ಮಕ್ಕಳ ಮೊಬೈಲ್ ಬಳಕೆ: ನಿಷೇಧಕ್ಕಿಂತ ಡಿಜಿಟಲ್ ಪೇರಂಟಿಂಗ್ ಅಗತ್ಯ ಎಂದು ತಜ್ಞರ ಸಲಹೆ
ಬೆಂಗಳೂರು: ಡಿಜಿಟಲ್ ಯುಗದಲ್ಲಿ ಮಕ್ಕಳ ಸುರಕ್ಷತೆ ಕುರಿತು ಚರ್ಚೆಗಳು ಹೆಚ್ಚುತ್ತಿರುವ ನಡುವೆಯೇ, ತಜ್ಞರು "ನಿಷೇಧಕ್ಕಿಂತ ಡಿಜಿಟಲ್ ಪೇರಂಟಿಂಗ್ ಅಗತ್ಯ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಸಂಪೂರ್ಣವಾಗಿ ಡಿಜಿಟಲ್ ಜಗತ್ತಿನಿಂದ ದೂರವಿಡುವುದು ಸಾಧ್ಯವಿಲ್ಲದಿರುವುದರಿಂದ, ಪೋಷಕರು ನಿಯಂತ್ರಣಕ್ಕಿಂತ ಮಾರ್ಗದರ್ಶನ, ಸಂವಾದ ಮತ್ತು ಸಮತೋಲನದ ಮೂಲಕ ಮಕ್ಕಳನ್ನು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿ ನಡೆಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.
ನಿಷೇಧ ಅಲ್ಲ ಬೇಕಾಗಿರುವುದು, ಡಿಜಿಟಲ್ ಪೇರಂಟಿಂಗ್ ಬೇಕು
ಹಿಂದಿನ ಪೀಳಿಗೆಯ ಪೋಷಕರು ಮಕ್ಕಳನ್ನು ರಸ್ತೆಯ ಅಪಾಯಗಳಿಂದ ರಕ್ಷಿಸುತ್ತಿದ್ದರು, ಇಂದಿನ ಪೋಷಕರು ಮಕ್ಕಳನ್ನು ಡಿಜಿಟಲ್ ಜಗತ್ತಿನ ಅಪಾಯಗಳಿಂದ ರಕ್ಷಿಸಬೇಕಾಗಿದೆ. ಇದನ್ನು ಮಾಡಲು ಕೇವಲ ನಿಷೇಧದಂತಹ ನಿಯಮಗಳು ಸಾಕಾಗುವುದಿಲ್ಲ. ಪೋಷಕರು ಒಂದು ಹೊಸ ಕಲೆ ಮತ್ತು ಕೌಶಲ್ಯ ಕಲಿಯಬೇಕು. ಅದು ಡಿಜಿಟಲ್ ಪೇರಂಟಿಂಗ್.

ಡಿಜಿಟಲ್ ಪೇರಂಟಿಂಗ್‌ನ ಕೆಲವು ಪ್ರಮುಖ ತತ್ವಗಳು:
1. ನಿಯಂತ್ರಣಕ್ಕಿಂತ ಸಂಬಂಧ
ಮಕ್ಕಳು ಭಯದಿಂದ ನಿಯಮ ಪಾಲಿಸುವುದಿಲ್ಲ. ಅವರು ವಿಶ್ವಾಸದಿಂದ ಮಾರ್ಗದರ್ಶನವನ್ನು ಸ್ವೀಕರಿಸುತ್ತಾರೆ.
2. ಸಂವಾದದ ಸಂಸ್ಕೃತಿ
ಮಕ್ಕಳು ಏನು ನೋಡುತ್ತಾರೆ, ಏನು ಕಲಿಯುತ್ತಾರೆ ಎಂಬುದನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.
3. ಮಾದರಿಯಾಗುವ ಪೋಷಕರು
ಪೋಷಕರು ನಿರಂತರವಾಗಿ ಫೋನ್ ಬಳಕೆ ಮಾಡುತ್ತಿದ್ದರೆ ಮಕ್ಕಳಿಗೆ ಸಮತೋಲನ ಕಲಿಸುವುದು ಕಷ್ಟ.
4. ಡಿಜಿಟಲ್ ಜಗತ್ತಿನ ಪರಿಚಯ
ಪೋಷಕರು ಸ್ವತಃ ಡಿಜಿಟಲ್ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು.
5. ಜೀವನದ ಸಮತೋಲನ
ಆಟ, ಓದು, ಪ್ರಕೃತಿ, ಸ್ನೇಹ - ಇವುಗಳು ಮಕ್ಕಳ ಮಾನಸಿಕ ಆರೋಗ್ಯಕ್ಕೆ ಅಗತ್ಯ. ಡಿಜಿಟಲ್ ಯುಗದಲ್ಲಿ ಪೋಷಕರ ಪಾತ್ರ ಕೇವಲ ನಿಯಂತ್ರಕನಲ್ಲ. ಅದು ಮಾರ್ಗದರ್ಶಕ, ಸಹಪಾಠಿ ಮತ್ತು ರಕ್ಷಕನದಾಗಬೇಕು. ಮಕ್ಕಳನ್ನು ಡಿಜಿಟಲ್ ಜಗತ್ತಿನಿಂದ ದೂರ ಇಡುವುದು ಸಾಧ್ಯವಿಲ್ಲ. ಆದರೆ ಅವರನ್ನು ಜಾಣ್ಮೆಯಿಂದ ನಡೆಸುವ ಪೋಷಕರು ಇದ್ದರೆ, ಅದೇ ಜಗತ್ತು ಅವರ ಬೆಳವಣಿಗೆಗೆ ಅವಕಾಶಗಳ ವಿಶ್ವವಾಗಬಹುದು.
ಕರ್ನಾಟಕ ಬಜೆಟ್ 2026-27ರಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ತಜ್ಞರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮೊಬೈಲ್ ವ್ಯಸನ ತಡೆಯುವ ಉದ್ದೇಶ ಒಳ್ಳೆಯದಾದರೂ, ಏಕಾಏಕಿ ನಿಷೇಧಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಕ್ಕಳಿಗೆ ಹಾಗೂ ಪೋಷಕರಿಗೆ ಅರಿವು ಮೂಡಿಸುವುದು, ಹಂತ ಹಂತವಾಗಿ ಬಳಕೆಯನ್ನು ನಿಯಂತ್ರಿಸುವುದು ಮತ್ತು ಶಾಲೆ-ಮನೆ ಎರಡೂ ಕಡೆ ಸಮರ್ಪಕ ಕ್ರಮ ಕೈಗೊಳ್ಳುವುದು ಮುಖ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications