ಅಜ್ಜಂದಿರ ದಿನ: ಅಜ್ಜಿ, ಅಜ್ಜಿ ಮೊಮ್ಮಕ್ಕಳ ಅವಿನಾಭಾವ ಸಂಬಂಧ; ಇತಿಹಾಸ, ಮಹತ್ವ ತಿಳಿಯಿರಿ
"ನಮ್ಮಪ್ಪ ಯಾವತ್ತೂ ನಂಗೆ ಪ್ರೀತಿ ತೋರಿಸಿದವರಲ್ಲ, ಮಾತೆತ್ತಿದರೆ ಹೊಡೆಯೋದು ಬಯ್ಯೋದೇ ಕೆಲಸ. ಆದರೆ, ಮೊಮ್ಮಕ್ಕಳನ್ನು ಕಂಡ್ರೆ ಹೂವಂತೆ ನೋಡ್ತಾರೆ. ನಾನು ಬಯ್ಯೋದಕ್ಕೂ ಬಿಡೋದಿಲ್ಲ. ತುಂಬಾ ಪ್ರೊಟೆಕ್ಟಿವ್ ಆಗಿರ್ತಾರೆ. ಯಾಕಿಂಗೆ ನಮ್ಮಪ್ಪ?" ಅಂತ ಹಲವು ಜನರು ಮಾತನಾಡಿಕೊಳ್ಳೋದುಂಟು.
ಇದು ಅಜ್ಜ ಅಜ್ಜಿ ಮೊಮ್ಮಕ್ಕಳ ಸಂಬಂಧಕ್ಕೆ ಇದಕ್ಕಿಂತ ಉತ್ತಮ ಸ್ಟೇಟ್ಮೆಂಟ್ ಬೇಕಿಲ್ಲ. ಮೊಮ್ಮಕ್ಕಳು ಎಂಥ ವ್ಯಕ್ತಿಗಳನ್ನೂ ಬದಲಿಸಿಬಿಡುತ್ತಾರೆ. ಜೀವನಪೂರ್ತಿ ಸ್ಟ್ರಿಕ್ಟ್ ಅಂಥ ಇದ್ದವರು ಅಜ್ಜನ ರೋಲ್‌ನಲ್ಲಿ ಮೃದುವಾಗಿ ಹೋಗುತ್ತಾರೆ. ಮೊಮ್ಮಕ್ಕಳಿಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧವಾಗಿ ಹೋಗ್ತಾರೆ. ಅಜ್ಜನ ಕಥೆ ಮಾತ್ರವಲ್ಲ ಅಜ್ಜಿಯದ್ದೂ ಅದೇ.
ಅಪ್ಪ ದಿನ, ಅಮ್ಮ ದಿನ, ಪೋಷಕರ ದಿನ, ಸಹೋದರರ ದಿನ ಇತ್ಯಾದಿ ಇರಬೇಕಾದರೆ ಅಜ್ಜ ಅಜ್ಜಿಯರ ದಿನ ಇರಬಾರದಾ? ಸೆಪ್ಟೆಂಬರ್ 11ರಂದು ವಿಶ್ವ ಗ್ರ್ಯಾಂಡ್ ಪೇರೆಟ್ಸ್ ಡೇ ಆಚರಿಸಲಾಗುತ್ತದೆ. ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ಈ ದಿನವನ್ನು ಸೆಲಬ್ರೇಟ್ ಮಾಡಲಾಗುತ್ತದೆ. ಅಮೆರಿಕದಲ್ಲಿ ಕಾರ್ಮಿಕರ ದಿನದ ನಂತರ ಸಿಗುವ ಮೊದಲ ಭಾನುವಾರದಂದು ಅಜ್ಜ ಅಜ್ಜಂದಿರ ದಿನವನ್ನು ಆಚರಿಸಲಾಗುತ್ತದೆ.
ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ವರ್ಷ ಸೆ. 11ರಂದು ಈ ದಿನ ನಿಗದಿಯಾಗಿದೆ. ಆಸ್ಟ್ರೇಲಿಯಾ, ಫ್ರಾನ್ಸ್, ಜಪಾನ್, ಹಾಂಕಾಂಗ್, ಫಿಲಿಪ್ಪೈನ್ಸ್, ಪೋಲೆಂಡ್ ಮೊದಲಾದ ದೇಶಗಳಲ್ಲಿ ಬೇರೆ ದಿನಗಳಂದು ಅಜ್ಜ ಅಜ್ಜಿಯರ ದಿನ ಆಚರಿಸಲಾಗುತ್ತದೆ.

ಅಜ್ಜ ಅಜ್ಜಿಯರ ದಿನದ ಇತಿಹಾಸ
ಈ ದಿನದಂದು ಅಜ್ಜ ಅಜ್ಜಿಯರು ಮತ್ತು ಮೊಮ್ಮಕ್ಕಳ ನಡುವಿನ ಸಂಬಂಧವನ್ನು ಅರಿತು ಗೌರವಿಸುವ ಒಂದು ದಿನ. ಒಂದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಜ್ಜ ಅಜ್ಜಿಯವರಿಗೆ ರಾಷ್ಟ್ರೀಯ ದಿನ ನಿಗದಿ ಮಾಡುವ ಪ್ರಯತ್ನ 1960ರ ದಶಕದಿಂದಲೂ ಪ್ರಯತ್ನ ನಡೆದಿದೆ. 1978ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮೊದಲ ಬಾರಿಗೆ ಅಜ್ಜ ಅಜ್ಜಿಯರ ದಿನವನ್ನು ಘೋಷಿಸಿದರು. ಕಾರ್ಮಿಕರ ದಿನದ ನಂತರದ ಮೊದಲ ಭಾನುವಾರದಂದು ಈ ದಿನ ಆಚರಿಸಬೇಕು ಎಂದು ನಿಗದಿ ಮಾಡಲಾಯಿತು. 1978, ಸೆ. 10ರಂದು ಅಮೆರಿಕದಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್‌ಪೇರೆಂಟ್ಸ್ ಡೇ ಆಚರಿಸಲಾಯಿತು.

