ಹಾಫ್ ಹೆಲ್ಮೆಟ್ ಧರಿಸಿಸುವ ಪೊಲೀಸರಿಗೆ ಸಂಚಾರಿ ಪೊಲೀಸರಿಂದ ದಂಡ: ಮುಂದೆ ಜನಸಾಮಾನ್ಯರಿಗೂ ಇದೇ ರೂಲ್ಸ್?
ಬೆಂಗಳೂರು, ಸೆಪ್ಟೆಂಬರ್ 20: ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸುವುದು ಸಂಚಾರಿ ಪೊಲೀಸರ ದಂಡವನ್ನು ತಪ್ಪಿಸಿಕೊಳ್ಳುದಕ್ಕಲ್ಲ. ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಲು. ಆದರೆ ಜನರು ಜೀವರಕ್ಷಕವಲ್ಲದ ಹಾಫ್ ಹೆಲ್ಮೆಟ್ ಧರಿಸುತ್ತಿದ್ದಾರೆ. ಇದಕ್ಕಾಗಿ ಸಂಚಾರಿ ಪೊಲೀಸರು ಮೊದಲು ತಮ್ಮ ಇಲಾಖೆಯ ಪೊಲೀಸರ ವಿರುದ್ದವೇ ಕಾರ್ಯಚರಣೆಗೆ ಇಳಿದಿದ್ದಾರೆ.
ಹಾಫ್ ಹೆಲ್ಮೆಟ್ ಧರಿಸದಂತೆ ನಗರದ ಗಲ್ಲಿ-ಗಲ್ಲಿಗಳಲ್ಲಿಯೂ ಸಂಚಾರಿ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಸಿಗ್ನಲ್, ಜಂಕ್ಷನ್, ಇನ್ನಿತರ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬೈಕ್ ಸವಾರರಿಗೆ ತಿಳಿ ಹೇಳುತ್ತಿದ್ದಾರೆ.
ವಾಹನ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವಂತೆಯೂ ಹೇಳುವ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿರೋಧ ಅಳಿಸಿಹಾಕಲು ಪೊಲೀಸ್ ಇಲಾಖೆಯು ಲಾ ಅಂಡ್ ಅರ್ಡರ್ ಹಾಗೂ ಸಂಚಾರ ಪೊಲೀಸರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ತಾಕೀತು ಮಾಡಿದೆ. ಪೊಲೀಸರಿಗೆ ದಂಡವನ್ನು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಮೊದಲು ತಮ್ಮ ಇಲಾಖೆ ಸಿಬ್ಬಂದಿಯನ್ನು ಸರಿಮಾಡಿಕೊಂಡು ನಂತರ ಜನರಿಗೆ ದಂಡವನ್ನು ವಿಧಿಸಲು ಸಂಚಾರಿ ಪೊಲೀಸರು ಸಜ್ಜಾಗುತ್ತಿದ್ದಾರೆ.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ದಂಡ
ಸಂಚಾರಿ ಪೊಲೀಸರಿಗೆ ಮತ್ತು ಲಾ ಅಂಡ್ ಆರ್ಡರ್ ಪೊಲೀಸರಿಗೆ ಅರ್ಧ ಹೆಲ್ಮೆಟ್ ಧರಿಸದಂತೆ ಇಲಾಖೆ ಸೂಚನೆಯನ್ನು ನೀಡಿತ್ತು. ಆದರು ಕೆಲವು ಪೊಲೀಸರು ಅಸಡ್ಡೆ ಮನೋಭಾವದಿಂದ ಹಾಫ್ ಹೆಲ್ಮೆಟ್ ಧರಿಸಿಯೇ ಓಡಾಡುತ್ತಿದ್ದರು. ಇದರಿಂದಾಗಿ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿರುವ ತಮ್ಮದೇ ಇಲಾಖೆಯ ಸಿಬ್ಬಂದಿಯ ಬೈಕ್‌ಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸಂಚಾರಿ ಪೊಲೀಸರು ಕಳೆದ ಆರು ದಿನಗಳಿಂದಲೂ ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

ಸಂಚಾರಿ ವಿಭಾಗದ ಆಯುಕ್ತರ ಖಡಕ್ ಸೂಚನೆ
ಜನಸಾಮಾನ್ಯರಿಗೆ ಬುದ್ಧಿ ಹೇಳುವ ಪೊಲೀಸರೇ ನಿಯಮ ಉಲ್ಲಂಘಿಸಿದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಐಎಸ್ಐ ಮಾರ್ಕ್ ಇರುವ ಪೂರ್ತಿ ಕವರ್ ಆಗುವ ಪೂರ್ಣ ಹೆಲ್ಮೆಟ್ ಧರಿಸಲು ಟ್ರಾಫಿಕ್ ಕಮೀಷನರ್ ಡಾ.ಬಿ.ಆರ್.ರವಿಕಾಂತೇಗೌಡ ಸೂಚಿಸಿದ್ದಾರೆ. ನಿಯಮ ಪಾಲಿಸದ ಕಾನೂನು ಹಾಗೂ ಸುವ್ಯವಸ್ಥೆ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರಿಗೆ ದಂಡ ಹಾಕುವಂತೆ ನಿರ್ದೇಶನ ನೀಡಲಾಗಿದೆ.

