ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವ್ವಾ ...! ಎಂದರೆ

By ಜಯಪ್ಪ ಹೊನ್ನಾಳಿ (ರುದ್ರತನಯ)
|
Google Oneindia Kannada News

Avva Endare, a kannada poem by Jayappa Honnali
ಅವ್ವಾ....! ಎಂದರೆ ಅವಳಲ್ಲ ಬರಿ ತಾಯಿ
ಪ್ರೀತಿ ಹೃದಯಕ್ಕೆ ಅವಳೆ ಬಾಯಿ
ಅವಳೇ ಜೀವ ಜಗ ಜೀವದಾಯಿ !
ಅವಳೇ ಈ ಜಗದ ಮಾಯಿ ! ಮಾಯಿ !

ನಮ್ಮ ಹಡೆದಾಗೆಲ್ಲ ಹುಟ್ಟಿ ಬಂದೋಳು !
ನಮ್ಮ ನಗುವಲ್ಲಿ ಮರೆತೆಲ್ಲ ಗೋಳು !
ತಂದೆ ತೋರುತ ತನ್ನ ತನವ ಮರೆತೋಳು !
ಪ್ರೇಮದೊರತೆಯ ಒಳಗಿನ ಕಣ್ಣ ತೆರೆದೋಳು !

ತನ್ನೆದೆಯ ತನಿ ರಸದಿ ಒಲವ ಹರಿಸಿ
ಒದೆದ ಕಾಲಿಗು ಎತ್ತಿ ಮುತ್ತ ಕೊಟ್ಟೋಳು
ಬಾಳ ಬಾನಂಗಳದಿ ಬೆಳಗೊ ಚಂದ್ರನ ತೋರಿ
ಇರುಳೂ ಮಗು ನಗುವೆಂದು ತುತ್ತನಿಟ್ಟೋಳು

ನಾನತ್ವದ ಅಪ್ಪನ್ನ ಬೆಪ್ಪನ್ನ ತಪ್ಪನ್ನ
ಒಪ್ಪಿ ಕರಗುತ ಕಷ್ಟಕೆ ಇಷ್ಟವಾದೋಳು
ತೂಕದಲಿ ಭೂಮಿ, ವಿಸ್ತಾರದಿ ಬಾನು !
ಆಳದಲಿ ಸಾಗರವ ಮೀರಿ ನಿಂದೋಳು !

ಹುಲಿಯಪ್ಪನಬ್ಬರಕೆ ಹುಲ್ಲೆಯಾಗುತಲಿ
ಮೆಲು ಮಾತಿಗೆ ಮಾತಿರದೆ ಮೊಲ್ಲೆಯಾದೋಳು
ನಕ್ಷತ್ರದ ಕಣ್ಣಿನಲಿ ನಮ್ಮ ಕಾಣುತಲಿ
ಹೆರಳಾಡಿ ಹರಸಿ ಎದೆಗಪ್ಪಿದೋಳು

ಬೆವರಿಟ್ಟೋಳು ಅವಳು ಬೆಳಕಿಟ್ಟೋಳು
ದೂರವಿಟ್ಟರು ದೂರದೆ ನಗು ತೊಟ್ಟೋಳು
ದೈವಕ್ಕೆ ಬದಲಾಗಿ ನೀಗಿದೋಳು

ದೇವರಿಗೂ ತಾಯಾಗಿ ತೂಗಿದೋಳು !

English summary
Jayappa Honnali alias Rudrathanaya writes a poem Avva...! Endare
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X