ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರ ಮದುವೆ ಫೋಟೋ ಪೇಪರ್ನಲ್ಲಿ ಪ್ರಿಂಟಾಯಿತು!

By Super
|
Google Oneindia Kannada News

ಸಕಲೇಶಪುರದಲ್ಲಿ ಚಂದ್ರೇಗೌಡರ ಮನೆ ಹುಡುಕುವುದು ಅವರಿಗೆ ಅಷ್ಟೇನೂ ಕಷ್ಟವಾಗದೇ ಇದ್ದಿದ್ದಕ್ಕೆ ಬೇರೆ ಕಾರಣಗಳೇನೂ ಇರಲಿಲ್ಲ. ಅಷ್ಟರಲ್ಲೇ ಭಾರತಿ ಮತ್ತು ವಿದ್ಯಾನಂದರು ಮದುವೆಯಾಗುವ ಸುದ್ದಿ ಜಗಜ್ಜಾಹೀರಾಗಿತ್ತು. ಹಲವಾರು ಪತ್ರಿಕೆಗಳ ವರದಿಗಾರರು ಬಂದು ಸಕಲೇಶಪುರದಲ್ಲಿ ತಳವೂರಿದ್ದರು. ಭಾರತಿಯ ಸಂದರ್ಶನಕ್ಕೆ ಮತ್ತು ಛಾಯಾಚಿತ್ರಕ್ಕಾಗಿ ಕಾಯುತ್ತಿದ್ದರು. ಚಂದ್ರೇಗೌಡರು ಕೊಂಚ ಸಿಡುಕಿನ ವ್ಯಕ್ತಿಯಾದ್ದರಿಂದ ಅವರನ್ನು ನೇರವಾಗಿ ಸಂಪರ್ಕಿಸುವ ಧೈರ್ಯ ಅನೇಕರಿಗೆ ಇರಲಿಲ್ಲ.

ಆನಂದ ಮತ್ತು ರಘುನಂದನ ಬೆಳಗ್ಗೆ ಎದ್ದವರೇ ಚಂದ್ರೇಗೌಡರ ಮನೆಗೆ ಹೋಗುವುದೋ ಬೇಡವೋ ಎನ್ನುವುದರ ಬಗ್ಗೆ ಅರ್ಧಗಂಟೆ ಚರ್ಚಿಸಿದರು. ಬಂದಿದ್ದಾಗಿದೆ ಹೋಗಿಯೇ ಬಿಡೋಣ ಅಂದುಕೊಂಡು ನೇರವಾಗಿ ಗೌಡರ ಮನೆಯ ಕಡೆ ಹೆಜ್ಜೆಹಾಕಿದರು.

ಆದರೆ ಅವರ ಯೋಜನೆ ಅಷ್ಟು ಸುಲಭವಾಗಿ ಸಫಲವಾಗಲಿಲ್ಲ. ಗೌಡರ ತೋಟದ ಸುತ್ತ ಐಬೆಕ್ಸ್‌ ವಿದ್ಯುತ್‌ ಬೇಲಿ ಹಾಕಿದ್ದರು. ಗೇಟಿಗೆ ಬೀಗ ಹಾಕಲಾಗಿತ್ತು. ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡು ಎದ್ದು ಕಾಣಿಸುತ್ತಿತ್ತು. ಕಣ್ಣಿಗೆ ರಾಚುವ ಹಳದಿ ಬಣ್ಣದ ಗೇಟಿನ ಮುಂದೆ ನಿಂತುಕೊಂಡು ಇಬ್ಬರೂ ಮುಂದೇನು ದಾರಿ ಎಂದು ಯೋಚಿಸಿದರು.

