ಆಂಧ್ರ ಪ್ರದೇಶದಲ್ಲಿ ಮಳೆಗೆ 35 ಬಲಿ, ನೆಲ್ಲೂರಿನ 30 ಗ್ರಾಮಗಳು ಜಲಾವೃತ
ಅಮರಾವತಿ, ನವೆಂಬರ್ 22: ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಯಲಸೀಮಾ ಹಾಗೂ ನೆಲ್ಲೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಚಿತ್ತೂರು ಜಿಲ್ಲೆಯ ಪುರಾತನವಾದ ರಾಯಲಚೆರುವಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಕಡಪಾದಲ್ಲಿ ಇಬ್ಬರು ಸಹೋದರರು ಮತ್ತು ನೆಲ್ಲೂರಿನಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬರು ಜಲಸಮಾಧಿ ಆಗಿದ್ದಾರೆ. ಚೆಯ್ಯೆರು ಪ್ರವಾಹದಲ್ಲಿ ಇನ್ನೂ ನಾಲ್ಕು ಮೃತದೇಹಗಳು ಪತ್ತೆಯಾಗಿರುವ ಹಿನ್ನೆಲೆ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು, ಈವರೆಗೂ 44,275 ಮಂದಿ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳಿಸಲಾಗಿದೆ.
ಪೆನ್ನಾ ನದಿಯ ಪ್ರವಾಹದಿಂದ ಚೆನ್ನೈ ಮತ್ತು ದಕ್ಷಿಣ ಭಾಗಕ್ಕೆ ರಸ್ತೆ ಹಾಗೂ ರೈಲು ಸಂಪರ್ಕ ಕಡಿತಗೊಂಡಿದ್ದು, ನೆಲ್ಲೂರು ಜಿಲ್ಲೆಯ ಹೆದ್ದಾರಿಗಳು ಮತ್ತು ರೈಲು ಹಳಿಗಳಿಗೆ ತೀವ್ರ ಹಾನಿಯಾಗಿದೆ. ವಿಜಯವಾಡ-ಚೆನ್ನೈ ಗ್ರ್ಯಾಂಡ್ ಟ್ರಂಕ್ ವಿಭಾಗದ ರೈಲು ಮಾರ್ಗ ಮತ್ತು ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ NH-16 ದಕ್ಷಿಣ ಮತ್ತು ಪೂರ್ವವನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಾಗಿವೆ.
ಪೆನ್ನಾ ಪ್ರವಾಹವು ರೈಲು ಹಳಿಗಳ ಮೇಲೆ ಉಕ್ಕಿ ಹರಿಯುತ್ತಿರುವುದರಿಂದ ನೆಲ್ಲೂರು ಮತ್ತು ಪಡುಗುಪಾಡು ನಿಲ್ದಾಣಗಳ ನಡುವಿನ ಹಳಿಗೆ ಹಾನಿಯಾಗಿದೆ. ವಿಜಯವಾಡ ವಿಭಾಗದಲ್ಲಿ ಮತ್ತು ಗುಂತಕಲ್ ವಿಭಾಗದ ರಾಜಂಪೇಟೆ-ನಂದಲೂರು ವಿಭಾಗದಲ್ಲಿ ಹಳಿಗಳಿಗೆ ಹಾನಿಯಾದ ಕಾರಣ ದಕ್ಷಿಣ ಮಧ್ಯ ರೈಲ್ವೆಯು ದಕ್ಷಿಣದಿಂದ ಪಶ್ಚಿಮ ಭಾರತಕ್ಕೆ ಸಂಪರ್ಕ ಕಲ್ಪಿಸುವ ಹಲವಾರು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಕ್ಕಿಹಾಕಿಕೊಂಡಿದ್ದು, ಇತರೆ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ನೆಲ್ಲೂರು ಜಿಲ್ಲೆಯಲ್ಲಿ, ಆತ್ಮಕೂರು ಮತ್ತು ನೆಲ್ಲೂರು ಕಂದಾಯ ವಿಭಾಗದ ಕೆಲವು ಗ್ರಾಮಗಳು ಸೇರಿದಂತೆ ನೆಲ್ಲೂರು ನಗರ ಮತ್ತು ಉಪ ನಗರಗಳಲ್ಲಿನ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ನೆಲ್ಲೂರು ಜಿಲ್ಲೆಯಲ್ಲಿ ಮನೆ ಮುಳುಗಡೆ
ನೆಲ್ಲೂರು ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಹೊರ ಬಿಟ್ಟಿದ್ದರಿಂದ ಸಾವಿರಾರು ಮನೆಗಳು ಜಲಾವೃತಗೊಂಡಿವೆ. ಆದರೆ, ಸೋಮಶಿಲಾ ಮೇಲ್ದಂಡೆ ಯೋಜನೆಯಿಂದ ನೀರಿನ ಒಳಹರಿವು ಕಡಿಮೆಯಾಗಿದೆ. ನೆಲ್ಲೂರು ನಗರದ ಸಮೀಪವಿರುವ ವೆಂಕಟೇಶ್ವರಪುರಂ ಪಾಲಿಟೆಕ್ನಿಕ್ ಕಾಲೇಜಿಗೆ ನೀರು ನುಗ್ಗಿತ್ತು. ಕಾಲೇಜಿನ ನೆಲಮಹಡಿ ಸಂಪೂರ್ಣ ಜಲಾವೃತಗೊಂಡಿದ್ದು, 16 ವರ್ಷದ ಬೋಡೆಗಡಿ ತೋಟದ ಗೋಪಿ ಜಲಸಮಾಧಿಯಾದರು. ಈ ವೇಳೆಯಲ್ಲಿ ಜಲಾವೃತಗೊಂಡ ಕಾಲೇಜಿನಲ್ಲಿ ಸಿಲುಕಿದ ಮತ್ತೊಬ್ಬ ವಿದ್ಯಾರ್ಥಿಯನ್ನು ರಕ್ಷಿಸಿದ್ದು, ಮೃತ ವಿದ್ಯಾರ್ಥಿ ಗೋಪಿ ಮೃತದೇಹವನ್ನು ಹೊರ ತೆಗೆಯಲಾಗಿದೆ.
