• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿ ಲಂಕೇಶ್ ಎಂಬ ಹೆಸರೇ ವಿಸ್ಮಯ

By * ಮಂಜುನಾಥ ಅಜ್ಜಂಪುರ, ಬೆಂಗಳೂರು
|
Google Oneindia Kannada News

ಹದಿನೈದು ವರ್ಷಗಳ ದೀರ್ಘ ಕಾಲದನಂತರ ಗೆಳೆಯ ಶೂದ್ರ ಶ್ರೀನಿವಾಸ್ ಸಿಕ್ಕಿದ್ದ. ವೈಚಾರಿಕ ಮತಭೇದಗಳೇ ಇಷ್ಟೊಂದು ವರ್ಷಗಳ ಅಂತರಕ್ಕೆ ಕಾರಣವಾದವೋ ಏನೋ! ಹಿಂದೂ ಸಂಘಟನೆಗಳ ಸಂಘರ್ಷ, ಸಂಘಟನೆ ಹೋರಾಟಗಳ ವಿರುದ್ಧ ಅನೇಕ ದಶಕಗಳಿಂದ ಸೆಕ್ಯೂಲರ್ ಪ್ರತಿಭಟನೆ ಮಾಡುತ್ತಿರುವ ಶೂದ್ರ ಶ್ರೀನಿವಾಸ್ ವಿಚಾರಗಳನ್ನು ನಾನು ಒಪ್ಪದೇ ಹೋದರೂ ಕನ್ನಡನಾಡಿನ ಅನೇಕ ಸಾಮುದಾಯಿಕ ಸಾಹಿತ್ಯಕ ತಲ್ಲಣಗಳನ್ನು ಸಂಘಟಿಸಿದ ಮತ್ತು ದಾಖಲಿಸಿದ ಅಪೂರ್ವ ಸಾಧನೆ ಅವನದು.

ಮೇಷ್ಟ್ರು ಇದ್ದಿದ್ದರೆ ಎಪ್ಪತ್ತೈದು ವರ್ಷ ಈ ಮಾರ್ಚ್ 8ಕ್ಕೆ ತುಂಬುತ್ತಿತ್ತು. ನೀನು ಏನಾದರೂ ಗಟ್ಟಿಯಾದ ಕಾರ್ಯಕ್ರಮ ಮಾಡ್ತೀಯಾ ಅಂತ ಅಂದ್ಕೊಂಡಿದ್ದೆ, ಎಂದೆ. ತುಂಬ ಬೇರೆಬೇರೆ ಕೆಲಸಗಳನ್ನು ಹಚ್ಚಿಕೊಂಡಂತಿತ್ತು. ಲಂಕೇಶರ ಶಿಷ್ಯನಾಗಿ, ಸಹವರ್ತಿಯಾಗಿ ಶೂದ್ರನ ಬಳಿ ಅಪರೂಪದ ಸಾಮಗ್ರಿಯಿದೆ. ಅಂತಹುದು ಪುಸ್ತಕ ರೂಪದಲ್ಲಿ ಬಂದರೆ ಚೆನ್ನಾಗಿರುತ್ತದೆ.

ಎಂಬತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರು ರಾಜಕೀಯದವರ ನಡುವೆ ಮಾತ್ರವಲ್ಲ ಮಾಧ್ಯಮಗಳಿಗೂ ಸೂಪರ್ ಸ್ಟಾರ್ ಆಗಿದ್ದರು. ದೂರವಾಣಿ ಕದ್ದಾಲಿಕೆಯ ಹಗರಣದಲ್ಲಿ ಹೆಗಡೆ ಸಿಕ್ಕಿಹಾಕಿಕೊಂಡಾಗ ಲಂಕೇಶರ ಪ್ರತಿಕ್ರಿಯೆ ಇಂದಿಗೂ ತುಂಬ ವಿಶೇಷವೆನಿಸುತ್ತದೆ. ಕದ್ದಾಲಿಕೆಯು ವೈಯಕ್ತಿಕ ಸ್ವಾತಂತ್ರ್ಯಕ್ಕೆ ನೀಡಿದ ಪೆಟ್ಟು ಎಂದು ಅವರು ತೀವ್ರವಾಗಿ ಟೀಕಿಸಿದ್ದರು. ವಿರೋಧಿ ರಾಜಕಾರಣಿಗಳ ದೂರವಾಣಿ ಕದ್ದಾಲಿಸುವ ಕುತಂತ್ರ, ದುರ್ಮಾರ್ಗಗಳ ಬಗೆಗೇ ಮಾತ್ರವೇ ಜನರ ವಿಚಾರವಂತರ ಗಮನ ಕೇಂದ್ರೀಕೃತವಾಗಿದ್ದ ಆ ಕಾಲದಲ್ಲಿ ಲಂಕೇಶರು ವೈಯಕ್ತಿಕ ಸ್ವಾತಂತ್ರ್ಯದ ಮಹತ್ವದ ಬಗೆಗೆ ಮಾತನಾಡಿದ್ದರು. ಸಾರ್ವಜನಿಕ ಬದುಕಿನಲ್ಲಿ ಪರಿಶುದ್ಧ ವೈಯಕ್ತಿಕ ಸ್ವಾತಂತ್ರ್ಯದ ಪರವಾಗಿ ದನಿ ಎತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಭುತ್ವವು ಹೀಗೆ ವರ್ತಿಸುವುದು ಸರ್ವಾಧಿಕಾರಿ ವ್ಯವಸ್ಥೆಯ ಲಕ್ಷಣವಾಗುತ್ತದೆ ಎಂದಿದ್ದರು.

ಅವರಿದ್ದುದೇ ಹಾಗೆ. ಕೆಲವೊಮ್ಮೆ ಸಲಗದಂತೆ ವರ್ತಿಸಿದರೆ ಕೆಲವೊಮ್ಮೆ ತೋಳದಂತೆ ದಾಳಿ ಮಾಡುತ್ತಿದ್ದರು. ಅದೇನೇ ಇರಲಿ, ಕವಿಯಾಗಿ, ನಾಟಕಕಾರರಾಗಿ, ಕತೆಗಾರರಾಗಿ ಲಂಕೇಶ್ ಕೆಲವು ಅಚ್ಚಳಿಯದ ಹೆಜ್ಜೆಗುರುತುಗಳನ್ನು ಉಳಿಸಿಹೋಗಿದ್ದಾರೆ. 1963ರಲ್ಲಿ ಅವರು ಬರೆದ ಅವ್ವ ಕವಿತೆಯಲ್ಲಿ:

ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿ ಎಮ್ಮೆಗೆ?

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು, ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ
ಬೈದು, ಗೊಣಗಿ, ಗುದ್ದಾಡಿದಳು;

ಎಂಬುವಲ್ಲಿ ಬಯಲುಸೀಮೆಯ ಸೆರಗಿನ ಓರ್ವ ಮುಗ್ಧ ಹಳ್ಳಿಯ ಹೆಂಗಸಿನ ಅಪೂರ್ವ ಚಿತ್ರಣವಿತ್ತು. ಮತ್ತೆ 1989ರಲ್ಲಿ ಅವರೇ ಬರೆದ ಅವ್ವ 2 ಇನ್ನೊಂದೇ ಬಗೆಯಲ್ಲಿ ಅವರ ತಾಯಿಯ ನೆನಪುಗಳನ್ನು ಕಾವ್ಯವಾಗಿಸಿತ್ತು:

ಈ ಅವ್ವನ ಹೂತು ಈಕೆಯ ಮೇಲೆ ಕವನ ಕಟ್ಟಿ
ಇವತ್ತಿಗೆ ಇಪ್ಪತ್ತೈದು ವರ್ಷವಾಯಿತು.
ಕವನಕ್ಕೆ ಪಡೆದ ಸಂಭಾವನೆ ಕೂಡ ಖರ್ಚಾಗಿದೆ.
ನಭದಲ್ಲಿ ಅಸಂಖ್ಯ ಹಕ್ಕಿಗಳು ಹಾರಿವೆ.
ಕನಿಷ್ಠ ನಾಲ್ಕು ಕ್ಷಾಮಗಳು ಬಂದುಹೋಗಿವೆ.
ಊರು ಅರಣ್ಯ ಕಳೆದುಕೊಂಡು ಬೆತ್ತಲೆ ನಿಂತಿದೆ.
ಈ ಅವ್ವ ನನ್ನಲ್ಲಿ ಎಷ್ಟು ಉಳಿದಿದ್ದಾಳೆ
ಎಂದು ನೋಡಿಕೊಳ್ಳುತ್ತೇನೆ ....

ಲಂಕೇಶರ ನಾಟಕಗಳು : ಲಂಕೇಶರ ನಾಟಕಗಳು ಅರುವತ್ತರ ಎಪ್ಪತ್ತರ ದಶಕದಲ್ಲಿ ಉಂಟುಮಾಡಿದ್ದ ಸಂಚಲನ ಎಂತಹುದೆಂಬುದನ್ನು ನೋಡಿದ್ದ ನಮ್ಮಂತಹವರು ಮರೆಯಲು ಸಾಧ್ಯವೇ ಇಲ್ಲ. 1970ರಲ್ಲಿ ದಾವಣಗೆರೆಯಲ್ಲಿ ಬಿ.ಜಿ.ನಾಗರಾಜ್ ಮತ್ತು ಗೆಳೆಯರು ಅಭಿನಯಿಸಿದ ಲಂಕೇಶರ ತೆರೆಗಳು ನಮ್ಮಲ್ಲಿ ರೋಮಾಂಚನವನ್ನೇ ಉಂಟುಮಾಡಿತ್ತು. ಅವರು ಬರೆದದ್ದೇ ಹಾಗೆ. ಒಂದೊಂದು ಕತೆ, ಒಂದೊಂದು ಕವನ, ಅವರ ವಿಶಿಷ್ಟ ನಾಟಕಗಳು ಇಂದಿಗೂ ಸೆಳೆಯುತ್ತವೆ, ಅಂತಹುದೇ ಭಾವತೀವ್ರತೆಯನ್ನು ಉಂಟುಮಾಡುತ್ತವೆ. ಅವರು ಸೃಷ್ಟಿಸಿದ ಸಂಕ್ರಾಂತಿಯ ಉಜ್ಜ, ಉಷಾ, ಬಿಜ್ಜಳರ ಪಾತ್ರಗಳು ಎಷ್ಟು ಅದ್ಭುತವಾಗಿವೆಯೆಂದರೆ ಅವರನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ತರಲು ಅನೇಕ ನಟ ನಟಿಯರು, ನಿರ್ದೇಶಕರು ಸೋತುಹೋದರು. ಅವರ ಟಿ.ಪ್ರಸನ್ನನ ಗ್ರಹಸ್ಥಾಶ್ರಮ, ಪೊಲೀಸರಿದ್ದಾರೆ ಎಚ್ಚರಿಕೆ, ನನ್ನ ತಂಗಿಗೊಂದು ಗಂಡು ಕೊಡಿ... ಒಂದೇ ಎರಡೇ, ಅದ್ಭುತವಾದ ನಾಟಕಗಳು, ಮರೆಯಲಾಗದ ಪಾತ್ರಗಳು.

ಅರ್ಥಪೂರ್ಣವಾಗಿ ಬರೆಯುವ ಒಬ್ಬ ಲೇಖಕ, ಚಲನಚಿತ್ರದಂತಹ ಮಾಧ್ಯಮದಲ್ಲಿ ಯಶಸ್ಸು ಗಳಿಸುವುದು ಕಷ್ಟದ ಕೆಲಸ. ನಾನಿಲ್ಲಿ ಹಣಕಾಸಿನ ಯಶಸ್ಸಿನ ಬಗೆಗೆ ಹೇಳುತ್ತಿಲ್ಲ. ಸಂವಹನ ಕಷ್ಟ ಎಂದೆ. ಅವರ ಪಲ್ಲವಿ, ಅನುರೂಪದಂತಹ ಚಿತ್ರಗಳು ಲೇಖಕ ಲಂಕೇಶರ ಯಥಾವತ್ ಪ್ರಾತಿನಿಧ್ಯ ಕಲಾಕೃತಿಗಳಾದವು. ಸತ್ಯಜಿತ್ ರಾಯ್‌ರಂತಹ ಮಹಾನ್ ಚಿತ್ರನಿರ್ಮಾತೃಗಳ ಪ್ರಭಾವ, ಸ್ಫೂರ್ತಿಗಳು ಪಲ್ಲವಿಯಲ್ಲಿ ಸ್ವಲ್ಪ ಕಾಣಿಸಿತೆನ್ನಬಹುದು. ಆದರೆ ಅನುರೂಪ ತುಂಬ ವಿಶಿಷ್ಟವಾಗಿತ್ತು.