'ನಾವೀಗ ಯಾಕೆ ಬಂದಿದ್ದೇವೆ ಅಂತ ಹೇಳೋದು? ನಾವಿಲ್ಲಿಗೆ ಬರೋದಕ್ಕೆ ಕಾರಣವೇ ಇಲ್ಲ ಮಾರಾಯ" ಎಂದು ಆನಂದ ತಮ್ಮ ಇಡೀ ಪ್ರಯಾಣದ ನಿರರ್ಥಕತೆಯ ಮಾತಾಡಿದ. ರಘುನಂದನನಿಗೂ ಯಾಕೆ ಬಂದಿದ್ದೇವೆ ಅನ್ನುವುದು ಗೊತ್ತಾಗಲಿಲ್ಲ. ಅಲ್ಲಿ ಒಂದು ಕ್ಪಣ ಭಾರತಿಯ ಮುಖ ನೋಡಬೇಕು ಅನ್ನಿಸಿದ್ದು ಹೌದು. ಆದರೆ ಅದಕ್ಕೋಸ್ಕರ ಇಷ್ಟು ದೂರ ಬಂದಿದ್ದರಲ್ಲಿ ಅರ್ಥವುಂಟೆ?

ಪಕ್ಕದಲ್ಲಿರುವ ಕಲ್ಲು ಕಟ್ಟೆಯ ಮೇಲೆ ಇಬ್ಬರೂ ಕುಳಿತರು. ಅಲ್ಲಿಂದ ಎಲ್ಲಿಗೆ ಹೋಗಬೇಕು ಅನ್ನುವುದು ಆನಂದನಿಗೆ ಇನ್ನೂ ನಿಚ್ಚಳವಾಗಿರಲಿಲ್ಲ.

ಅವರು ಅಂಥ ಅನಿಶ್ಚಯದಲ್ಲಿ ಕುಳಿತಿರಬೇಕಾದರೆ ಚಂದ್ರೇಗೌಡರ ಗೇಟಿನ ಕಡೆಗೆ ಕಪ್ಪುಗಾಜುಗಳನ್ನು ಮುಚ್ಚಿಕೊಂಡು ನಿಗೂಢವಾಗಿ ಕಾಣುವ ಕಾರೊಂದು ಬರುವುದು ಕಾಣಿಸಿತು. ಬಹುಶಃ ಚಂದ್ರೇಗೌಡರು ಬಂದಿರಬೇಕು ಅಂದುಕೊಳ್ಳುತ್ತಾ ರಘುನಂದನ ಎದ್ದುನಿಲ್ಲಲು ಯತ್ನಿಸಿದ. ಆನಂದ ಅವನ ಕೈ ಜಗ್ಗಿ ಕೂರಿಸುತ್ತಾ ಕಾರನ್ನೇ ನೋಡಿದ. ಥಟ್ಟನೆ ಅವನಿಗೆ ಅದು ಯಾರ ಕಾರು ಅನ್ನುವುದು ಹೊಳೆಯಿತು.

ಕಾರು ಬಂದು ಗೇಟಿನ ಹತ್ತಿರ ನಿಂತಿತು. ಡ್ರೆೃವರ್‌ ಹಾರ್ನ್‌ ಮಾಡಿದ. ಹಾರ್ನಿನ ಸದ್ದು ಕೇಳಿಸುತ್ತಿದ್ದಂತೆ ಒಂದಿಬ್ಬರು ಕೆಲಸಗಾರರು ಓಡಿ ಬಂದು ಗೇಟಿನ ಪಕ್ಕ ನಿಂತರು. ಡ್ರೆೃವರ್‌ ಕಿಟಕಿಯ ಗಾಜು ಇಳಿಸಿ ಏನೋ ಹೇಳಿದ. ಗೇಟು ತೆರೆದುಕೊಂಡಿತು.ಕಾರು ಒಳಗೆ ಹೋಯಿತು.

'ವಿದ್ಯಾನಂದರ ಕಾರು. ಅವರೂ ಒಳಗಿದ್ದಾರೆ ಅಂತ ಕಾಣುತ್ತದೆ. ಬಹುಶಃ ಮದುವೆಯಾಗುವುದಿಲ್ಲ ಅಂತ ಹೇಳೋದಕ್ಕೆ ಬಂದಿರಬೇಕು. ಅವರಿಗೆ ಕಣ್ಣಿಗೆ ನಾವು ಕಾಣಿಸಿಕೊಳ್ಳಬಾರದಾಗಿತ್ತು" ಅಂದ ಆನಂದ. ಕಾಣಿಸಿಕೊಂಡೆವಾ ಅಂತ ರಘುನಂದನನಿಗೆ ಅನುಮಾನವಾಯಿತು. ಒಂದು ವೇಳೆ ಕಾಣಿಸಿಕೊಂಡದ್ದೇ ನಿಜವಾದರೆ ತಾವಿಲ್ಲಿಗೆ ಬಂದಿರುವುದಕ್ಕೆ ಅವರು ಏನೇನೋ ಅರ್ಥಕಲ್ಪಿಸಿಕೊಳ್ಳಬಹುದು ಎಂದು ಭಯವಾಯಿತು. ಏನಾದರೂ ಹಾಳಾಗಿಹೋಗಲಿ ಅಂದುಕೊಂಡು ಅವರಿಬ್ಬರೂ ಸುಮ್ಮನಾದರು. ಸ್ವಲ್ಪ ಹೊತ್ತಿನ ನಂತರ ವಿದ್ಯಾನಂದರ ಕಾರು ವಾಪಸ್ಸು ಬರಬಹುದು ಅನ್ನುವ ಭರವಸೆಯಲ್ಲಿ ಅಲ್ಲೇ ಕಾಯುವುದಕ್ಕ ನಿರ್ಧರಿಸಿದರು.

ಚಂದ್ರೇಗೌಡರ ಮನೆ ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಕೊಂಚ ಎಡಕ್ಕೆ ಒತ್ತಿಕೊಂಡಂತೆ ಇತ್ತು. ಎತ್ತರದಲ್ಲಿ ಮನೆ. ಕೆಳಗೆ ಕಾಫಿತೋಟ. ತೋಟದ ಬುಡದಲ್ಲಿ ಒಂದು ಸಣ್ಣತೊರೆ. ರಸ್ತೆಯಿಂದ ಬಳಸಿಕೊಂಡು ಹೋಗುವ ಕಡಿದಾದ ರಸ್ತೆಯ ತುದಿಯಲ್ಲಿ ಗೇಟು. ಆ ಗೇಟಿನ ಪಕ್ಕದಲ್ಲೇ ಬಹುಶಃ ಚಳಿಕಾಯಿಸಿಕೊಳ್ಳಲೋ ಏನೋ ಹಾಕಿಟ್ಟಂಥ ಕಲ್ಲುಬೆಂಚು. ಅದರ ಮೇಲೆಯೇ ಅವರಿಬ್ಬರೂ ಕುಳಿತಿದ್ದದ್ದು.

ಅವರಿಬ್ಬರೂ ತುಂಬ ಹೊತ್ತು ಕಾದರು. ವಿದ್ಯಾನಂದರ ಕಾರು ಬರಲಿಲ್ಲ. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಯಾವುದೋ ವಾಹನ ಬರುತ್ತಿರುವ ಸದ್ದು ಕೇಳಿಸಿತು. ಒಳಗಿನಿಂದ ಅದೇ ಕೆಲಸಗಾರರು ಬಂದು ಗೇಟು ತೆರೆದರು. ಗೇಟಿನಿಂದ ಮೊದಲು ಹೊರಬಂದ ಕಾರಲ್ಲಿ ಕುಳಿತವರು ಚಂದ್ರೇಗೌಡರೇ ಇರಬೇಕೆಂದು ರಘುನಂದನ ಊಹಿಸಿದ. ಅದರ ಹಿಂದೆ ವಿದ್ಯಾನಂದರ ಕಾರು ಬಂತು. ಅದರೊಳಗೆ ಹಿಂದಿನ ಸೀಟಲ್ಲಿ ವಿದ್ಯಾನಂದರು ಕುಳಿತಿದ್ದದ್ದು ಕಾಣಿಸಿತು. ಅದರ ಹಿಂದಿನಿಂದ ಬಂದ ಮಹೀಂದ್ರಾ ಜೀಪಿನಲ್ಲಿ ಒಂದಷ್ಟು ಹೆಣ್ಣುಮಕ್ಕಳೂ ಮುತ್ತೆೈದೆಯರೂ ಇದ್ದರು. ಅವರ ಪೆಕಿ ವಧುವಿನಂತೆ ಸಿಂಗರಿಸಿಕೊಂಡಿದ್ದಾಕೆಯೂ ಇದ್ದಳು. ಆಕೆಯ ಮುಖ ಕಾಣಿಸದೇ ಇದ್ದರು ಉಡುಗೆತೊಡುಗೆಯಿಂದ ಆಕೆ ಮದುಮಗಳು ಎನ್ನಬಹುದಿತ್ತು.