4275 ಜನ ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರ:
ಅಧಿಕೃತ ಮಾಹಿತಿಯ ಪ್ರಕಾರ, ನೆಲ್ಲೂರು ಜಿಲ್ಲೆಯಲ್ಲಿ 4,275 ಜನರನ್ನು 92 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹಪೀಡಿತ ಪ್ರದೇಶಗಳ ಅಕ್ಕ-ಪಕ್ಕದಲ್ಲಿರುವ 30ಕ್ಕೂ ಹೆಚ್ಚು ಗ್ರಾಮಗಳು ಇನ್ನೂ ಜಲಾವೃತಗೊಂಡಿವೆ. ಈ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡು 30 ಗಂಟೆ ಕಳೆದರೂ ಇನ್ನೂ ಸರಬರಾಜು ಶುರುವಾಗಿಲ್ಲ. ನೆಲ್ಲೂರು ನಗರದ ಹೊರವಲಯದಲ್ಲಿರುವ ಪೆನ್ನಾ ಬಳಿ ವಾಸಿಸುವ ಜನರು ರಸ್ತೆಗಳು ಇನ್ನೂ ಹಾಳಾಗಿರುವುದರಿಂದ ಅಗತ್ಯ ವಸ್ತುಗಳನ್ನು ಪಡೆಯಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ತಿರುಪತಿಯ ಹೊರವಲಯದಲ್ಲಿರುವ ರಾಯಲಚೆರುವು ಮಂಡಲದ 500 ವರ್ಷಗಳಷ್ಟು ಹಳೆಯದಾದ ರಾಯಲಚೆರುವಿನ ಕೆಳಭಾಗದ ಹಳ್ಳಿಗಳಲ್ಲಿ ಚಿತ್ತೂರು ಜಿಲ್ಲಾಡಳಿತವು ಅಲರ್ಟ್ ಘೋಷಣೆ ಮಾಡಿದೆ.
ಆಂಧ್ರ ಪ್ರದೇಶ ಮಳೆ ಸೃಷ್ಟಿಸಿದ ಅವಾಂತರಗಳ ಪ್ರಮುಖಾಂಶ:
* ಕಡಪದಲ್ಲಿ ಕುಸಿದ ಕಟ್ಟಡದಿಂದ ಮಹಿಳೆ ಮತ್ತು ಆಕೆಯ 2 ವರ್ಷದ ಮಗಳನ್ನು ರಕ್ಷಿಸಲಾಗಿದೆ
* ನೆಲ್ಲೂರು ಜಿಲ್ಲೆಯಲ್ಲಿ 44,275 ಮಳೆ ಪೀಡಿತ ಜನರನ್ನು 92 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
* ಪೆನ್ನಾ ನದಿಗೆ ಭಾರೀ ಒಳಹರಿವಿನಿಂದ ಪಕ್ಕದ 30 ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿವೆ
* ಕೋಲ್ಕತ್ತಾ ಮತ್ತು ಚೆನ್ನೈ ನಡುವೆ ಸುಮಾರು 200 ಮೀಟರ್ NH-16 ಕೋವೂರ್ ಬಳಿ ರಸ್ತೆಗೆ ಹಾನಿಯಾಗಿದೆ
* ಚೆನ್ನೈ-ವಿಜಯವಾಡ ವಿಭಾಗದಲ್ಲಿ ನೆಲ್ಲೂರು ಮತ್ತು ಪಡುಗುಪಾಡು ನಿಲ್ದಾಣಗಳ ನಡುವಿನ ರೈಲ್ವೆ ಹಳಿಯ ಹೆಚ್ಚಿನ ಭಾಗವು ಕೆಟ್ಟದಾಗಿ ಹಾನಿಗೊಂಡಿದೆ.
* ಟ್ರ್ಯಾಕ್ ಹಾನಿಯಿಂದಾಗಿ ಎಸ್‌ಸಿಆರ್ ವಿಜಯವಾಡ-ಚೆನ್ನೈ ಮಾರ್ಗದಲ್ಲಿ 17 ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ
* ಟಿಟಿಡಿ ಎರಡು ತಿರುಮಲ ಘಾಟ್ ರಸ್ತೆಗಳಲ್ಲಿ ಬಂಡೆಗಳನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರವನ್ನು ಪುನಃಸ್ಥಾಪಿಸಿತು.