ಹಿರಿಯ ಕಾಂಗ್ರೆಸ್ಸಿಗ ಬಿ ಶಂಕರಾನಂದ ನಿಧನ

ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶಂಕರಾನಂದ, ಮಾಜಿ ಪ್ರಧಾನಮಂತ್ರಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿ ವಿ ನರಸಿಂಹರಾವ್ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದರು. ಜೊತೆಗೆ ಗಾಂಧಿ ಕುಟುಂಬದ ಕಟ್ಟಾ ಅನುಯಾಯಿಯಾಗಿದ್ದ ಅವರು, ಇಂದಿರಾಗಾಂಧಿ ಅಚ್ಚುಮೆಚ್ಚಿನವರಾಗಿದ್ದರು. ಸತತ ಏಳು ಬಾರಿ ಚಿಕ್ಕೋಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಂಕರಾನಂದ ಎಂಟನೇ ಬಾರಿಗೆ ಜೆಡಿಎಸ್ ನ ರತ್ನಮಾಲ ಸವಣೂರ ವಿರುದ್ಧ ಸೋಲುವ ಮೂಲಕ ರಾಜಕೀಯ ಹಿನ್ನೆಡೆ ಅನುಭವಿಸಿದರು. ಅಲ್ಲಿಂದ ಅವರು ಬಹುತೇಕವಾಗಿ ರಾಜಕೀಯವಾಗಿ ಮೂಲೆಗುಂಪಾಗಬೇಕಾಯಿತು.
ದೇಶ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದ್ದ ಬೊಫೋರ್ಸ್ ಫಿರಂಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಚಿಸಲಾಗಿದ್ದ ಸಂಸದೀಯ ಸಮಿತಿಗೆಮುಖ್ಯಸ್ಥರಾಗಿ ಶಂಕರಾನಂದ ಕಾರ್ಯನಿರ್ವಹಿಸಿದ್ದು ಅವರು ರಾಜಕೀಯ ಜೀವನದ ಉತ್ತುಂಗದ ದಿನಗಳು. ಶಂಕರಾನಂದ ಅವರ ಸ್ವಗ್ರಾಮ ಕಣಗಲಿಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications