವರು ಶೇ. 8.4ರಷ್ಟು ಇದ್ದರೆ, 2020ರಲ್ಲಿ ಇದು ದಿಢೀರ್ ಆಗಿ ಶೇ. 9.4ಕ್ಕೆ ಏರಿಕೆಯಾಗಿದೆ.

ಬಡವರಿಗೆ ಅತಿ ಹೆಚ್ಚು ಪೆಟ್ಟು

ಬಡವರಿಗೆ ಅತಿ ಹೆಚ್ಚು ಪೆಟ್ಟು

ವಿಶ್ವ ಬ್ಯಾಂಕ್ ವರದಿಯಲ್ಲಿ ಹಲವು ಕುತೂಹಲಕಾರಿ ಅಂಶಗಳಿವೆ. ಕೋವಿಡ್‌ನಿಂದ ಬಹುತೇಕ ದೇಶಗಳು ಜರ್ಝರಿತವಾಗಿದ್ದು ಹೌದು. ಆದರೆ, ಅತಿ ಹೆಚ್ಚು ಹಾನಿ ಅನುಭವಿಸಿದ್ದು ಕಡುಬಡವರೇ. 2020ರಲ್ಲಿ ಸಿರಿವಂತ ದೇಶಗಳಿಗಿಂತ ಬಡ ದೇಶಗಳ ಆದಾಯ ಅತಿ ಹೆಚ್ಚು ಕುಸಿತ ಕಂಡಿತ್ತು. ವಿಶ್ವದ ಅತ್ಯಂತ ಶ್ರೀಮಂತರಿಗಿಂತ ಅತಿ ಬಡವರ ಸಂಪತ್ತು ಎರಡು ಪಟ್ಟು ಕರಗಿಹೋಗಿತ್ತು. ಕೆಲವಾರು ದಶಕಗಳನ್ನು ಅವಲೋಕಿಸಿದರೆ ಮೊದಲ ಬಾರಿಗೆ ಜಾಗತಿಕವಾಗಿ ಅಸಮಾನತೆ ಹೆಚ್ಚಾಗಿದ್ದು ಕಂಡುಬಂದಿದೆ ಎಂದು ವಿಶ್ವಬ್ಯಾಂಕ್‌ನ ವರದಿಯಲ್ಲಿ ಹೇಳಲಾಗಿದೆ.

ಕೋವಿಡ್-19 ತೀವ್ರತೆ ಕಡಿಮೆ ಆದ ಬಳಿಕ ಜಾಗತಿಕ ಆರ್ಥಿಕತೆ ಚೇತರಿಕೆ ಕಾಣತೊಡಗುತ್ತಿರುವಂತೆಯೇ ಹವಾಮಾನ ಬದಲಾವಣೆಯಿಂದ ಉದ್ಭವಿಸುತ್ತಿರುವ ನೈಸರ್ಗಿಕ ವಿಕೋಪ, ಅದರ ಪರಿಣಾಮವಾಗಿ ಉಂಟಾದ ಆಹಾರ ಸಮಸ್ಯೆ ಜಗತ್ತನ್ನು ಬಾಧಿಸುತ್ತದೆ. ಜೊತೆಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವೂ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

2030ರ ಗುರಿ ಮುಟ್ಟಲಾದೀತೆ?

2030ರ ಗುರಿ ಮುಟ್ಟಲಾದೀತೆ?

2030ರಷ್ಟರಲ್ಲಿ ಜಗತ್ತಿನಲ್ಲಿ ಕಡುಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ವರ್ಷಗಳ ಹಿಂದೆ ಗುರಿ ಇಡಲಾಗಿತ್ತು. ಆದರೆ, ಈಗಿರುವ ಪರಿಸ್ಥಿತಿ ಗಮನಿಸಿದರೆ ಆ ಗುರಿ ಈಡೇರುವುದು ಅನುಮಾನ. ವರ್ಲ್ಡ್ ಬ್ಯಾಂಕ್ ಕೂಡ ಇದೇ ಅನಿಸಿಕೆಯನ್ನು ಅನುಮೋದಿಸಿದೆ. ಆದರೆ, ಕೆಲವೊಂದಿಷ್ಟು ಮಾರ್ಗದರ್ಶನವನ್ನೂ ಈ ವರದಿ ನೀಡಿದೆ.

ವರ್ಲ್ಡ್‌ಬ್ಯಾಂಕ್ ನೀಡಿರುವ ಮೂರು ಪ್ರಮುಖ ಸಲಹೆಗಳಲ್ಲಿ ಮೊದಲನೆಯದು ಸಬ್ಸಿಡಿ ಕಡಿಮೆ ಮಾಡುವುದು. ಸಬ್ಸಿಡಿಗೆ ಹೆಚ್ಚು ಹಣ ವ್ಯಯಿಸುವ ಬದಲು ಬಡವರನ್ನು ಗುರುತಿಸಿ ಅವರಿಗೆ ನೇರವಾಗಿ ನೆರವು ಒದಗಿಸಬೇಕು ಎಂದು ಅದು ಹೇಳುತ್ತದೆ.

ಎರಡನೆಯದು, ದೀರ್ಘಾವಧಿ ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು. ಮೂರನೆಯದು, ಬಡವರಿಗೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ಸಾರ್ವಜನಿಕ ಮೂಲಗಳಿಂದ ಆದಾಯ ತೆಗೆದುಕೊಳ್ಳುವುದು. ಅಂದರೆ ತುಸು ಸ್ಥಿತಿವಂತರಿಗೆ ಹೆಚ್ಚು ತೆರಿಗೆ ಹಾಕಿ ಸರಕಾರ ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬುದು ವಿಶ್ವಬ್ಯಾಂಕ್ ನೀಡಿದ ಪರೋಕ್ಷ ಸಲಹೆ.

(ಒನ್ಇಂಡಿಯಾ ಸುದ್ದಿ)

English summary
In its latest report the World Bank flagged concerns over how the lack of official data on poverty from India affects the world in drawing up global poverty estimates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X