• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುದಿಯಾಗದ ಮನಸ್ಸು ಮತ್ತು ಬೆರಳುಗಳ ಕಸುವಿನ ಮೃದಂಗವಾದಕ

By ಸ ರಘುನಾಥ, ಕೋಲಾರ
|

ರಾತ್ರಿ ಊರೆಲ್ಲ ಕತ್ತಲು. ಆದರೆ ಅಲ್ಲಿ ಮಾತ್ರ ಪರದೆಯಾದ ಪಂಚೆಬಟ್ಟೆಯ ಹಿಂದೆ ಉರಿಯುತ್ತಿದ್ದ ಲಾಂತರು ಬೆಳಕು. ಕುಳಿತಿದ್ದ ಜನರ ನಡುವೆ ಬಾಲಕನೊಬ್ಬ ಪಿಳಿಪಿಳಿ ಕಣ್ಣು ಬಿಡುತ್ತ, ಪರದೆಯ ಮೇಲೆ ತೆರೆದುಕೊಂಡಿದ್ದ ಮಾಯಾಲೋಕವನ್ನು ಮನದಲ್ಲಿ ಬೆರಗು ತುಂಬಿ ನೋಡುತ್ತಿದ್ದ. ಜಾನಪದ ಬಯಾಸ್ಕೋಪು 'ತೊಗಲುಗೊಂಬೆ'ಯಾಟ ನಡೆಯುತ್ತಿತ್ತು. ಅದರ ನಡುವೆ ಹುಡುಗನ ಮನ ಸೆಳೆದದ್ದು ಸೊಂಟಕ್ಕೆ ಮದ್ದಳೆಯನ್ನು ಕಟ್ಟಿ ನುಡಿಸುತ್ತಿದ್ದ ವ್ಯಕ್ತಿ.

ಆತನ ವಾದನ ಪರಿಣತ ಬೆರಳುಗಳು ಈ ಬಾಲಕನ ಹೃದಯ ಮದ್ದಳೆಯನ್ನು ನುಡಿಸತೊಡಗಿತ್ತು. ಆ ವ್ಯಕ್ತಿ ಬೊಮ್ಮಲಾಟಲ ಸುಬ್ಬಾರಾವ್. ಅಂದಿನ ಆಟ ಮುಗಿದರೂ ಬಾಲಕನ ಹೃದಯ ಮದ್ದಳೆ ದನಿಗುಡುತ್ತಲೇ ಇತ್ತು. ಹುಡುಗ ತಡೆಯದಾದ. ಆತನ ಹಿಂದೆ ಬಿದ್ದ. ತನಗೂ ಬಾರಿಸುವುದನ್ನು ಕಲಿಸೆಂದು ಬೇಡಿದ. ನಿಜಕಲಾವಿದನಿಗೆ ಇದಕಿಂತ ಆನಂದವುಂಟೆ?

ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ?

ಆ ಊರಿನಲ್ಲಿದ್ದ ದಿನಗಳಷ್ಟರಲ್ಲಿ ಈ ಹುಡುಗನ ಬೆರಳುಗಳಿಗೆ ವಾದ್ಯವನ್ನು ಮಾತನಾಡಿಸುವುದನ್ನು ಕಲಿಸಿ, ಭಾವಿ ಮೃದಂಗವಾದಕನಿಗೆ ಮೊದಲ ಗುರುವಾದ. ಆ ಬಾಲಕನಿಗಿಂದು 92ರ ಹರೆಯ. ಅವರೇ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬುವಾರಿಪಲ್ಲಿಯ ಎನ್.ವಿ.ರಾಮರೆಡ್ಡಿ. ತಾಯಿ ವೆಂಕಟಮ್ಮ, ತಂದೆ ವೀರಪ್ಪರೆಡ್ಡಿ. ರೈತ ಕುಟುಂಬ.

ಮುಂದಿನ ದಿನಗಳಲ್ಲಿ ಓದಿ, ಉಪಾಧ್ಯಾಯ ವೃತ್ತಿಗಿಳಿದರೂ ಸಂಗೀತದ ಆಕರ್ಷಣೆ ಇಳಿದಿರಲಿಲ್ಲ. ಮೃದಂಗದ 'ಹುಚ್ಚು' ಹಿಡಿದು ಕಾಡತೊಡಗಿ, ಎಳೆದೊಯ್ದದ್ದು ಬೆಂಗಳೂರಿನಲ್ಲಿದ್ದ ಮೈಸೂರು ಆಸ್ಥಾನ ವಿದ್ವಾನ್ ಎಚ್.ಪುಟ್ಟಾಚಾರಿಯವರ ಮನೆ ಬಾಗಿಲಿಗೆ. ಗುರು ಪ್ರಸನ್ನರಾಗಿ ಕರೆದುಕೊಂಡರು. ಎರಡು ವರ್ಷ ಆಚಾರ್ಯರಲ್ಲಿ ಶಿಷ್ಯವೃತ್ತಿ.

