• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್-ಸದರ್ ಬೆಂಬಲಿಗರಿಂದ ದಂಗೆ; ಇರಾಕ್‌ನಲ್ಲಿ ನಡೆಯುತ್ತಾ ಸಿವಿಲ್ ವಾರ್?

|
Google Oneindia Kannada News

ರಾಜಧಾನಿ ನಗರಿಯಲ್ಲಿ ಜನರ ಬೃಹತ್ ಪ್ರತಿಭಟನೆ... ಅಧ್ಯಕ್ಷರ ಭವನದೊಳಗೆ ಜನರ ಮುತ್ತಿಗೆ... ಈಜುಕೊಳದಲ್ಲಿ ಜನರ ಈಜಾಟ... ಇದು ಶ್ರೀಲಂಕಾದಲ್ಲಿ ನಡೆಯುತ್ತಿರುವ ಘಟನೆ ಎಂದು ಕೂಡಲೇ ಅನಿಸಬಹುದು. ಆದರೆ, ಇದು ಆಗಿರುವುದು ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ.

ಇರಾಕ್‌ನ ಧರ್ಮಗುರು ಹಾಗೂ ಆ ದೇಶದ ಅತಿ ಜನಪ್ರಿಯ ನಾಯಕನೆಂದು ಪರಿಗಣಿತವಾಗಿರುವ ಮುಖ್ತಾದ ಅಲ್-ಸದರ್ ಅವರ ಬೆಂಬಲಿಗರು ಬಾಗ್ದಾದ್‌ನಲ್ಲಿ ನಿನ್ನೆ ಸೋಮವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರಿ ಕಚೇರಿಗಳು, ವಿದೇಶೀ ರಾಯಭಾರ ಕಚೇರಿಗಳಿರುವ ಪ್ರದೇಶಕ್ಕೆ ಲಗ್ಗೆ ಹಾಕಿ ಹೋರಾಟ ಮಾಡುತ್ತಿದ್ದಾರೆ. ಮಂಗಳವಾರ ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ಮಧ್ಯೆ ನಡೆದ ಘರ್ಷಣೆಯಲ್ಲಿ 23 ಮಂದಿ ಸಾವನ್ನಪ್ಪಿದ್ದು, 380ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಬಹುತೇಕರು ಅಲ್-ಸದರ್ ಬೆಂಬಲಿಗರೇ ಆಗಿದ್ದಾರೆ. ಗಾಯಾಳುಗಳೂ ಅವರೇ ಹೆಚ್ಚು.

ಇರಾಕ್: ಕುರ್ದಿಸ್ತಾನ್ ಪ್ರದೇಶದಲ್ಲಿ ಸತತವಾಗಿ ರಾಕೆಟ್ ದಾಳಿಇರಾಕ್: ಕುರ್ದಿಸ್ತಾನ್ ಪ್ರದೇಶದಲ್ಲಿ ಸತತವಾಗಿ ರಾಕೆಟ್ ದಾಳಿ

ಮುಖ್ತಾದ ಅಲ್ ಸದರ್ ತಾನು ರಾಜಕೀಯವಾಗಿ ನಿವೃತ್ತಿಯಾಗುವುದಾಗಿ ಹೇಳಿದ ಕಾರಣಕ್ಕೆ ಅವರ ಬೆಂಬಲಿಗರು ರೊಚ್ಚಿಗೆದ್ದು ಬೀದಿಗೆ ಇಳಿದು ಹೋರಾಡುತ್ತಿದ್ದಾರೆ. ಇರಾಕ್ ದೇಶ ನಾಗರಿಕ ಯುದ್ಧಕ್ಕೆ (Civil War) ಜಾರುತ್ತಿರುವ ಸೂಚನೆ ಕಾಣುತ್ತಿದೆ. ಬಡತನ, ಭ್ರಷ್ಟಾಚಾರದಿಂದ ನಲುಗಿರುವ ಇರಾಕ್‌ನಲ್ಲಿ ಜನಕ್ರಾಂತಿ ನಡೆಯುತ್ತಿರುವ ಸುಳಿವು ಇದೆ.

