• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನ ಸುರುಚಿ ರಂಗಮನೆಯಲ್ಲಿ ‘ಯುಗಾಂತ’ !

By Staff
|
  • ಎಚ್‌. ವೆಂಕಟೇಶ್‌, ಮೈಸೂರು

ದಿವಂಗತ ಪ್ರೊ।। ಸಿಂಧುವಳ್ಳಿ ಅನಂತಮೂರ್ತಿಯವರ, ಮೈಸೂರಿನ ‘ಸುರುಚಿ ರಂಗಮನೆ’ ರಂಗಭೂಮಿಯಾಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ನಾಟಕಪ್ರಯೋಗಗಳ ಜೊತೆ ವಿವಿಧ ಕಲಾ ಪ್ರಕಾರಗಳ ಉಳಿವಿಗೂ ‘ಸುರುಚಿ’ ಕಂಕಣಬದ್ಧವಾಗಿದೆ. ಈ ರಂಗಮನೆ ಈ ಬಾರಿ ನೂರಾ ಹನ್ನೊಂದು-ಹನ್ನೆರಡನೆಯ ಕಾರ್ಯಕ್ರಮವಾಗಿ, ಡಾ। ಮ. ಸು. ಕೃಷ್ಣಮೂರ್ತಿಯವರ ‘ಯುಗಾಂತ’ ನಾಟಕವನ್ನು ಇದೇ ಆಗಸ್ಟ್‌ 20 ಮತ್ತು 21ರಂದು ಮೈಸೂರಿನ ಕುವೆಂಪುನಗರದಲ್ಲಿನ ಚಿತ್ರಭಾನುರಸ್ತೆಯಲ್ಲಿರುವ ಸುರುಚಿ ರಂಗಮನೆಯ ಸಭಾಂಗಣದಲ್ಲಿ ಪ್ರದರ್ಶನಕ್ಕೆ ತಂದಿತ್ತು. (ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ: ಶ್ರೀಮತಿ ವಿಜಯಾ ಸಿಂಧುವಳ್ಳಿ)

ನಾಟಕ ‘ಯುಗಾಂತ’ :

‘ಯುಗಾಂತ’ದ ವಸ್ತು ಮಹಾಭಾರತವನ್ನು ಕುರಿತದ್ದು. ಪಂಪ ರನ್ನರ ಪರಂಪರೆಯ ಮುಂದುವರೆದ ರೂಪ. ಇದು ಕುರುಕ್ಷೇತ್ರದ ನಂತರ ನಡೆಯುವ ಬೆಳವಣಿಗೆಯನ್ನು ವಿಶ್ಲೇಷಿಸುವ ಒಂದು ಯತ್ನ. ಪಾತ್ರಗಳನ್ನು ತನ್ನದೇ ಆದ ದೃಷ್ಟಿಯಿಂದ ಕಂಡರಿಸಿರುವ ಬಗೆ. ಅದರ ಒಳಮುಖವನ್ನು ಸಂವಾದದ ಮೂಲಕ ಹೊರತೆಗೆಯುವ ಒಂದು ಪ್ರಯತ್ನ. ಹಾಗಾಗಿ, ನಾಟಕಕಾರ ಡಾ। ಮ. ಸು. ಕೃಷ್ಣಮೂರ್ತಿಯವರ ಹರಿತ ಸಂಭಾಷಣೆಯೇ ನಾಟಕದ ಜೀವಾಳ.

ನಿದರ್ಶನಕ್ಕೆ ನಾಟಕದ ಪಾತ್ರಗಳ ಈ ಕೆಲವು ಮಾತುಗಳನ್ನು ಗಮನಿಸಿ :

‘‘ಪುತ್ರ ವ್ಯಾಮೋಹದಲ್ಲೆಲ್ಲೊ ನಾನು ತಪ್ಪು ಮಾಡಿದೆ ಎನಿಸುತ್ತದೆ, ಸಂಜಯ’’ -ಧೃತರಾಷ್ಟ್ರ.

‘‘ಚೆಲ್ಲಿಹೋದ ಹಾಲಿಗಾಗಿ ಅತ್ತರೇನು ಬಂತು, ಮಹಾರಾಜ’’ -ಸಂಜಯ.

