ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ
"ಕಾಂತಾರ" ಚಿತ್ರದ ಮೂಲಕ ಮನೆಮಾತಾಗಿರುವ ಖ್ಯಾತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮಕ್ಕೆ ಭೇಟಿ ನೀಡಿದರು. ತಮ್ಮ ಭೇಟಿಯ ಸಂದರ್ಭದಲ್ಲಿ ರಿಷಭ್ ಶೆಟ್ಟಿ ಅವರು "ವಸುಧೈವ ಕುಟುಂಬಕಂ" (One World One Family) ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ಸೇವೆ, ಶಿಕ್ಷಣ ಮತ್ತು ಪೌಷ್ಟಿಕಾಂಶದಂತಹ ಮಾನವೀಯ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆದರು. 'ಕಾಂತಾರ' ಚಿತ್ರದ ಭವ್ಯ ಯಶಸ್ಸಿನ ನಂತರ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಅವರು, ಇಲ್ಲಿನ ಮಾನವೀಯ ಸಮಾಜ ಸೇವೆಗಳನ್ನು ಹತ್ತಿರದಿಂದ ವೀಕ್ಷಿಸಿದರು.
ವಸುಧೈವ ಕುಟುಂಬಕಂ ಮಿಷನ್‌ನ ಪೌಷ್ಟಿಕಾಂಶ, ಶಿಕ್ಷಣ ಮತ್ತು ಆರೋಗ್ಯ ವಿಭಾಗದ ಪ್ರತಿನಿಧಿಗಳನ್ನು ಭೇಟಿ ಮಾಡಿದ ಅವರು, ಈ ಯೋಜನೆಗಳು ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ಮತ್ತು ಅವುಗಳ ವ್ಯಾಪ್ತಿಯನ್ನು ಆಳವಾಗಿ ತಿಳಿದುಕೊಂಡರು. ಸದ್ಯ ಈ ಸಂಸ್ಥೆಯು ಉಚಿತ ಆಸ್ಪತ್ರೆಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ಅಷ್ಟೇ ಅಲ್ಲದೆ, ಒಂದು ವಿಶ್ವವಿದ್ಯಾಲಯ ಸೇರಿದಂತೆ 27 ಕ್ಯಾಂಪಸ್‌ಗಳಲ್ಲಿ ಸುಮಾರು 3,600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.

ಅನ್ನಪೂರ್ಣ ಯೋಜನೆ ಬಗ್ಗೆ ಮೆಚ್ಚುಗೆ
ಭಾರತದಾದ್ಯಂತ ಸುಮಾರು 1 ಕೋಟಿಗೂ (10 ಮಿಲಿಯನ್) ಹೆಚ್ಚು ಶಾಲಾ ಮಕ್ಕಳಿಗೆ 'ಅನ್ನಪೂರ್ಣ ಬೆಳಗಿನ ಪೌಷ್ಟಿಕ ಆಹಾರ' ಯೋಜನೆಯಡಿ ಆಹಾರ ತಲುಪಿಸುತ್ತಿರುವುದನ್ನು ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 'ವಸುಧೈವ ಕುಟುಂಬಕಂ' ಎಂಬ ದೃಷ್ಟಿಕೋನವು ಹೇಗೆ ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಿದೆ ಎಂಬುದನ್ನು ರಿಷಬ್ ಶೆಟ್ಟಿ ಅವರೊಂದಿಗೆ ಹಂಚಿಕೊಳ್ಳುವುದು ಸಂಸ್ಥೆಯ ಪ್ರತಿನಿಧಿಗಳಿಗೆ ಸಂತಸ ತಂದಿತು.
ವಸುಧೈವ ಕುಟುಂಬಕಂ ಎಂಬ ಉದಾತ್ತ ದೃಷ್ಟಿಕೋನವು ಇಲ್ಲಿ ಕೇವಲ ಘೋಷಣೆಯಾಗಿ ಉಳಿಯದೆ, ಹೇಗೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರುತ್ತಿದೆ ಎಂಬುದನ್ನು ಸಂಸ್ಥೆಯ ಪದಾಧಿಕಾರಿಗಳು ರಿಷಬ್ ಅವರೊಂದಿಗೆ ಹಂಚಿಕೊಂಡರು. ಪ್ರತಿಯೊಬ್ಬರ ಜೀವನದಲ್ಲೂ ಸಕಾರಾತ್ಮಕ ಬದಲಾವಣೆ ತರುವ ಈ ಪ್ರಯತ್ನದಲ್ಲಿ ತಾವೂ ಭಾಗಿಯಾಗುವುದಾಗಿ ನಟ ರಿಷಬ್ ಶೆಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು. ಸತ್ಯಸಾಯಿ ಗ್ರಾಮದ ಶಾಂತಿಯುತ ವಾತಾವರಣ ಮತ್ತು ಅಲ್ಲಿನ ಸೇವಾ ಮನೋಭಾವವು ರಿಷಬ್ ಶೆಟ್ಟಿ ಅವರಿಗೆ ಸ್ಫೂರ್ತಿ ನೀಡಿತು.

ಒಬ್ಬ, ಸರ್ವರೊಳಗಿರುವ ಜೀವಾತ್ಮಕ್ಕೆ ಪರಮಾತ್ಮನ ಅನುಭವ ಸ್ಪರ್ಶ ನೀಡಬಲ್ಲ ದೇವತಾ ಮನುಷ್ಯ. ಇನ್ನೊಬ್ಬ ತುಳುನಾಡಿನ ಇಂಚಿಂಚು ನೆಲದಲ್ಲಿ ನಂಬಿಕೆಯಾಗಿ ಮೆರೆಯುತ್ತಿರುವ ದೈವದ ವಿಚಾರವಾಗಿ ಅಧ್ಯಯನ ನಡೆಸಿ, ಕಾಂತಾರ ಎನ್ನುವ ಭಕ್ತಿಪ್ರಧಾನ ಸಿನಿಮಾದ ಪಾತ್ರಧಾರಿಯಾಗಿ ಕಾಣಿಸಿಕೊಂಡು ಭೂತ ನರ್ತಕರನ್ನೂ ನಾಚಿಸುವಂತೆ ನರ್ತಿಸಿದ ಕಾಂತಾರದ ಪ್ರಮುಖ ನಟ. ದೈವ ದೇವರುಗಳ ಸಮಾಗಮಕ್ಕೆ ಸಾಕ್ಷಿಯಾಯ್ತು ಸತ್ಯಸಾಯಿ ಗ್ರಾಮ.












Click it and Unblock the Notifications