ಅಮೆರಿಕ, ಇರಾನ್ ದೇಶಗಳ ಕಣ್ಣು ಇರಾಕ್ ಮೇಲೆ ಗಂಭೀರವಾಗಿ ನೆಟ್ಟಿದೆ. ಅಷ್ಟಕ್ಕೂ ಮುಖ್ತಾದ ಅಲ್ ಸದರ್ ಯಾರು? ಅವರು ರಾಜಕೀಯ ನಿವೃತ್ತಿಯಾದರೆ ಅವರ ಬೆಂಬಲಿಗರಿಗೇಕೆ ಆಕ್ರೋಶ?

ಇಂಗ್ಲೀಷ್ ಬರಲ್ಲವೆಂದು ಅವಮಾನಿತನಾಗಿದ್ದವ ಈಗ ಬ್ರಿಟನ್‌ನ ಹೊಸ ಹಣಕಾಸು ಮಂತ್ರಿಇಂಗ್ಲೀಷ್ ಬರಲ್ಲವೆಂದು ಅವಮಾನಿತನಾಗಿದ್ದವ ಈಗ ಬ್ರಿಟನ್‌ನ ಹೊಸ ಹಣಕಾಸು ಮಂತ್ರಿ

ಯಾಕೆ ಈ ಹಿಂಸಾಚಾರ?

ಯಾಕೆ ಈ ಹಿಂಸಾಚಾರ?

ಕಳೆದ ವರ್ಷ ನಡೆದ ಇರಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟಕ್ಕೂ ಬಹುಮತ ಬಂದಿರಲಿಲ್ಲ. ಮುಖ್ತಾದ ಅಲ್ ಸದರ್ ಅವರ ಸದರಿಸ್ಟ್ ಮೂವ್ಮೆಂಟ್ ಪಕ್ಷ 329 ಸ್ಥಾನಗಳ ಪೈಕಿ 73 ಅನ್ನು ಗೆದ್ದಿದೆ. ಕಳೆದ ಬಾರಿ 48 ಸ್ಥಾನ ಗಳಿಸಿದ್ದ ಇರಾನ್ ಬೆಂಬಲಿತ ಪಕ್ಷಗಳ ಘಟಕ ಕೇವಲ 17 ಗೆಲ್ಲಲು ಯಶಸ್ವಿಯಾಗಿತ್ತು. ಮಾಜಿ ಪ್ರಧಾನಿ ನೌರಿ ಅಲ್-ಮಲಿಕಿಯವರ ಪಕ್ಷ 33 ಸ್ಥಾನಗಳನ್ನು ಗೆದ್ದಿತು.

ಇಲ್ಲಿ ಮುಖ್ತಾದ ಅಲ್ ಸದರ್ ಸರಕಾರ ರಚಿಸಬೇಕಿತ್ತು. ಅವರು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿದರು. ಕುರ್ಡಿಶ್, ಸುನ್ನಿ ಅರಬ್ ಸಂಘಟನೆಗಳ ಸದಸ್ಯರನ್ನೂ ಒಳಗೊಂಡಂತೆ ಮೈತ್ರಿ ಮಾಡಿಕೊಂಡು ಅವರು ಸರಕಾರ ರಚಿಸಲು ಹೊರಟರು. ಆದರೆ, ಅವರಿಗೆ ಬಹುಮತ ಸಿಗದ ರೀತಿಯಲ್ಲಿ ಇರಾನ್ ಬೆಂಬಲಿತ ರಾಜಕೀಯ ಪಕ್ಷಗಳು ನಿರಂತರ ಪ್ರಯತ್ನಗಳನ್ನು ಮಾಡಿದವು.

