ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣ ತಾಲೂಕಿನಾದ್ಯಂತ ಚಿಕೂನ್‌ಗುನ್ಯಾ ಹಾವಳಿ

By * ತಿಲಕ್‌ರಾಜ್ ಡಿ.ಟಿ.
|
Google Oneindia Kannada News

ಚನ್ನಪಟ್ಟಣ, ಜು. 27 : ಕಳೆದ ಒಂದೂವರೆ ತಿಂಗಳಿನಿಂದ ತಾಲೂಕಿನಾದ್ಯಂತ ಚಿಕೂನ್‌ಗುನ್ಯಾ ಖಾಯಿಲೆ ನಾಗರೀಕರನ್ನು ತಲ್ಲಣಗೊಳಿಸಿದ್ದು, ಖಾಯಿಲೆ ನಿಯಂತ್ರಣಕ್ಕೆ ಬಾರದೆ ಎಲ್ಲೆಡೆ ವ್ಯಾಪಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಚಿಕೂನ್ ಗುನ್ಯಾ ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದ್ದು, ಇದನ್ನು ನಿಯಂತ್ರಿಸುವಲ್ಲಿ ತಾಲೂಕು ಆಡಳಿತ, ಸಂಬಂಧಿಸಿದ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿವೆ.

ಹೆಚ್ಚಾಗಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲೇ ವೇಗವಾಗಿ ಹರಡುತ್ತಿರುವ ಈ ಖಾಯಿಲೆಯಿಂದಾಗಿ ಹಳ್ಳಿಯ ಜನ ತತ್ತರಿಸಿದ್ದಾರೆ. ಉತ್ತಮ ಮಳೆಯಾಗಿ ಬಿತ್ತನೆ ಮಾಡುವ ಸಂದರ್ಭದಲ್ಲಿ ಮೈಕೈ ಕೀಲುಗಳ ನೋವಿನಿಂದ ನರಳುವಂಥಹಾ ಸ್ಥಿತಿ ತಲೆದೋರಿದೆ. ಈಗ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗುವ ಸಮಯ. ಆದರೆ ಕರೆಯದೆ ಬಂದ ಈ ಅತಿಥಿಯಿಂದಾಗಿ ರೈತರು ಬೇಸಾಯ ಮರೆತು ಮೂಲೆಯಲ್ಲಿ ಕೂರುವಂತಾಗಿದೆ.

ಸಂಬಂಧಿಸಿದ ಇಲಾಖೆ ಈ ರೋಗವನ್ನು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ದಿನವಿಡೀ ತಾಲೂಕಿನ ಆಸ್ಪತ್ರೆಗಳು ರೋಗಿಗಳಿಂದಾಗಿ ಕಿಕ್ಕಿರಿಯುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯಿತಿಗಳೂ ಸಹ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದು, ಹಳ್ಳಿಗಳ ಚರಂಡಿ, ಗುಂಡಿ ಬಿದ್ದ ರಸ್ತೆ, ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಚಗೊಳಿಸದೆ ಕೇವಲ ರಾಜಕಾರಣದ ಪಡಸಾಲೆಗಳಾಗಿ ಪರಿವರ್ತನೆಯಾಗಿವೆ.

ಹಳ್ಳಿಗಾಡಿನ ಮುಗ್ದ ರೈತರು ಈ ಖಾಯಿಲೆಯ ಬಗ್ಗೆ ಅರಿವಿಲ್ಲದೆ ದಿನೇ ದಿನೇ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಖಾಯಿಲೆ ಬಗ್ಗೆ ಕನಿಷ್ಠ ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ಸಹ ಸಂಬಂಧಿಸಿದ ಇಲಾಖೆ ಹಮ್ಮಿಕೊಳ್ಳದಿರುವುದು ದುರಂತದ ಸಂಗತಿಯಾಗಿದೆ.

ತಾಲೂಕಿನ ಸುಮಾರು ಅರ್ಧಭಾಗವನ್ನು ಆವರಿಸಿರುವ ಈ ಖಾಯಿಲೆ ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಇದುವರೆಗೂ ಈ ಖಾಯಿಲೆಗೆ ಯಾರೂ ಬಲಿಯಾಗದಿರುವುದು ನಾಗರೀಕರಲ್ಲಿ ಸಮಾಧಾನ ಮೂಡಿಸಿದೆ. ಇನ್ನೂ ಕೆಲವೆಡೆ ಹಳ್ಳಿಯಲ್ಲಿನ ಪ್ರತಿಯೊಬ್ಬರೂ ಈ ಖಾಯಿಲೆಗೆ ತುತ್ತಾಗಿದ್ದು, ಕುಟುಂಬದ ನಿರ್ವಹಣೆ ಮಾಡುವವರೇ ಮೂಲೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಹೀಗಾಗಿ ಕೃಷಿ ಚಟುವಟಿಕೆ, ದಿನನಿತ್ಯದ ಕೆಲಸಗಳು ಸಾಗದೆ ಜನತೆ ಕಂಗಾಲಾಗಿದ್ದಾರೆ.

ಸಂಬಂಧಿಸಿದ ಇಲಾಖೆ ಕೇವಲ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸುತ್ತಾ ತನ್ನ ನಿಷ್ಠೆ ಮೆರೆದಿದ್ದರೆ, ಗ್ರಾಮಾಂತರ ವ್ಯಾಪ್ತಿಯಲ್ಲಿ ಈ ಬಗ್ಗೆ ಚಕಾರವೆತ್ತುವವರೇ ಇಲ್ಲದೆ, ಮುಗ್ದ ರೈತರು ಬಳಲಿ ಬೆಂಡಾಗುವಂತಾಗಿದೆ. ಮುಂದಾದರೂ ಸಂಬಂಧಿಸಿದ ಇಲಾಖೆ, ತಾಲೂಕು ಆಡಳಿತ ರಾಜಕಾರಣದಲ್ಲಿ ತೊಡಗುವುದನ್ನು ಬಿಟ್ಟು, ಗ್ರಾಮಾಂತರ ಪ್ರದೇಶದ ಕಡೆ ಗಮನಹರಿಸಿ ರೈತರನ್ನು ಈ ರೋಗದಿಂದ ಕಾಪಾಡುವರೇ ಕಾದುನೋಡಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X