ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಿಯ ಐ ಲವ್ ಯು,ಕರುನಾಡ ಮೇಲಾಣೆ

By Staff
|
Google Oneindia Kannada News

barak obamaಒಂದು ಕಡೆ ದೇಶದ ಸಂಪತ್ತನ್ನೆಲ್ಲ ಇರಾಕ್ ಮತ್ತು ಆಫ್ಘಾನಿಸ್ತಾನ ಯುದ್ಧಭೂಮಿಗೆ ಸುರಿಯುತ್ತಿದ್ದ ಕದನ ಕುತೂಹಲಿ ರಿಪಬ್ಲಿಕನ್ ಆಡಳಿತ ವರಸೆ ಬಗ್ಗೆ ಅಮೆರಿಕಾ ಪ್ರಜೆಗಳಿಗೆ ತುಂಬಾ ಅಸಹನೆ ಇತ್ತು. ಇನ್ನೊಂದು ಬದಿಯಲ್ಲಿ ರಾಷ್ಟ್ರ್ದದ ಖಜಾನೆಯೂ ಖಾಲಿಯಾಯಿತು. ದೇಶವಾಸಿಗಳ ಸ್ಥೈರ್ಯ ಮತ್ತು ಅರ್ಥವ್ಯವಸ್ಥೆ ಎಕ್ಕುಟ್ಟು ಹೋಗುತ್ತಿರುವ ಪರ್ವಕಾಲದಲ್ಲಿ ಚುನಾವಣೆ ನಡೆದು ಶ್ವೇತ ಭವನದಲ್ಲಿ ಈಗಷ್ಟೆ ಹೊಸ ಅತಿಥಿ ಬಂದು ಕುಳಿತಿದ್ದಾನೆ. ಆತನ ಆಡಳಿತ ನೀತಿ Black and white ಆಗಿರುವುದೋ ಅಥವಾ Eastman Color ಆಗಿರುವುದೋ? ಕರಿಯ ಐ ಲವ್ ಯು,ಕರುನಾಡ ಮೇಲಾಣೆ!

ಡಾ|| ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್

ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಹೋಗುವ ದಾರಿಯಲ್ಲಿ ಮತದಾನದ ಕಟ್ಟೆಗೆ ಭೇಟಿಯಿತ್ತೆ. ಸಿಕ್ಕಾಬಟ್ಟೆ ಸಾಲಿರುತ್ತದೆ ಎಂತೆಲ್ಲಾ ಹೆದರಿಸಿದ್ದರು. ಆದರೆ, ಅಲ್ಲಿ ಮುವ್ವತ್ತಕ್ಕಿಂತ ಹೆಚ್ಚು ಜನರಿರಲಿಲ್ಲ. ಗುರುತು ವಿಳಾಸ ಎಲ್ಲ ಪರೀಕ್ಷಿಸಿ ಓಟಿನ ಚೀಟಿಗೆ ಸಹಿ ಹಾಕಿಸಿಕೊಂಡು ವಿದ್ಯುನ್ಮಾನ ಮತವನ್ನು ಕೈಗೆ ಕೊಟ್ಟರು. ಮತಹಾಕಿ ಹೊರಬರುವುದಕ್ಕೆ ಐದಾರು ನಿಮಿಷಕ್ಕಿಂತ ಹೆಚ್ಚು ಬೇಕಾಗಲಿಲ್ಲ. ಎಲ್ಲಾ ಸಲೀಸು. ಮೇರೀಲ್ಯಾಂಡಿನಲ್ಲಿ ಒಬಾಮಾ ಮುಂದಿದ್ದನಾದ್ದರಿಂದ ನನ್ನ ಮತ ಏನೂ ವ್ಯತ್ಯಾಸಮಾಡಿರಲಾರದು. ಹಾಗೆಂದಮಾತ್ರಕ್ಕೆ ನನ್ನ ಪೌರಹಕ್ಕನ್ನು ಚಲಾಯಿಸದೇ ಬಿಡಲಾಗುವುದೇ? ಹಿಂದಿನ ಎರಡು ಅಧ್ಯಕ್ಷ ಚುನಾವಣೆಯಂತೆ ಮೋಸ ತಟವಟ ನಡೆಯದಿರಲಿ ದೇವಾ ಎಂದು ಪ್ರಾರ್ಥಿಸುತ್ತಾ ಹೊರನಡೆದೆ.