ಆನಂದನಿಗೆ ಆಶ್ಚರ್ಯವಾಯಿತು. ವಿದ್ಯಾನಂದರು ಇಲ್ಲಿಗೆ ಯಾಕೆ ಬಂದಿದ್ದಾರೆ. ಎಲ್ಲಿಗೆ ಹೋಗುತ್ತಿದ್ದಾರೆ. ಇವರೆಲ್ಲ ಜೊತೆಗೆ ಯಾಕಿದ್ದಾರೆ ಇತ್ಯಾದಿ ಪ್ರಶ್ನೆಗಳು ಕಣ್ಮುಂದೆ ಸರಿದುಹೋದವು. ಅವರನ್ನು ಹಿಂಬಾಲಿಸುವುದೇ ಸರಿ ಅಂದುಕೊಳ್ಳುತ್ತಾ ಆನಂದ ' ಬಾ ರಘು, ಅವರೆಲ್ಲಿಗೆ ಹೋಗುತ್ತಿದ್ದಾರೆ ಅಂತ ನೋಡೋಣ. ಏನೋ ನಡೀತಿದೆ" ಅಂದ.

ರಘುನಂದನ ಒಂದು ನಿಮಿಷ ಇರು ಅನ್ನುತ್ತಾ ಗೇಟು ಮುಚ್ಚುತ್ತಿದ್ದವರಲ್ಲಿ ಒಬ್ಬನನ್ನು ಕರೆದು 'ಎಲ್ಲಿಗೆ ಹೋಗುತ್ತಿರ್ದಾರೆ ಇವರೆಲ್ಲ" ಕೇಳಿದ. ಅವರು ಮಾತಾಡಲಿಲ್ಲ. ' ಹೆದರಬೇಡ. ನಾವೇನೂ ಶತ್ರುಗಳಲ್ಲ. ಸ್ವಾಮೀಜಿಗಳ ಕಡೆಯವರು" ಎಂದು ರಘು ಪುಸಲಾಯಿಸಿದ. 'ಎಲ್ಲಾ ಚಂದ್ರಮೌಳೇಶ್ವರನ ದೇವಸ್ಥಾನಕ್ಕೆ ಹೊಂಟವ್ರೆ" ಎಂದು ಆತ ಮಾಹಿತಿ ಕೊಟ್ಟ. ಅದೆಲ್ಲಿದೆ ಅಂತ ಕೇಳಿದ್ದಕ್ಕೆ ಇಲ್ಲಿಂದ ಮೂವತ್ತು ಮೈಲಿ ಅನ್ನುವ ಉತ್ತರ ಬಂತು.

******

ರಘುನಂದನ ಮತ್ತು ಆನಂದ ಟ್ಯಾಕ್ಸಿ ಮಾಡಿಕೊಂಡು ಚಂದ್ರಮೌಳೇಶ್ವರನ ದೇವಸ್ಥಾನ ತಲುಪುವ ಹೊತ್ತಿಗೆ ಮದುವೆ ನಡೆದುಹೋಗಿತ್ತು. ಹಾರ ಹಾಕಿಕೊಂಡು ವಿದ್ಯಾನಂದ ಮತ್ತು ಭಾರತಿ ನಗುತ್ತಾ ನಿಂತಿದ್ದರು. ವಿದ್ಯಾನಂದರ ನಗೆಯಲ್ಲಿ ಏನೋ ಹುಳುಕಿದೆ ಅಂತ ರಘುವಿಗೆ ಅನ್ನಿಸಿತು.

ಆನಂದ ಬೇರೆಯೇ ಯೋಚಿಸುತ್ತಿದ್ದ.'ಭಾರತಿಯನ್ನು ಮರೆಯುತ್ತೇನೆ ಎಂದ ವಿದ್ಯಾನಂದರು ಮನಸ್ಸು ಬದಲಾಯಿಸಿದ್ದು ಏಕೆ? ನಿಜಕ್ಕೂ ಅವರು ಮನಸ್ಸು ಬದಲಾಯಿಸಿದ್ದಾರಾ? ಅಥವಾ ಚಂದ್ರೇಗೌಡರು ಹೆದರಿಸಿ ಬೆದರಿಸಿ ವಿದ್ಯಾನಂದರನ್ನು ಮದುವೆಗೆ ಒಪ್ಪಿಸಿದ್ದಾರಾ? ಅವರ ಸಮ್ಮತಿ ಇಲ್ಲದೆಯೇ ಈ ಮದುವೆ ನಡೆದುಹೋಗಿರಬಹುದೇ?

ರಘುನಂದನನಲ್ಲಿ ಪ್ರಶ್ನೆಗಳಿರಲಿಲ್ಲ. ಅವನ ಕಣ್ಣಿಗೆ ಭಾರತಿ ಅಂಥ ಅಪೂರ್ವ ಸೌಂದರ್ಯವತಿಯಂತೇನೂ ಕಾಣಿಸಲಿಲ್ಲ. ಆದರೆ ಅವಳ ನಿಲುವಿನಲ್ಲೊಂದು ಸೊಗಸಿತ್ತು. ಯಾವತ್ತೂ ಆಕಳಿಸದ ಚೆಲುವೆಯಂತೆ, ಎವೆಮುಚ್ಚದ ದೇವತೆಯಂತೆ ಭಾರತಿ ತನಗೇಕೆ ಕಾಣಿಸುತ್ತಿದ್ದಾಳೆ ಎಂದುಕೊಳ್ಳುತ್ತಾ ಆತ ನಿಂತ ನಿಲುವಲ್ಲೇ ಕಲ್ಲಾದ.

ಆಮೇಲೆ ಆನಂದ ಮತ್ತು ರಘುನಂದನರನ್ನು ನೋಡಿ ಯಾವ ಆಘಾತವೂ ಆಗದವರಂತೆ ವಿದ್ಯಾನಂದರು ನಕ್ಕರು. ಆನಂದ ಫೋಟೋ ಕ್ಲಿಕ್ಕಿಸಿದಾಗ ಅತ್ಯಂತ ಸಾದಾ ದಂಪತಿಯರಂತೆ ಪೋಸು ಕೊಟ್ಟರು.

ಮಾರನೆಯ ದಿನ ಆನಂದನ ಪತ್ರಿಕೆಯ ಮುಖಪುಟದಲ್ಲಿ ವಿದ್ಯಾನಂದಭಾರತಿಯರ ಫೋಟೋ ಪ್ರಕಟವಾಯಿತು.

ಪತ್ರಿಕೆ ಮಾರುಕಟ್ಟೆಗೆ ಬಂದು ಒಂದು ಗಂಟೆಯ ನಂತರ ಆನಂದನ ಆಫೀಸಿಗೆ ತೋಳ್ಪಡಿತ್ತಾಯರ ಫೋನು ಬಂತು.

ಆನಂದ ಆಫೀಸಿನಲ್ಲಿ ಇರಲಿಲ್ಲ.

English summary
Daily Novel series - episode 61
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X