ಹಲವು ತಿಂಗಳಾದರೂ ಸದರ್‌ಗೆ ಸರಕಾರ ರಚಿಸಲು ಆಗಲಿಲ್ಲ. ಇದರಿಂದ ಹತಾಶರಾದ ಅಲ್ ಸದರ್ ತನ್ನ ಸಂಸದರಿಗೆ ರಾಜೀನಾಮೆ ನೀಡುವಂತೆ ಜೂನ್‌ನಲ್ಲಿ ತಿಳಿಸಿದರು.

ಅದಾದ ಬಳಿಕ ಮಾಜಿ ಪ್ರಧಾನಿ ನೌರಿ ಅಲ್-ಮಲಿಕಿ ತಮ್ಮನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರು. ಸದರ್ ವಿರೋಧಿಸಿದ್ದರಿಂದ ಇತರ ಪಕ್ಷಗಳು ಮೊಹಮ್ಮದ್ ಶಿಯಾ ಅಲ್-ಸುಡಾನಿ ಎಂಬಾತನನ್ನು ಅಭ್ಯರ್ಥಿಯಾಗಿ ಘೋಷಿಸಿದವು. ಇದು ಅಲ್-ಸದರ್ ಬೆಂಬಲಿಗರನ್ನು ರೊಚ್ಚಿಗೇಳಿಸಲು ಕಾರಣವಾಗಿದೆ.

ಯಾರು ಈ ಅಲ್ ಸದರ್?

ಯಾರು ಈ ಅಲ್ ಸದರ್?

ಮುಖ್ತಾದ ಅಲ್-ಸದರ್ ಒಂದು ಕಾಲದಲ್ಲಿ ಅಮೆರಿಕದ ಹಿಟ್‌ಲಿಸ್ಟ್‌ನಲ್ಲಿದ್ದವರು. ಇರಾಕ್‌ನ ಶಿಯಾ ಧಾರ್ಮಿಕ ಮುಖಂಡ. 2003ರಲ್ಲಿ ಅಮೆರಿಕ ದಾಳಿಯ ಬಳಿಕ ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಸರಕಾರ ಪತನವಾಗಿತ್ತು. ಆ ಸಂದರ್ಭದಲ್ಲಿ ಅಮೆರಿಕದ ಪಡೆಗಳ ವಿರುದ್ಧ ಉಗ್ರ ಹೋರಾಟ ಮತ್ತು ಪ್ರತಿರೋಧ ತೋರಿದ್ದು ಮುಕ್ತಾದ ಅಲ್ ಸದರ್. ಹೀಗಾಗಿ, ಸದ್ದಾಂ ಹುಸೇನ್‌ರನ್ನು 2006ರಲ್ಲಿ ನೇಣಿಗೇರಿಸಿದ ಬಳಿಕ ಅಮೆರಿಕದ ಸೇನಾ ಪಡೆಗಳು ಅಲ್ ಸದರ್‌ರನ್ನು ಸದೆಬಡಿಯಲು ಯೋಜಿಸಿದ್ದವು.

ತಮ್ಮದೇ ಸ್ವಂತ ಮಹದಿ ಪಡೆಯನ್ನು ಕಟ್ಟಿ ಅವರು ಅಮೆರಿಕ ಮತ್ತು ಇರಾನ್ ಬೆಂಬಲಿತ ಪಡೆಗಳ ವಿರುದ್ಧ ಪ್ರಬಲ ಹೋರಾಟಗಳನ್ನು ಮಾಡಿದರು. ಇಲ್ಲಿ ಕುತೂಹಲದ ಅಂಶವೆಂದರೆ ಇರಾಕ್‌ನಲ್ಲಿ ಶಿಯಾ ಮತ್ತು ಸುನ್ನಿ ನಡುವೆ ತಿಕ್ಕಾಟ ಇದೆ. ಸದ್ದಾಂ ಹುಸೇನ್ ಸುನ್ನಿ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ, ಇರಾಕ್‌ನಲ್ಲಿ ಸುನ್ನಿ ಸಂಖ್ಯೆ ಸುಮಾರು ಶೇ. 40 ಇರಬಹುದು. ಶಿಯಾ ಮುಸ್ಲಿಮರ ಸಂಖ್ಯೆ ಶೇ. 55ಕ್ಕೂ ಹೆಚ್ಚಿದೆ.

