ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ
IPL 2026: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೀಗ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮುಗಿದಿದ್ದು, ಇದರ ಮುಂಚೆಯೇ ಐಪಿಎಲ್ ಪ್ರಸಾರಕರು ಅಧಿಕೃತವಾಗಿ ಮಾರ್ಚ್ 28ರಿಂದ ಟೂರ್ನಿ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ.
ಈ ಬಾರಿ ಐಪಿಎಲ್‌ನ ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂಬುದು ವಿಶೇಷ. ಐಪಿಎಲ್ ಆಡಳಿತ ಮಂಡಳಿಯು ಇನ್ನೂ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಆದರೂ, ಈ ಬಗ್ಗೆ ಶೀಘ್ರವೇ ಸ್ಪಷ್ಟ ಮಾಹಿತಿ ಸಿಗಲಿದೆ. ಟೂರ್ನಿಯನ್ನು ಎರಡು ಹಂತಗಳಲ್ಲಿ ನಡೆಸುವ ಸಾಧ್ಯತೆಗಳಿದ್ದು, ದೇಶದ ರಾಜಕೀಯ ಬೆಳವಣಿಗೆಗಳು ಮತ್ತು ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ದೃಷ್ಟಿಯಿಂದ ವೇಳಾಪಟ್ಟಿಯನ್ನು ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ
ತಮ್ಮ ತವರು ಮೈದಾನದಲ್ಲೇ ಉದ್ಘಾಟನಾ ಪಂದ್ಯ ನಡೆಯುತ್ತಿರುವುದಕ್ಕೆ ಆರ್‌ಸಿಬಿ ತಂಡವು ಹರ್ಷ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ತಂಡದ ಸಿಇಒ ರಾಜೇಶ್ ಮೆನನ್, "ಚಿನ್ನಸ್ವಾಮಿ ಕೇವಲ ನಮ್ಮ ತವರು ಮೈದಾನವಲ್ಲ, ಅದು ಆರ್‌ಸಿಬಿ ತಂಡದ ಗುರುತು. ದೀರ್ಘಕಾಲದ ನಂತರ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡಲು ಆಟಗಾರರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ," ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಫೈನಲ್ ಪಂದ್ಯದ ಸ್ಥಳ ಬದಲಾವಣೆಯಿಂದಾಗಿ ಅಸಮಾಧಾನಗೊಂಡಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನಕ್ಕೆ, ಈ ಬಾರಿ ಪ್ಲೇ-ಆಫ್ ಪಂದ್ಯಗಳು ಸಿಗುತ್ತವೆಯೇ ಎಂಬ ಚರ್ಚೆಗಳು ಆರಂಭ ಆಗಿವೆ. ಸದ್ಯ ಬಿಎಸ್‌ಸಿಸಿಐ ಭದ್ರತಾ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರಗಳ ಸಹಕಾರವನ್ನು ಖಚಿತಪಡಿಸಿಕೊಂಡ ನಂತರವೇ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ವಿಶ್ವಕಪ್ ಬೆನ್ನಲ್ಲೇ ಐಪಿಎಲ್ ರಂಗು ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ದೊಡ್ಡ ಹಬ್ಬವನ್ನು ತರಲಿದೆ.












Click it and Unblock the Notifications