ಈ ಬಾರಿಯ ಚುನಾವಣೆ ಪ್ರತಿಬಾರಿಯಂತಲ್ಲ. ಶಾಮಲವರ್ಣೀಯನೊಬ್ಬ ಎರಡು ವರ್ಷಗಳ ಸತತ ಹೋರಾಟ ನಡೆಸಿ ಸ್ವಂತಪಕ್ಷದ ಎದುರಾಳಿಗಳನ್ನೆಲ್ಲ ಪ್ರಾಥಮಿಕ ಚುನಾವಣೆಯಲ್ಲಿ ಸೋಲಿಸಿ (ಅದರಲ್ಲೂ ಅತ್ಯಂತ ಬಲಶಾಲಿಯಾದ ಹಿಲರಿ ಕ್ಲಿಂಟನ್‌ಳನ್ನೂ ಹಿಂದೆಹಾಕಿ) ಮುಂದೆ ನಡೆದ. ಮೆಕ್ಕೇನ್ ಮಹಾಶಯನೊಂದಿಗೆ ಮೂರು ಚರ್ಚಾಸ್ಪರ್ಧೆಗಳಲ್ಲಿ ಸೆಣೆಸಿ ಯಾವ ತಪ್ಪನ್ನೂ ಮಾಡದೇ, ನೂರಾರು ಭಾಷಣಗಳನ್ನು ಮಾಡಿ, ನೂರಾರು ಪತ್ರಿಕಾಸಂದರ್ಶನಗಳನ್ನು ಕೊಟ್ಟು, ತನ್ನ ವಿರುದ್ಧ ಬಂದ ಪುಕಾರುಗಳನ್ನು ಸಮಾಧಾನದಿಂದ ಎದುರಿಸಿ ಮುಂದೆ ಸಾಗಿದ. ದೇಶದಲ್ಲಿ ಉಂಟಾದ ಮಾರುಕಟ್ಟೆಯ ಕುಸಿತದ ಸಂದರ್ಭದಲ್ಲಿ ಅಧ್ಯಕ್ಷನಾದವನೊಬ್ಬ ತೋರಬಹುದಾದ ಗಂಭೀರಮನೋಭಾವದಿಂದ ವರ್ತಿಸಿದ. ಆರ್ಥಿಕ ಪರಿಸ್ಥಿತಿ ಅಲ್ಲೋಲಕಲ್ಲೋಲವಾದಾಗಲೂ ಸಂಯಮದಿಂದ ನಡೆದುಕೊಂಡ. ತನ್ನನ್ನು ಸಾಕಿ ಸಲಹಿದ ಪ್ರೀತಿಯ ಅಜ್ಜಿಯನ್ನು ಚುನಾವಣೆಗೆ ಒಂದು ದಿನ ಮುನ್ನ ಕಳೆದುಕೊಂಡು ದುಃಖದಲ್ಲಿ ಮುಳುಗಿದ. ಕಣ್ಣೀರಿಟ್ಟರೂ ಧೃತಿಗೆಡದೇ ಮುಂದೆ ಹೆಜ್ಜೆಯಿಟ್ಟ.