ಇರಾಕ್ ನೆರೆಯಲ್ಲಿರುವ ಇರಾನ್ ಶಿಯಾ ಪ್ರಾಬಲ್ಯದ ದೇಶ. ಇರಾಕ್‌ನಲ್ಲಿ ಶಿಯಾ ಮುಸ್ಲಿಮರನ್ನು ಸೇರಿಸಿ ಅಧಿಕಾರದಲ್ಲಿ ಇಡುವುದು ಇರಾನ್ ತಂತ್ರ. ಅದರಂತೆ ಇರಾನ್ ಬೆಂಬಲಿತ ರಾಜಕೀಯ ಗುಂಪುಗಳು ಇರಾಕ್‌ನಲ್ಲಿ ಸಕ್ರಿಯವಾಗಿವೆ.

ಮುಕ್ತಾದ ಅಲ್ ಸದರ್ ಮೊದಮೊದಲು ಇರಾನ್ ಪರ ಇದ್ದ ನಾಯಕನಾದರೂ ನಂತರ ವರ್ಷಗಳಲ್ಲಿ ಇರಾಕ್ ರಾಷ್ಟ್ರೀಯವಾದವನ್ನು ಅಪ್ಪಿಕೊಂಡರು. ಶಿಯಾ ಸಮುದಾಯದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ಅಲ್ ಸದರ್‌ಗೆ ಬೆಂಬಲ ನೀಡುತ್ತಾರೆ. ಜೊತೆಗೆ ಸುನ್ನಿ ಸಮುದಾಯದವರೂ ಅಲ್ ಸದರ್ ಪರ ಇದ್ದಾರೆ. ಅಲ್ ಸದರ್ ಈಗ ಅಮೆರಿಕ ಮತ್ತು ಇರಾನ್ ಎರಡನ್ನೂ ಸಮಾನ ಶತ್ರುವಾಗಿ ಹೋಡುತ್ತಾರೆ.

ಪೀಸ್ ಬ್ರಿಗೇಡ್ಸ್

ಪೀಸ್ ಬ್ರಿಗೇಡ್ಸ್

48 ವರ್ಷದ ಮುಖ್ತಾದ ಅಲ್ ಸದರ್ ಅವರು ಕಟ್ಟಿದ್ದ ಮೆಹದಿ ಪಡೆ ಇರಾಕ್‌ನ ಅತ್ಯಂತ ಪ್ರಬಲ ಸಶಸ್ತ್ರ ಸಂಘಟನೆ ಎನಿಸಿತ್ತು. ಕೆಲ ವರ್ಷಗಳ ಬಳಿಕ ಮೆಹದಿ ಪಡೆಯನ್ನು ನಿಲ್ಲಿಸಿ ಪೀಸ್ ಬ್ರಿಗೇಡ್ಸ್ ಹೆಸರಿನಲ್ಲಿ ಮರುರೂಪ ಕೊಡಲಾಯಿತು. ಈಗಲೂ ಅದರು ಇರಾಕ್‌ನ ಪ್ರಬಲ ಅರೆಸೇನಾ ಪಡೆಯಾಗಿದೆ.

ಸದ್ದಾಂ ಹುಸೇನ್ ಪತನದ ಬಳಿಕ ಇರಾಕ್‌ನಲ್ಲಿ ರಾಜಕೀಯ ಸ್ಥಿರತೆ ತೋರಿತ್ತಾದರೂ ನಂತರ ವರ್ಷಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಪ್ರಾಬಲ್ಯ ನಡೆಯಿತು. ಅಮೆರಿಕದ ಪಡೆಗಳು ಐಸಿಸ್ ಅನ್ನು ಸೋಲಿಸಿದ ಬಳಿಕ ಇರಾಕ್‌ನಲ್ಲಿ ಎಲ್ಲಾ ಸಮಸ್ಯೆಗಳು ದೂರವಾದಂತೆ ತೋರಿದವು. ಆದರೆ, ವಾಸ್ತವ ಹಾಗಿರಲಿಲ್ಲ.