ಎದೆಯೊಳಗಿನ ತುಡಿತ, ಮನದ ದಾಹ ಮೃದಂಗದೊಂದಿಗೆ ಕಂಜರ ವಾದನಕ್ಕೂ ಹರಿಯಿತು. ತಾಳ್ಮೆ, ಸಾಧನೆಯ ಮಾರ್ಗದಲ್ಲಿ ನಡೆಸಿತು. ಅಂದಿನಿಂದ ಈ ತೊಂಬತ್ಮೂರರ ಹೊಸ್ತಿಲಲ್ಲೂ ಮೃದಂಗ ಬದುಕಿನ ಭಾಗವಾಗಿದೆ. ಆಂಧ್ರ, ಕರ್ನಾಟಕಗಳಲ್ಲಿ ನಡೆಸಿದ ತನಿಕಛೇರಿಗಳು ಅಸಂಖ್ಯ. 'ಎಂದರೋ ಮಹಾನುಭಾವುಲ' ಗಾಯನಕ್ಕೆ ಮೃದಂಗ ನಾದವನ್ನು ತುಂಬಿದ್ದಾರೆ.

ಒಂದು ಪೋಸ್ಟ್ ಕಾರ್ಡಿನಲ್ಲಿ ಸಿಕ್ಕ ಇತಿಹಾಸ, ಭೂಗೋಳ ಹಾಗೂ ಸಮಾಜ ವಿಜ್ಞಾನ

ಸಾಧನೆಯ ಸರ್ವಸ್ವವನ್ನೂ ತಮ್ಮ ತಂದೆ- ತಾಯಿಯ ಮತ್ತು ನಾದದೇವಿಯ ಅಡಿದಾವರೆಗಳಿಗೆ ಅರ್ಪಿಸಿರುವ ರೆಡ್ಡಿಯವರದು 'ಭೃತ್ಯುಭಕ್ತಿ'ಯ ನಾದೋಪಾಸನೆ.

ಶಂಕರಾಭರಣಂ ಸಿನೆಮಾದ ಹಾಡೊಂದರಂತೆ 'ನಾದೋಪಾಸನ ಚೇಸಿನ ವಾಡನು, ನೀವಾಡನು ನೇನೈತೆ' ಕೊನೆಯ ಉಸಿರಿರುವವರೆಗೆ ಮೃದಂಗ, ಕಂಜರ ನುಡಿಸುವ ಶಕ್ತಿ ಉಳಿಸು ಎಂದು ನಾದದೇವಿಯ ಮುಂದೆ ಮೊಣಕಾಲೂರಿ ದಿನನಿತ್ಯ ಪ್ರಾರ್ಥಿಸುವ ರಾಮರೆಡ್ಡಿಯವರು ಶ್ರದ್ಧಾವಂತರಾಗಿ ಬರುವವರಿಗೆ ನಿರ್ವಂಚನೆಯಿಂದ ಮೃದಂಗ ವಾದನ ವಿದ್ಯೆಯನ್ನು ಧಾರೆ ಎರೆಯುತ್ತಾರೆ.

ರಾಮರೆಡ್ಡಿಯವರಿಗೆ ಸಂಗೀತ ಸರಸ್ವತಿಯನ್ನು ಒಲಿಸಿಕೊಳ್ಳುವತ್ತಲೇ ಮನಸ್ಸು ಹರಿದಿದ್ದು. ಅವರು ಸಿರಿದೇವಿಯತ್ತ ಕೈ ಚಾಚಿದ್ದು ಬದುಕಿಗೆ ಅಗತ್ಯವಿದ್ದಷ್ಟನ್ನು ನೀಡೆಂದು. ವಾದ್ಯ ನುಡಿಸಲು ಆಹ್ವಾನ ಬಂದಲ್ಲಿಗೆ ಹೋಗಿ ನುಡಿಸಿದರು. ಅಲ್ಲಿ ಕೊಟ್ಟಷ್ಟು ತಮ್ಮ ದಾರಿ ಖರ್ಚಿಗಾದರೂ ಸಾಕು ಎಂಬ ಮನೋಭಾವ. ಒಂದು ರೀತಿಯಲ್ಲಿ ರಾಮರೆಡ್ಡಿಯವರದು ಸಂಗೀತದ 'ಮಧುಕರವೃತ್ತಿ.'

ಜೇನಾಗಿ ನಿನ್ನ ಬಳಿ ಬರುವೆನೆಂಬ ಮಾತು ಒಪ್ಪಿ ಬೆಪ್ಪನಾದೆನೇ ಶಕುಂತಲಾ!

ಅದಕ್ಕೆ ತಕ್ಕಂತೆ ಅವರ ಎದೆಯ ನುಡಿ. 'ಭಕ್ತಿಯಿಲ್ಲದೆ ಸಂಗೀತ ಸಾಧನೆ ಸಾಧ್ಯವಿಲ್ಲ' ಎಂಬುದು ಅವರ ನಿಲುವು. ಅದರಂತೆ ಬದುಕು, ವಾದನ, ಬೋಧನೆ. ಇವರದು ನಾದದಲ್ಲಿ ಬಡತನವನ್ನು ಮರೆಯುವ ಸಂತತನ.

ರಾಮರೆಡ್ಡಿ ಬಂದೂಕಿನ ಒಳ್ಳೆಯ ಗುರಿಗಾರರಾಗಿದ್ದರು. ಬೇಟೆಯಾಡುವುದೆಂದರೆ ಬಲು ಇಷ್ಟ. ಆದರಿಂದು ಅದರ ಬಗ್ಗೆ ನೋವಿದೆ. ಆ ದಿನಗಳ ಕುರಿತು ಪಶ್ಚಾತ್ತಾಪವಿದೆ. ಅಂದು ಅದೊಂದು ಆಟವಾಗಿತ್ತು. ಇಂದು ಹಾಗೆನಿಸದೆ ಅಹಿಂಸೆಯ ಅರಿವು ಮಾಗುತನ ತಂದಿದೆ. ಬೇಟೆಯ ಹೃದಯದಲ್ಲಿ ದಯೆ, ಕರುಣೆ, ಪ್ರೀತಿ ತುಂಬಿಕೊಂಡಿದೆ.

ರಾಮರೆಡ್ಡಿಯವರು ಮೃದಂಗ ವಾದನದಲ್ಲಿ ಉತ್ತುಂಗವನ್ನು ಕಂಡವರು. ಹರಿಕಥೆಗೆ ರಾಮರೆಡ್ಡಿ ಮೃದಂಗ ನುಡಿಸುವರೆಂದರೆ ಜನ ಸಾಲುಗಟ್ಟಿ ಬರುತ್ತಿದ್ದರು. ಅವರ ಮೃದಂಗ ನುಡಿಕೆಯೆಂದರೆ ಅಷ್ಟು ಪ್ರೀತಿ- ಅಭಿಮಾನ ರಸಿಕ ಜನಕ್ಕೆ. ಅವರು 'ರಸಿಕ ಮನೋರಂಜಕ' ಮೃದಂಗವಾದಕರಾಗಿದ್ದರು.

ಇಂದೂ ಯಾರಾದರೂ ಹಾಡುತ್ತಿದ್ದರೆ, ಅದು ಶ್ರುತಿ, ತಾಳ ಶುದ್ಧವಾಗಿದ್ದರೆ ಅವರು ವಿನಿಕೆಗಾಗಿ ಹೋಗಿದ್ದರೂ ಆ ಗಾಯನದಿಂದ ಪ್ರೇರಿತರಾಗಿ ವೇದಿಕೆಗೇರಿ ಮೃದಂಗವನ್ನೋ, ಕಂಜರಿಯನ್ನೋ ಕೈಗೆತ್ತಿಕೊಂಡು ಸಾಥ್ ನೀಡುವುದುಂಟು.

ಸುಮಾರು ಎಪ್ಪತ್ತೈದು ವರುಷಗಳಿಂದ ನಿರಂತರವಾಗಿ ಮೃದಂಗ ನಾದಸೇವೆಯಲ್ಲಿ ನಿರತರಾಗಿ, ಕರೆದಲ್ಲಿಗೆ ಪ್ರೀತಿಯಿಂದ ಹೋಗಿ ನುಡಿಸಿ ಬರುವ ಈ ಹಣ್ಣು ಜೀವದ ಮನೆಬಾಗಿಲು ಸಂಗೀತ ಪ್ರೇಮಿಗಳಿಗೆ ತೆರೆದೇ ಇರುತ್ತದೆ. ಹೋಗುವವರ ಹೃದಯ ಬರುವಾಗ ಮೃದಂಗನಾದದ ಗುಂಗಿನಲ್ಲಿ ಹಿಂದಿರುಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is the story of Mridanga player Rama Reddy. At the age of 93, still he is very young by heart. Here is the life journey of Rama Reddy from Srinivasapura taluk, Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more