ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವೇಶ್ವರಯ್ಯ: ಮೇರು ವಾಸ್ತುಶಿಲ್ಪಿ , ಶಿಸ್ತಿನ ಸಿಪಾಯಿ

By Staff
|
Google Oneindia Kannada News

Sir M. Vishweshwaraiah
ಅದು ವಿಶ್ವೇಶ್ವರಯ್ಯನವರ ಆಪ್ತೇಷ್ಟರು, ಬಂಧುಗಳೆಲ್ಲ ಸೇರಿದ್ದ ಸಣ್ಣ ಸಂತೋಷ ಕೂಟ. ವಿಶ್ವೇಶ್ವರಯ್ಯ ಅವರಿಗೆ ದಿವಾನ್‌ ಪದವಿ ಸಿಕ್ಕಿತ್ತು. ಆ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಮೊದಲು ತಮ್ಮ ಬಂಧು ಬಳಗವನ್ನೆಲ್ಲ ಕರೆದು ಸಣ್ಣ ಭೋಜನ ಕೂಟವೇರ್ಪಡಿಸಿದ್ದರು. ಆ ಕೂಟ ದಿವಾನರಾದ ಖುಷಿಯನ್ನು ಹಂಚಿಕೊಳ್ಳುವುದಕ್ಕಲ್ಲ ; ಕರ್ತವ್ಯದ ಜವಾಬ್ದಾರಿ ಭಾರವನ್ನು ಬಂಧುಗಳಿಗೆ ಮನದಟ್ಟು ಮಾಡಿಸುವುದಕ್ಕಾಗಿ. ದಿವಾನ ಪದವಿಯಲ್ಲಿರುವ ತಮ್ಮನ್ನು ಯಾವುದೇ ಶಿಫಾರಸುಗಳಿಗೆ ಅಥವಾ ಕೆಲಸಗಳಿಗೆ ಒತ್ತಾಯಿಸಬಾರದು. ಪದವಿಯನ್ನುಪಯೋಗಿಸಿಕೊಂಡು ನೆರವು ನೀಡುವಂತೆ ಯಾರೂ ತಮ್ಮ ಬಳಿ ಬರಬಾರದು ಎಂದು ಹೇಳುವುದಕ್ಕೆ.

ಚುನಾವಣೆ ಇನ್ನೂ ದೂರವಿರುವಾಗಲೇ ತಮ್ಮ ಜಾತಿಯ ಬಳಗದ ವ್ಯಕ್ತಿಗಳನ್ನು ಆಯಕಟ್ಟಿನ ಸ್ಥಾನಗಳಿಗೆ ನೇಮಕ ಮಾಡುವ ಮೂಲಕ , ಪದವಿಗೇರಿಸಲು ಹೆಣಗಾಡುವ ನಾಯಕರಿರುವ ಈ ನೆಲದಲ್ಲಿ ಇಂತಹ ಮಹಾನ್‌ ವ್ಯಕ್ತಿಯಾಬ್ಬರು ಆಗಿ ಹೋಗಿದ್ದರು. ಅವರ ಬುದ್ಧಿ ಮತ್ತೆ, ಜಾಣ್ಮೆಯ ಫಲವಾಗಿ ಇಂದು ಲಕ್ಷಾಂತರ ಮಂದಿ ಬೆಳ್ಳಂಬೆಳಗ್ಗೆ ಕೊಡಪಾನ ತುಂಬಾ ನೀರು ತುಂಬಿಕೊಳ್ಳುತ್ತಾರೆ. ಹೊಲಗದ್ದೆಗಳಲ್ಲಿ ಪೈರುಗಳು ಹಸಿರಾಗಿವೆ.

ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದು ಹೆಸರಾಗಿದ್ದ ವಿಶ್ವೇಶ್ವರಯ್ಯ ಅವರು ಸರ್‌ ಎಂವಿ ಎಂಬ ಚುಟುಕು ನಾಮದಿಂದ ಪ್ರಸಿದ್ಧರು. 1860ರ ಸೆಪ್ಟೆಂಬರ್‌ 15ರಂದು ವಿಶ್ವೇಶ್ವರಯ್ಯ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಹುಟ್ಟಿದರು. ಹದಿನೈದರ ವಯಸ್ಸಿಗೇ ಅಪ್ಪ ತೀರಿಕೊಂಡರು. ಅನೇಕ ಅಡೆತಡೆಗಳಿದ್ದರೂ ವಿಶ್ವೇಶ್ವರಯ್ಯ ಅವರ ಓದು ಇಂಜಿನಿಯರ್‌ ಆಗುವವರೆಗೆ ನಿಲ್ಲಲಿಲ್ಲ. ಹೈಸ್ಕೂಲ್‌ ಚಿಕ್ಕ ಬಳ್ಳಾಪುರದಲ್ಲಿ ಮುಗಿದರೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಕಾಲೇಜು ಜೀವನ ಆರಂಭವಾಯಿತು.

ಯೋಗಿಯಂತಹ ಸರಳ ಜೀವನ. ಕಟ್ಟಾ ಸಸ್ಯಾಹಾರಿ. ಚಪಾತಿಗಳೆರಡು ಬೆಳಗಿನ ತಿಂಡಿ. ನಂಜನ ಗೂಡಿನ ರಸಬಾಳೆ ಮಧ್ಯಾಹ್ನದ ಊಟ. ರಾತ್ರಿ 10ರಿಂದ ಬೆಳಗಿನ ಆರರವರೆಗೆ ನಿದ್ದೆ.

ವಿಶ್ವೇಶ್ವರಯ್ಯನವರು ಏರಿದ ಪದವಿ-ಪೀಠಗಳ ಸಾಲು ಸಣ್ಣದಲ್ಲ . ಸುಮ್ಮನೇ ಒಮ್ಮೆ ಕಣ್ಣಾಡಿಸಿ :

* 1884ರಲ್ಲಿ ಮುಂಬಯಿ ಗವರ್ನ್‌ಮೆಂಟ್‌ ಸರ್ವಿಸ್‌ನ ಅಸಿಸ್ಟೆಂಟ್‌ ಇಂಜಿನಿಯರ್‌.
* ಹೈದರಾಬಾದ್‌ ರಾಜ್ಯ ಮತ್ತು ಮೈಸೂರು ರಾಜ್ಯ ಮುಖ್ಯ ಇಂಜಿನಿಯರ್‌.
* ಮೈಸೂರು ರಾಜ್ಯದ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ.
* ಆರು ವರ್ಷಗಳ ಕಾಲ ಮೈಸೂರಿನ ದಿವಾನ ಹುದ್ದೆ.
* ಭದ್ರಾವತಿ ಉಕ್ಕಿನ ಕಾರ್ಖಾನೆ ಅಧ್ಯಕ್ಷರು.
* ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪೆನಿಯ ಹಾಗೂ ಬೆಂಗಳೂರಿನ ಇಂಡಿಯನ್‌ ಇನಸ್ಟಿಟ್ಯೂಟ್‌ ಆಫ್‌ ಸಾಯನ್ಸ್‌ನ ಗವರ್ನಿಂಗ್‌ ಕೌನ್ಸಿಲಗಳ ಸದಸ್ಯ.

1908ರಲ್ಲಿ ವಿಶ್ವೇಶ್ವರಯ್ಯನವರು ನೌಕರಿಯಿಂದ ನಿವೃತ್ತರಾದರು. ಆದರೆ ಮೈಸೂರು ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್‌ ಅವರಿಗೆ ವಿಶ್ವೇಶ್ವರಯ್ಯ ಅವರು ನಿವೃತ್ತರಾಗಿ ಮನೆಗೆ ತೆರಳುವುದು ಬೇಕಿರಲಿಲ್ಲ. ಒಡೆಯರ್‌ ಒತ್ತಾಯದ ಮೇರೆಗೆ ಸರ್‌ಎಂವಿ ಅವರು ಮೈಸೂರಿನ ಇಂಜಿನಿಯರ್‌ ಆದರು. ವಿಶ್ವೇಶ್ವರಯ್ಯನವರದು ದಣಿವರಿಯದ ಪ್ರತಿಭೆ!

ಸವಾಲುಗಳೆಂದರೆ ವಿಶ್ವೇಶ್ವರಯ್ಯನವರಿಗೆ ಇಷ್ಟ. ಪ್ರತಿಯಾಬ್ಬರಿಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ, ಸ್ತ್ರೀ ಶಿಕ್ಷಣ ನೀತಿಗಳನ್ನು ಸ್ವಾತಂತ್ರ್ಯಪೂರ್ವದಲ್ಲಿಯೇ ಸರ್‌ಎಂವಿ ಪ್ರತಿಪಾದಿಸಿದ್ದರು. ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ವಿಶ್ವ ವಿದ್ಯಾಲಯಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹಾಗೆಯೇ ಮೈಸೂರು ವಿಶ್ವ ವಿದ್ಯಾಲಯವೂ ಯಾಕೆ ಲಕ್ಷಾಂತರ ವಿದ್ಯಾರ್ಥಿಗಳನ್ನು ರೂಪಿಸಬಾರದು ಎಂದು ಪ್ರಶ್ನಿಸುತ್ತಿದ್ದ ಸರ್‌ ಎಂವಿ- ಬೆಂಗಳೂರು ಮತ್ತು ಮೈಸೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಿಸಲು ಶ್ರಮಪಟ್ಟರು.