‘‘ಚಂದ್ರವಂಶದಲ್ಲೇ ಆಗಲಿ, ಸೂರ್ಯವಂಶದಲ್ಲೇ ಆಗಲಿ, ಭಾರತೀಯ ರಾಜಪರಂಪರೆಯಲ್ಲಿ ಹಿರಿಯಮಗನಿಗೇ, ಅವನ ಮಕ್ಕಳಿಗೇ ರಾಜ್ಯವಾಳಲು ಹಕ್ಕಿದೆಯೇ ವಿನಾ, ಬೇರೆ ಮಕ್ಕಳಿಗೆ ಹಕ್ಕು ಇದೆಯೇನು? ರಾಜ್ಯವಿಭಜನೆ ಮಾಡಿ ಮಕ್ಕಳಿಗೆ ರಾಜ್ಯ ಹಂಚಿದ ಪುರಾವೆ ಇದೆಯೇನು? ಉಸ್ತುವಾರಿ ರಾಜನ ಮಕ್ಕಳಿಗೆ ರಾಜ್ಯವಾಳಲು ಎಲ್ಲಿಂದ ಬಂದೀತು ಹಕ್ಕು?’’ -ಸುಯೋಧನ.

‘‘ಯುಧಿಷ್ಠಿರಾ, ನಿಮ್ಮ ಸ್ವಾರ್ಥಕ್ಕಾಗಿ ಗುರುಜನರ ಬಂಧುಬಾಂಧವರ ರಕ್ತದ ಕೋಡಿ ಹರಿಸಿದ ಈ ನಿಮ್ಮ ರಕ್ತಪಿಪಾಸೆ ಇನ್ನೂ ತಣಿದಿಲ್ಲ!’’ -ಸುಯೋಧನ.

‘‘ದುರ್ಯೋಧನಾ, ನಿನ್ನ ಪಾಪ ಎಣಿಕೆಗೇ ಮೀರಿದ್ದು, ನಿನ್ನ ಪಾಪಪರಂಪರೆ ಒಂದೇ ಎರಡೇ? ಈಗ ನಾನು ಅದರ ಲೆಕ್ಕ ತೀರಿಸಲು ಬಂದಿದ್ದೇನೆ.’’ -ಭೀಮಸೇನ.

‘‘ಭೀಮ, ಮುಖವನ್ನು ಏನು ನೋಡುತ್ತಿದ್ದೀಯ! ರಾಚು ನಿನ್ನ ಗದೆಯನ್ನ; ಮುಗಿಸಿಬಿಡು ಶತ್ರುವನ್ನು!’’ -ಶ್ರೀಕೃಷ್ಣ.

‘‘ಕುರುಕುಲದ ಕರ್ಣಾಧಾರವೇ ಕುರುಡು; ಅದಕ್ಕೇನೂ ಏನೂ ಕಾಣದು’’ -ಧೃತರಾಷ್ಟ್ರ.

‘‘ಕೆಲವು ಸಲ ಘಟನೆಗಳು ನಮ್ಮ ಎಣಿಕೆಗೂ ಮೀರಿ ನಡೆದು ಹೋಗುತ್ತವೆ, ಮಕ್ಕಳೇ!’’ - ಭೀಷ್ಮ

‘‘ಕುರುಕುಲದ ಮೇಲೆ ನನ್ನ ತಿರಸ್ಕಾರ ನನ್ನ ನರನರದಲ್ಲೂ ತುಂಬಿಹೋಗಿತ್ತು!’’ -ಗಾಂಧಾರಿ.

‘‘ಇರುವ ಗೋಡೆಗಳನ್ನು ಉರುಳಿಸುವುದು ಸುಲಭ; ಆದರೆ, ಆ ಗೋಡೆ ಕಟ್ಟುವುದು ಅಷ್ಟು ಸುಲಭವಲ್ಲ.’’ -ಅರ್ಜುನ.

‘‘ನಾನು ಪಾಪಿ, ದೇಶದ್ರೋಹಿ, ನರಾಧಮನೇನು? ನನಗೆ ಈ ರಾಜ್ಯದಮೇಲೆ ಹಕ್ಕಿಲ್ಲವೆ? ನಾವು ದೇವತೆಗಳ ಅನುಗ್ರಹದಿಂದ ಹುಟ್ಟಿದವರು. ನನ್ನನ್ನು ನೀವು ಹೀಗೆಲ್ಲ ಕಲಿಪುರುಷ, ಯುಗಾಂತಕಾರಕ ಎಂದೆಲ್ಲ ಎನ್ನುತ್ತೀರಲ್ಲ, ಇವುಗಳ ಅರ್ಥವೇನು ಬಲ್ಲಿರೇನು?’’ -ಯುಧಿಷ್ಠಿರ.

‘‘ಇದು ಪ್ರಳಯಕ್ಕಿಂತಲೂ ಭಯಂಕರ; ಕೇಳಲು ಎದೆ ಗಟ್ಟಿ ಮಾಡಿಕೋ, ಅಣ್ಣಾ!’’ -ನಕುಲ.

-ಹೀಗೆ ಸಂವಾದಗಳ ಮೂಲಕ ಕರ್ಮ ವಿಪರ್ಯಯವನ್ನು, ಪಾತ್ರಗಳ ಒಳಮುಖವನ್ನು ಅನಾವರಣಗೊಳಿಸುತ್ತಾ ‘ಯುಗಾಂತ’ ಸಾಗುತ್ತದೆ, ತನ್ನದೇ ಆದ ವಿಶಿಷ್ಟತೆಯಾಂದಿಗೆ.

ನಾಟಕಕಾರ :

Play-write Krishnamurthy and Director Ramannaನಾಟಕಕಾರ ಡಾ। ಮ. ಸು. ಕೃಷ್ಣಮೂರ್ತಿಯವರು ಕನ್ನಡದ ಅತ್ಯುತ್ತಮ ಅನುವಾದಕರಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದದ ಹಿಂದೀ ವಿಭಾಗದ ಪ್ರಾಧ್ಯಾಪಕರೂ ಹಾಗೂ ಮುಖ್ಯಸ್ಥರೂ ಆಗಿದ್ದು, ನಿವೃತ್ತರಾಗಿರುವ ಇವರು ಹಿಂದೀ ಸಾಹಿತ್ಯವನ್ನು ಕುರಿತು ಕನ್ನಡದಲ್ಲಿ ವಿಪುಲವಾಗಿ ಬರೆದಿದ್ದಾರೆ. ಇವರು ಸ್ವೋಪಜ್ಞ ಸೃಜನಶೀಲ ಲೇಖಕರು. ಹತ್ತು ಕಾದಂಬರಿಗಳು, ಏಳು ಪ್ರಬಂಧ ಸಂಕಲನಗಳು, ಏಳು ವಿಮರ್ಶಾ ಸಂಶೋಧನಾ ಕೃತಿಗಳು, ಹದಿಮೂರು ಮಕ್ಕಳ ಸಾಹಿತ್ಯ ಕೃತಿಗಳು, ಹಿಂದಿಯಿಂದ ರಾಮಚರಿತ ಮಾನಸ, ಮೃಗನಯಿನಿ, ಮೇಘದೂತ, ಕೋಮಲ ಗಾಂಧಾರ, ಚಿದಂಬರಾ ಸಂಚಯನ -ಮುಂತಾದ ಹನ್ನೆರಡು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ರತ್ನಕಂಕಣ’, ‘ಬಂಗಾರದ ಹುಳು’ -ಎಂಬ ಎರಡು ನಾಟಕಗಳನ್ನು ರಚಿಸಿದ್ದಾರೆ. ಈಗ ಇವರ ಮೂರನೆಯ ನಾಟಕ ‘ಯುಗಾಂತ’ ಸುರುಚಿ ರಂಗಮಂದಿರದಲ್ಲಿ ಪ್ರದರ್ಶಿತವಾಯಿತು.

ನಿರ್ದೇಶಕ :

ನಿರ್ದೇಶಕ ಶ್ರೀ ಉಬ್ಬೂರು ಎಸ್‌. ರಾಮಣ್ಣ ಅವರು ಉತ್ಸಾಹೀ ರಂಗಕರ್ಮಿಗಳು. ಹವ್ಯಾಸೀ ರಂಗದ ಅಜಾತಶತ್ರು. ಸದಾ ಹಸನ್ಮುಖಿ, ಸ್ನೇಹಮಯಿ. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಸ್ತುಸಂಗ್ರಹಾಲದ ಮುಖ್ಯ ಪಾಲಕ-ನಿರ್ವಾಹಕ (ಕುರೇಟರ್‌) ಆಗಿದ್ದ ಶ್ರೀ ರಾಮಣ್ಣನವರು ಶಿವಮೊಗ್ಗದ ಮಲೆನಾಡ ಪರಿಸರದಿಂದ ಬಂದವರು; ಶ್ರೀಮತಿ ಉಬ್ಬೂರು ಕಮಲಮ್ಮ ಮತ್ತು ಶ್ರೀ ಶಾಮಯ್ಯಗೌಡರ ಮಕ್ಕಳು. ಕಳೆದ ಮೂವತ್ತು ವರುಷಗಳಿಂದ ಹವ್ಯಾಸೀ ರಂಗದಲ್ಲಿ ಕ್ರಿಯಾಶೀಲರಾಗಿ ದುಡಿಯುತ್ತಾ, ರಂಗಭೂಮಿಗೆ ಗಟ್ಟಿಯಾದ ನೆಲೆಯನ್ನು ಒದಗಿಸಿರುವವರು. ಜನಪದ ಕಲಾವಿದರೂ ಆಗಿರುವ ಇವರು ‘ಜಾಣನರಿ’ ಮತ್ತು ‘ಜಾನಪದ ವಸ್ತುಸಂಗ್ರಹಾಲಯ’ (ಪ್ರಕಟಣೆ: ಕನ್ನಡ ಭಾರತಿ, ಕುವೆಂಪುವಿಶ್ವವಿದ್ಯಾನಿಲಯ, ಶಂಕರಘಟ್ಟ, ಶಿವಮೊಗ್ಗ, 2ಂಂ4) ಎಂಬ ಪುಸ್ತಕಗಳನ್ನೂ ಹೊರತಂದಿದ್ದಾರೆ. ಕೈದಿಗಳ ಮನ:ಪರಿವರ್ತನಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಏಕವ್ಯಕ್ತಿ ಪ್ರದರ್ಶನದಲ್ಲಿ ಸಿದ್ಧಹಸ್ತರು. ಚಮ್ಮಾರನ ಪಾತ್ರದಿಂದ ಬುದ್ಧನ ಪಾತ್ರದವರೆಗೆ ಅನೇಕ ಬಗೆಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

‘ಶಾಪ’, ‘ದೊಡ್ಡಪ್ಪ’, ‘ಹಾವು ಹರಿದಾಡತಾವ’, ‘ಯಮನಸೋಲು’ -ಮುಂತಾದ ನಾಟಕಗಳಲ್ಲಿ ಮುಖ್ಯಪಾತ್ರಗಳಲ್ಲಿ ಶ್ರೀ ರಾಮಣ್ಣ ಕಾಣಿಸಿಕೊಂಡಿದ್ದಾರೆ. ‘ಹದ್ದು ಮೀರಿದ ಹಾದಿ’ ನಾಟಕ ಇವರ ನಿರ್ದೇಶನ ನಿಪುಣತೆಗೆ ಸಾಕ್ಷಿ. ಈ ‘ಹದ್ದು ಮೀರಿದ ಹಾದಿ’ ನಾಟಕವು ಮುಂಬಯಿಯಲ್ಲಿ ನಡೆದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡದ್ದು ಒಂದು ಹೆಮ್ಮೆಯ ಸಂಗತಿ. ಪ್ರಸ್ತುತ ಡಾ। ಮ ಸು ಕೃಷ್ಣಮೂರ್ತಿಯವರ ‘ಯುಗಾಂತ’ ನಾಟಕವು ಇವರ ನಿರ್ದೇಶನದಲ್ಲಿ ರಂಗಪ್ರಯೋಗವಾಯಿತು.

ಪೂರಕ ಓದಿಗೆ-

‘ಯುಗಾಂತ’ ನಾಟಕ : ಒಂದು ವಿಶಿಷ್ಟ ಪ್ರಯೋಗ

ಸಾಹಿತ್ಯ ಕೃಷಿಕ ಡಾ।। ಮ. ಸು. ಕೃಷ್ಣಮೂರ್ತಿ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more