Bengaluru Airport Jobs: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಉದ್ಯೋಗಾವಕಾಶ; ಬಿಐಎಎಲ್ ಪ್ರತಿಕ್ರಿಯೆ; ನೆಟ್ಟಿಗರ ಆಕ್ರೋಶ
ಬೆಂಗಳೂರು: ಬೆಂಗಳೂರಿನ ಐಟಿ - ಬಿಟಿ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ವಿಚಾರವು ಗಂಭೀರ ಚರ್ಚೆಗೆ ಕಾರಣವಾಗಿದೆ. ಇದರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಸಿಗುತ್ತಿಲ್ಲ ಎನ್ನುವ ವಿಚಾರವು ಸಹ ಗಂಭೀರ ಚರ್ಚೆಗೆ ಕಾರಣವಾಗಿದೆ.
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ನಿರ್ವಹಣೆ ಮಾಡುತ್ತಿರುವ ಬಿಐಎಎಲ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ಈ ವಿಷಯ ಪ್ರಸ್ತಾಪಿಸಿದ ಬೆನ್ನಲ್ಲೇ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಕರ್ನಾಟಕ ರಾಜ್ಯದ ಜೊತೆಗೆ ಗಾಢವಾದ ನಂಟನ್ನು ಹೊಂದಿದೆ. ತನ್ನ ಕಲೆ, ವಾಸ್ತುಶಿಲ್ಪ, ವಿನ್ಯಾಸ ಮತ್ತು ಪ್ರಯಾಣಿಕರ ಅನುಭವಗಳ ಮೂಲಕ ಈ ರಾಜ್ಯದ ಅನನ್ಯ ಗುರುತು, ಸಂಸ್ಕೃತಿ ಹಾಗೂ ಆಶೋತ್ತರಗಳನ್ನು ವಿಮಾನ ನಿಲ್ದಾಣದ ಉದ್ದಗಲಕ್ಕೂ ಪ್ರತಿಬಿಂಬಿಸಿದೆ.
2008ರಲ್ಲಿ ಕಾರ್ಯಾಚರಣೆ ಆರಂಭಿಸಿದಾಗಿನಿಂದಲೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (ಕೆಐಎಬಿ) ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಹಾಗೂ ವ್ಯಾಪಾರ-ವಹಿವಾಟುಗಳು, ಪಾಲುದಾರರು ಮತ್ತು ಸೇವಾ ಪೂರೈಕೆದಾರರ ವಿಶಾಲ ಪರಿಸರಕ್ಕೆ, ಸಮುದಾಯಕ್ಕೆ ಆಸರೆಯಾಗುವ ಮೂಲಕ ಕರ್ನಾಟಕದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.
ಕೆಐಎಬಿಯ ಬಹುಪಾಲು ಉದ್ಯೋಗಿಗಳು ಕನ್ನಡಿಗರೇ ಆಗಿದ್ದಾರೆ. ಕರ್ನಾಟಕ ಸರ್ಕಾರವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದಲ್ಲಿ (ಬಿಐಎಎಲ್) ಪ್ರಮುಖ ಪಾಲುದಾರಿಕೆ ಹೊಂದಿದ್ದು, ಇದು ವಿಮಾನ ನಿಲ್ದಾಣದ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಸರ್ಕಾರದ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತದೆ.
ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳ ಕುರಿತು ವ್ಯಕ್ತವಾಗಿರುವ ಕಳಕಳಿಗಳು ನಮ್ಮ ಗಮನಕ್ಕೆ ಬಂದಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು, ಸಂಸ್ಥೆಗಳು ಹಾಗೂ ಪಾಲುದಾರರೊಂದಿಗೆ ನಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಕಳಕಳಿಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ. ವಿಮಾನ ನಿಲ್ದಾಣವು ಮತ್ತಷ್ಟು ಬೆಳವಣಿಗೆ ಹಾಗೂ ವಿಸ್ತರಣೆ ಕಾಣುತ್ತಿದ್ದಂತೆ, ವಿವಿಧ ಕ್ಷೇತ್ರಗಳಲ್ಲಿ ಇನ್ನಷ್ಟು ಹೆಚ್ಚಿನ ಅವಕಾಶಗಳು ಕನ್ನಡಿಗರಿಗೆ ಸೃಷ್ಟಿಯಾಗಲಿವೆ.
Bengaluru Rain: ಸಿಲಿಕಾನ್ ಸಿಟಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಮಳೆ ಆರ್ಭಟ: ಐಎಂಡಿ
ಕರ್ನಾಟಕದ ಪ್ರಗತಿಗೆ ನಿರಂತರ ಕೊಡುಗೆ ನೀಡಲು ಹಾಗೂ ಕನ್ನಡಿಗರಿಗೆ ಅರ್ಥಪೂರ್ಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದೂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಕಣ್ಣೊರೆಸುವ ತಂತ್ರ. ನಾನು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದಾಗಲೆಲ್ಲಾ ಕೇರಳದ ಉದ್ಯೋಗಿಗಳನ್ನು ಮಾತ್ರ ನೋಡುತ್ತೇನೆ. ಅದು ಹೇಗೆ ಸಾಧ್ಯ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ.
Bengaluru Airport Jobs: ಕನ್ನಡಿಗರು ಹೇಳಿದ್ದೇನು
ಇನ್ನು ಬಿಐಎಎಲ್‌ನ ಈ ಮಾಹಿತಿಗೆ ಕನ್ನಡಿಗರಿಂದ ಗರಂ ಆಗಿದ್ದಾರೆ. ಕನ್ನಡಿರನ್ನು ಉನ್ನತ ಹುದ್ದೆಗಳಿಗೆ ತರುವಲ್ಲಿ ತಕ್ಷಣ ಕ್ರಮ ಕೈಗೊಳ್ಳಿ, ಸಿಇಒ, ಸಿಎಚ್‌ಆರ್‌ಒಗೆ ಕಣ್ಣೊರೆಸುವ ಹೇಳಿಕೆಗಳ ಅಗತ್ಯವಿಲ್ಲ ಎಂದಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣ ಮತ್ತು ಟೆಕ್ ಪಾರ್ಕ್‌ಗಳಂತಹ ಯೋಜನೆಗಳಿಗಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನ್ನಡಿರು ಭೂಮಿಯನ್ನು ಕಳೆದುಕೊಳ್ಳುವಾಗಲೆಲ್ಲಾ, ನೆರೆಯ ರಾಜ್ಯಗಳಿಂದ ರಣಹದ್ದುಗಳು ಬಂದು ಒಂದು ಗ್ಯಾಂಗ್ ಮಾಡಿ ಅರ್ಹ ಕನ್ನಡಿಗರನ್ನು ಕಡೆಗಣಿಸಿ, ಅವರಿಗೆ ಬೇಕಾದ ಉದ್ಯೋಗಗಳು ಮತ್ತು ಸ್ಥಳಗಳನ್ನು ವಶಪಡಿಸಿಕೊಳ್ಳುತ್ತವೆ ಎಂದೂ ಕನ್ನಡಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.



Click it and Unblock the Notifications