ನಮ್ಮ ಜಡ ವ್ಯವಸ್ಥೆಯ ನಡುವೆ ರೆಬೆಲ್ ಆಗಿ ಹುಟ್ಟಿಕೊಳ್ಳುವ ಉಪನ್ಯಾಸಕನೊಬ್ಬ, ಪ್ರಿನ್ಸಿಪಾಲನಾದಾಗ ಹಳೆಯ ವ್ಯವಸ್ಥೆಯ ಪ್ರತಿರೂಪವೇ ಆಗುವ ದುರಂತವನ್ನು, ಹಾಸ್ಯದೊಂದಿಗೆ ನಿರೂಪಿಸಿದ್ದರು. ಆ ಪಾತ್ರವನ್ನು ಅನಂತನಾಗ್ ಸಹ ತುಂಬ ಚೆನ್ನಾಗಿ ನಿಭಾಯಿಸಿದ್ದರು. ಪಲ್ಲವಿ ಚಿತ್ರದ ಕಥಾನಾಯಕಿಯನ್ನು ಬಾಸ್ ಮದುವೆಯಾಗುತ್ತಾನೆ. ಅವಳು ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಶ್ರೀಮಂತ ಬಾಸ್‌ನನ್ನು ಮದುವೆಯಾಗಿ, ಸಮೃದ್ಧಿ ದೊರೆತರೂ, ಈಗ ಗೃಹಿಣಿಯಾಗಿ ಏಕಾಂಗಿಭಾವ ಅವಳನ್ನು ಕಾಡುತ್ತದೆ. ತನ್ನ ಆಫೀಸಿಗೆ ಒಮ್ಮೆ ಭೇಟಿ ನೀಡಿದಾಗ, ಬೇರೊಬ್ಬ ಮಹಿಳೆ ತನ್ನ ಟೈಪಿಸ್ಟ್ ಜಾಗದಲ್ಲಿ ಕುಳಿತಿರುವುದನ್ನು ನೋಡುತ್ತಾಳೆ. ಏನೋ ಕಳೆದುಕೊಂಡ ಭಾವನೆ. ಅಂತಹ ಸೂಕ್ಷ್ಮ ಸನ್ನಿವೇಶಗಳನ್ನು ತಮ್ಮ ಮೊದಲ ಚಿತ್ರದಲ್ಲಿಯೇ ಪರಿಣಾಮಕಾರಿಯಾಗಿ ತರಲು ಸಾಧ್ಯವಾದುದು, ಕಡಿಮೆಯ ಸಾಧನೆಯಲ್ಲ.

ಲಂಕೇಶ್ ಪತ್ರಿಕೆ : ಮೂರು ದಶಕಗಳ ಹಿಂದೆ ಲಂಕೇಶ್ ಪತ್ರಿಕೆಯನ್ನು ಪ್ರಾರಂಭ ಮಾಡಿದಾಗ, ನಮಗೆಲ್ಲ ಆತಂಕ. ಮೇಷ್ಟ್ರು ಆಗ ತಮ್ಮ ಪ್ರಾಧ್ಯಾಪಕ ವೃತ್ತಿಯನ್ನೂ ತೊರೆದಿದ್ದರು. ಆದರೆ ಅಂದಿನ ಆ ಕಪ್ಪು ಬಿಳುಪು ಪತ್ರಿಕೆ, ನಾಡಿನಲ್ಲಿ ಮೂಡಿಸಿದ ಕುತೂಹಲ, ನಿರೀಕ್ಷೆಗಳು ನಿಜಕ್ಕೂ ನ ಭೂತೋ. ಇಂದು ಅದು ಪತ್ರಿಕೋದ್ಯಮದ ಇತಿಹಾಸವೇ ಆಗಿಹೋಗಿದೆ. ಖ್ಯಾತ ದಿನಪತ್ರಿಕೆಯೊಂದು ಆಗ ಈ ಪತ್ರಿಕೆಯ ಜಾಹೀರಾತನ್ನೂ ಪ್ರಕಟಿಸಿರಲಿಲ್ಲ. ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದೆ ಮೇಷ್ಟ್ರ ಶಿಸ್ತು, ವ್ಯಾಪಾರೀ ಬುದ್ಧಿಶಕ್ತಿ, ಪ್ರತಿಭೆ ಎಲ್ಲ ಸೇರಿದ್ದವು. ನಮ್ಮ ಸಮಾಜದ ಹೆಣ್ಣುಮಕ್ಕಳ, ಹಿಂದುಳಿದವರ ದನಿಯಾಗಿ ಪತ್ರಿಕೆಯೊಂದು ರೂಪುಗೊಂಡಿತ್ತು. ತುಂಬ ಜನರು ಲೇಖಕರಾಗಿ ಬೆಳೆದರು.

