ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion
ಅಮೆರಿಕ & ಇಸ್ರೇಲ್ ತಮ್ಮ ಮೇಲೆ ದಾಳಿ ಮಾಡುತ್ತಿವೆ ಎನ್ನುವ ಕಾರಣಕ್ಕೆ, ಇರಾನ್‌ನ ಸೇನೆಯಿಂದ ಅರಬ್ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ತೀವ್ರಗೊಂಡಿದೆ. ಅಮೆರಿಕ ಸೇನಾ ನೆಲೆ ಹೊಂದಿರುವ ಅರಬ್ ದೇಶಗಳನ್ನೇ ಟಾರ್ಗೆಟ್ ಮಾಡಿ ಈಗ ಇರಾನ್ ಸೇನೆ ಭೀಕರ ದಾಳಿ ಮಾಡುತ್ತಿದ್ದು, ಮಧ್ಯಪ್ರಾಚ್ಯ ತತ್ತರಿಸಿ ಹೋಗಿದೆ. ಪ್ರಮುಖವಾಗಿ ದುಬೈ, ಸೌದಿ ಅರೇಬಿಯಾ, ಕತಾರ್ ಹಾಗೂ ಒಮಾನ್ ದೇಶಗಳ ಬಂದರು ಸೇರಿದಂತೆ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ ಇರಾನ್ ಮಿಲಿಟರಿ.
ಈ ಮೂಲಕ ಅಮೆರಿಕ ಸೇನಾ ನೆಲೆಗಳನ್ನು ಧ್ವಂಸ ಮಾಡುವ ಪ್ರಯತ್ನ ಮಾಡುತ್ತಿದೆ ಇರಾನ್ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇಂತಹ ಸಮಯದಲ್ಲೇ ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಇರಾನ್ ಡ್ರೋನ್ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಶನಿವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುಗಿ ಹೋಗಿದ್ದು, ಭೀಕರ ಸ್ಫೋಟದ ಸದ್ದಿಗೆ ಇಡೀ ದುಬೈ ಜನರು ಬೆಚ್ಚಿಬಿದ್ದಿದ್ದಾರೆ. ಪ್ರಮುಖವಾಗಿ ಇರಾನ್ ಡ್ರೋನ್‌ಗಳ ಸಹಾಯದಿಂದ ನಡೆಸುತ್ತಿರುವ ದಾಳಿಯ ಪರಿಣಾಮ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ಇದು ಭಾರತ ಮೂಲದ ಸಾವಿರಾರು ಪ್ರಯಾಣಿಕರು ಸೇರಿ, ಜಗತ್ತಿನ ಮೂಲೆ ಮೂಲೆಯಿಂದ ಬಂದವರಿಗೆ ಭಯ ಹೆಚ್ಚುವಂತೆ ಮಾಡಿದೆ.

ಡ್ರೋನ್ ದಾಳಿಯಿಂದ ಭಾರಿ ಹಾನಿ?
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಡೀ ಪ್ರಪಂಚದಲ್ಲೇ ಅತ್ಯಂತ ಬ್ಯುಸಿಯಾಗಿ ಇರುವ 2ನೇ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಹೀಗಿದ್ದಾಗ ಇರಾನ್ ಸೇನೆಯಿಂದ ದಾಳಿ ನಡೆಯುತ್ತಿರುವ ಕಾರಣಕ್ಕೆ ವಿಮಾನಗಳ ಹಾರಾಟವನ್ನೇ ಬಂದ್ ಮಾಡಲಾಗಿದೆ. ಡ್ರೋನ್‌ಗಳು ದುಬೈ ವಾಯುಗಡಿಯ ಒಳಗೆ ಪ್ರವೇಶ ಮಾಡಿ, ದುಬೈ ವಿಮಾನ ನಿಲ್ದಾಣದ ಸಮೀಪಕ್ಕೆ ಇರಾನ್ ಡ್ರೋನ್‌ಗಳು ಬಂದ ತಕ್ಷಣ ದೊಡ್ಡ ಮಟ್ಟದಲ್ಲಿ ಎಚ್ಚರಿಕೆ ಸಂದೇಶ ಸಿಕ್ಕಿತ್ತು.
ಸೈರನ್ ಮೊಳಗಿದ ನಂತರ ತಕ್ಷಣವೇ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯಗೊಳಿಸಿ ಇರಾನ್ ಡ್ರೋನ್‌ಗಳನ್ನು ನಾಶ ಮಾಡುವ ಕೆಲಸ ಶುರುವಾಗಿತ್ತು. ಆ ಸಮಯಕ್ಕೆ ಆಗಲೇ ರನ್‌ವೇ ಮೇಲೆ ಇರಾನ್ ಡ್ರೋನ್ ಬಾಂಬ್ ದಾಳಿ ಮಾಡಿ ಆಗಿತ್ತು ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ಫುಲ್ ವೈರಲ್ ಆಗುತ್ತಿದ್ದು, ಹಾಗೇ ವಿಮಾನ ನಿಲ್ದಾಣದಲ್ಲಿ ಇದ್ದ ಪ್ರಯಾಣಿಕರು ಆತಂಕದಲ್ಲಿ ನಲುಗಿದ್ದಾರೆ. ದಾಳಿ ಆರಂಭವಾದ ತಕ್ಷಣವೇ ಭದ್ರತಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಅಲ್ಲದೆ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಮತ್ತೆ ಕೆಲವು ದಿನಗಳ ಕಾಲ ವಿಮಾನ ಹಾರಾಟವನ್ನು ದುಬೈ ನಿಲ್ಲಿಸುವ & ಬೇರೆ ಮಾರ್ಗ ಬಳಸುವ ಸಾಧ್ಯತೆ ದಟ್ಟವಾಗಿದೆ.
ಇರಾನ್ ಪರಿಸ್ಥಿತಿ ದಿಢೀರ್ ಅಯೋಮಯ
ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಸೇನೆಯ 50,000ಕ್ಕೂ ಹೆಚ್ಚು ಸೈನಿಕರು ಬಂದು ನಿಂತು ಅಲರ್ಟ್ ಆಗಿದ್ದಾರೆ. ಇರಾನ್ ಸಮೀಪ ಅಮೆರಿಕ ಸೇನೆ ಬೃಹತ್ ಯುದ್ಧ ನೌಕೆ ಹಾಗೂ ಕಠಿಣ ಸಂದರ್ಭ ಎದುರಿಸಿ ನಿಲ್ಲುವ ಯುದ್ಧ ವಿಮಾನಗಳನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದೆ. ಹೀಗಿದ್ದಾಗ ಪ್ರಸ್ತುತ ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಒಟ್ಟು 8 ವಾಯುನೆಲೆಗಳ ಬೆಂಬಲದಿಂದ ಅಮೆರಿಕ ಸೇನೆ ನೇರವಾಗಿ ಇರಾನ್ ಮೇಲೆ ಕಿಚ್ಚಿನಿಂದ ದಾಳಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು, ಇದರ ಪರಿಣಾಮ ಅರಬ್ ದೇಶಗಳ ಮೇಲೆ ಆಗುತ್ತಿದೆ. ನೋಡ ನೋಡುತ್ತಲೇ ಸಾವಿರಾರು ಜನ ಈಗ ಜೀವ ಕಳೆದುಕೊಂಡು, ಸಾವಿರಾರು ಕಟ್ಟಡಗಳು ಧೂಳ್ ಧೂಳ್ ಆಗಿವೆ. ಮತ್ತೊಂದು ಕಡೆ ಇರಾನ್ ದೇಶದ ವಿಮಾನ ನಿಲ್ದಾಣಗಳು ಕೂಡ ಇಸ್ರೇಲ್ ಹಾಗೂ ಅಮೆರಿಕ ದಾಳಿಗೆ ನಾಶವಾಗುತ್ತಿವೆ.












Click it and Unblock the Notifications