ಬೈಕ್ ಸವಾರನಿಗೆ ಥಳಿಸಿದ್ದ ಬಿಎಂಟಿಸಿ ಬಸ್ ಚಾಲಕನ ಅಮಾನತು
ಬೆಂಗಳೂರು, ನ.27: ಯಲಹಂಕ ಬಳಿ ಮಂಗಳವಾರ ರಸ್ತೆಯಲ್ಲಿ ನಡೆದ ಗಲಾಟೆಯಲ್ಲಿ ಬೈಕ್ ಸವಾರನಿಗೆ ಥಳಿಸಿದ್ದ ಬಿಎಂಟಿಸಿಬಸ್ ಚಾಲಕನನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಚಾಲಕ ಆನಂದ್ ಪಿ. ಬಿ., ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರು ದೂರು, ಪ್ರತಿದೂರು ದಾಖಲಿಸಿದ್ದಾರೆ.
ಬಿಎಂಟಿಸಿಯಲ್ಲಿ ಟಿಕೆಟ್ಗಾಗಿ ಚಿಲ್ಲರೆ ಇಲ್ಲವೇ?: ಗೂಗಲ್ ಪೇ, ಫೋನ್ ಪೇ ಬಳಸಿ!
44 ವರ್ಷದ ಸಂದೀಪ್ ಬೋನಿಫೇಸ್ ಯಲಹಂಕ ನ್ಯೂ ಟೌನ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಚಾಲಕ ನಡೆಸಿದ ಹಲ್ಲೆಯಿಂದ ತನ್ನ ಪಕ್ಕೆಲುಬುಗಳು, ಕಾಲುಗಳು ಮತ್ತು ಮುಖದ ಮೇಲೆ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ. ಕೆನಡಾದ ಪ್ರಜೆಯಾದ ತನ್ನ ಪತ್ನಿ ಲಾರಾ ಜೊತೆಗೆ ಪ್ರಯಾಣಿಸುತ್ತಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ, "ನಾವು ಎರಡು ಬಸ್‌ಗಳ ನಡುವೆ ಸ್ಯಾಂಡ್‌ವಿಚ್ ತರ ಆಗಿದ್ದೇವು. ಬಸ್‌ಗಳು ನಿರಂತರವಾಗಿ ಹಾರ್ನ್ ಮಾಡುತ್ತಿದ್ದವು. ನಾನು ಚಾಲಕನಿಗೆ ದಾರಿ ಮಾಡಿಕೊಟ್ಟೆ. ಏಕಾಏಕಿ ಚಾಲಕ ಬಸ್ಸಿನಿಂದ ಕೆಳಗಿಳಿದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಬೈಕ್ ಕೀ ತೆಗೆದುಕೊಂಡು ಫೋನ್ ಕಸಿದುಕೊಂಡಿದ್ದಾರೆ. ನಾನು ಬಸ್ ಒಳಗೆ ಹೋದಾಗ, ಆತ ಮತ್ತೊಮ್ಮೆ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಎರಡು ಬಸ್‌ಗಳು ರೇಸ್ ಮಾಡುತ್ತಿದ್ದವು" ಎಂದು ಸಂದೀಪ್ ಬೋನಿಫೇಸ್ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರತಿ ದೂರು ಸಲ್ಲಿಸಿರುವ ಬಸ್‌ನ ಚಾಲಕ ಆನಂದ್ ಪಿ. ಬಿ. (29), ಬೈಕ್ ಚಾಲಕ ಸಂದೀಪ್ ತನ್ನ ಮಧ್ಯದ ಬೆರಳನ್ನು ತೋರಿಸಿ ಆಕ್ಷೇಪಾರ್ಹ ಸನ್ನೆ ಮಾಡಿದರು ಇದು ವಾಗ್ವಾದಕ್ಕೆ ಕಾರಣವಾಯಿತು ಎಂದಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು, "ಇಬ್ಬರೂ ಪರಸ್ಪರ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಕರೆಸಲಾಗುವುದು'' ಎಂದು ಮಾಹಿತಿ ನೀಡಿದ್ದಾರೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೈಕ್ ಸವಾರನ ಪತ್ನಿ ಸಹಾಯಕ್ಕಾಗಿ ಕಿರುಚುತ್ತಿದ್ದರೂ ಬಿಎಂಟಿಸಿ ಚಾಲಕ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನ ಪುಟ್ಟೇನಹಳ್ಳಿ ಪ್ರದೇಶದ ಕಾಂತಿ ಸ್ವೀಟ್ಸ್ ಅಂಗಡಿಯ ಬಳಿ ಘಟನೆ ನಡೆದಿದೆ.