ಎಲ್ಲರ ಮನಸ್ಸಿನಲ್ಲೂ ಏನೋ ಒಂದು ಬಗೆಯ ಆತಂಕ. ಲಕ್ಷೋಪಲಕ್ಷ ಮಂದಿ ತರುಣ ತರುಣಿಯರು ಮೊಟ್ಟಮೊದಲಬಾರಿಗೆ ಮತಚಲಾಯಿಸಲು ಮುಂದೆಬರುವಂತೆ ಒಬಾಮ ಹುರಿದುಂಬಿಸಿದ್ದಾನೆ. ಶ್ವೇತವರ್ಣೀಯರೂ ಈತನಬಗ್ಗೆ (ಬಹಿರಂಗವಾಗಿಯಾದರೂ) ಸದ್ಭಾವನೆಯನ್ನೇ ತೋರಿದ್ದಾರೆ. ಶಾಮಲವರ್ಣದವನೊಬ್ಬ ದೇಶದ ಮುಖಂಡನಾಗಲು ಸಾಧ್ಯವಿದೆಯೆಂಬ ನಂಬಿಕೆ ಮೊಟ್ಟಮೊದಲಬಾರಿಗೆ ವ್ಯಕ್ತವಾಗಿದೆ. ಏನಾದರೋ ಹೆಚ್ಚುಕಮ್ಮಿಯಾಗಿ ಮತದಾನದ ದಿನ ರಂಪವಾಗಬಹುದೇ? ಹಿಂಸಾಚಾರ ನಡೆಯಬಹುದೇ? ಎಣಿಕೆಯಲ್ಲಿ ಹೆಚ್ಚುಕಮ್ಮಿಯಾದರೆ ಏನು ಗತಿ? ಕಳೆದ ನಾಲ್ಕು ದಶಕಗಳಲ್ಲಿ ಏನೆಲ್ಲ ನಡೆದಿದೆ. ನಾನು ಅಮೇರಿಕಕ್ಕೆ ಬಂದ ಹೊಸತರಲ್ಲಿ ಮಾನವನನ್ನು ಚಂದ್ರಲೋಕಕ್ಕೆ ಕಳಿಸಿದ್ದನ್ನು ನೋಡಿ ರೋಮಾಂಚಿತನಾಗಿದ್ದೆ. ಮೊನ್ನೆ, ಭಾರತೀಯರು ಚಂದ್ರಯಾನಕ್ಕೆ ಗಗನನೌಕೆಯೊಂದನ್ನು ಹಾರಿಸಿದರು. ಪ್ರಪಂಚದಲ್ಲಿ ಇನ್ನೂ ಅನೇಕ ಮಾರ್ಪಾಡುಗಳು ಆಗಿವೆ. ಇಲ್ಲಿ ಮಾರುಕಟ್ಟೆ ಕುಸಿದರೆ ಮತ್ತೆಲ್ಲೆಲ್ಲೋ ಏನೇನೋ ಅನಾಹುತಗಳಾಗುವಷ್ಟು ಗೋಳ ಸಂಕುಚಿಸಿದೆ. ಆದರೆ, ಒಮ್ಮೆ ದಾಸ್ಯಕ್ಕೊಳಗಾಗಿದ್ದ ಸವರ್ಣೀಯರನ್ನು ತಮ್ಮ ಸಮಾನರೆಂದು ಪರಿಗಣಿಸುವ ದಿನ ಬಂದೀತೆ, ನಾವು ಅದನ್ನು ನೋಡುತ್ತೇವೆಯೇ ಎಂಬ ಆತಂಕವನ್ನು ಕೆಲವರು ವ್ಯಕ್ತ ಪಡಿಸಿದರೆ ಮತ್ತೆ ಕೆಲವರು ಮನಸ್ಸಿನಲ್ಲಿಯೇ ಸಂಶಯಗ್ರಸ್ತರು. ಅಂತು ಯಾವ ಗಲಭೆಯೂ ಇಲ್ಲದೇ ದಿನ ಕಳೆಯಿತು.

ಸಂಜೆ, ಬೇಗ ಊಟ ಮುಗಿಸಿ, ಟೀವಿಯಮುಂದೆ ಕುಳಿತದ್ದಾಯಿತು. ಸಂಖ್ಯಾಶಾಸ್ತ್ರದ ಬಲದಿಂದ ಎಣಿಕೆಯು ಮುಗಿಯುವ ಮೊದಲೇ ಯಾರು ಗೆಲ್ಲಬಹುದು ಎಂಬ ಮುಂಸೂಚನೆಯನ್ನು ಕೊಡುತ್ತಲೇ ಇದ್ದರು. ಇನ್ನೇನು ಗಲಾಟೆ ಕಾದಿದೆಯೋ, ಎಣಿಕೆ ಯಾವಾಗ ನಿಂತುಹೋಗುತ್ತದೋ, ಕೋರ್ಟು, ಕಚೇರಿ, ಫಲಿತಾಂಶದ ಮುಂದೂಡುವಿಕೆ, ಇನ್ನೂ ಏನೇನೋ ಸಂಸಯಗಳು ಮನಸ್ಸಿನಲ್ಲಿ ಆತಂಕವುಂಟು ಮಾಡುತ್ತಿದ್ದವು. ಆದರೆ, ಒಂದಾದಮೇಲೆ ಒಂದರಂತೆ ನಿರೀಕ್ಷಿದ್ದ ಫಲಿತಾಂಶಗಳು ಹೊರಬಿದ್ದವು. ನಿರೀಕ್ಷೆಗೆ ಮೀರಿದ ಹಲವು ಫಲಿತಾಂಶಗಳೂ ಹೊರಬಿದ್ದವು. ಹಿಂದೆಂದೂ ಡೆಮೋಕ್ರ್ಯಾಟಿಕ್ ಪಕ್ಷದವರಿಗೆ ಮತವನ್ನು ಕೊಡದ ಸಂಸ್ಥಾನಗಳೂ ಒಬಾಮಾನಿಗೆ ಒಲಿದವು. ಪೂರ್ವತೀರದಲ್ಲಿ 7 ಅಥವಾ 8 ಘಂಟೆಗೆ ಮತಕಟ್ಟೆಗಳನ್ನು ಮುಚ್ಚಲಾಯಿತು. ಪಶ್ಚಿಮತೀರದಲ್ಲಿ ಮತಕಟ್ಟೆಗಳನ್ನು ಮುಚ್ಚುವ ಹೊತ್ತಿಗೆ ಪೂರ್ವತೀರದಲ್ಲಿ ಹನ್ನೊಂದು ಹೊಡೆದಿತ್ತು. ಎಲ್ಲಾ ಟೀವೀ ಕೇಂದ್ರಗಳು ಆ ಹೊತ್ತಿಗೆ ಒಬಾಮ ಗೆದ್ದನೆಂದು ಘೋಷಿಸಿದವು. ಎಲ್ಲಾ ನಗರಗಳಲ್ಲೂ ಜನಸಂದಣಿ ಗುಂಪು ಗುಂಪಾಗಿ ನೆರೆದು ಎಲ್ಲೆಲ್ಲೂ ಹಬ್ಬದ ವಾತಾವರಣ ಉಂಟಾಯಿತು.

ಮತಗಣನೆಯನ್ನು ವೀಕ್ಷಿಸಲು ತನ್ನ ಸ್ವಸ್ಥಾನವಾದ ಅರಿಜೋನಾಕ್ಕೆ ಬಂದಿಳಿದಿದ್ದ ಮೆಕ್ಕೇನ್ ತನ್ನ ಅನುಯಾಯಿಗಳನ್ನುದ್ದೇಶಿಸಿ ತನ್ನ ಜೀವನದ ಅತಿಮುಖ್ಯವಾದ ಭಾಷಣವನ್ನು ಮಾಡಿದ. ಅದಕ್ಕೂ ಮುನ್ನ ಒಬಾಮಾನನ್ನು ಫೋನಿನಲ್ಲಿ ಕರೆದು ಶುಭಾಶಯಗಳನ್ನಿತ್ತಾಗಿತ್ತು. ಮೆಕ್ಕೇನ್ ನಿಜಕ್ಕೂ ಧೀರ. ಸೋಲನ್ನು ಒಪ್ಪಿಕೊಳ್ಳುವುದರಲ್ಲಿ ಅತ್ಯಂತ ಸುಸಂಸ್ಕೃತವಾಗಿ ನಡೆದುಕೊಂಡ. ತನ್ನನ್ನು ಸೋಲಿಸಿದ ಎದುರಾಳಿಯನ್ನು ಹೊಗಳಿ ಆತನಿಗೆ ಶುಭ ಕೋರಿದ, ತನ್ನಿಂದ ಆಗಬಹುದಾದ ಸಹಾಯವನ್ನು ಮಾಡುವುದಾಗಿ ಮಾತುಕೊಟ್ಟ. ಆತನ ಮಾತುಗಳು ಹೃತ್ಪೂರ್ವಕವಾಗಿದ್ದವು. ಆತನು ಸೋತಿದ್ದನ್ನು ಮರೆತರೂ ಆತ ಸೋಲಿನಲ್ಲಿ ತೋರಿದ ಔದಾರ್ಯ ಮತ್ತು ಸ್ಥೈರ್ಯವನ್ನು ಮೆಚ್ಚಲೇಬೇಕು. ಆತ ಮಾಡಿದ ಭಾಷಣ ನಮ್ಮ ಕಣ್ಣಮುಂದೆ ಕಿವಿಗಳಲ್ಲಿ ಹೆಚ್ಚುಕಾಲ ಉಳಿಯುತ್ತದೆ.

ಅತ್ತ ಚಿಕಾಗೋ ನಗರದಲ್ಲಿ ಸುಮಾರು ಎರಡು-ಮೂರು ಲಕ್ಷಮಂದಿ ಒಂದೆಡೆ ಸೇರಿ ಒಬಾಮಾ ಮಾಡಲಿದ್ದ ವಿಜಯಘೋಷಣೆಯನ್ನು ಕೇಳಲು ಕಾದುಕೂತಿದ್ದರು. ಅಲ್ಲಿ ಬಿಳಿಯರು, ಕರಿಯರು, ಗಂಡಸರು, ಹೆಂಗಸರು, ಹುಡುಗರು ವಯಸ್ಸಾದವರು, ಇತ್ತೀಚೆಗೆ ಅಮೇರಿಕಕ್ಕೆ ಬಂದು ನೆಲೆಸಿದವರು ಎಲ್ಲರೂ ಇದ್ದರು. ಹಲವರಂತೂ ಹುಚ್ಚೆದ್ದು ಕಿರುಚುತ್ತಿದ್ದರೆ, ಇನ್ನು ಕೆಲವರು ಕಣ್ಣೀರಿಡುತ್ತಿದ್ದರು. ಇತಿಹಾಸದ ಹೊಸಪುಟವೊಂದು ತಮ್ಮ ಕಣ್ಣಮುಂದೇ ಬರೆಯಲ್ಪಟ್ಟಿದ್ದನ್ನು ನೋಡಿ ಧನ್ಯರಾಗುತ್ತಿದ್ದರು. ಇಂಥಾ ಒಂದು ದಿನವನ್ನು ನಮ್ಮ ಜೀವನದಲ್ಲಿ ನಾವು ಕಂಡೆವು. ಅದು ಅತ್ಯಂತ ಮಹತ್ವದಿಂದ ಕೂಡಿದ್ದು ಎಂದು ಬೇರೆ ಹೇಳಬೇಕಾಗಿಲ್ಲ. ಒಬಾಮ ತನ್ನ ಚಿಕ್ಕ ಚೊಕ್ಕ ಭಾಷಣದಲ್ಲಿ ತನ್ನನ್ನು ಚುನಾಯಿಸಿದ ಜನತೆಯನ್ನು, ತನ್ನ ಗೆಲುವಿಗೆ ಕಾರಣರಾದವರನ್ನೂ ಹೃತ್ಪೂರ್ವಕವಾಗಿ ವಂದಿಸಿದ. ತನಗೆ ಮತನೀಡದಿದ್ದವರಿಗೂ ಆಶ್ವಾಸನೆಯಿತ್ತ. ತನ್ನ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಇಡೀ ಸಭೆಯೊಂದಿಗೆ ನಲಿದಾಡಿದ. ಆತನ ಉಪಾಧ್ಯಕ್ಷನೂ ಆತನ ಪತ್ನಿಯೂ ಬಂದು ಸೇರಿಕೊಂಡರು. ಅವರ ಜೀವನದ ಹಾಗೂ ಅಮೇರಿಕದ ಚರಿತ್ರೆಯ ಒಂದು ಮುಖ್ಯ ಘಳಿಗೆ ಅದಾಗಿತ್ತು.

ಎರಡು ವರ್ಷಗಳ ಸ್ಪರ್ಧೆ ಮುಗಿಯಿತು. ಭಾರೀ ಜಯವೂ ಸಿಕ್ಕಿದೆ. ರಾಷ್ಟ್ರದ ಖಜಾನೆ ಖಾಲಿಯಾಗಿದೆ. ಎರಡು ಕಡೆ ಯುದ್ಧ ನಡೆಯುತ್ತಿದೆ, ಭವಿಷ್ಯದಲ್ಲಿ ಉದ್ಭವವಾಗಲು ಸವಾಲುಗಳು ಒಂದರ ಹಿಂದೆ ಒಂದು ಕಾಯುತ್ತಿವೆ. ಚುನಾವಣೆಯ ಅಭ್ಯರ್ಥಿಯಾಗಿ ಭಾಷಣ ಮಾಡುವುದಕ್ಕೂ ಅಧಿಕಾರದ ಚುಕ್ಕಾಣಿ ಕೈಯಿಗೆ ಬಂದಮೇಲೆ ಆಡಳಿತ ನಡೆಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮೊದಲಿಗೆ, ಆತನ ಜೀವವನ್ನು ಅವನ ಸುತ್ತಲಿನವರು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಬೇಕು. ಆತ ಒಳ್ಳೆ ಸಮರ್ಥ ವ್ಯವಸ್ಥಾಪಕರನ್ನು, ನಿಪುಣರನ್ನು, ತಜ್ಞರನ್ನು ಸೇರಿಸಿಕೊಳ್ಳಬೇಕು. ವಿರೋಧಿಗಳು ಆತನು ಜಾರಿಬೀಳುವಂತೆ ಮಾಡಲು ಕಾಯುತ್ತಿರುತ್ತಾರೆ. ಅವರಿಂದ ವಿಚಲಿತನಾಗದೇ ರಾಷ್ಟ್ರದ ಹಿತಕ್ಕಾಗಿ ದುಡಿಯಬೇಕು. ದೇಶದ ಚಲನೆಯ ದಿಕ್ಕನ್ನು ಬದಲಿಸುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. ಏನೆಲ್ಲ ಸಾಧಿಸುತ್ತಾನೋ ಕಾದುನೋಡೋಣ.

ಅಮೇರಿಕದ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿಯಾಗಲಿ. ವಿಶ್ವಶಾಂತಿಗೆ ಅಮೇರಿಕಾ ಕಾರಣವಾಗಲಿ. ವಿನಾಕಾರಣ ರಕ್ತಪಾತವಾಗದಂತೆ ಅಮೇರಿಕದ ವಿದೇಶಾಂಗನೀತಿ ರೂಪಗೊಳ್ಳಲಿ. ಬುಷ್ ಮಹಾಶಯ ಈ ದೇಶವನ್ನು ಅವನತಿಗೆ ತಂದಿಟ್ಟು ಹೋಗುತ್ತಿದ್ದಾನೆ. ಒಬಾಮಾ ಇಡುವ ಪ್ರತಿ ಹೆಜ್ಜೆಯನ್ನೂ ಅತ್ಯಂತ ಕಠೋರವಾದ ಅಳತೆಗೋಲಿನಿದ ಅಳೆಯಲು ದೇಶ ಸಿದ್ಧವಾಗಿದೆ. ಆತ ಉತ್ತೀರ್ಣನಾಗಲು ಶಕ್ತಿ ಸಿಗಲಿ ಎಂದು ಹಾರೈಸೋಣ. ಟ್ರೂಮನ್ ಮಹಾಶಯ ರಾಜಧಾನಿಗೆ ಬರುವ ರಾಜಕಾರಿಣಿಗಳಿಗೆ ಒಂದು ಕಿವಿಮಾತು ಹೇಳುತ್ತಿದ್ದನಂತೆ: "ವಾಷಿಂಗ್‌ಟನ್ನಿನಲ್ಲಿ ಗೆಳೆಯರು ಬೇಕಿದ್ದರೆ ಒಂದೆರಡು ನಾಯಿಗಳನ್ನು ಸಾಕಿ" ಎಂದು! ಒಬಾಮ ತಾನು ಗೆದ್ದರೆ ತನ್ನ ಹೆಣ್ಣು ಮಕ್ಕಳಿಗೆ ನಾಯಿಮರಿಯೊಂದನ್ನು ಕೊಡಿಸುವುದಾಗಿ ಮಾತುಕೊಟ್ಟಿದ್ದನಂತೆ. ಅದೇರೀತಿ ಅಮೇರಿಕದ ಪ್ರಥಮ ಕುಟುಂಬದೊಂದಿಗೆ ಒಂದು ನಾಯಿಮರಿಯೂ ಶ್ವೇತಭವನಕ್ಕೆ ಬರುತ್ತದೆ. ಈ ನಾಯಿಯ ಬಣ್ಣ ಬಿಳಿಯೋ ಕರಿಯೋ, ಕಾಯ್ದು ನೋಡಿರಿ!

ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಆಯ್ಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X