Gba Property: ಬೆಂಗಳೂರಿನ 50 ಆಸ್ತಿದಾರರಿಗೆ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ
ಬೆಂಗಳೂರು: ಬೆಂಗಳೂರಿನಲ್ಲಿ 50 ಆಸ್ತಿದಾರರು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ದಕ್ಷಿಣ ನಗರ ಪಾಲಿಕೆಯು ಕೊನೆಯ ಅವಕಾಶ ನೀಡಿದೆ. ಬೆಂಗಳೂರಿನ ದಕ್ಷಿಣ ವಲಯದ ಜಯನಗರ ವಲಯದಲ್ಲಿ ನಾಳೆ ಆಸ್ತಿ ತೆರಿಗೆ ಪಾವತಿಸದ 50 ಆಸ್ತಿಗಳ ಹರಾಜಿ / ಮಾರಾಟ ಮಾಡುವುದಾಗಿ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಸರ್ಕಾರದ ಆದೇಶದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ ಪುನರ್ ರಚಿಸಿ, ಸದರಿ ಪ್ರಾಧಿಕಾರದ ಅಡಿಯಲ್ಲಿ ಐದು ಪ್ರತ್ಯೇಕ ಬೆಂಗಳೂರು ನಗರ ಪಾಲಿಕೆಗಳನ್ನಾಗಿ ರಚಿಸಲಾಗಿದೆ. ಇದೀಗ ಐದು ಪಾಲಿಕೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆಸ್ತಿ ತೆರಿಗೆ ಸಂಗ್ರಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಿವೆ.

ಇನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳಿಂದ ಸ್ವೀಕರಿಸಲಾಗುವ ಆಸ್ತಿತೆರಿಗೆಯನ್ನು ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಥವಾ ನಿರ್ವಹಿಸಲು ಉಪಯೋಗಿಸಲಾಗುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳು ಪ್ರತಿಯೊಂದು ಆರ್ಥಿಕ ಸಾಲಿನಲ್ಲಿ ಆಸ್ತಿತೆರಿಗೆ ಪಾವತಿ ಮಾಡಬೇಕಾಗಿರುತ್ತದೆ. ಆಸ್ತಿತೆರಿಗೆ ಪಾವತಿಸದ ಪ್ರಕರಣಗಳಲ್ಲಿ ಆಸ್ತಿತೆರಿಗೆ ಕಾರ್ಯವಿಧಾನವನ್ನು ಆಸ್ತಿತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024 ರ ಅಡಿಯಲ್ಲಿ ಅಧಿಸೂಚಿಸಲಾಗಿರುತ್ತದೆ.
ಈ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿತೆರಿಗೆ ಸುಸ್ತಿದಾರರಿಗೆ ಕಾರಣಕೇಳಿ ಪತ್ರ, ಆಸ್ತಿತೆರಿಗೆ ಬೇಡಿಕೆ ಪತ್ರ ಜಾರಿ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಲಾದ ನಂತರದಲ್ಲೂ ಬೇಬಾಕಿ ಉಳಿಸಿಕೊಂಡ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ತಮ್ಮ ಸ್ವತ್ತಿನ ಆಸ್ತಿತೆರಿಗೆಯನ್ನು ಪಾವತಿಸಲು ತಿಳಿಸಲಾಗಿತ್ತು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರು ತಿಳಿಸಿದ್ದಾರೆ.
ಮುಂದುವರಿದು ಸಾಕಷ್ಟು ಅವಕಾಶಗಳನ್ನು ನೀಡಿದ ನಂತರ ಗುರುತಿಸಲಾಗಿರುವ ಆಸ್ತಿತೆರಿಗೆಯನ್ನು ಪಾವತಿಸದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಲಯ ವ್ಯಾಪ್ತಿಯಲ್ಲಿನ ಒಟ್ಟು 50 ಸ್ವತ್ತುಗಳನ್ನು ದಿನಾಂಕ: 21.02.2026 ರಂದು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಒಟ್ಟಾರೆ 50 ಬೇಬಾಕಿ ಆಸ್ತಿದಾರರ ಆಸ್ತಿಗಳನ್ನು ದಿನಾಂಕ: 27.02.2026 ರಂದು ಕರೆಯಲಾಗಿದ್ದು, ಇದರಲ್ಲಿ 6 ಬೇ-ಬಾಕಿದಾರರು (ಸುದೀರ್ಘ ಅವಧಿಯಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು) ಆಸ್ತಿತೆರಿಗೆಯನ್ನು ಪಾವತಿಸಿರುತ್ತಾರೆ. ಮುಂದುವರಿದಂತೆ ಇನ್ನೂ 50 ಅತೀ ಹೆಚ್ಚು ಬೇಬಾಕಿ ಉಳಿಸಿಕೊಂಡಿರುವ ಹೆಚ್ಚುವರಿ ಬಾಕಿದಾರರ ಆಸ್ತಿಗಳನ್ನು ಜಿ.ಬಿ.ಎ ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ತೀರ್ಮಾನಿಸಲಾಗಿರುತ್ತದೆ.
