ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ರಹಸ್ಯ ದಾರಿ ಮೇಲೆ ಸರಕಾರದ ಚಿತ್ತ; ವಿಪಿಎನ್ ಸುದ್ದಿ ಸುತ್ತಮುತ್ತ

|
Google Oneindia Kannada News

ಖಾಸಗಿತನಕ್ಕೆ ಧಕ್ಕೆ ಇಲ್ಲದಂತೆ ಆನ್‌ಲೈನ್‌ನಲ್ಲಿ ಬಹಳ ಗುಪ್ತವಾಗಿ ಬ್ರೌಸ್ ಮಾಡುವ ನಿಮ್ಮ ವಿಪಿಎನ್ ಮಾರ್ಗಕ್ಕೆ ಇನ್ಮುಂದೆ ಪೊಲೀಸ್ ಕಾವಲು ಇರಲಿದೆ. ಅಂದರೆ ವಿಪಿಎನ್ ಬಳಕೆದಾರರ ಜಾಡು ಹಿಡಿಯಲು ಭಾರತ ಸರಕಾರ ನಿರ್ಧರಿಸಿದೆ. ಆನ್‌ಲೈನ್‌ನಲ್ಲಿ ನಿಮಗಿರುವ ಒಂದೇ ಗೌಪ್ಯ ದಾರಿ ಮುಂದೆ ಬಂದ್ ಆಗಲಿದೆ. ಸರಕಾರ ಅಥವಾ ಕಾನೂನು ಪಾಲನಾ ಸಂಸ್ಥೆಗಳ ಕಣ್ತಪ್ಪಿಸಿ ಯಾವುದಕ್ಕೂ ಅವಕಾಶ ಕೊಡಬಾರದೆಂದು ಸರಕಾರ ನಿರ್ಧರಿಸಿದಂತಿದೆ. ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ನಲ್ಲಿ ಕಳೆದ ಐದು ವರ್ಷದಲ್ಲಿ ಜನರು ಏನೇನು ಬಳಕೆ ಮಾಡಿದರು ಅದೆಲ್ಲಾ ದತ್ತಾಂಶವನ್ನು 60 ದಿನದೊಳಗೆ ಸಂಗ್ರಹಿಸಬೇಕೆಂದು ವಿಪಿಎನ್ ಸೇವೆ ನೀಡುವವರಿಗೆ ಭಾರತ ಸರಕಾರ ಇತ್ತೀಚೆಗೆ ನಿರ್ದೇಶನ ನೀಡಿದೆ. 2022, ಜೂನ್ ತಿಂಗಳ ಒಳಗೆ ಎಲ್ಲಾ ವಿಪಿಎನ್ ಸರ್ವಿಸ್ ಪ್ರೊವೈಡರ್‌ಗಳು ಈ ಡಾಟಾವನ್ನು ಸಿದ್ಧಪಡಿಸಿ ಇಟ್ಟುಕೊಂಡಿರಬೇಕು.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೊಸ ಸೈಬರ್ ಸೆಕ್ಯೂರಿಟಿ ನೀತಿ ಭಾಗವಾಗಿ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸೆರ್ಟ್-ಇನ್ CERT-In) ಈ ನಿರ್ದೇಶನ ಹೊರಡಿಸಿರುವುದು ತಿಳಿದುಬಂದಿದೆ. "ಅಗತ್ಯ ಮಾಹಿತಿ ನೀಡದೇ ಹೋದರೆ, ಅಥವಾ ನಿರ್ದೇಶನಗಳನ್ನು ಪಾಲಿಸದೇ ಹೋದರೆ ಶಿಕ್ಷೆ ಎದುರಿಸಬೇಕಾಗುತ್ತದೆ" ಎಂದು ಸೆರ್ಟ್-ಇನ್ ಏಪ್ರಿಲ್ 28ರಂದು ನೀಡಿದ ನಿರ್ದೇಶನದಲ್ಲಿ ಎಚ್ಚರಿಕೆಯನ್ನೂ ಕೊಡಲಾಗಿದೆ.

ಸರಕಾರದ ನಿರ್ದೇಶನವೇನು?

ಸರಕಾರದ ನಿರ್ದೇಶನವೇನು?

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿರುವ ನಿರ್ದೇಶನಗಳ ಪ್ರಕಾರ, ವಿಪಿಎನ್ ಪ್ರೊವೈಡರ್‌ಗಳು ಸರಿಯಾದ ಕ್ರಮದಲ್ಲಿರುವ ಗ್ರಾಹಕರ ಹೆಸರು, ಅವರ ಭೌತಿಕ ವಿಳಾಸ, ಇಮೇಲ್ ಐಡಿ, ಫೋನ್ ನಂಬರ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೆಯೇ ಅವರು ಯಾವ ಕಾರಣಕ್ಕೆ ವಿಪಿಎನ್ ಸೇವೆ ಬಳಸುತ್ತಾರೆ, ಯಾವ ದಿನದಲ್ಲಿ ಅದನ್ನು ಬಳಕೆ ಮಾಡಿದ್ದಾರೆ ಇತ್ಯಾದಿ ವಿವರವನ್ನೂ ಪಡೆದಿಟ್ಟುಕೊಂಡಿರಬೇಕು.

ಇಷ್ಟೇ ಅಲ್ಲ, ವಿಪಿಎನ್ ಬಳಸುವ ಗ್ರಾಹಕರ ಐಪಿ ವಿಳಾಸ, ಹಾಗು ವಿಪಿಎನ್ ಸರ್ವಿಸ್‌ಗೆ ನೊಂದಾಯಿಸುವ ವೇಳೆ ನೀಡಲಾಗುವ ಇಮೇಲ್ ವಿಳಾಸ ಮತ್ತು ನೊಂದಣಿಯಾದ ಸಮಯ ಇವೆಲ್ಲ ವಿವರವನ್ನೂ ನೀಡಬೇಕೆಂದು ಸರಕಾರ ವಿಪಿಎನ್ ನೀಡುಗರಿಗೆ ನಿರ್ದೇಶನ ನೀಡಿದೆ. ಹಾಗೆಯೇ, ಒಬ್ಬ ಗ್ರಾಹಕರಿಗೆ ಯಾವ್ಯಾವ ಐಪಿ ವಿಳಾಸಗಳನ್ನು ನೀಡಲಾಗಿದೆ ಅದೆಲ್ಲಾ ಪಟ್ಟಿ ಇರಬೇಕು ಮತ್ತು ಗ್ರಾಹಕರು ಸಾಮಾನ್ಯವಾಗಿ ಯಾವ ಐಪಿ ವಿಳಾಸವನ್ನು ಬಳಸುತ್ತಾರೆ ಅದನ್ನೂ ಕೊಡಬೇಕು ಎಂದು ವಿಪಿಎನ್ ಪ್ರೊವೈಡರ್ಸ್‌ಗೆ ಸರಕಾರ ಕೇಳಿದೆ.

ವಿಪಿಎನ್ ಅಂದರೆ ಏನು?

ವಿಪಿಎನ್ ಅಂದರೆ ಏನು?

ವಿಪಿಎನ್ ಎಂದರೆ ವರ್ಚುವಲ್ ಪ್ರೈವೇಟ್ ನೆಟ್ವರ್ಕ್. ಮಾಮೂಲಿಯ ನೆಟ್ವರ್ಕ್ ಮೂಲಕ ಇಂಟರ್ನೆಟ್ ಬಳಸಿದರೆ ನಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನ ನಿರ್ದಿಷ್ಟ ಐಪಿ ವಿಳಾಸವು ಅಂತರ್ಜಾಲದಲ್ಲಿ ಹೆಜ್ಜೆ ಗುರುತಾಗಿ ಉಳಿಯುತ್ತದೆ. ಆದರೆ, ವಿಪಿಎನ್ ನೆಟ್‌ವರ್ಕ್ ಬಳಕೆ ಮಾಡಿದರೆ ಐಪಿ ವಿಳಾಸವನ್ನು ಮರೆಮಾಡಿ ಬಹಳ ಗೌಪ್ಯವಾಗಿ ಅಂತರ್ಜಾಲದಲ್ಲಿ ಕೆಲಸ ಮಾಡಬಹುದು. ಇದರಿಂದ ಇವರನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ.

ವಿಪಿಎನ್‌ನಲ್ಲಿ ಸಂಗ್ರಹವಾಗುವುದೇನೇನು?

ವಿಪಿಎನ್‌ನಲ್ಲಿ ಸಂಗ್ರಹವಾಗುವುದೇನೇನು?

