ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion
ದೇಶದಲ್ಲಿ ಕೃಷಿ ಜೊತೆಗೆ ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮ ಕೂಡ ರೈತರ ಆದಾಯಕ್ಕೆ ಜೀವಾಳ ಆಗಿದ್ದು, ಲಕ್ಷಾಂತರ ಕೋಟಿ ರೂಪಾಯಿ ವಹಿವಾಟು ಪ್ರತಿವರ್ಷ ನಡೆಯುತ್ತದೆ. ಹೀಗಾಗಿಯೇ ನಮ್ಮ ರೈತರು ಕುಕ್ಕುಟೋದ್ಯಮ ನಂಬಿ ಕೋಟಿ ಕೋಟಿ ಬಂಡವಾಳ ಕೂಡ ಸುರಿದು, ತಮ್ಮ ಆದಾಯವನ್ನ ಕಂಡುಕೊಂಡಿದ್ದಾರೆ. ಆದರೆ ಆಗಾಗ ಎದುರಾಗುವ ಹಕ್ಕಿಜ್ವರ ಸೇರಿದಂತೆ ಹಲವು ಸಮಸ್ಯೆಗಳು ರೈತರಿಗೆ ಎದುರಾಗಿ ಕಾಡುತ್ತವೆ, ಆದರೆ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲೇ ದೊಡ್ಡ ಸಮಸ್ಯೆ ಎದುರಾಗಿದೆ. ಅದರಲ್ಲೂ ಈಗ ಎದುರಾಗಿರುವ ಸಮಸ್ಯೆ ಪರಿಣಾಮ ಮೊಟ್ಟೆ ಬೆಲೆಯು ಭಾರಿ ಕುಸಿತ ಕಂಡಿದ್ದು, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು ಚಿಂತೆಯಲ್ಲಿದ್ದಾರೆ.
ಭಾರತ ಇಡೀ ಜಗತ್ತಿನ ಅನ್ನದ ಬಟ್ಟಲು ಎನ್ನಬಹುದು, ಏಕೆಂದರೆ ನಮ್ಮ ದೇಶದಿಂದ ಅಕ್ಕಿ ಸಮೇತ ನೂರಾರು ಕೃಷಿ ಪದಾರ್ಥಗಳು ಸರಬರಾಜು ಆಗುತ್ತವೆ. ಅದರಲ್ಲೂ ಭಾರತ ಸರಬರಾಜು ಮಾಡದಿದ್ದರೆ ನೂರಾರು ದೇಶಗಳು ಹಸಿವು & ಸಮಸ್ಯೆಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಕೂಡ ನಿರ್ಮಾಣ ಆಗುತ್ತದೆ. ಆದರೆ ಈ ಬಾರಿ ಯುದ್ಧದ ಕಾರಣಕ್ಕೆ ಭಾರತದ ಮೊಟ್ಟೆ ಮಾರುಕಟ್ಟೆ ಭೀಕರ ಸೋಲು ಕಾಣುತ್ತಿದ್ದು, ಇರಾನ್ ಮತ್ತು ಅಮೆರಿಕ ಹಾಗೂ ಇಸ್ರೇಲ್ ಯುದ್ಧದ ಪರಿಣಾಮ ಈಗಾಗಲೇ ಕೋಟ್ಯಂತರ ಮೊಟ್ಟೆ ದೇಶದಲ್ಲೇ ಉಳಿಯುವಂತೆ ಆಗಿದೆ. ಇದರ ಪರಿಣಾಮ ಈಗ ನಮ್ಮ ದೇಶದ ರೈತರಿಗೆ ಆಘಾತ ಎದುರಾಗಿ, ಭವಿಷ್ಯವೇ ಮಂಕಾಗುವಂತೆ ಆಗಿದೆ.

ಮೊಟ್ಟೆ ಖರೀದಿ ಮಾಡುವವರೇ ಇಲ್ಲ
ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಒಗಟ್ಟಿನಿಂದ ಇರಾನ್ ವಿರುದ್ಧ ಯುದ್ಧ ಸಾರಿ ಈಗಾಗಲೇ 6 ದಿನ ಕಳೆದಿದೆ. ಕಳೆದ ಶನಿವಾರ ಶುರುವಾಗಿದ್ದ ಯುದ್ಧ ಈಗಾಗಲೇ ಭೀಕರ ಹಂತಕ್ಕೆ ತಲುಪಿದ್ದು, ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದ್ದು, ಪರಮಾಣು ಬಾಂಬ್ ಬಳಕೆಯ ಭೀತಿ ಕೂಡ ಹುಟ್ಟಿಕೊಂಡಿದೆ. ಆದರೆ ಈ ಸಮಯದಲ್ಲೇ ಭಾರತದ ಕೃಷಿ ಉತ್ಪನ್ನಗಳಿಗೆ ಭಾರಿ ದೊಡ್ಡ ಹೊಡೆತ ಬಿದ್ದಿದ್ದು, ಪಶ್ಚಿಮ ಏಷ್ಯಾದಲ್ಲಿ ಎಂದರೆ ಅರಬ್ ದೇಶಗಳಲ್ಲಿ ಬಂದರು & ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕಾರಣಕ್ಕೆ ಸರಕು ಸಾಗಣೆಯು ವ್ಯತ್ಯಯ ಆಗುತ್ತಿದೆ. ಅದರಲ್ಲೂ ಮೊಟ್ಟೆ ಸಾಗಾಟ ಮಾಡುವುದಕ್ಕೆ ನೂರಾರು ಸಮಸ್ಯೆ ಎದುರಾಗಿದ್ದು, ಬೆಲೆಯಲ್ಲಿ ಭಾರಿ ಕುಸಿತ ಉಂಟಾಗುತ್ತಿದೆ. ಹೀಗಾಗಿ ಕೋಳಿ ಸಾಕಾಣಿಕೆ ಮಾಡುವವರಿಗೆ ಭಾರಿ ದೊಡ್ಡ ನಷ್ಟ ಎದುರಾಗಿದೆ.