ಇರಾಕ್ ರಾಜಕೀಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತೈಲ ಸಂಪತ್ತು ಹೇರಳವಾಗಿದ್ದರೂ, ತೈಲ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದ್ದರೂ ಬಡತನ ಈ ದೇಶದಲ್ಲಿ ಹೆಚ್ಚಾಗಿದೆ. ಐಸಿಸ್ ನಿರ್ಮೂಲವಾದರೂ ಇಲ್ಲಿ ಪರಿಸ್ಥಿತಿ ಸುಧಾರಣೆ ಆಗಿಲ್ಲ.

ಅಲ್-ಸದರ್ ಆಶಾಕಿರಣ

ಅಲ್-ಸದರ್ ಆಶಾಕಿರಣ

ಇಂಥ ಸಂದರ್ಭದಲ್ಲಿ ಅಲ್ಲಿನ ಜನರಿಗೆ ಆಶಾಕಿರಣವಾಗಿ ಇರುವುದು ಮುಖ್ತಾದ ಅಲ್-ಸದರ್ ಮಾತ್ರವೇ. ತಮ್ಮ ಪೀಸ್ ಬ್ರಿಗೇಡ್ಸ್ ಮತ್ತು ಸದರಿಸ್ಟ್ ಚಳವಳಿ ಮೂಲಕ ಅವರು ಜನಕ್ರಾಂತಿ ಮಾಡಲು ಹೊರಟಿದ್ದಾರೆ. ಜನರೂ ಕೂಡ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಆದರೆ, ತಮ್ಮ ಬೆಂಬಲಿಗರು ಬಾಗ್ದಾದ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರ ಬಗ್ಗೆ ಅಲ್ ಸದರ್ ಬೇಸರ ವ್ಯಕ್ತಪಡಿಸಿದ್ದಾರೆ. ತನಗೆ ರಕ್ತಪಾತ ಬೇಡ, ಜನಕ್ರಾಂತಿ ಬೇಕು ಎಂದು ಅವರು ಹೇಳಿದ್ದಾರೆ. ಅವರ ಈ ಕ್ರಾಂತಿಯ ಮಾತು ಇರಾಕ್ ಜನರನ್ನು ಒಗ್ಗೂಡಿಸುವ ನಿರೀಕ್ಷೆ ಇದೆ. ಇರಾಕ್‌ನಲ್ಲಿ ಇರಾನ್ ಮತ್ತು ಅಮೆರಿಕದ ಪ್ರಭಾವ ಇಲ್ಲದ ರಾಜಕೀಯ ವಾತಾವರಣ ನಿರ್ಮಾಣಕ್ಕೆ ಈ ಕ್ರಾಂತಿ ಎಡೆಮಾಡಿಕೊಡುತ್ತದಾ ಎಂಬುದು ಪ್ರಶ್ನೆ.

ಹಾಗೆಯೇ, ಇರಾನ್ ಬೆಂಬಲಿತ ಶಕ್ತಿಗಳು ಶಿಯಾ ಸಮುದಾಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರೆ ಇರಾಕ್‌ನಲ್ಲಿ ಸುನ್ನಿ ವರ್ಸಸ್ ಶಿಯಾ ಜನಾಂಗೀಯ ಕಲಹಗಳು ಹೆಚ್ಚಾಗಬಹುದು. ಐಸಿಸ್‌ನಂಥ ರಾಕ್ಷಸೀ ಉಗ್ರ ಶಕ್ತಿಗಳು ಮತ್ತೆ ತಾಂಡವವಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

(ಒನ್ಇಂಡಿಯಾ ಸುದ್ದಿ)

English summary
Iraq's Shia cleric Muqtada Al-Sadr is said be leading the people into a revolution in Iraq, the country facing severe corruption, poverty despite being oil-rich nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X