ಜಾಹೀರಾತಿಲ್ಲದೆ ಪತ್ರಿಕೆಯನ್ನು ಯಶಸ್ಸಿಯಾಗಿ ನಡೆಸಿದ್ದು ಲಂಕೇಶರ ಅಪೂರ್ವ ಸಾಧನೆ. ಆಗ ಅವರು ಸಾಕಷ್ಟು ಹಣ ಮಾಡಿದರು. ಮನೆ, ತೋಟ ಮಾಡಿದರು. ಎಲ್ಲ ಲೇಖಕರಿಗೆ, ಅಂಕಣಕಾರರಿಗೆ ತಪ್ಪದೇ ಸಂಭಾವನೆ ನೀಡಿದರು. ಬಿಟ್ಟಿಯಾಗಿ ಬರೆಸಬಾರದು ಕಣ್ರೀ, ಎನ್ನುತ್ತಿದ್ದರು. ಬರೆಯಲಿ, ಬರೆಯಲಾಗದಿರಲಿ, ಲೇಖಕರಿಗೆ ಪ್ರತಿ ತಿಂಗಳೂ ಸಂಭಾವನೆಯ ಚೆಕ್ ಹೋಗುತ್ತಿತ್ತು. ಒಂದು ದೀಪಾವಳಿ ವಿಶೇಷಾಂಕಕ್ಕೆ ನಾನು ಕಳುಹಿಸಿದ ಲೇಖನಕ್ಕೆ, ಪ್ರಕಟಣೆಗೇ ಮೊದಲೇ ಚೆಕ್ ಬಂದಿತ್ತು. ಅದು ಲಂಕೇಶರ ಸ್ಟೈಲ್. ಪ್ರಕಟವಾಗಲಿ, ಬಿಡಲಿ ಪತ್ರಿಕೆಯು ಲೇಖಕರನ್ನು ಬರಹಕ್ಕಾಗಿ ಕೇಳಿದ ಮೇಲೆ ಸಂಭಾವನೆ ಕೊಡಬೇಕು, ಎಂಬ ಅಪರೂಪದ ದೃಷ್ಟಿಕೋನವಿತ್ತು.