ಮೊಟ್ಟೆ ಬೆಲೆ ಕುಸಿತ ಬಗ್ಗೆ ನ್ಯಾಷನಲ್ ಎಗ್ ಕೋಆರ್ಡಿನೇಷನ್ ಕಮಿಟಿ ಮಾಹಿತಿ ನೀಡಿದ್ದು, ಆ ಪ್ರಕಾರ ಒಂದು ಮೊಟ್ಟೆಯ ಬೆಲೆ ಸರಾಸರಿ 4 ರೂಪಾಯಿ 20 ಪೈಸೆ ಆಸುಪಾಸಿಗೆ ಕುಸಿತ ಕಂಡಿದೆ. ಹಾಗೇ ಇನ್ನೂ ಕೆಲವು ಪ್ರದೇಶಗಳಲ್ಲಿ ಮೊಟ್ಟೆ ಬೆಲೆಯು ಬರೋಬ್ಬರಿ 3 ರೂಪಾಯಿ 30 ಪೈಸೆಗೆ ಕೂಡ ತಲುಪಿದ್ದು, ರೈತರಲ್ಲಿ ಹಾಗೂ ಕೋಳಿ ಸಾಕಾಣಿಕೆಯನ್ನೇ ಉದ್ಯಮ ಮಾಡಿಕೊಂಡ ಉದ್ಯಮಿಗಳಿಗೆ ಆತಂಕ ಶುರು ಆಗಿದೆ. ಪ್ರಮುಖವಾಗಿ ತಮಿಳುನಾಡಿನ ನಮಕ್ಕಲ್ ಪ್ರದೇಶ ಭಾರತದ ಅತಿ ದೊಡ್ಡ ಮೊಟ್ಟೆ ಉತ್ಪಾದನೆ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಒಂದು. ಆದರೆ ಇದೀಗ ರಫ್ತು ಸಂಪೂರ್ಣವಾಗಿ ನಿಂತಿರುವುದರಿಂದ ಈ ಪ್ರದೇಶದಲ್ಲಿ ಭಾರಿ ನಷ್ಟ ಎದುರಾಗಿದ್ದು, ಇದೀಗ ಒಂದೇ ಭಾಗದಲ್ಲಿ ಪ್ರತಿದಿನ ಸುಮಾರು 5 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂಬ ಅಂಕಿ-ಅಂಶ ಆತಂಕ ಹೆಚ್ಚು ಮಾಡಿದೆ.
ಇನ್ನೂ ಹಲವು ದಿನ ಯುದ್ಧ ನಿಲ್ಲಲ್ಲ?
ಭಾರತದಿಂದ ಮಧ್ಯಪ್ರಾಚ್ಯ ಅದರಲ್ಲೂ ಅರಬ್ ದೇಶಗಳಿಗೆ ವಸ್ತುಗಳನ್ನು ರಫ್ತು ಮಾಡುತ್ತಿದ್ದ ಭಾರತ ಮೂಲದ ಉದ್ಯಮಿಗಳಿಗೆ ದೊಡ್ಡ ನಷ್ಟ ಎದುರಾಗಿದೆ. ಮೊಟ್ಟೆ ಮಾತ್ರವಲ್ಲದೆ ಇನ್ನೂ ಅನೇಕ ಪ್ರಮುಖ ವಸ್ತುಗಳನ್ನ ರಫ್ತು ಮಾಡುತ್ತಿದ್ದವರು ಯುದ್ಧದ ವಾತಾವರಣದಲ್ಲಿ ಒದ್ದಾಡುವಂತೆ ಆಗಿಬಿಟ್ಟಿದೆ ಈಗ. ಪರಮಾಣು ಶಾಂತಿ ಒಪ್ಪಂದದ ವಿಚಾರವಾಗಿ ಶುರುವಾಗಿದ್ದ ಇರಾನ್ & ಅಮೆರಿಕ ನಡುವಿನ ಕಿರಿಕ್ ಈಗ ಭೀಕರ ಯುದ್ಧವಾಗಿ ಪರಿಣಮಿಸಿದ್ದು, ಸಾವಿರಾರು ಜನರನ್ನು ಕೆಲವೇ ದಿನಗಳಲ್ಲಿ ಬಲಿ ಪಡೆದಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡುತ್ತಿರುವ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಇನ್ನೂ ಹಲವು ದಿನಗಳ ಕಾಲ ಯುದ್ಧ ನಿಲ್ಲವುದಿಲ್ಲ ಎನ್ನಲಾಗಿದ್ದು, ನಷ್ಟ ಹೆಚ್ಚಾಗುವ ಆತಂಕ ಕಾಡುತ್ತಿದೆ.












Click it and Unblock the Notifications