ನಿರ್ಲಕ್ಷಿತ ವೃದ್ಧರಿಗೆ ಸಹಾಯಾರ್ಥ
ಅಮೆರಿಕದಲ್ಲಿ ಅಜ್ಜ ಅಜ್ಜಿಯರ ದಿನ ಘೋಷಣೆಯಾದ ಆರಂಭದಲ್ಲಿ ನಿರ್ಲಕ್ಷಿತ ವೃದ್ಧರನ್ನು ಗುರುತಿಸಿ ಗೌರವಿಸುವ ಪರಿಪಾಠ ಶುರುವಾಯಿತು. ವೆಸ್ಟ್ ವರ್ಜೀನಿಯಾ ರಾಜ್ಯದ ಸಾಮಾಜಿಕ ಕಾರ್ಯಕರ್ತ ಮಾರಿಯನ್ ಮೆಕೇಡೆ ಅವರು ಇಂಥ ವೃದ್ಧರನ್ನು ಗುರುತಿಸಿ ಅವರಿಗೆ ಈ ದಿನದಂದು ಸನ್ಮಾನ, ಗೌರವ, ಸಹಾಯ ಮಾಡುತ್ತಿದ್ದರು.

ಅಜ್ಜ ಅಜ್ಜಿಯರ ದಿನದ ಮಹತ್ವ
ಅಜ್ಜ ಅಜ್ಜಿ ಇರುವ ಕುಟುಂಬದಲ್ಲಿ ಬೆಳೆದ ಮಕ್ಕಳ ವ್ಯಕ್ತಿತ್ವ ವಿಭಿನ್ನವಾಗಿರುತ್ತದಂತೆ. ಅಜ್ಜ ಅಜ್ಜಿಯರು ತಮ್ಮ ಮೊಮ್ಮಕ್ಕಳಿಗೆ ನೀಡುವ ಪ್ರೀತಿ ಸ್ಪಟಿಕದಷ್ಟು ಸ್ವಚ್ಛ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ. ಈಗ ಭಾರತದಲ್ಲಿ ಕೂಡು ಕುಟುಂಬಗಳು ಅಪರೂಪವಾಗುತ್ತಿರುವಂತೆಯೇ ಮಕ್ಕಳಿಗೆ ಅಜ್ಜ ಅಜ್ಜಂದಿರ ಪ್ರೀತಿ ಸಿಗುವುದು ದುಸ್ತರವಾಗುತ್ತದೆ. ವೃದ್ಧರನ್ನು ಸ್ವಗ್ರಾಮದಲ್ಲಿ ಒಂಟಿಯಾಗಿ ಬಿಟ್ಟು ದೂರದೂರಿನಲ್ಲಿ ಸಂಸಾರ ಮಾಡಿಕೊಳ್ಳುವ ಜನರೇ ಹೆಚ್ಚು. ಹಬ್ಬ ಹರಿದಿನಗಳಿಗಷ್ಟೇ ವೃದ್ಧರಿಗೆ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಭೇಟಿ ಮಾಡುವ ಅವಕಾಶ. ಹಾಗೆ ಇದೆ ಇಂದಿನ ಪರಿಸ್ಥಿತಿ.
ಈ ಹಿನ್ನೆಲೆಯಲ್ಲಿ ಅಜ್ಜ ಅಜ್ಜಂದಿರ ದಿನದಂದು ಯಾವುದೇ ಕುಟುಂಬಕ್ಕೆ ವೃದ್ಧ ಪಾತ್ರ ಎಷ್ಟು ಮುಖ್ಯ, ಅಜ್ಜ ಅಜ್ಜಂದಿರ ಪ್ರೀತಿ ಎಷ್ಟು ಮುಖ್ಯ ಎಂಬಿತ್ಯಾದಿ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತದೆ.

ಅಜ್ಜ ಅಜ್ಜಂದಿರ ದಿನದ ಹೇಳಿಕೆಗಳು
* "ಅಜ್ಜ ಅಜ್ಜಿಯರು ನಿಮ್ಮೊಂದಿರುವ ಅದೃಷ್ಟವಂತರು ನೀವಾಗಿದ್ದರೆ ಅವರ ಪ್ರೀತಿಯನ್ನು ಅನುಭವಿಸಿ, ಅವರೊಂದಿಗೆ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ" - ರೆಜಿನಾ ಬ್ರೆಟ್
* "ಪುಟ್ಟ ಮಕ್ಕಳಿಗೆ ಅಜ್ಜ ಅಜ್ಜಿಯರು ಕೊಡುವಷ್ಟು ಪ್ರೀತಿ ಯಾರಿಗೂ ಕೊಡಲು ಸಾಧ್ಯವಿಲ್ಲ.." - ಅಲೆಕ್ಸ್ ಹಾಲೇ
(ಒನ್ಇಂಡಿಯಾ ಸುದ್ದಿ)












Click it and Unblock the Notifications