ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವಾರ ಏನ್ಸಮಾಚಾರ ನೋಡಿ.

By Super
|
Google Oneindia Kannada News

ಆನಂದನನ್ನು ಕಾಡಿದ್ದು ಕೀಳರಿಮೆ ಮತ್ತು ಆ ಕ್ಷಣದ ಮಾತ್ಸರ್ಯ ಅನ್ನುವುದು ರಘುನಂದನನಿಗೆ ತಕ್ಷಣವೇ ಗೊತ್ತಾಯಿತು. ತಾನೂ ಅಷ್ಟೊಂದು ತೀವ್ರವಾಗಿ ಪ್ರತಿಕ್ರಿಯಿಸಬಾರದಾಗಿತ್ತೇನೋ ಅಂದುಕೊಂಡ. ತಮ್ಮೊಳಗೇ ಒಡಕಿದೆ ಅಂತ ಗೊತ್ತಾದರೆ ನೂರು ಸಂಕಷ್ಟಗಳು ಶುರುವಾಗುತ್ತವೆ. ಶತ್ರುಗಳೆಲ್ಲ ಬಲವಾಗುತ್ತಾರೆ, ಮುಗಿಬೀಳುತ್ತಾರೆ ಅನ್ನುವುದು ರಘುನಂದನನಿಗೆ ಗೊತ್ತಿತ್ತು.

ಆದರೆ, ಆನಂದನ ಮಾತುಗಳಿಗೆ ಪ್ರತಿಕ್ರಿಯಿಸದೇ ಬೇರೆ ಗತ್ಯಂತರವೇ ಇರಲಿಲ್ಲ. ರಘುನಂದನ ತೀರಾ ಹಾಗೇ ಎದ್ದುಬಂದಿದ್ದರೆ ಅದನ್ನು ತಪ್ಪು ತಿಳಿಯುವ ಸಾಧ್ಯತೆಗಳಿದ್ದವು. ಜನರಿಗೆ ವಿವೇಚನೆ ಮಾಡುವ ಕಷ್ಟ ಬೇಕಿರುವುದಿಲ್ಲ . ಸುಳ್ಳು ಸತ್ಯಗಳನ್ನು ವಿಂಗಡಿಸುವ ತರ್ಕದ ಒರೆಗಲ್ಲಿಗೆ ಹಚ್ಚುವ ಗೋಜಿಗೆ ಅವರು ಹೋಗುವುದಿಲ್ಲ. ಅವರಿಗೊಂದು ಎಳೆ ಸಿಕ್ಕಿದರೆ ಸಾಕು, ಅದನ್ನೇ ಗಿಂಜುತ್ತಾ , ನೆಂಚಿಕೊಳ್ಳುತ್ತಾ ದಿನಗಟ್ಟಲೆ ಇದ್ದುಬಿಡುತ್ತಾರೆ.

ಆನಂದನ ಮಾತೂ ಹಾಗೇ ಆಗುವ ಅಪಾಯವಿತ್ತು. ರಘುನಂದನ ಆ ಸೋಮಯಾಜಿಗಳ ಮಗಳು ನರ್ಮದೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ ಅನ್ನುವ ಒಂದು ಮಾತು ಹಬ್ಬುವುದಕ್ಕೆ ಕ್ಷಣಗಳು ಸಾಕಿದ್ದವು. ಈಗಲೂ ಆ ಮಾತು ಹಬ್ಬುವುದಿಲ್ಲ ಎಂದೇನಲ್ಲ. ಆದರೆ ತಾನು ರೇಗಾಡಿದ್ದನ್ನು ಕಂಡವರು ಅದನ್ನು ಬಹಿರಂಗವಾಗಿ ಮಾತಾಡುವುದಕ್ಕೆ ಅಂಜುತ್ತಾರೆ. ಅವರಿಗೆ ತನ್ನ ಪ್ರಾಮಾಣಿಕತೆಯ ಬಗ್ಗೆ ನಂಬಿಕೆ ಇಲ್ಲದಿದ್ದರೂ ತನ್ನ ಸಿಟ್ಟಿನ ಬಗ್ಗೆ ಭಯವಿರುತ್ತದೆ.

ರಘುನಂದನ ಮತ್ತು ಆನಂದ ಜಗಳವಾಡಿದರಂತೆ ಎಂಬ ಸುದ್ದಿ ಮಾತ್ರ ಒಂದಕ್ಕೊಂದು ಊಹಾಪೋಹಗಳನ್ನು ಪಡೆದುಕೊಳ್ಳುತ್ತಾ ಉಪ್ಪಿನಂಗಡಿಯ ಗಾಳಿಯಲ್ಲೂ ಧೂಳಿನಲ್ಲೂ ಬೆರೆತಿತು. ಅದಕ್ಕೆ ಒಂದು ಹೆಣ್ಣು ಕಾರಣವಂತೆ ಎನ್ನುವ ಅಡಿಷನಲ್‌ ಮಸಾಲೆಯೂ ಸೇರಿದ್ದರಿಂದ ಸುದ್ದಿ ತಕ್ಕ ಮಟ್ಟಿಗೆ ರುಚಿಕರವಾಗಿತ್ತು. ಮುಂದಿನ ವಾರದ 'ಏನ್ಸಮಾಚಾರ" ನೋಡಿ. ರಘುನಂದನನನ್ನು ಆನಂದ ಉಗಿದು ಉಪ್ಪಿನಕಾಯಿ ಹಾಕಿರುತ್ತಾನೆ ಅಂತ ಇಬ್ಬರ ಸ್ನೇಹ ಬಲ್ಲವರು ಮಾತಾಡಿಕೊಂಡರು.

*

ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ರಘುನಂದನ ನರ್ಮದೆಯನ್ನೂ ಮೀರಾಳನ್ನೂ ಕರೆದುಕೊಂಡು ಬೆಂಗಳೂರಿಗೆ ಹೋದ. ಹೊರಡುವ ಮೊದಲು ರಘುನಂದನನ ಅಮ್ಮ ಎರಡು ಕುಡತೆ ಕಣ್ಣೀರು ಹಾಕಿದ್ದು ಬಿಟ್ಟರೆ ಅಂಥಾ ರಾದ್ಧಾಂತವೇನೂ ಆಗಲಿಲ್ಲ . ರಘುವಿಗೆ ಇವರೆಲ್ಲ ಯಾಕೆ ಹೀಗಾಡುತ್ತಾರೆ ಅಂತ ಗೊತ್ತಾಗಲಿಲ್ಲ. ನರ್ಮದೆಯ ಬಗ್ಗೆ ತಾನು ತೋರಿಸುವ ಕಾಳಜಿಯಿಂದ ಇವರಿಗೆಲ್ಲ ಯಾಕೆ ಕಿರಿಕಿರಿಯಾಗಬೇಕು?

ಮನುಷ್ಯನ ಮೂಲಭೂತ ಚಿಂತನೆ ಹೇಗಿರಬಹುದು ಅಂತ ಅವನು ಯೋಚಿಸತೊಡಗಿದ. ತಾನು ನರ್ಮದೆಯತ್ತ ತೋರಿಸುತ್ತಿರುವ ಕಳಕಳಿಗೆ, ಪ್ರೀತಿಗೆ ಒಂದು ಕಾರಣ ಹುಡುಕುವ ಪ್ರಯತ್ನದಲ್ಲಿ ಇವರೆಲ್ಲ ಇದ್ದಾರೆ. ಅಂಥ ಸಕಾರಣವೊಂದು ಸಿಗದೆ ಕಂಗಾಲಾಗಿದ್ದಾರೆ. ತಾನು ಅವಳನ್ನು ಪ್ರೀತಿಸುತ್ತಿದ್ದೇನೆ ಅಂತ ಗೊತ್ತಾದರೂ ಸಾಕು ನಿಟ್ಟುಸಿರಿಟ್ಟು ಸುಮ್ಮನಾಗುತ್ತಾರೆ. ಮದುವೆಯಾದರಂತೂ ಅವರ ಬಾಯಿ ಮುಚ್ಚಿ ಹೋಗುತ್ತದೆ. ಆದರೆ ಹೀಗೆ ಅವರ ಊಹೆಗೆ ನಿಲುಕದ ಕಾರಣಗಳಿಗಾಗಿ ಒಂದು ಹುಡುಗಿಯ ಸೇವೆ ಮಾಡುವುದೆಂದರೆ...

ಹಾಗಿದ್ದರೆ ಅನುಕಂಪ, ಕರುಣೆ ಮುಂತಾದ ಪದಗಳಿಗೆ ಅರ್ಥವೇ ಇಲ್ಲವೇ? ಅವೆಲ್ಲ ಸುಮ್ಮನೆ ವಂಚಿಸಲಿಕ್ಕೆಂದೇ ಇರುವ ಪದಪುಂಜಗಳಿರಬಹುದೇ? ಅಷ್ಟಕ್ಕೂ ಅಮ್ಮ ಅತ್ತಿದ್ದು ಯಾಕೆ? ಮಗನ ಮೇಲೆ ತನಗಷ್ಟೇ ಇರುವ ಅಧಿಕಾರವನ್ನು ಮೌನವಾಗಿ, ನೆನಪುಗಳ ಹಂಗಿಲ್ಲದ ಹುಡುಗಿಯಾಬ್ಬಳು ಎಷ್ಟು ಸುಲಭವಾಗಿ ಕಿತ್ತುಕೊಂಡಳು ಎಂಬ ದುಃಖದಿಂದಲೇ ? ಅಮ್ಮನಿಗೇ ಇಷ್ಟು ದುಃಖವಾಗಿದೆ ಅಂದ ಮೇಲೆ ನಾವು ಆಧುನಿಕತೆಯ ಹೆಸರಲ್ಲಿ ಎಷ್ಟೋ ಬುಡಕಟ್ಟುಗಳ ಸಂಸ್ಕೃತಿ, ನಂಬಿಕೆ ಮತ್ತು ನೆನಪುಗಳನ್ನು ನಾಶ ಮಾಡುತ್ತಿದ್ದೇವಲ್ಲ , ಅವರಿಗೆಷ್ಟು ದುಃಖವಾಗಬೇಡ.

ಓ ದೇವರೇ ನನಗೆ ಸ್ಪಷ್ಟವಾಗುವ ಶಕ್ತಿ ಕೊಡು ಎಂದು ರಘುನಂದನ ಕಣ್ಮುಚ್ಚಿ ಪ್ರಾರ್ಥಿಸಿದ.

ಅದೇ ಸುಮಾರಿಗೆ ಆನಂದ ಪತ್ರಿಕೆಯ ಮುಂದಿನ ಸಂಚಿಕೆ ಸಿದ್ಧಪಡಿಸುತ್ತಿದ್ದ.

English summary
Daily Novel series - episode 72
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X