ವಿಶ್ವ ಪ್ರಸಿದ್ಧ ಕನ್ನಂಬಾಡಿ ಅಣೆಕಟ್ಟೆ , ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಹಾಗೂ ಏಷ್ಯಾದ ಅತಿದೊಡ್ಡ ಪಾಲಿಟೆಕ್ನಿಕ್‌ ಎನ್ನುವ ಅಗ್ಗಳಿಕೆಯ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ವಿಶ್ವೇಶ್ವರಯ್ಯನವರ ದಕ್ಷತೆ ಹಾಗೂ ಬುದ್ಧಿಮತ್ತೆಯ ಕುರುಹಾಗಿ ಇಂದಿಗೂ ನಮ್ಮೊಂದಿಗಿವೆ.

ಮಹಾತ್ಮ ಗಾಂಧಿಯವರ ಕೈಗಾರಿಕೀಕರಣ ಮತ್ತು ಸಾವು ಎಂಬ ಘೋಷಣೆಯನ್ನು ಬಲವಾಗಿ ವಿರೋಧಿಸಿದ ವಿಶ್ವೇಶ್ವರಯ್ಯ- ಕೈಗಾರಿಕೀಕರಣ ಅಥವಾ ಸಾವು ಎನ್ನುವ ಘೋಷಣೆಯನ್ನು ಪ್ರತಿಪಾದಿಸಿದರು. ವಿಶ್ವೇಶ್ವರಯ್ಯನವರ ಕೈಗಾರಿಕಾಕರಣದ ನಂಬಿಕೆಯ ಪ್ರತಿಫಲವಾಗಿ ಭದ್ರಾವತಿ ಉಕ್ಕಿನ ಕಾರ್ಖಾನೆ ಹಾಗೂ ಅನೇಕ ಅಣೆಕಟ್ಟೆಗಳನ್ನು ನೋಡಬಹುದು.

ಗಾಂಧೀಜಿಯವರ ಅಸಹಕಾರ ಚಳವಳಿ ಕೂಡ ವಿಶ್ವೇಶ್ವರಯನವರ ಅಸಹನೆಗೆ ಕಾರಣವಾಗಿತ್ತು. ಗಾಂಧೀಜಿಗೆ ಬರೆದಿದ್ದ ಉದ್ದನೆಯ ಪತ್ರದಲ್ಲಿ , ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲು ಹೋಗುವಾಗ ನೀಟಾಗಿ ಡ್ರೆಸ್‌ಮಾಡಿಕೊಂಡು ಹೋಗಿ ಎಂದು ವಿಶ್ವೇಶ್ವರಯ್ಯ ಸಲಹೆ ಮಾಡಿದ್ದರು. ಸ್ವತಃ ತಾವೂ ಅಷ್ಟೆ , ಯಾವತ್ತೂ ಗರಿ ಗರಿ ಇಸ್ತ್ರಿ ಮಾಡಿದ ಬಟ್ಟೆಗಳನ್ನೇ ತೊಡುತ್ತಿದ್ದರು. ಶಿಸ್ತಿಯ ಸಿಪಾಯಿ ಎನ್ನುವ ಮಾತು ವಿಶ್ವೇಶ್ವರಯ್ಯನವರಿಗೆ ಅನ್ವರ್ಥ.

ವಿಶ್ವೇಶ್ವರಯ್ಯನವರ 100ನೇ ಹುಟ್ಟು ಹಬ್ಬಕ್ಕೆ ಪ್ರಧಾನಿ ಜವಾಹರ್‌ಲಾಲ್‌ ನೆಹರು ಬೆಂಗಳೂರಿಗೆ ಬಂದಿದ್ದರು. ಲಾಲ್‌ಬಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಮತ್ತು ನೆಹರು ಸಮ್ಮುಖದಲ್ಲಿ ಭಾರತದ ಹೆಮ್ಮೆಯ ಪುತ್ರನಿಗೆ ಶುಭ ಹಾರೈಸಲಾಯಿತು.

1962ರ ಏಪ್ರಿಲ್‌ 12ರಂದು ವಿಶ್ವೇಶ್ವರಯ್ಯ ತಮ್ಮ 102 ವರ್ಷದ ತೃಪ್ತ ಬದುಕನ್ನು ಮುಗಿಸಿದರು. ಆದರೆ, ವಿಶ್ವೇಶ್ವರಯ್ಯನವರ ನೆನಪು ಕನ್ನಡದ ಜಲನೆಲಗಳಲ್ಲಿ ಸದಾ ಹಸಿರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X