ಸ್ಟಾರ್ ಪ್ರಚಾರಕರ ಜೊತೆ ವೇದಿಕೆ ಹಂಚಿಕೊಂಡರೆ ವೆಚ್ಚ ಅಭ್ಯರ್ಥಿ ಖಾತೆಗೆ
ಬೆಂಗಳೂರು, ಏಪ್ರಿಲ್ 24: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 77ರ ಪ್ರಕಾರ ಚುನಾವಣಾ ಪ್ರಚಾರ ಅವಧಿಯಲ್ಲಿ ತಮ್ಮ ಚುನಾವಣಾ ಖರ್ಚು, ವೆಚ್ಚಗಳ ಮಾಹಿತಿಯನ್ನು ಕಡ್ಡಾಯವಾಗಿ ಮೂರು ಬಾರಿ ಚುನಾವಣಾ ವೆಚ್ಚ ವೀಕ್ಷಕರಿಗೆ ಸಲ್ಲಿಸಬೇಕಿದೆ.
ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಪಾಸ್‌ಬುಕ್ ಜೊತೆಗೆ ಖರ್ಚು, ವೆಚ್ಚಗಳ ಲೆಕ್ಕ ಪುಸ್ತಕ, ಎಲ್ಲ ಮೂಲ ರಶೀದಿಗಳನ್ನು ಖುದ್ದಾಗಿ ಅಥವಾ ತಮ್ಮ ಚುನಾವಣಾ ಏಜೆಂಟ್ ಮೂಲಕ ಚುನಾವಣಾ ವೆಚ್ಚ ವೀಕ್ಷಕರಿಗೆ ಸಲ್ಲಿಸಬೇಕು. ವೀಕ್ಷಕರು ಮೂರು ಬಾರಿ ಇವುಗಳನ್ನು ಪರಿಶೀಲನೆ ಮಾಡುತ್ತಾರೆ.

ಸ್ಟಾರ್ ಪ್ರಚಾರಕರ ನಿಯಮಗಳು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಆಯಾ ಪಕ್ಷದ ತಾರಾಪ್ರಚಾರಕರ ಜತೆ ಪ್ರಚಾರ ಕಾರ್ಯಕ್ರಮದ ವೇದಿಕೆಯನ್ನು ಹಂಚಿಕೊಂಡರೆ ಆ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲಾಗುತ್ತದೆ.
ಈ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿಯೂ ಮಾಹಿತಿ ನೀಡಲಾಗಿದೆ. ಅಲ್ಲದೇ ಈ ಕುರಿತು ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರಿಗೆ ಸಹ ಮಾಹಿತಿ ನೀಡಲಾಗಿದ್ದು, ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲಾಗುತ್ತದೆ.
ತಾರಾ ಪ್ರಚಾರಕರ ಜತೆ ಅಭ್ಯರ್ಥಿಗಳು ವೇದಿಕೆ ಹಂಚಿಕೊಂಡರೆ ಅಥವಾ ತಾರಾ ಪ್ರಚಾರಕರು ಅಭ್ಯರ್ಥಿಗಳ ಹೆಸರು ಪ್ರಸ್ತಾಪಿಸಿದರೆ, ಕಾರ್ಯಕ್ರಮದ ವೇದಿಕೆ ಅಥವಾ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಬಳಸಿದರೆ ಸದರಿ ಪ್ರಚಾರ ಕಾರ್ಯಕ್ರಮದ ಖರ್ಚು-ವೆಚ್ಚವನ್ನು ಸಂಬಂಧಿಸಿದ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ.
ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ಪ್ರಕರಣ ದಾಖಲಿಸಲಾಗುತ್ತದೆ. ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಚಾರಕಾರ್ಯ ಕೈಗೊಳ್ಳಬೇಕಾದರೆ ಮುಂಚಿತವಾಗಿ ಸಂಬಂಧಿಸಿದ ಸಂಸ್ಥೆಯಿಂದ ಅನುಮತಿ ಪಡೆದುಕೊಳ್ಳಬೇಕಿದೆ.
ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರು ಹಾಗೂ ವೆಚ್ವ ವೀಕ್ಷಕರು ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಆದ್ದರಿಂದ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಲೋಪದೋಷಗಳು ಕಂಡುಬಂದರೆ ವೀಕ್ಷಕರಿಗೆ ಮಾಹಿತಿಯನ್ನು ನೀಡಬಹುದು.
ಪ್ರತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯು 95 ಲಕ್ಷ ರೂಪಾಯಿ ವೆಚ್ಚ ಮಾಡಬಹುದು. ಚುನಾವಣಾ ಪ್ರಚಾರ, ವಾಹನ ಬಳಕೆ, ಜಾಹೀರಾತು ಇತ್ಯಾದಿ ಕಾನೂನು ಬದ್ಧ ವೆಚ್ಚಗಳನ್ನು ಮಾಡಬಹುದು. ಆದರೆ ಮತದಾರರಿಗೆ ಊಟ ಅಥವಾ ಆಮಿಷಗಳನ್ನು ಒಡ್ಡುವಂತಿಲ್ಲ.
ಅಭ್ಯರ್ಥಿಗಳು ತಮ್ಮ ಜಂಟಿ ಖಾತೆಯ ಮೂಲಕವೇ ಚುನಾವಣಾ ಪ್ರಚಾರದ ವೆಚ್ಚ ಮಾಡಬಹುದು. 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಕಡ್ಡಾಯವಾಗಿ ಚೆಕ್ ಮೂಲಕವೇ ಮಾಡಬೇಕು. ಯುಪಿಐ ಮೂಲಕ ಕೂಡ ವೆಚ್ಚ ಪಾವತಿಸಬಹುದು.
ಪ್ರಚಾರದ ಸಮಯದಲ್ಲಿ ಜಾತಿ-ಧರ್ಮ, ಸಮುದಾಯ, ಭಾಷೆಗಳ ಮಧ್ಯೆ ಸಂಘರ್ಷಕ್ಕೆ ಪ್ರಚೋದನೆ ನೀಡುವುದು ಹಾಗೂ ಮತದಾರರಿಗೆ ಹಣ ಅಥವಾ ಯಾವುದೇ ಬಗೆಯ ವಸ್ತುಗಳ ಉಡುಗೊರೆಯ ಆಮಿಷಯೊಡ್ಡುವುದು ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗುತ್ತದೆ. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಅನುಮತಿಯ ಅಗತ್ಯವಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡು ಪ್ರಚಾರ ಮಾಡಬೇಕಾಗಿರುತ್ತದೆ.
ಕರ್ನಾಟಕದಲ್ಲಿ ಒಟ್ಟು 2 ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದ ಮತದಾನ ಏಪ್ರಿಲ್ 26ರ ಶುಕ್ರವಾರ ನಡೆಯಲಿದೆ. ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ಸಂಜೆ ಅಂತ್ಯಗೊಳ್ಳಲಿದೆ. 2ನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ.
ಏಪ್ರಿಲ್ 26ರ ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.












Click it and Unblock the Notifications