Bengaluru Metro: ಕೇಂದ್ರಕ್ಕಿಂತ ರಾಜ್ಯವೇ ಹೆಚ್ಚು ಅನುದಾನ ಕೊಡ್ತಿದೆ: ಸಂಸದ ತೇಜಸ್ವಿ ಸೂರ್ಯಗೆ ಡಿ.ಕೆ. ಶಿವಕುಮಾರ್ ಟಾಂಗ್
ಬೆಂಗಳೂರು: ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾರು ಹೆಚ್ಚು ಅನುದಾನ ಕೊಡುತ್ತಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಬೆಂಗಳೂರು ನಗರದ ಮೆಟ್ರೋ ಯೋಜನೆಗೆ ಹೆಚ್ಚು ಅನುದಾನ ಕೊಡುತ್ತಿರುವುದೇ ನಾವು ಅಂತ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರು ಮೆಟ್ರೋ ಯೋಜನೆಯ ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರವೇ ಅತಿ ಹೆಚ್ಚಿನ ಆರ್ಥಿಕ ಕೊಡುಗೆ ನೀಡುತ್ತಿದೆ. ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ ಹಣಕಾಸು ಒದಗಿಸುವುದರ ಜತೆಗೆ, ಭೂಸ್ವಾಧೀನ, ಪುನರ್ವಸತಿ, ರಾಜ್ಯ ತೆರಿಗೆ, ನಿರ್ಮಾಣದ ಅವಧಿಯ ಬಡ್ಡಿ, ಸಾಲ ಮರುಪಾವತಿ ಹಾಗೂ ಮೆಟ್ರೋ ರೈಲುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ ಎಂದಿದ್ದಾರೆ.

ಮುಂದುವರಿದು ಮೆಟ್ರೋ ಯೋಜನೆಯ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ಕರ್ನಾಟಕ ಸರ್ಕಾರವೇ ಹೂಡಿಕೆ ಮಾಡಿದೆ. ಕಾಮಗಾರಿಗಳ ವಿಳಂಬದಿಂದ ಉಂಟಾಗುವ ಹೆಚ್ಚುವರಿ ವೆಚ್ಚದ ಹೊರೆಯಲ್ಲಿಯೂ ಕರ್ನಾಟಕದ ಪಾಲು ಗಣನೀಯವಾಗಿದೆ. ಇದರೊಂದಿಗೆ, ಹೊಸ ಮೆಟ್ರೋ ಮಾರ್ಗಗಳ ನಿರ್ಮಾಣ ಮತ್ತು ಜಾಲದ ವಿಸ್ತರಣೆಗೆ ರಾಜ್ಯ ಸರ್ಕಾರ ನಿರಂತರವಾಗಿ ಅನುದಾನ ಹಾಗೂ ಅಗತ್ಯ ನೆರವು ಒದಗಿಸುತ್ತಿದೆ.
ಒಟ್ಟಾರೆ ಮೆಟ್ರೋ ಯೋಜನೆಯ ವೆಚ್ಚ, ನಿರ್ಮಾಣದ ನಂತರದ ನಿರ್ವಹಣೆ ಮತ್ತು ಭವಿಷ್ಯದ ವಿಸ್ತರಣೆ ಎಲ್ಲದರಲ್ಲೂ ಕರ್ನಾಟಕ ಸರ್ಕಾರದ ಪಾಲುದಾರಿಕೆ ಪ್ರಮುಖವಾಗಿದೆ. ಬೆಂಗಳೂರಿನ ಬೆಳವಣಿಗೆಗೆ ಪೂರಕವಾದ ಸಮಗ್ರ, ಸುಸ್ಥಿರ ಮತ್ತು ಸುಗಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಟಿಕೆಟ್ ದರ ಕಡಿಮೆ ಮಾಡಲು ಆಗ್ರಹ
ಇನ್ನು ಬೆಂಗಳೂರು ನಗರದ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರವೇ ಹೆಚ್ಚು ಅನುದಾನ ನೀಡುತ್ತದೆ ಎಂದಾದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕೂಡಲೇ ಮೆಟ್ರೋ ಪ್ರಯಾಣ ದರವನ್ನು ಇಳಿಕೆ ಮಾಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಹಾಗಾದರೆ ಟಿಕೆಟ್ ದರ ಕಡಿಮೆ ಮಾಡಿ ..ಮುಂದೆ ಟಿಕೆಟ್ ದರ ಏರಿಕೆಯಾದರೆ ಅದರ ಹೊಣೆ ಕೂಡ ನೀವೇ ಹೊರಬೇಕು...ಈಗ ಟಿಕೆಟ್ ದರ ಕಡಿಮೆ ಮಾಡಿ ಎಂದೂ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ಕೇವಲ ಆರ್ಥಿಕವಾಗಿ ಕೊಡುಗೆ ನೀಡಲಿಲ್ಲ; ಸಾರ್ವಭೌಮ ಖಾತರಿಗಳ ಮೂಲಕ ಬಿಎಂಆರ್‌ಸಿಎಲ್‌ನ ಅಂತರರಾಷ್ಟ್ರೀಯ ಸಾಲಗಳನ್ನು ಸಹ ಬೆಂಬಲಿಸಿತು, ಕರ್ನಾಟಕಕ್ಕೆ ಉತ್ತಮ ನಿಯಮಗಳ ಮೇಲೆ ಹಣಕಾಸು ಪಡೆಯಲು ಸಹಾಯ ಮಾಡಿತು. ಭಾರತ ಸರ್ಕಾರವು ಬಿಎಂಆರ್‌ಸಿಎಲ್‌ನ ಸಾರ್ವಭೌಮ-ಖಾತರಿ ಸಾಲಗಳನ್ನು ಬೆಂಬಲಿಸದಿದ್ದರೆ ಏನಾಗುತ್ತಿತ್ತು ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯಗೆ ಟಾಂಗ್ ಕೊಟ್ಟ ಡಿ.ಕೆ ಶಿವಕುಮಾರ್
ಇನ್ನು ಸಂಸದ ತೇಜಸ್ವಿ ಸೂರ್ಯ ಅವರು ಈಚೆಗೆ ಬೆಂಗಳೂರು ನಗರದ ಮೆಟ್ರೋ ಯೋಜನೆಗೆ ಹೆಚ್ಚು ಕೇಂದ್ರ ಬಿಜೆಪಿ ಸರ್ಕಾರ ಅನುದಾನ ನೀಡಿದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗಳಿಗೆ ಇದೀಗ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರು ಮೆಟ್ರೋ ಯೋಜನೆಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ನಮ್ಮ ಮೆಟ್ರೋ ವಿಸ್ತರಣೆಗೆ ಕೇಂದ್ರ ಸರ್ಕಾರವು ₹41,557 ಕೋಟಿ ಬದ್ಧತೆ ತೋರಿದೆ ಎಂದಿದ್ದರು.
ಕರ್ನಾಟಕ ಸರ್ಕಾರದ ತಪ್ಪಾದ ಆದ್ಯತೆಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಹೊಸ ಮೆಟ್ರೋ ಮಾರ್ಗ ಪ್ರಸ್ತಾವನೆ ಇಲ್ಲದೆ, ಆರೆಂಜ್ ಲೈನ್ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬೆಂಗಳೂರು ನಮ್ಮ ಮೆಟ್ರೋದ ಗುಲಾಬಿ ಮಾರ್ಗವು ನವೆಂಬರ್ 13ರಂದು ಉದ್ಘಾಟನೆಯಾಗಲಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿವೆ.





Click it and Unblock the Notifications