ಎಂಬತ್ತರ ದಶಕದಲ್ಲಿ ನಾನು ಒಂದು ದಶಕದಷ್ಟು ಕಾಲ ಪತ್ರಿಕೆಗೆ ಅಂಕಣ ಬರೆಯುತ್ತಿದ್ದೆ. ದೆಹಲಿ ರಾಜಕೀಯ, ರಾಷ್ಟ್ರ ರಾಜಕೀಯ ಕುರಿತು ಬರೆಯುತ್ತಿದ್ದೆ. ನಮ್ಮ ಬಳಿ ದೂರವಾಣಿ, ಮೊಬೈಲ್ ಇತ್ಯಾದಿ ಇರದಿದ್ದ ಕಾಲ. ವಿಶೇಷ ಬರಹಕ್ಕಾಗಿ ಅವರು ಅನೇಕಬಾರಿ ಟೆಲಿಗ್ರಾಮ್ ಕಳುಹಿಸುತ್ತಿದ್ದರು. ಇಂದಿರಾಗಾಂಧಿ ಹತ್ಯೆಯ ನಂತರ ನಾನು ಬರೆದ ಲೇಖನಕ್ಕೆ ಆ ಕಾಲದಲ್ಲಿ ಮೆಚ್ಚುಗೆ, ಟೀಕೆಗಳ ನಾಲ್ಕುನೂರು ಪತ್ರಗಳು ಪತ್ರಿಕೆಯ ಕಛೇರಿಗೆ ಬಂದಿದ್ದವು. ನಾನು ಕಛೇರಿಗೆ ಹೋಗಿದ್ದು ತುಂಬ ಕಡಿಮೆ. ಲಂಕೇಶರನ್ನು ಮಾತನಾಡಿಸಲೆಂದೇ ತುಂಬ ಅಪರೂಪಕ್ಕೆ ಹೋಗುತ್ತಿದ್ದೆ. ಅವರು ತುಂಬ ಪುಸ್ತಕ ಓದುತ್ತಿದ್ದರು. ಇಂದಿಗೂ ಅದು ನನ್ನಲ್ಲಿ ವಿಸ್ಮಯ ಮೆಚ್ಚುಗೆಗಳನ್ನು ಮೂಡಿಸುತ್ತದೆ. ಅರಸು ಬಗ್ಗೆ, ಮುಸ್ಲಿಮರ ಬಗ್ಗೆ ಅವರು ಪಕ್ಷಪಾತ ವಹಿಸುತ್ತಾರೆ ಎಂದು ಅವರೊಂದಿಗೆ ಚರ್ಚಿಸುತ್ತಿದ್ದೆ, ಜಗಳವಾಡುತ್ತಿದ್ದೆ.

ನಮ್ಮ ಮೈಸೂರು ಬ್ಯಾಂಕಿನ ಕನ್ನಡ ಸಂಘದಿಂದ 1987ರಲ್ಲಿ ಕಥೆ ಬರೆಯುವವರಿಗಾಗಿ ಎರಡು ದಿನಗಳ ಕಮ್ಮಟವೊಂದನ್ನು ಆಯೋಜಿಸಿದ್ದಾಗ, ನನ್ನ ಒತ್ತಾಯಕ್ಕೆ ಮಣಿದು ಶಿಬಿರಕ್ಕೆ ಬಂದು ಸಮಾರೋಪ ಭಾಷಣ ಮಾಡಿದರು. ಹತ್ತು ನಿಮಿಷ ಮಾತ್ರ ಮಾತನಾಡ್ತೀನಿ ಕಣ್ರೀ, ಎಂದವರು ಒಂದು ಗಂಟೆ ಮಾತನಾಡಿದರು. ತುಂಬ ಅದ್ಭುತವಾಗಿ ಮಾತನಾಡಿದರು. ಅಂದು ಶ್ರಮವಹಿಸಿ ಅವರ ಭಾಷಣವನ್ನು ಧ್ವನಿ ಮುದ್ರಿಸಿಕೊಂಡಿದ್ದೆ. ಈಗ ಅದು ಸಾರ್ಥಕವೆನ್ನಿಸುತ್ತಿದೆ.

ಯಶಸ್ಸು, ಹಣ, ಕೀರ್ತಿಗಳ ಪರಾಕಾಷ್ಠೆಯ ಅಂದಿನ ದಿನಗಳಲ್ಲಿ ಲಂಕೇಶರು ಅಂದು ಮಾತನಾಡಿದ್ದು ಸಾವಿನ ಬಗ್ಗೆ, ಜೀವನದ ನಶ್ವರತೆಯ ಬಗೆಗೆ. ಇಂಗ್ಲೆಂಡಿನಲ್ಲಿ ಷೇಕ್ಸ್‌ಪಿಯರ್ ನಾಟಕಗಳಿಗೆ ಹಣಕೊಟ್ಟು ಪ್ರೇಕ್ಷಕರನ್ನು ಕರೆತರುವ ಸ್ಥಿತಿಯಿರುವಾಗ, ಎಲ್ಲ ಎಚ್ಚರಿಕೆ ಮುಂಜಾಗರೂಕತೆಗಳ ನಡುವೆಯೂ ಗ್ರೀಕ್ ಮಾನ್ಯುಮೆಂಟ್ಸ್ ಕುಸಿಯುತ್ತಿರುವಾಗ, ಒಂದು ವಾರಪತ್ರಿಕೆ ಚಿರಕಾಲ ಇರಬೇಕೆಂಬ ಅನಿಸಿಕೆ ಆಶಯಗಳು ಬಾಲಿಶ ಎಂದು ಲೇವಡಿ ಮಾಡಿದರು.