ಪೂರ್ತಿ ಹೆಲ್ಮೆಟ್ ಧರಿಸುವಂತೆ ಜನರಿಗೆ ಜಾಗೃತಿ
ಸಂಚಾರಿ ಪೊಲೀಸರು ಸದ್ಯ ಹಾಫ್ ಹೆಲ್ಮೆಟ್ ಧರಿಸುವ ತಮ್ಮ ಇಲಾಖೆಯ ಸಿಬ್ಬಂದಿ ಮೇಲೆ ಮೊದಲು ದಂಡ ಪ್ರಯೋಗ ಮಾಡುತ್ತಿದ್ದಾರೆ. ಆ ಮೂಲಕ ಜನರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅರ್ಧ ಹೆಲ್ಮೆಟ್ ಧರಿಸುವ ಜನ ಸಾಮಾನ್ಯರಿಗೂ ಮುಂದಿನ ದಿನಗಳಲ್ಲಿ ದಂಡ ಪ್ರಯೋಗ ಮಾಡುವ ಸಾಧ್ಯತೆಯಿದೆ. ಸದ್ಯ ಪೊಲೀಸರ ಮೂಲಕ ಜಾಗೃತಿ ಮೂಡಿಸಲು ಈ ದಂಡ ವಿಧಿಸುವ ಪ್ರಯೋಗಕ್ಕೆ ಮುಂದಾಗಿದ್ದು, ಕಂಟ್ರೋಲ್ ರೂಂನಿಂದ ಎಲ್ಲಾ ಸಿಬ್ಬಂದಿಗಳಿಗೆ ಸಂದೇಶ ರವಾನಿಸಲಾಗಿದೆ.

ಹಾಫ್ ಹೆಲ್ಮೆಟ್‌ನಿಂದ ತಲೆಗಿಲ್ಲ ರಕ್ಷಣೆ
ದ್ವಿಚಕ್ರ ವಾಹನವನ್ನು ಓಡಿಸುವ ಸಮಯದಲ್ಲಿ ಅಪಘಾತವಾದರೇ ಮೊದಲು ಪೆಟ್ಟು ಬೀಳುವುದು ತಲೆಗೆ ಎನ್ನಬಹುದು. ತಲೆ ಅತ್ಯಂತ ಸೂಕ್ಷ್ಮವಾದ ಭಾಗವಾದ್ದರಿಂದ ತಲೆಗೆ ಗಂಭೀರವಾದ ಪೆಟ್ಟು ಬಿದ್ದರೆ ಜೀವಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಜೀವ ಅಮೂಲ್ಯವಾದದ್ದು ಮನೆಯಿಂದ ಹೊರ ಬರುವ ಜನರು ಸುರಕ್ಷತೆಯಿಂದ ಮನೆಗೆ ವಾಪಸ್ ತೆರೆಳಬೇಕು ಎನ್ನುವವರು ಪೂರ್ಣ ಮತ್ತು ಕ್ವಾಲಿಟಿ ಹೆಲ್ಮೆಟ್ ಧರಿಸಲೇಬೇಕು. ಇನ್ನು ಅರ್ಧ ಹೆಲ್ಮೆಟ್ ಧರಿಸಿದ ವೇಳೆ ಅಪಘಾತ ಸಂಭವಿಸಿದರೆ ತಲೆಗೆ ಅದು ಸುರಕ್ಷಿತವಾಗಿರುವುದಿಲ್ಲ. ಇದರಿಂದಾಗಿ ಪೂರ್ಣ ತಲೆಯನ್ನು ಕವರ್ ಮಾಡುವ ಹೆಲ್ಮೆಟ್‌ಗಳನ್ನೇ ಧರಿಸುವಂತೆ ಜನಸಾಮಾನ್ಯರು ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗೂ ಸಂಚಾರಿ ಪೊಲೀಸರು ಮನವಿಯನ್ನು ಮಾಡುತ್ತಿದ್ದಾರೆ.












Click it and Unblock the Notifications