Bengaluru Metro: ಸಿಲಿಕಾನ್ ಸಿಟಿ ಮೆಟ್ರೋ ಯೋಜನೆ; ಬ್ಲೂಲೈನ್ ಬಗ್ಗೆ ಸಚಿವ ಕೃಷ್ಣಬೈರೇಗೌಡ ಗುಡ್‌ನ್ಯೂಸ್!
ಬೆಂಗಳೂರು: ಬೆಂಗಳೂರು ಮಹಾನಗರದ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರು ನಗರದ ಪಿಂಕ್‌ಲೈನ್ ಮೆಟ್ರೋದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸುವುದಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ.
ಬೆಂಗಳೂರು ನಗರಕ್ಕೆ ಮೆಟ್ರೋ ಯೋಜನೆಗಳಿಗೆ ಸಂಬಂಧಿಸಿದಂತೆ ನವೆಂಬರ್ 13ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಬೆಂಗಳೂರು ನಗರದ ಮೆಟ್ರೋ ಯೋಜನೆಯ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರು ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ದೀಪಾವಳಿ ಶುಭ ಸಂದರ್ಭದಲ್ಲಿ, ನಮ್ಮ ಸರ್ಕಾರವು ಬ್ಲೂಲೈನ್ ಮೆಟ್ರೋ ಯೋಜನೆಯ ಪ್ರಗತಿಯ ಕುರಿತ ಶುಭ ಸುದ್ದಿಯನ್ನು ಬೆಂಗಳೂರಿನ ನಾಗರಿಕರೊಂದಿಗೆ ಹಂಚಿಕೊಳ್ಳಲು ಸಂತೋಷಪಡುತ್ತಿದೆ. ಬೈಯ್ಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮತ್ತು ದೊಡ್ಡನೆಕ್ಕುಂದಿ ಕಡೆಗಿನ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ಪ್ರಗತಿಯಲ್ಲಿದ್ದು, ಬಿಎಂಆರ್‌ಸಿಎಲ್ ಮೇನ್‌ಲೈನ್ ಪರೀಕ್ಷೆಗೆ ಮತ್ತೊಂದು ಹೆಜ್ಜೆ ಹತ್ತಿರವಾಗಿದೆ.
ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಆದಷ್ಟು ಬೇಗ ಬ್ಲೂ ಲೈನ್ ಅನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲು, ಆ ಮೂಲಕ ಬೆಂಗಳೂರಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ನಗರ ಸಾರಿಗೆ ಪ್ರವಾಸವನ್ನು ಇನ್ನಷ್ಟು ಅನುಕೂಲಕರವಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಬೆಂಗಳೂರು ಮೆಟ್ರೋದ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಾಸ
ಇನ್ನು ನವೆಂಬರ್ 10ರ ಮಂಗಳವಾರ ಮಧ್ಯಾಹ್ನ 1:41ರ ಸುಮಾರಿಗೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂಭಾಗದ ಹಳಿಗೆ ವ್ಯಕ್ತಿಯೊಬ್ಬರು ಇಳಿದಿದ್ದಾರೆ. ಇದರಿಂದ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಗಿತ್ತು. ಈ ಸಮಸ್ಯೆಗೆ, ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಮೂರನೇ ಪ್ರಕರಣ
ಇನ್ನು ಬೆಂಗಳೂರು ನಗರದಲ್ಲಿ ಈ ಮಾದರಿಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬೆಂಗಳೂರಿಗರು ಹೇಳಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಇದು ಮೂರನೇ ಪ್ರಕರಣವಾಗಿದೆ ಎಂದು ಬೆಂಗಳೂರು ನಮ್ಮ ಮೆಟ್ರೋದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಈ ರೀತಿಯಾಗಲು ಕಾರಣವಾದರೂ ಏನು? ಹಳಿಗಳ ಮೇಲೆ ಇಳಿದರೆ ಇವರ ಜೀವಕ್ಕೆ ಆಪತ್ತು ಅನ್ನೋ ಕನಿಷ್ಠ ಜ್ಞಾನವೂ ಇಲ್ಲವೇ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ.
ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಯಲ್ಲಿ ಅಲ್ಪಾವಧಿ ವ್ಯತ್ಯಯ
ಇಂದು ಮಧ್ಯಾಹ್ನ ಸುಮಾರು 13:31 ಗಂಟೆಗೆ, ವಿಜಯನಗರ ಮೆಟ್ರೋ ವಿಲ್ದಾಣದಲ್ಲಿ ರೈಲೊಂದು ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಅಪ್ ಟ್ರ್ಯಾಕ್‌ಗೆ ಹಾರಿದ್ದಾರೆ. ತಕ್ಷಣವೇ ನಿಲ್ದಾಣದ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಸಂಬಂಧಪಟ್ಟ ವ್ಯಕ್ತಿಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುರಕ್ಷತೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನೇರಳೆ ಮಾರ್ಗದ ಕೆಲವೊಂದು ನಿರ್ದಿಷ್ಟ ವಿಭಾಗಗಳಲ್ಲಿ ರೈಲು ಸೇವೆಗಳನ್ನು ನಿರ್ವಹಿಸಲಾಯಿತು.
• ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ; ಹಾಗೂ ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವೆ. ನೇರಳ ಮಾರ್ಗದ ರೈಲು ಸಂಚಾರವನ್ನು 13:58 ಗಂಟೆಯಿಂದ ಯಥಾಸ್ಥಿತಿಗೆ ತರಲಾಯಿತು. ಹಸಿರು ಮಾರ್ಗ ಮತ್ತು ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳಿಗೆ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ಬಿಎಂಆರ್ ಸಿಎಲ್, ವಿಷಾದ ವ್ಯಕ್ತಪಡಿಸಿದೆ.




Click it and Unblock the Notifications