ಒಬ್ಬನಿಗೆ ಮರಣದಂಡನೆಯ ಶಿಕ್ಷೆಯಾಗಿದೆ. ಆ ಶಿಕ್ಷೆಯು ರದ್ದಾಗಬಹುದಾದ ದಾಖಲೆಯೊಂದು ಕಡತವೊಂದರಲ್ಲಿದೆ. ನಮ್ಮ ಕೊಳೆತು ನಾರುವ ಸರ್ಕಾರಿ ಕಛೇರಿಯಂತಹ ಒಂದು ಆಫೀಸಿನ ಸಾವಿರಾರು ಕಡತಗಳ ರಾಶಿಯಲ್ಲಿ, ಆ ದಾಖಲೆಯ ಪತ್ರವನ್ನು ಹುಡುಕಬೇಕಾಗಿದೆ. ನಾಳೆಯೇ ಕೊನೆಯದಿನ ಎನ್ನುವಾಗ, ಎಂತಹ ಆತಂಕ, ಒತ್ತಡ, ಗೊಂದಲಗಳಲ್ಲಿ ಕಡತಗಳನ್ನು ನೀವು ನೋಡುವಿರೋ, ಅಂತಹ ತೀವ್ರತೆ ನಿಮಗಿದ್ದಲ್ಲಿ ಮಾತ್ರ ಒಂದು ಪರಿಣಾಮಕಾರಿ ಅನುಭವವನ್ನು ಕತೆಯಾಗಿಸಬಹುದು, ಎಂದಿದ್ದರು.

ಎಲ್.ಎಸ್.ಶೇಷಗಿರಿರಾವ್, ಟಿಕೆ.ರಾಮರಾವ್, ಡಿ.ಆರ್.ನಾಗರಾಜ್, ರಾಘವೇಂದ್ರ ಪಾಟೀಲ, ಕೆ.ವಿ.ನಾರಾಯಣ, ಎಚ್.ಎಸ್.ವೆಂಕಟೇಶ ಮೂರ್ತಿ, ಜಿ.ಕೆ.ಗೋವಿಂದರಾವ್, ನರಹಳ್ಳಿ ಬಾಲಸುಬ್ರಮಣ್ಯ ಮುಂತಾದವರು ಪಾಲ್ಗೊಂಡಿದ್ದ ವಿಶೇಷ ಶಿಬಿರ ಅದು. ಹಿರಿಯ ವಿಮರ್ಶಕ, ವಿದ್ವಾಂಸ ದಿವಂಗತ ಕೆ.ನರಸಿಂಹಮೂರ್ತಿಯವರೂ ಬಂದಿದ್ದರು. ಅವರು ಒಂದು ಕಾಲದಲ್ಲಿ ಲಂಕೇಶರಿಗೇ ಗುರುಗಳಾಗಿದ್ದವರು. ಒಬ್ಬ ಸಂಪಾದಕನಿಗಿಂತ, ಲೇಖಕನಾಗಿ ನಿಮ್ಮನ್ನು ಮುಖ್ಯ ಎಂದು ಭಾವಿಸುತ್ತೇನೆ, ನಿರೀಕ್ಷಿಸುತ್ತೇನೆ, ಎಂದರು ನರಸಿಂಹಮೂರ್ತಿ.

ಯಾರೇ ಆಗಲಿ ಮೆಚ್ಚುವಂತಹ ಮಾತು ಅದು. ಆದರೆ ಲಂಕೇಶರ ರೀತಿಯೇ ಬೇರೆ. ಅವರ ಪತ್ರಿಕೆ ಓದಿ, ಹೊಸ ವಿಚಾರಗಳಿಗೆ ತೆರೆದುಕೊಂಡ, ಮೂಢನಂಬಿಕೆಗಳನ್ನು ತೊರೆದ, ಎಸ್‌ಎಸ್‌ಎಲ್‌ಸಿ ಫೇಲಾದ ಹುಡುಗನೊಬ್ಬ ಬರೆದ ಪೋಸ್ಟ್‌ಕಾರ್ಡೊಂದರ ಬಗೆಗೆ ಹೇಳಿ, ನನಗೆ ಅದು ಎಷ್ಟೋ ಪ್ರಶಸ್ತಿ ಗೌರವಗಳಿಗಿಂತ ದೊಡ್ಡದು, ಎಂದು ಹೇಳಿಬಿಟ್ಟರು. ಅಂತಹ ಸಂಪಾದಕರಾಗಿ, ಅವರು ಬರೆದ 'ಟೀಕೆ ಟಿಪ್ಪಣಿ' ಬರಹಗಳ ವೈವಿಧ್ಯ ವಿಸ್ತಾರ ವೈಶಿಷ್ಟ್ಯಗಳು ಇಂದಿಗೂ ಅಚ್ಚರಿ ಉಂಟುಮಾಡುತ್ತವೆ.

ಲಂಕೇಶರಿಲ್ಲದ ಈ ಹತ್ತು ವರ್ಷಗಳ ಕಾಲಾವಧಿಯಲ್ಲಿ ಅನೇಕ ಬಾರಿ ಇಂತಹ ಸಂದರ್ಭದಲ್ಲಿ ಮೇಷ್ಟ್ರು ಏನು ಬರೆಯುತ್ತಿದ್ದರು, ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಅನ್ನಿಸಿದ್ದಿದೆ. ಅನೇಕ ಐತಿಹಾಸಿಕ ಸನ್ನಿವೇಶ, ಸಂದರ್ಭಗಳಲ್ಲಿ. ಆರೆಸ್ಸೆಸ್, ಬಿಜೆಪಿಗಳನ್ನು ವಿಪರೀತ ದ್ವೇಷಿಸುತ್ತಿದ್ದ ಅವರು ಇಂದು ಹೇಗೆ ಪ್ರತಿಕ್ರಿಯಿಸುತ್ತಿದ್ದರೋ? ತಾಲಿಬಾನ್ ನೀಚರು ಅಫಘಾನಿಸ್ತಾನದ ಬಾಮಿಯಾದ ಬುದ್ಧನ ವಿಗ್ರಹಗಳನ್ನು ಒಡೆದಾಗ, ಅಮೆರಿಕದ ಮೇಲೆ 2001ರ ಸೆಪ್ಟೆಂಬರ್ 11ರ ದಾಳಿಯಾದಾಗ, ಮನಮೋಹನಸಿಂಗ್ ಪ್ರಧಾನಿಯಾದಾಗ, ಪ್ರತಿಭಾಪಾಟೀಲ್ ರಾಷ್ಟ್ರಪತಿಯಾದಾಗ, ಆರ್ಥಿಕ ಹಿಂಜರಿತಕ್ಕೆ ಸಿಕ್ಕು ಅಮೆರಿಕಾ ಚಡಪಡಿಸಿದಾಗ, ಅವರ ಟೀಕೆಟಿಪ್ಪಣಿ ಹೇಗಿರುತ್ತಿತ್ತೋ!

ಹೊರಳಿಬಾರದ ದಾರಿಯಲ್ಲಿ ಲಂಕೇಶರು ಹೋಗಿ ಇಂದಿಗೆ (25.01.2000) ಅದಾಗಲೇ ಹತ್ತು ವರ್ಷಗಳಾದವು. ಇದ್ದ ಅರುವತ್ತೈದು ವರ್ಷಗಳಲ್ಲಿ ಇನ್ನೂರು ವರ್ಷದಷ್ಟು ಕಾಲ ಬದುಕಿದ ವೈಶಿಷ್ಟ್ಯ ಅವರದು. ಈ ಹತ್ತು ವರ್ಷಗಳಲ್ಲಿ ಅನೇಕ ಬಾರಿ ಅವರ ಗಾಢ ನೆನಪು..

[ಲೇಖಕರ ಇಮೇಲ್ : anmanjunath@yahoo.com]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X