ರಿಚರ್ಡ್ ಕೆಟಲ್‌ಬರೋ ಔಟ್: ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ
T20 World Cup 2026 Final: ಅಹಮದಾಬಾದ್‌ನ ನರೆಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯಕ್ಕೆ ಐಸಿಸಿ (ICC) ಅಂಪೈರ್‌ಗಳನ್ನು ಘೋಷಿಸಿದೆ. ಆದರೆ, ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ರಿಚರ್ಡ್ ಅಲನ್ ಕೆಟಲ್‌ಬರೋ ಅವರ ಹೆಸರಿಲ್ಲದಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಕಳೆದ ಹಲವು ವರ್ಷಗಳಿಂದ, ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತ ಸೋತಾಗಲೆಲ್ಲಾ ರಿಚರ್ಡ್ ಕೆಟಲ್‌ಬರೋ ಅವರು ಅಂಪೈರ್ ಆಗಿರುತ್ತಿದ್ದರು. ಈ ಕಾರಣದಿಂದಾಗಿ, ಅಭಿಮಾನಿಗಳು ಅವರನ್ನು 'ಅಶುಭ'ದ ರೀತಿಯಲ್ಲಿ ನೋಡುತ್ತಿದ್ದರು. ಈಗ ಫೈನಲ್ ಪಂದ್ಯದ ಅಂಪೈರ್‌ಗಳ ಪಟ್ಟಿಯಲ್ಲಿ ಅವರ ಹೆಸರಿಲ್ಲದಿರುವುದು, ಭಾರತಕ್ಕೆ ಈ ಬಾರಿ ಶುಭವಾಗಲಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಫೈನಲ್ ಪಂದ್ಯಕ್ಕೆ ನೇಮಕವಾದ ಅಂಪೈರ್‌ಗಳು
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ರಿಚರ್ಡ್ ಇಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್ ಅವರು ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದು ಕೇವಲ ಒಂದು ಕಾಕತಾಳೀಯ ಅಥವಾ ತಾಂತ್ರಿಕ ಆಯ್ಕೆಯಾಗಿದ್ದರೂ, ಭಾರತೀಯ ಅಭಿಮಾನಿಗಳಿಗೆ ಈ ಬದಲಾವಣೆ ಒಂದು ಸಕಾರಾತ್ಮಕ ಸುದ್ದಿಯಂತೆ ಭಾಸವಾಗುತ್ತಿದೆ.
ರಿಚರ್ಡ್ ಇಲಿಂಗ್‌ವರ್ತ್ ಅಂಪೈರಿಂಗ್ ಅನುಭವ
ಇಂಗ್ಲೆಂಡ್‌ನ ಅಂಪೈರ್ ರಿಚರ್ಡ್ ಇಲಿಂಗ್‌ವರ್ತ್ ಅವರು ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನಿರಂತರವಾಗಿ ಎರಡನೇ ಬಾರಿ ಅಂಪೈರಿಂಗ್ ಮಾಡುವ ಅವಕಾಶ ಪಡೆದಿದ್ದಾರೆ. ಅವರು ಈಗಾಗಲೇ 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲೂ ನ್ಯೂಜಿಲೆಂಡ್‌ನ ಕ್ರಿಸ್ ಗ್ಯಾಫನಿ ಅವರೊಂದಿಗೆ ಮೈದಾನದಲ್ಲಿನ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಡೆಯುವ ಅನೇಕ ಮಹತ್ವದ ಪಂದ್ಯಗಳಿಗೆ ರಿಚರ್ಡ್ ಇಲ್ಲಿಂಗ್‌ವರ್ಥ್ ಅವರನ್ನು ನಿಯಮಿತವಾಗಿ ಅಂಪೈರ್ ಆಗಿ ನೇಮಕ ಮಾಡಲಾಗುತ್ತದೆ. ಹಾಗೆಯೇ ಇದೀಗ ಇವರನ್ನು ವಿಶ್ವಾಸದ ಮೇರೆಗೆ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ನೇಮಿಸಿದೆ. ಇಲ್ಲಿಂಗ್‌ವರ್ಥ್ 2023ರ ಐಸಿಸಿ ಪುರುಷರ ವಿಶ್ವಕಪ್ ಫೈನಲ್ ಪಂದ್ಯ, 2025ರ ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿಯೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
ಅಲೆಕ್ಸ್ ವಾರ್ಫ್ ಅಂಪೈರಿಂಗ್ ಅನುಭವ
ಅಲೆಕ್ಸ್ ವಾರ್ಫ್ ಅವರು ರಿಚರ್ಡ್ ಇಲಿಂಗ್‌ವರ್ತ್ ಅವರೊಂದಿಗೆ ಮೈದಾನದಲ್ಲಿನ ಅಂಪೈರ್ ಆಗಿ ಈ ಫೈನಲ್ ಪಂದ್ಯವನ್ನು ನಿರ್ವಹಿಸಲಿದ್ದಾರೆ. ಇದು ವಾರ್ಫ್ ಅವರಿಗೆ ಮೊದಲ ಸೀನಿಯರ್ ಐಸಿಸಿ ವಿಶ್ವಕಪ್ ಫೈನಲ್ ಆಗಿದೆ. ವಿಶ್ವ ಮಟ್ಟದ ಟೂರ್ನಿಗಳಲ್ಲಿ ನಿರಂತರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವಾಸಾರ್ಹ ಅಂಪೈರ್ ಎಂದು ಗುರುತಿಸಿಕೊಂಡಿದ್ದಾರೆ.
ಈಗಾಗಲೇ ಅಲೆಕ್ಸ್ ವಾರ್ಫ್ ಅವರು ಐಸಿಸಿ ಮಹಿಳೆಯರ ವಿಶ್ವಕಪ್ 2022 ಹಾಗೂ ಐಸಿಸಿ ಪುರುಷರ ವಿಶ್ವಕಪ್ 2023 ಟೂರ್ನಿಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷ ಅವರನ್ನು ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಅಂಪೈರ್ ಆಗಿ ಆಯ್ಕೆ ಮಾಡಲಾಗಿದ್ದು, ಅದು ಅವರ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲಾಗಿತ್ತು. ಇದೇ ಸಾಧನೆ ಅವರಿಗೆ ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಅಂಪೈರಿಂಗ್ ಮಾಡುವ ಅವಕಾಶ ದೊರೆಯಲು ದಾರಿ ಮಾಡಿಕೊಟ್ಟಿದೆ.
ಫೈನಲ್ ಪಂದ್ಯದ ಅಧಿಕಾರಿಗಳ ಸಂಪೂರ್ಣ ವಿವರ
* ಆನ್-ಫೀಲ್ಡ್ ಅಂಪೈರ್‌ಗಳು: ರಿಚರ್ಡ್ ಇಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್: ಇವರಿಬ್ಬರೂ ಇಂಗ್ಲೆಂಡ್‌ನ ಅನುಭವಿ ಅಂಪೈರ್‌ಗಳು.
* ಥರ್ಡ್ ಅಂಪೈರ್: ಅಲ್ಲಾವುದ್ದೀನ್ ಪಾಲೇಕರ್ - ದಕ್ಷಿಣ ಆಫ್ರಿಕಾ
* ನಾಲ್ಕನೇ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್ - ದಕ್ಷಿಣ ಆಫ್ರಿಕಾ
* ಪಂದ್ಯದ ರೆಫರಿ: ಆಂಡಿ ಪೈಕ್ರಾಫ್ಟ್ - ಜಿಂಬಾಬ್ವೆ












Click it and Unblock the Notifications