ಕೆಲ ವಿಪಿಎನ್ ಪ್ರೊವೈಡರ್‌ಗಳು ಬೇರೆ ಬೇರೆ ಕಾರಣಕ್ಕೆ ಗ್ರಾಹಕರ ಬಳಕೆಯ ವಿವರವನ್ನು ಕಲೆಹಾಕುತ್ತಾರೆ. ಗ್ರಾಹಕರು ಅಥವಾ ಇಂಟರ್ನೆಟ್ ಬಳಕೆದಾರರು ಎಷ್ಟು ಡಾಟಾ ಉಪಯೋಗಿಸಿದ್ದಾರೆ ಎಂಬುದರ ಟ್ರ್ಯಾಕ್ ಮಾಡಲಾಗುತ್ತದೆ. ಬಳಕೆದಾರರ ಬ್ರೌಸಿಂಗ್ ವಿವರ, ಅವರ ಇಂಟರ್ನೆಟ್ ಬಳಕೆಯ ವಿವರ, ಯಾವ್ಯಾವ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟಿದ್ದಾರೆ, ಯಾವ ಐಪಿ ವಿಳಾಸದಿಂದ ವಿಪಿಎನ್ ಸೇವೆ ಬಳಸಿದ್ದಾರೆ ಇತ್ಯಾದಿ ವಿವರವನ್ನು ಹಲವು ವಿಪಿಎನ್ ಸೇವೆ ನೀಡುಗರು ಕೂಡಿಟ್ಟುಕೊಂಡಿರುತ್ತಾರೆ. ಇನ್ನೂ ಕೆಲ ವಿಪಿಎನ್‌ಗಳು ತಮ್ಮ ಬಳಕೆದಾರರ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಇನ್ಸ್‌ಟಾಲ್ ಆಗಿರುವ ಅಪ್ಲಿಕೇಶನ್‌ಗಳು ಯಾವ್ಯಾವು ಎಂಬುದನ್ನು ಗಮನಿಸುತ್ತವೆ. ಈ ಜನರು ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಚಟುವಟಿಕೆ ಮಾಹಿತಿ ಸಂಗ್ರಹಿಸುತ್ತವೆ. ಬಹುತೇಕ ಎಲ್ಲಾ ವಿಪಿಎಲ್‌ನಗಳು ಸಾಮಾನ್ಯವಾಗಿ ಅದರ ಬಳಕೆದಾರರ ಹೆಸರು ಮತ್ತು ಇಮೇಲ್ ವಿಳಾಸಗಳನ್ನು ತಪ್ಪದೇ ಸಂಗ್ರಹಿಸುತ್ತವೆ.

ವಿಪಿಎನ್ ನೋ-ಲಾಗಿಂಗ್ ಸೇವೆ

ವಿಪಿಎನ್ ನೋ-ಲಾಗಿಂಗ್ ಸೇವೆ

ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಸೇವೆ ನೀಡುಗರು ತಮ್ಮ ಗ್ರಾಹಕರಿಗೆ ಹೆಚ್ಚು ಗೌಪ್ಯತೆ ಅವಕಾಶ ಕೊಡುತ್ತವೆ. ಅದಕ್ಕೆ ನಿರ್ದಿಷ್ಟ ಹಣ ನಿಗದಿಯಾಗಿರುತ್ತದೆ. ಅಂದರೆ ಹಣ ನೀಡಿ ಉಚ್ಚ ಸೇವೆ ಪಡೆಯಲಾಗುವಂತೆ, ವಿಪಿಎಲ್ ಬಳಕೆಯಲ್ಲಿ ಹೆಚ್ಚು ಗೌಪ್ಯತೆ ಬೇಕಂದರೆ ಅದಕ್ಕೆ ನಿರ್ದಿಷ್ಟ ದರ ನಿಗದಿ ಮಾಡಲಾಗಿರುತ್ತದೆ. ಉದಾಹರಣೆಗೆ, ಈ ಪ್ರೀಮಿಯಮ್ ವಿಪಿಎನ್ ಸೇವೆ ಬಳಸುವವರ ಇಂಟರ್ನೆಟ್ ಬಳಕೆ ವಿವರವಾಗಲೀ ಸರ್ವರ್‌ನ ಐಪಿ ವಿಳಾಸವಾಗಲೀ ಸಂಗ್ರಹವಾಗುವುದಿಲ್ಲ.

ಈಗ ಕೇಂದ್ರ ಸರಕಾರ ನೀಡಿರುವ ನಿರ್ದೇಶನವು ವಿಪಿಎನ್‌ಗಳ ಈ ಪ್ರೀಮಿಯಮ್ ಸೇವೆಗೆ ಕುತ್ತು ತರಲಿವೆ. ಈಗ ಗ್ರಾಹಕರ ಅಂತರ್ಜಾಲ ಬಳಕೆಯ ಜಾಡು ಹಿಡಿಯುವುದು ವಿಪಿಎನ್ ಸರ್ವಿಸ್ ಪ್ರೊವೈಡರ್‌ಗಳಿಗೆ ಅನಿವಾರ್ಯವಾಗಲಿದೆ. ಇದರಿಂದ ಜನರು ವಿಪಿಎನ್ ಸೇವೆಯಿಂದಲೇ ವಿಮುಖಗೊಂಡರೆ ಅಚ್ಚರಿ ಇಲ್ಲ.

(ಒನ್ಇಂಡಿಯಾ ಸುದ್ದಿ)

Recommended Video

ಡೇಂಜರಸ್ ಫ್ಯಾನ್!!!!ಫ್ಯಾನ್ ಕೆಳಗೆ ಮಲಗೋಕು‌ ಮುಂಚೆ ನಾವು ಹೇಳೋದನ್ನ ಕೇಳಿ | Oneindia Kannada

English summary
The government of India has asked the Virtual Private Network (VPN) or cloud services providers in the country to collect and store “extensive and accurate” data of their customers for five years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X