ದಿನಾಂಕ: 13-03-2026 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ, 2ನೇ ಬ್ಲಾಕ್ ಜಯನಗರ, ಬೆಂಗಳೂರು 2ನೇ ಮಹಡಿಯ ಸಂಭಾಗಣದಲ್ಲಿ ವಲಯ ಜಂಟಿ ಆಯುಕ್ತರು (ಜಯನಗರ ವಲಯ-1) ರವರ ಅಧ್ಯಕ್ಷತೆಯಲ್ಲಿ 50 ಆಸ್ತಿತೆರಿಗೆ ಸುಸ್ತಿದಾರರೆಂದು ಗುರುತಿಸಲಾಗಿರುವ ಸ್ವತ್ತುಗಳಿಂದ ಹರಾಜಿನ ಮೂಲಕ ಬೇಬಾಕಿ ಆಸ್ತಿತೆರಿಗೆ ವಸೂಲಾತಿ ಮಾಡಲಾಗುವುದು. ಮತ್ತು ಅಂತಹ ಸ್ವತ್ತುಗಳ ಮಾಹಿತಿಯನ್ನು ಅದೇ ಕಟ್ಟಡದಲ್ಲಿನ ವಲಯ ಜಂಟಿ ಆಯುಕ್ತರು (ಜಯನಗರ ವಲಯ-1) ಕಚೇಯ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ.
ಹರಾಜು ಪ್ರಕ್ರಿಯೆಯ ಮುನ್ನ ಪಟ್ಟಿಯಲ್ಲಿನ ಸ್ವತ್ತಿಗೆ ಸಂಪೂರ್ಣ ಆಸ್ತಿತೆರಿಗೆ ಪಾವತಿಸಿದಲ್ಲಿ ಅಂತಹ ಆಸ್ತಿಗಳನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಡಲಾಗುವುದು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ನಡೆದ ಹರಾಜು ಪ್ರಕ್ರಿಯೆಯ ವಿವರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇನ್ನಷ್ಟೇ ಹಂಚಿಕೊಳ್ಳಬೇಕಿದೆ.
ಪರವಾನಿಗೆ ಪಡೆಯದ 4 ಉದ್ದಿಮೆಗಳಿಗೆ ಬೀಗ
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ ಅಂಜನಾಪುರ ವಾರ್ಡ್‌ಲ್ಲಿ ಹಲವು ಉದ್ದಿಮೆಗಳು ಪಾಲಿಕೆಯ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ನಡೆಯುತ್ತಿದ್ದು, ಇವುಗಳ ಸಮೀಕ್ಷೆ ನಡೆಸಲಾಗಿದ್ದು, ಈ ಉದ್ದಿಮೆಗಳಿಗೆ ಸೂಚನಾ ಪತ್ರ ಜಾರಿ ಮಾಡಲಾಗಿದೆ.
ಸೂಚನಾ ಪತ್ರದಲ್ಲಿ ಸ್ವಯಂ ಪ್ರೇರಿತರಾಗಿ ಉದ್ದಿಮೆಯನ್ನು ಮುಚ್ಚಲು ತಿಳಿಸಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳದ ಮತ್ತು ಸೂಚನಾ ಪತ್ರದಲ್ಲಿ ನೀಡಿದ್ದ ಗಡುವು ಮುಗಿದ ಕಾರಣ ಮಾರ್ಚ್ 13ರಂದು 4 ಉದ್ದಿಮೆಗಳನ್ನು ಪಾಲಿಕೆ ವತಿಯಿಂದ ಬೀಗ ಮುದ್ರೆ ಹಾಕಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್
1. ಉಷಾ ಎಂಟರ್‌ಪ್ರೈಸಸ್, ಪ್ಲೈ ವುಡ್ ಶಾಪ್
2. ವಾಡಿಯಾ ಟೆಂಬರ್ಸ್, ಟಿಂಬರ್ ಶಾಪ್
3. ಕ್ಯೂ.ಬಿ.ಎಸ್ ಇಂಟೆಕ್ಸ್, ಫೈಬರ್ ಶೀಟ್ಸ್ ಶಾಪ್
4. ಕರ್ನಾಟಕ ಪ್ರೈ ಅಂಡ್ ವುಡ್ ಸೆಂಟರ್, ಟಿಂಬರ್ ಅಂಡ್ ವುಡ್ ಶಾಪ್
ಇದೇ ದಿನಾಂಕ 11-03-2026ರಂದು ಗೊಟ್ಟಿಗೆರೆಯಲ್ಲಿ 7 ಉದ್ದಿಮೆಗಳನ್ನು ಮುಚ್ಚಲಾಗಿತ್ತು. ಇದೇ ರೀತಿ ಮುಂದಿನ ದಿನಗಳಲ್ಲಿ ಅನಧಿಕೃತ ಉದ್ದಿಮೆಗಳ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವತಿಯಿಂದ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications