ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿ

By: ಶಿಕಾರಿಪುರ ಹರಿಹರೇಶ್ವರ, ಸರಸ್ವತಿಪುರಂ ಮೈಸೂರು
Subscribe to Oneindia Kannada

ಅಳಿಯುತ್ತಿರುವ ಪಕ್ಷಿ ಸಂಕುಲದ ಪಟ್ಟಿಯಲ್ಲಿ ಗುಬ್ಬಚ್ಚಿಗೂ ಒಂದು ಗೂಡು ಕಟ್ಟಿಕೊಟ್ಟವರು ನಾವು. ಮನೆಯಂಗಳದಿಂದ ಅನಂತಕ್ಕೆ ಹಾರುತ್ತಿರುವ ಮರಿಹಕ್ಕಿ ನಮ್ಮ ಮನದಂಗಳದಲ್ಲಿ, ಗಾದೆ ಮಾತುಗಳಲ್ಲಿ, ಸಾಹಿತ್ಯದ ಪುಟಗಳಲ್ಲಿ ಸುರಕ್ಷಿತವಾಗಿದೆ ಎಂದು ನೆನಪಿಸುವ ಅಭಯ ಲೇಖನ!

ನಾವು ಅಮೆರಿಕನ್ನಡ ಪತ್ರಿಕೆಯನ್ನು ನಡೆಸುತ್ತಿದ್ದಾಗ, ಆಗಾಗ್ಗೆ ಭಾರತಕ್ಕೆ ಬಂದು ಹೋಗುತ್ತಿದ್ದೆ. ಸ್ನೇಹಿತರನ್ನ, ನೆಂಟರಿಷ್ಟರನ್ನ, ಸಾಹಿತಿಗಳನ್ನ ಭೇಟಿ ಮಾಡಿ ಮಾತನಾಡಿಸಲು ಅವರಿದ್ದ ಬೇರೆ ಬೇರೆ ನಗರ, ಊರು, ಹಳ್ಳಿಗಳಿಗೆ ಹೋಗಿ ಬರುತ್ತಿದ್ದೆ. ಬೆಳಗ್ಗೆ ಎದ್ದು, ಬಾಗಿಲು ತೆರೆದು, ದಿನಪತ್ರಿಕೆ ಓದಲೆಂದೋ, ಇನ್ನೇನೋ ಕಾರಣಕ್ಕೆ ಮನೆಯ ಮುಂದಿನ ಕೊಠಡಿಯಲ್ಲಿ ಕುಳಿತಿದ್ದಾಗ, ಹೊರಗಡೆಯಿಂದ ಕುಪ್ಪಳಿಸಿಕೊಂಡು ಸಲೀಸಾಗಿ ಮನೆಯೊಳಗೆ ಬರುತ್ತಿದ್ದವು- ಗುಬ್ಬಿಗಳು.

1101-sparrow-the-little-legend

ಗುಬ್ಬಿ ಎಂದೊಡನೆ 'ಕಿಚ ಕಿಚ" ದನಿ ಮಾಡುವ ಪುಟಾಣಿ ಪಕ್ಷಿಯೊಂದು ನಮ್ಮ ಮನದಂಗಳಕ್ಕೆ ಹಾರಿ ಬರುತ್ತದಲ್ಲವೇ? ಉಗುರಿನಿಂದಾಗುವ ಕೆಲಸಕ್ಕೆ ಕೊಡಲಿ ತೆಗೆದುಕೊಳ್ಳುವವರನ್ನು ಕಂಡಾಗ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ?- ಎಂದು ಛೇಡಿಸಿದುದು ನೆನಪಿಗೆ ಬರುತ್ತದೆ ತಾನೆ? ಗುಬ್ಬಿ ಎಣ್ಣೇ ಕುಡಿದರೆ ಬೀಸುವ ಕಲ್ಲು ತೋಯಿಸೀತೇ; ಹಾರುವ ಗುಬ್ಬಿಗೆ ಗೋಧಿಕಲ್ಲು ಕಟ್ಟಿದ ಹಾಗೆ, ಉಬ್ಬಿ ಮಳೆ ಬಂದರೆ, ಗುಬ್ಬಿ ಮೈ ನೆನೆಯೋದಿಲ್ಲ- ಎನ್ನುವ೦ಥ ಗಾದೆಗಳೂ ಸುಳಿದಾಡಿಯಾವು.

ಚಿಕ್ಕದಾದ ಆ ಹಕ್ಕಿಯ ಮರಿಗೆ ಗುಬ್ಬಚ್ಚಿ ಎಂದು ಕರೆದು, ಮಕ್ಕಳಾಗಿದ್ದಾಗಲೇ ನಾವು ಅದನ್ನು ಪರಿಚಯ ಮಾಡಿಕೊಂಡಿದ್ದೇವೆ. ಎಲ್ಲೆಲ್ಲೂ ಇದ್ದ ಈ ಊರಗುಬ್ಬಿ, ಮನೆಗುಬ್ಬಿ ಈಗೀಗ ಜನ-ವಾಹನ-ಕೈಗಾರಿಕೆಗಳ ಸಂದಣಿಯ ಜಂಗುಳಿಯ ನಗರಗಳಲ್ಲಿ ಅಪರೂಪವಾಗುತ್ತಿದೆಯೆಂಬ ಕೂಗು ಕೇಳಿ ಬರುತ್ತಿದೆ. ಈ ಗುಬ್ಬಿ (ಮುಖ್ಯವಾಗಿ ಗುಬ್ಬಚ್ಚಿ)ಯನ್ನು ಕನ್ನಡದ ಒಂದು ವಿಶಿಷ್ಟ ಪದವೆಂದು ಭಾಷಾಶಾಸ್ತ್ರಜ್ಞರು ಗುರುತಿಸಿದ್ದಾರೆ. ಭಾಷಾವಿಜ್ಞಾನದ ವಿಶ್ಲೇಷಣೆಯನ್ನು ಕೊನೆಗೆ ಇಟ್ಟುಕೊಳ್ಳೋಣ. ಈಗ ನಮ್ಮ ಗುಬ್ಬಿಯನ್ನ ಅರ್ಥಕೋಶದಿಂದ ಹೊರಗೆ ಹಾರಿಬಿಟ್ಟು, ಸ್ವಲ್ಪ ವಿವೇಚಿಸೋಣ:

ಉಬ್ಬಿಕೊಂಡಿರುವದಕ್ಕೆ ಗುಬುಟಾಗಿ ಇದೆ ಎನ್ನುತ್ತ, ಅದಕ್ಕೆ ಗುಬ್ಬಿ, ಗುಬ್ಬೆ ಎನ್ನುವ ಪದ ಬಳಸುತ್ತಾರೆ. ಗುಬ್ಬಿಮೊಳೆಯನ್ನು ಬಾಗಿಲಿಗೆ ಬಡಿಯುತ್ತಾರೆ. ಹಳ್ಳಿಗಳಲ್ಲಿ ಹಲಸಿನಮರದ ಕೆಳಗೆ ಜನ ಕಂಬಳಿಗುಬ್ಬೆ ಹಾಕಿಕೊಂಡು ಕುಳಿತೂ ಬಿಡುತ್ತಾರೆ. ಉಬ್ಬಿರುವ ಆಭರಣಕ್ಕೆ ಗುಬ್ಬಿ ಎಂದು ಕರೆಯುವುದು ವಾಡಿಕೆಯಾಗಿತ್ತು. ಈ ಕಾರಣಕ್ಕೇ ಹಲವು ಬಗೆಯ ಗುಬ್ಬಿ-ಒಡವೆಗಳು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಿಗುತ್ತವೆ. ಯಕ್ಷಗಾನ ಪರಿಕರಗಳಲ್ಲಿ, ಸಡಿಲವಾದ ದಗಲೆ ಅಂಗಿಯ ಗಂಟು ಅಥವಾ ಗುಂಡಿಗೂ ಗುಬ್ಬಿ ಎನ್ನುವುದುಂಟು.

ಮದುವೆಯ ಸಡಗರದಲ್ಲಿ ಬೀಗರು ಪರಸ್ಪರ ಬಟ್ಟೆಗಳ ಮೇಲೆ ಒತ್ತುವ ಸಣ್ಣ ಗುರುತಿಗೆ ಗುಬ್ಬಿಮುದ್ರೆ ಎನ್ನುತ್ತಾರೆ. ಮದುವೆಯಲ್ಲಿ ವಧೂವರರಿಂದ ಪರಸ್ಪರ ಬೆನ್ನ ಮೇಲೆ ಅಥವಾ ತಲೆಯ ಮೇಲೆ ಇರಿಸಿ, ಸದ್ದು ಆಗುವಂತೆ ತಟ್ಟಿಸುವುದಕ್ಕಾಗಿ, ಪೂರಿಯಂತೆ ಇರುವ ಗಾಳಿತುಂಬಿದ ಗೋಧಿ ಹಿಟ್ಟಿನ ಲಕೋಟೆ ಆಕಾರದ ತಿಂಡಿಗೂ- ಗುಬ್ಬಿ ಎನ್ನುತ್ತಾರೆ. ಸೊಪ್ಪಿನ ಜಾತಿಯ ಅತಿ ಚಿಕ್ಕದಾದ, ವಾಸನೆ ಏನೂ ಇಲ್ಲದ ಗುಬ್ಬಚ್ಚಿ ಬಾಳೆಎಲೆಯಿಂದ ಬೊಂಡಾ ಮಾಡಿಕೊಂಡು ಜನರು ತಿನ್ನುವುದುಂಟು.

** ** **

ಗುಬ್ಬಿಲ್, ಗುಬ್ಬಿಲು, ಗುಬ್ಬಚ್ಚಿ ಎಂದು ಕರೆಯುವ ಗುಬ್ಬಿಯನ್ನು ಗುಮ್ಚಿ ಎಂದು ಹಳೇ ಮೈಸೂರಿನ ಕಡೆ ಜನರು ಹೇಳುವುದುಂಟು. ಶಾಲೆಯ ಸುತ್ತ ಮುತ್ತ ಹೇರಳವಾಗಿ ಗುಬ್ಬಿಗಳು ಹಾರಾಡಿಕೊಂಡಿದ್ದರೆ ಆ ಶಾಲೆಗೆ ಮಕ್ಕಳು ಗುಮ್ಚಕ್ಕಿ (ಅಥವಾ ಗುಮ್ಚಿ) ಸ್ಕೂಲ್ ಎಂದು ಕರೆಯುತ್ತಿದ್ದುದುಂಟು. ಗುಬ್ಬಿ ವಿಶೇಷವಾಗಿ ಊರ ಹಕ್ಕಿ. ಕೋಶಗಳಲ್ಲಿ ಊರಗುಬ್ಬಿಯೆಂದೂ, ಕರೆಯಲೊಕ್ಕಿಯೆಂದೂ ಹೆಸರಿಸಿರುವುದು ಇದಕ್ಕೇ.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹದಿನೆಂಟು ವರ್ಣನೆಗಳಿಲ್ಲದೆ ಇದ್ದರೆ ಅದು ಮಹಾಕಾವ್ಯ ಎನಿಸಿಕೊಳ್ಳುವುದಿಲ್ಲ- ಎಂಬ ನಿಯಮವಿದೆ ತಾನೆ; ಹಾಗೆ, ಕಾಡು ಮೇಡು ಪ್ರಕೃತಿ ನಗರಗಳನ್ನು ವಿವರಿಸುವಾಗಲೂ, ಕಾಡಿನ ನಗರದ ಉದ್ಯಾನವನದ ಯಾತ್ರೆಯ ವರ್ಣನೆಗಳಲ್ಲೂ ಸಾಮಾನ್ಯವಾಗಿ ಗುಬ್ಬಿ ಬ೦ದಿಲ್ಲ. ಪ್ರಾಣಿ-ಪಕ್ಷಿಗಳ ಸ್ವಭಾವವನ್ನು ಮನುಷ್ಯರಲ್ಲಿ ಕಾಣುತ್ತಾ, ಸೊಗಸಾಗಿ ಕತೆ ಹೇಳುವ ಸಂಸ್ಕೃತದ ಗುಣಾಢ್ಯ, ವಿಷ್ಣುಶರ್ಮ ಇರಲಿ, ನಮ್ಮ ಕನ್ನಡ ಪಂಚತ೦ತ್ರದ ದುರ್ಗಸಿಂಹನ ಕಣ್ಣಿಗೂ ಗುಬ್ಬಿ ಬೀಳಲಿಲ್ಲ. ಸಂಗೀತಶಾಸ್ತ್ರದಲ್ಲಿ ರಾಗರಾಗಿಣಿಯರಿಗೆ ರಾಗಾಭಿಮಾನೀ ದೇವತೆಗಳಿಗೆ ಪಕ್ಷಿಗಳು ವಾಹನವಾಗುವುದುಂಟು, ಆದರೆ ಅವರಾರಿಗೂ ಗುಬ್ಬಿ ಬೇಡ. ಅಲ್ಲೆಲ್ಲ ನಾವು ಕಾಣುವುದು ಕೋಕಿ ಹಂಸೆ ಪಿಕ ಶುಕ ಚಕೋರಿಗಳು, ಇಲ್ಲವೇ ಕ್ರೌಂಚ ಶಿಖಿ ತಿತ್ತಿರಿ ಕಪೋತಾದಿಗಳು. ಸ್ವಾಮಿಯನ್ನೇ ಹೊತ್ತವನೆಂಬ ಕಾರಣಕ್ಕೆ ಪೌರಾಣಿಕಯುಗದಲ್ಲಿ ಗರುಡನ ಕೀರ್ತಿ ಬಾನೆತ್ತರಕ್ಕೆ ಹಾರಿತ್ತು. ಪಕ್ಷಿಗಳಲ್ಲಿ ಅದು ಪರಮೋಚ್ಚ ಎನ್ನುವದಕ್ಕೆ ಸಂಕೇತವಾಗಿ ಹಕ್ಕಿಗಳಲ್ಲಿ ನಾನು ಗರುಡನಾಗಿದ್ದೇನೆ- ಎಂದು ಘೋಷಿಸಿ ಬಿಟ್ಟಿದ್ದಾನೆ, ಗೀತಾಚಾರ್ಯ ಶ್ರೀಕೃಷ್ಣ. ಗರುಡನ ಅಂಕಿತದಲ್ಲಿ ಒಂದು ಪುರಾಣವೂ ಇದೆ. ಗರುಡನ ಮತ್ತು ಕಾಲ್ಪನಿಕ ಗಂಡಭೇರುಂಡ ಪಕ್ಷಿಯು ನರಸಿಂಹನ ಒಂದು ಮುಖವೂ ಆಗಬಹುದು. ಪುಟಗೋಸಿ ಗುಬ್ಬಿಗೆಲ್ಲಿ ಬಂದೀತು ಆ ಭಾಗ್ಯ!

ಆದರೆ, ನಮ್ಮ ಪ್ರಾಚೀನ ಕನ್ನಡ ಸಾಹಿತ್ಯದ ಕವಿಗಳು ಗುಬ್ಬಿಯನ್ನು ಮರೆತರು ಎಂದಲ್ಲ. ನುಗ್ಗಿಯ ಬನಕ್ಕೆ ಗುಬ್ಬಿ ಕೋಗಿಲೆಯೆಂಬಂತೆ; ಬೀಸಿದ ಬಲೆಗೆ 'ಬಿದ್ದವು ಗಿಡುಗ ಗೀಜಗ ಗೌಜು ಗುಬ್ಬಿಗಳು!"; ಕೋಳಿಯ ಕೂಟ ಗುಬ್ಬಿಯ ಕೂಟದಂತೆ ಹಂಸಾಳಿಯ ಕೂಟ ತೋರುವುದೇ?- ಎಂದು ಕವಿಗಳು ಪ್ರಶ್ನಿಸುತ್ತಾರೆ. ಏನೇ ಆದರೂ, ಕವಿಸಮಯಕ್ಕೆ, ಗಿಳಿ ಚಾತಕ ನವಿಲು ಹಂಸೆಗಳು ಕೂಡಿ ಬಂದಂತೆ ಗುಬ್ಬಿ ಒದಗಿ ಬರಲಿಲ್ಲ, ಅಷ್ಟೆ. ಮಕ್ಕಳು ಗುಬ್ಬಚ್ಚಿಯನ್ನು ನೋಡಿ ಪ್ರೀತಿಸಿರಬಹುದು, ಆದರೆ ಅದರ ಕೂಗನ್ನು ಅನುಕರಿಸಿದ ಪ್ರಸ್ತಾಪವಿಲ್ಲ. ಹಕ್ಕಿಗಳ ಕೂಗಿಗೆ ಗುಬ್ಬಳಿಕೆ ಎನ್ನುವುದು ನಮ್ಮ ಗುಬ್ಬಿಯ ಕೊಡುಗೆಯೇ. ಇರಲಿ ಬಿಡಿ, ನಮ್ಮ ಗುಬ್ಬಿ ಊರ್ಮಿಳೆ, ಭಾನುಮತಿಯರಂತೆ ಕಾವ್ಯದ ಅನಾದರ, ಕಾವ್ಯದ ಉಪೇಕ್ಷಿತ ಒಂದು ಪಾತ್ರ ಎನ್ನೋಣ.

** ** **

ಮಕ್ಕಳು ಮತ್ತು ಗುಬ್ಬಿ: ಮರದಲ್ಲಿ ಬಿಟ್ಟ, ಗಿಳಿ ಇತ್ಯಾದಿ ಹಕ್ಕಿಗಳು ತಿಂದ ಹಣ್ಣು, ದೋರಗಾಯಿಗಳು ಮಕ್ಕಳಿಗೆ ಎಂಜಲು- ಎ೦ದು ಅನ್ನಿಸದೆ ಹೋಗಬಹುದು. ಇದೇ ಕಾರಣಕ್ಕೆ ಇರಬೇಕು, ಮಕ್ಕಳು ತಮ್ಮ ತಮ್ಮಲ್ಲಿ ತಿಂಡಿಯನ್ನು ಹಂಚಿಕೊಳ್ಳುವಾಗ, ಅದನ್ನು ಯಾವುದಾದರೂ ಬಟ್ಟೆಯಿಂದ ಮುಚ್ಚಿ, ಆ ಗುಪ್ಪೆಯನ್ನು ಬಾಯಿಂದ ಕಚ್ಚಿ ಚೂರು ಚೂರು ಮಾಡಿಕೊಳ್ಳುವುದು ಮತ್ತು ಇದು ಎಂಜಲಲ್ಲ, ತಿಂದರೆ ದೋಷವಿಲ್ಲ ಎಂದುಕೊಳ್ಳುವುದು. ಇದಕ್ಕೆ 'ಗುಬ್ಬಿ ಎಂಜಲು" ಎಂದು ಅವರು ಹೇಳಿಕೊಳ್ಳುತ್ತಾರೆ.

ಮಕ್ಕಳು ಆಟವಾಡಿಕೊಳ್ಳುವಾಗ ಗುಬ್ಬಿಯನ್ನು ನೆನೆಸಿಕೊಳ್ಳುತ್ತಾರೆ. ರತ್ತೋ ರತ್ತೋ ರಾಯನ ಮಗಳೇ- ಎಂದು ಪ್ರಾರಂಭವಾಗುವ ಹಾಡಿನೊಂದಿಗೆ ಹೆಣ್ಣುಮಕ್ಕಳು ಆಡುವ ಆಟದಲ್ಲಿ ಬೈಟ್ ಗುಬ್ಬಿ- ಬರುತ್ತಾಳೆ. ಗುಬ್ಬಚ್ಚಿಯನ್ನು ಅನುಕರಿಸಿ ಕುಪ್ಪಳಿಸುವುದು, ಹಾರಿಹೋಗಿ ತಕ್ಕ ಸ್ಥಳ ಆರಿಸಿಕೊಂಡು ಗೂಡು ಕಟ್ಟುವುದು ಅಷ್ಟು ಸುಲಭವಲ್ಲ. ಈ ಅಭಿಪ್ರಾಯವನ್ನು ಹಿನ್ನೆಲೆಯಾಗಿರಿಸಿಕೊಂಡ ಮಕ್ಕಳ ಇನ್ನೊಂದು ಆಟ- ಗುಬ್ಬಚ್ಚಿ ಗೂಡು.

** ** **

ಮಕ್ಕಳ ಹಾಡುಗಳಲ್ಲಿ ಕಪ್ಪೆ ನಾಯಿ ಬೆಕ್ಕು ಇಲಿ ಮುತಾದ ಪ್ರಾಣಿಗಳು ಸಾಕಷ್ಟು ಹಾಡಿಕುಣಿದಿವೆ, ಅಲ್ಲಿ ಹಕ್ಕಿಗಳು ಧಾರಾಳವಾಗಿ ಬರುವಾಗ, ಕಾಗೆ-ಗುಬ್ಬಿಯೂ ಬರುವುದು ಸಹಜ. ತೋಟದ ಬೇಲಿಯ ಒಳಹೊರಗೆ ಸಿಕ್ಕ, ಬಣ್ಣ ಬಣ್ಣದ ಹಕ್ಕಿಯ ಗರಿಗಳನ್ನು ಕಂಡಾಗ ಏನೋ ವಿಸ್ಮಯ, ಏನೋ ಆನಂದ. ಮೇವುಂಡ ಮಲ್ಲಾರಿಯವರ ಗುಬ್ಬಿ ಗುಬ್ಬೀ ಇಲ್ಲಿ ಕೂಡು ಹಾರಿ ಬಂದು ಪುರ್ ಪುರ್- ಎಂಬ ಶಿಶುಗೀತೆಯಲ್ಲಿ ಗುಬ್ಬಿ ಮತ್ತು ಕಾಗೆಯ ವಿಭಿನ್ನ ಸ್ವಭಾವಗಳನ್ನು ಅವರಿಗೆ ಅರ್ಥವಾಗುವ ಹಾಗೆ ತಿಳಿಹೇಳುತ್ತಾರೆ. ಗುಬ್ಬಿ ಗುಬ್ಬಿ, ಚಿಂವ್ ಚಿಂವ್ ಎಂದು, ಕರೆಯುವೆ ಯಾರನ್ನು?- ಎಂದು ಗುಬ್ಬಚ್ಚಿಗೆ ಮಕ್ಕಳು ಕೇಳುವ ಪ್ರಶ್ನೆಗಳ ಒಂದು ಸರಮಾಲೆಯೇ ಎ. ಕೆ. ರಾಮೇಶ್ವರ ಅವರ ಶಿಶುಗೀತೆಯ ವಸ್ತು. ತಾಳೆಮರದ ಸೋಗೆಗೆ ಒಂದು ಶ್ರುತಿಬುರುಡೆಯ ಮಾದರಿಯ ಗೂಡನ್ನು ಕಟ್ಟಿ, ಗಾಳಿ ಬೀಸಿದಾಗ ಅದರಿಂದ ದನಿಯೊಂದು ಬಂದಾಗ ಮಕ್ಕಳು ಆಶ್ಚರ್ಯಪಡುವುದನ್ನು ಶಿವರಾಮ ಕಾರಂತರು ತಾಳೆಗುಬ್ಬಿ ಕವನದಲ್ಲಿ ಹಾಡುತ್ತಾರೆ. ಹಳ್ಳಿಯಲ್ಲಿ ಬೆಳೆವ ಮಕ್ಕಳಿಗಂತೂ ಹಕ್ಕಿ ಬಳಗ ಸುತ್ತ ಕೂಡಿ, ಬೈಗುಬೆಳಗು ಹಾಡಿಹಾಡಿ, ಮನೆಯ ವಾತಾವರಣ ನಲಿಸುತ್ತದೆ. ಆ ಮಕ್ಕಳು, ಹಕ್ಕಿ ಹಕ್ಕಿ ಹಾರುವ ಹಕ್ಕಿ, ಬಾರೆಲೆ ಹಕ್ಕಿ, ಬಣ್ಣದ ಚುಕ್ಕಿ, ನನಗೂ ಹಾಡಲು ಕಲಿಸು, ಹಾರಲು ಕಲಿಸು- ಎಂದು ಗೋಗರೆಯುವುದು ಸಾಮಾನ್ಯ. ಹೀಗೆ ಗುಬ್ಬಿ-ಗುಬ್ಬಚ್ಚಿ ಮಕ್ಕಳಿಗೆ ಪ್ರಿಯವಾದ ಹಕ್ಕಿ.

** ** **

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಗುಬ್ಬಿ ಎಂಬ ಹೆಸರಿನ ಊರೊಂದಿದೆ. ಪುರಾಣ ಪ್ರಸಿದ್ಧವಾದ ಇದಕ್ಕೆ ಪುರಾತನ ಹೆಸರು ಅಮರಗುಂಡ (ಅಥವಾ ಸಮರಗುಂಡ). ಗ್ರಾಮದೇವತೆಯ ಹೆಸರೂ ಅಮರಗುಂಡದ ಮಲ್ಲಿಕಾರ್ಜುನ. ಅಮರಗುಂಡ ಊರು ಗುಬ್ಬಿ ಆದುದರ ಬಗ್ಗೆ ಇರುವ ಐತಿಹ್ಯದ ಕತೆಯೊಂದು ಹೀಗಿದೆ: ಆ ಗ್ರಾಮದ ಪ್ರಮುಖ ದೇವಸ್ಥಾನದಲ್ಲಿ ಆ ಊರಿನವನೇ ಆದ ಮಲ್ಲಿಕಾರ್ಜುನ ಎಂಬ ಪ್ರಸಿದ್ಧ ಪಂಡಿತನು ಭಕ್ತರಿಗಾಗಿ ಶಿವಪುರಾಣವನ್ನು ಹೃದಯಂಗಮವಾಗಿ ಪ್ರವಚನ ಮಾಡುತ್ತಿದ್ದನಂತೆ. ತದೇಕಚಿತ್ತರಾಗಿ ಜನಗಳು ಅವನ ಪ್ರವಚನವನ್ನು ಕೇಳುತ್ತಿದ್ದಾಗ, ಎರಡು ಗುಬ್ಬಿಗಳು ಪ್ರತಿದಿನವೂ ಅಲ್ಲಿಗೆ ಹಾರಿ ಬಂದು, ನಿಶ್ಶಬ್ದವಾಗಿ ಕುಳಿತು, ಪುರಾಣಶ್ರವಣವನ್ನು ಮಾಡುತ್ತಿದ್ದವಂತೆ. ಕೆಲ ದಿನಗಳ ನಂತರ ಆ ಪುರಾಣ ಮುಗಿಯುತ್ತಲೇ, ಆ ಗುಬ್ಬಿಹಕ್ಕಿ ದಂಪತಿಗಳು ಅಲ್ಲಿಯೇ ಅಸು ನೀಗಿದವಂತೆ. ಭಕ್ತರು ಈ ಸೋಜಿಗಕ್ಕೆ ಬೆರಗಾಗಿ, ಅಲ್ಲಿಯೇ ಈ ಗುಬ್ಬಿಗಳ ಸಮಾಧಿ ಮಾಡಿದರಂತೆ. ಅಲ್ಲಿಂದ ಮುಂದೆ ಆ ಊರಿನ ಹೆಸರು ಗುಬ್ಬಿ ಎಂದೇ ಪ್ರಸಿದ್ಧವಾಯಿತಂತೆ.

ಗುಬ್ಬಿಯ ಊರಿನವರಾದ ಹಲವು ಕವಿಗಳು, ಶರಣರು ಕನ್ನಡ ಧಾರ್ಮಿಕ ಸಾಹಿತ್ಯಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ. ವೀರಶೈವಕವಿಗಳು ಸಾಮಾನ್ಯವಾಗಿ ತಮ್ಮ ಗ್ರಂಥಾದಿಯಲ್ಲಿ ಮೂವರು ಪಂಡಿತರನ್ನು ಸ್ತುತಿಸುವುದು ಸಾಮಾನ್ಯ. ಅವರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಪಂಡಿತರ ಗುಬ್ಬಿ ಕತೆಯನ್ನು ಈಗ ತಾನೇ ಓದಿದೆವು. ಗುಬ್ಬಿ ಮಲ್ಲಣ್ಣ, ಗುಬ್ಬಿ ಮಲ್ಲಣಾರ್ಯ, ಮಲ್ಲಿಕಾರ್ಜುನ ಕವಿ- ಮುಂತಾದವರು ಗುಬ್ಬಿಯ ಊರಿನವರು. ಪ್ರಖ್ಯಾತ ರಂಗಕರ್ಮಿ ಗುಬ್ಬಿ ವೀರಣ್ಣನವರ ಕೊಡುಗೆ ಕನ್ನಡ ರಂಗಭೂಮಿಗೆ ಅಪಾರ. ಅವರಂತೆ ಇನ್ನೂ ಹಲವು ಮಹನೀಯರು ಗುಬ್ಬಿಗೆ ವಿಶೇಷ ಅರ್ಥ, ವ್ಯಾಖ್ಯೆ ತಂದಿದ್ದಾರೆ.

** ** **

ಎರಡು ದಶಕಗಳ ಬಳಿಕ, ಈಗ ಭಾರತಕ್ಕೆ ಮರಳಿ ಬಂದು ನೋಡುತ್ತೇನೆ: ನಗರಪ್ರದೇಶದಲ್ಲಿನ ಶಬ್ದಮಾಲಿನ್ಯ ಹೆಚ್ಚಾಯಿತು. ನಿರ್ಭಯವಾಗಿ ಬಂದು ಹೋಗಲು ಅನುವಾಗುತ್ತಿದ್ದ ಮನೆಯಲ್ಲಿನ ಕಿಟಕಿ ಬಾಗಿಲುಗಳ ಸ್ವರೂಪ, ವಿನ್ಯಾಸ ತುಂಬಾ ಬದಲಾಯಿತು. ಅಡೆತಡೆಗಳೇ ಸಾಮಾನ್ಯ ನಿಯಮಗಳಾದವು. ಗೋಡೆ ಛಾವಣಿಗಳು ಸೇರುವೆಡೆ ಮಾಡುಗಳಲ್ಲಿ ನಿರಾಳವಾಗಿ ಗೂಡುಕಟ್ಟಿಕೊಳ್ಳುವಂತಿದ್ದ ಸ್ಥಳಾವಕಾಶಗಳು ಹೊಸ ಮಾದರಿಯ ಮನೆಗಳಲ್ಲಿ ಇದ್ದಕ್ಕಿದ್ದಂತೆ ಮಾಯವಾದವು. ಹಕ್ಕಿಗಳು ಗೂಡುಕಟ್ಟಲೆಂದೇ ಮೇಲ್ಛಾವಣಿಯಿಂದ ತೂಗುಹಾಕುತ್ತಿದ್ದ ಬುಟ್ಟಿಗಳ ಕಾಲ ಹಿಂದಿನದಾಯಿತು. ಅಕ್ಕಿ ಕೇರಿ, ಚೂರು ಪಾರು ಧಾನ್ಯಗಳನ್ನು ಹೊರಗೆ ಅಂಗಳಕ್ಕೆ ಎಸೆಯುವ ಪರಿಪಾಠ ಎಂದೋ ಜಾರಿ ಸರಿಯಿತು. ಜಂಗಮ ದೂರವಾಣಿಗಳ ಶಬ್ದತರಂಗಗಳು ಅವನ್ನು ಅತ್ತಿತ್ತ ಅಟ್ಟುತ್ತಿವೆಯೋ ಏನೋ. ಇವೆಲ್ಲ ಕಾರಣಗಳಿಂದ ಊರಗುಬ್ಬಿ ದೂರ ಹಾರಿ ಹೋಗಿದೆ.

ಬಂದೂಕಿನ ನಳಿಕೆಯಲ್ಲಿ (ಬಾಯಲ್ಲಿ) ಗುಬ್ಬಿ ಗೂಡು ಕಟ್ಟಲಿ-ಎಂಬ ಆಶಯವನ್ನು ಕವಿ ರಂಜಾನ್ ದರ್ಗಾ ವ್ಯಕ್ತಪಡಿಸಿದಾಗಲೂ ನಮ್ಮ ಗುಬ್ಬಚ್ಚಿ ಹಕ್ಕಿಯ ಮುಗ್ಧತೆ ಮತ್ತು ಅದು ಪ್ರತಿನಿಧಿಸುವ ಶಾಂತಿಯ ಬಯಕೆಯೇ ಎದ್ದು ಕಾಣುವ ಅಂಶ. ಗುಬ್ಬಿಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವ ಮುಜುಗರದ ವಿಷಯ, ಊರಲ್ಲಿ ಮೊದಲಿನಷ್ಟು ಅವು ನಮ್ಮ ಕಣ್ಣಿಗೆ ಬೀಳದೆ ಇರುವುದರ ಕಸಿವಿಸಿ, ಈ ನಿರುಪದ್ರವಿ ಸಾಧು ಹಕ್ಕಿಯ ಸಾಹಚರ್ಯವನ್ನು ನಾವೂ ನಮ್ಮ ಮಕ್ಕಳೂ ಕ್ರಮೇಣ ಕಳೆದುಕೊಳ್ಳುತ್ತಿದ್ದೇವೇನೋ ಎಂಬ ವಿಚಾರ ಮತ್ತು ಅಪಾಯದ ಅಂಚಿನಲ್ಲಿ ಅದರ ಉಳಿಬಾಳುವೆಯ ಆತಂಕ- ಇವೆಲ್ಲದರ ಬಗ್ಗೆ ನಾವೀಗ ಯೋಚಿಸುವುದು ಅಗತ್ಯ.

ಹಳ್ಳಿಗಳಲ್ಲಿ ಇನ್ನೂ ಸ್ವಾಗತಾರ್ಹ ಪರಿಸರ ತನಗೆ ಇರುವದರಿಂದ, ಗುಬ್ಬಿ ಗುಬ್ಬಚ್ಚಿಗಳು ಅಲ್ಲಿಗೆ ವಲಸೆ ಹೋಗಿವೆ, ಅಲ್ಲಿನ ಮಕ್ಕಳನ್ನ, ಪಕ್ಷಿಪ್ರೇಮಿಗಳ ಗೆಳೆತನವನ್ನ ಬೆಳಸಿ, ಉಳಿಸಿಕೊಳ್ಳುತ್ತಿವೆ. ಅವುಗಳನ್ನ ನೋಡಲಾಸೆಯಿರೆ, ನಾವೀಗ ಹಳ್ಳಿಗಳತ್ತ ಪ್ರಯಾಣಬೆಳಸಬೇಕು, ಇಲ್ಲವೇ, ಪಕ್ಷಿಧಾಮಗಳನ್ನರಸಿ ಹೊರಡಬೇಕು, ಇಲ್ಲವೇ ಪಕ್ಷಿಸಂಗ್ರಹಾಲಯಗಳಿಗೆ ಭೇಟಿ ಕೊಡಬೇಕು! ಬನ್ನಿ ಅಲ್ಲಿಗೇ ಹೋಗೋಣ!

ಪೂರಕ ಓದಿಗೆ
ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sparrow, the little legend : A cultural and socialagical study of house sparrow by Shikaripura Harihareshwara.
Please Wait while comments are loading...